ರಸಗೊಬ್ಬರ ಬೆಲೆ ಹೆಚ್ಚಳ: ಶೇ.70 ರಷ್ಟು ರೈತರ ಭೂಮಿ ಕಸಿದುಕೊಳ್ಳುವ ಸರ್ಕಾರದ ಹುನ್ನಾರ!

ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ನೀತಿಗಳ ವಿರುದ್ದ ದೆಹಲಿ ಗಡಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಕೇಂದ್ರ ಸರ್ಕಾರ ರೈತರಿಗೆ ಮತ್ತೊಂದು ಬರೆ ಎಳೆಯಲು ಮುಂದಾಗಿದ್ದು, ರಸಗೊಬ್ಬರದ ಹೊಸ ದರ ಜಾರಿಗೆ ತಂದಿದೆ. 58%ರಷ್ಟು ದರ ಹೆಚ್ಚಳವಾಗಿದ್ದು ರೈತರು ಹೊಸ ದರದಂತೆಯೇ ರಸಗೊಬ್ಬರ ಖರೀದಿಸಬೇಕಾಗಿದ್ದು, ‘ಹಳೆಯ ದಾಸ್ತಾನು, ಹಳೆಯ ದರ’ ಎಂಬುದು ಸರ್ಕಾರ ಹೇಳಿದ ಸುಳ್ಳು ಎಂದು ರೈತರು ಕಿಡಿಕಾರಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳಿಂದ ಹೆಚ್ಚಿನ ದರದೊಂದಿಗೆ ರೈತರೊಬ್ಬರ ಖರೀದಿಸಿದ ಗೊಬ್ಬರದ ರಸೀದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಕಳೆದ ಏಪ್ರಿಲ್‌ 8ರಂದು ಕೇಂದ್ರ ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ, ಗೊಬ್ಬರ ಉತ್ಪಾದನಾ ಕಂಪನಿಗಳೊಂದಿಗೆ ಸಭೆ ನಡೆಸಿ, ಸದ್ಯ ದರ ಏರಿಕೆ ಇಲ್ಲ. ಹಳೆಯ ದಾಸ್ತಾನು ಹಳೆಯ ದರದಲ್ಲೇ ಲಭ್ಯವಾಗಲಿದೆ ಎಂದಿದ್ದರು.

ಪೂರ್ವ ಮುಂಗಾರಿನ ಚಟುವಟಿಕೆಗಳಿಗೆ ಹಳೆಯ ದರದಲ್ಲೇ ಗೊಬ್ಬರ ಸಿಗುವ ನಿರೀಕ್ಷೆಯಲ್ಲಿದ್ದ ರೈತರಿಗೆ ರಾಜ್ಯ ಸರ್ಕಾರ ಆಘಾತ ನೀಡಿದೆ.
ಇನ್ನು ಮುಂಗಾರು ಪೂರ್ವ ಕೃಷಿ ಚಟುವಟಿಕೆಗಳ ನಡೆದಿಲ್ಲ. ಆಗಲೇ ಹಳೆಯ ದಾಸ್ತಾನು ಖಾಲಿಯಾಗಿ, ಹೊಸ ದಾಸ್ತಾನು ಹೊಸ ದರದಲ್ಲಿ ಮಾರಾಟವಾಗುತ್ತಿದೆ ಎಂದರೆ ಇದು ರೈತರಿಗೆ ಮಾಡಿರುವ ವಂಚನೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾನ್ಯವಾಗಿ ವಾರ್ಷಿಕ ಬೆಳೆಗಳಿಗೆ ಗೊಬ್ಬರ ವರ್ಷವಿಡೀ ಮಾರಾಟವಾಗುತ್ತಿರುತ್ತದೆ. ಆದರೆ ಹೆಚ್ಚಿನ ಪಾಲು ಗೊಬ್ಬರ ಖರೀದಿಯಾಗುವುದು ಮುಂಗಾರಿಗೆ ಸಿದ್ಧತೆ ಆರಂಭವಾಗುವ ಕಾಲದಲ್ಲಿ ( ಮೇ ತಿಂಗಳ 2ನೇ ವಾರದ ಅವಧಿಯಲ್ಲಿ). ಇನ್ನು ಎರಡು ವಾರಗಳ ಕಾಲಾವಕಾಶವಿದೆ. ಆದರೆ ಹೇಳಿಕೆ ನೀಡಿದ ಒಂದು ಅವಧಿಯಲ್ಲಿ ಹಳೆಯ ದಾಸ್ತಾನು ಮಾರಾಟವಾಗಿದೆ ಎಂದು ಸರ್ಕಾರ ನಂಬಿಸಲು ಹೊರಟಿರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ ಎಂದು ರೈತರು ಸರ್ಕಾರ ಧೋರಣೆಯನ್ನು ಅನುಮಾನಿಸುತ್ತಿದ್ದಾರೆ.

ಕೊರೊನಾ ಕಾಲದಲ್ಲಿ ಕೃಷಿ

ಕೊರೊನಾ ಸೋಂಕಿನ ಈ ಅವಧಿಯಲ್ಲಿ ಸೇವಾ ವಲಯದ ಆರ್ಥಿಕತೆ ಹಿನ್ನಡೆ ಕಂಡಿದೆ. ಆದರೆ ಕೃಷಿ ವಲಯ ಸಕ್ರಿಯವಾಗಿದ್ದು, ಆರ್ಥಿಕತೆಗೆ ಹೆಚ್ಚು ಕೊಡುಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಕೃಷಿಯನ್ನು ಪ್ರೋತ್ಸಾಹಿಸಬೇಕಿತ್ತು. ರಸಗೊಬ್ಬರ ದರವನ್ನು ನಿಯಂತ್ರಿಸಿದ್ದರೆ ಸಾಕಿತ್ತು. ಉತ್ಪಾದನಾ ವೆಚ್ಚವೂ ರೈತನಿಗೆ ಹೊರೆಯಾಗುತ್ತಿರಲಿಲ್ಲ. ಆದರೆ ರಸಗೊಬ್ಬರ ದರ ಹೆಚ್ಚಿಸಿದ್ದು, ಉತ್ಪಾದನಾ ವೆಚ್ಚದ ಹೊರೆಯನ್ನೂ ಹೆಚ್ಚಿಸಿದೆ ಎಂಬು ಬಹುಪಾಲು ಕೃಷಿ ವಲಯದ ಅಭಿಪ್ರಾಯ.

‘ಈ ವರ್ಷ ನಗರಗಳಿಂದ ಎಲ್ಲರೂ ಹಳ್ಳಿಯತ್ತ ವಲಸೆ ಹೋಗುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ವಲಸೆ ಹೆಚ್ಚಿದೆ. ಹಳ್ಳಿಗಳಿಗೆ ಮರಳಿರುವ ರೈತರು ಈ ಬಾರಿ ಪಾಳು ಬಿದ್ದಿರುವ ಭೂಮಿಗಳನ್ನು ಕೃಷಿ ಮಾಡುವುದಕ್ಕೆ ಸಿದ್ಧರಿದ್ದಾರೆ. ಅದನ್ನು ಪ್ರೋತ್ಸಾಹಿಸಬೇಕು. ಪ್ರೋತ್ಸಾಹಿಸುವ ಮೊದಲ ಹೆಜ್ಜೆ ಎಂದರೆ ರಸಗೊಬ್ಬರ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು” ಎನ್ನುತ್ತಾರೆ ಕೃಷಿ ಆರ್ಥಿಕತೆ ಮತ್ತು ನೀತಿಗಳ ತಜ್ಞ ಕೆ ಪಿ ಸುರೇಶ್‌.

‘ಸರ್ಕಾರ ಕೃಷಿ ವಲಯವನ್ನು ಪ್ರೋತ್ಸಾಹಿಸುವ ಬದಲು, ಸಂಪೂರ್ಣ ಅದರ ವಿರುದ್ಧವಾಗಿದೆ. ಇದು ಆತ್ಮಹತ್ಯೆ. ರೈತರ ಮೇಲೆ ಆರ್ಥಿಕವಾಗಿ ಹೊರೆ ಹೊರಿಸಿದರೆ. ಅವರ ಮೇಲೆ ತೆರಿಗೆಯ ಹೊರೆ ಹೊರಿಸಿದ್ರೆ, ದೇಶದ ಭವಿಷ್ಯವನ್ನು ಹಾಳು ಮಾಡಿದಂತೆ’ ಎಂದು ಅವರು ವಿಶ್ಲೇಷಿಸುತ್ತಾರೆ.

ಕೆಪಿ ಸುರೇಶ್‌ ಅವರ ಲೆಕ್ಕಾಚಾರದ ಪ್ರಕಾರ, ಸರ್ಕಾರ ಈಗ ವೆಚ್ಚ ಮಾಡುತ್ತಿರುವ ಹಣದ 50% ರಷ್ಟು ಹೆಚ್ಚು ಹಣವನ್ನು ವೆಚ್ಚ ಮಾಡಿದರೆ, ಅಂದದರೆ ರಸಗೊಬ್ಬರಕ್ಕೆ 50 ಸಾವಿರ ಕೋಟಿ ರೂ ಸಬ್ಸಿಡಿ ಕೊಟ್ಟರೆ, 3 ಲಕ್ಷ ಕೋಟಿಗಳಿಗೆ ಡಿವಿಡೆಂಟ್‌ ಇದ್ದ ಹಾಗೆ!

ರಾಜ್ಯ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷರಾದ ಕುರುಬೂರು ಶಾಂತಕುಮಾರ್ ಅವರು ಈ ಬೆಳವಣಿಗೆಯ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ” ಸರ್ಕಾರ ಸಂಪೂರ್ಣ ಬಹುರಾಷ್ಟ್ರೀಯ ಕಂಪನಿಗಳ ಪರ ಆಡಳಿತ ಮಾಡುತ್ತಿದೆ. ಜನರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದೆ. ಸದಾನಂದಗೌಡ ಹೇಳಿದ್ದರು ಹಳೆ ದಾಸ್ತಾನು, ಹಳೆ ದರದಲ್ಲಿ ಮಾರಾಟವಾಗುತ್ತದೆ ಎಂದಿದ್ದರು. ಆದರೆ ಸುಳ್ಳು ಹೇಳಿಕೊಂಡು ರಾಜ್ಯಭಾರ ಮಾಡುತ್ತಿದ್ದಾರೆ. ರೈತರ ಮೇಲೆ ಕೊರೊನಾ ಗಾಯದ ಮೇಲೆ, ಗೊಬ್ಬರ ದರದ ಬರೆ ಹಾಕಿದ್ದಾರೆ. ಇದೇ ರೀತಿ ಮುಂದುವರೆದರೆ ರೈತರ ಮಾರಣಹೋಮವಾಗುವುದು ಖಚಿತ. ರೈತರು, ಕೃಷಿ ಚಟುವಟಿಕೆಗಳು ಉಳಿಯಬೇಕಾದರೆ ಗೊಬ್ಬರ ದರ ನಿಯಂತ್ರಿಸಬೇಕು. ಸರ್ಕಾರ ರೈತರನ್ನು ರಕ್ಷಿಸಬೇಕೆ ಹೊರತು, ಅವರನ್ನು ನಾಶ ಮಾಡುವುದಕ್ಕೆ ಕಾರ್ಯಕ್ರಮ ರೂಪಿಸುತ್ತಿದ್ದಾರೆ” ಎಂದು ಸರ್ಕಾರ ನಡೆಯನ್ನು ಟೀಕಿಸಿದ್ದಾರೆ.

ಗೊಬ್ಬರ ದಾಸ್ತಾನು ಕುರಿತು ಮಾತನಾಡಿದ ಅವರು, ” ಬಾಳೆ, ಕಬ್ಬು ಮತ್ತು ಕೆಲವು ಬೆಳೆಗಳು ನಿರಂತರವಾಗಿ ಗೊಬ್ಬರ ಬೇಡುತ್ತವೆ. ಆದರೆ ಕಂಪನಿಗಳು ರಾತ್ರೋರಾತ್ರಿ ಗೊಬ್ಬರವನ್ನು ಸಂಗ್ರಹಿಸಿಟ್ಟುಕೊಂಡು, ಕಾಳದಂಧೆ ಮಾಡುತ್ತಿವೆ. ಎರಡು ತಿಂಗಳಿಂದ ವ್ಯವಸಾಯ ಮಾಡಲು ಆಗಿಲ್ಲ. ಬೆಳೆ ಮಾರಾಟುವುದಕ್ಕೆ ಅವಕಾಶವಿಲ್ಲ. ಹಾಗಾಗಿ ಗೊಬ್ಬರ ಬಳಕೆ ವಾಡಿಕೆಯಂತಾಗಿಲ್ಲ. ಆದರೆ ಸರ್ಕಾರ ದರ ಹೆಚ್ಚಿಸಿ ರೈತರನ್ನು ಲೂಟಿ ಮಾಡುತ್ತಿದೆ” ಎಂದು ಅಭಿಪ್ರಾಯ ಪಡುತ್ತಾರೆ.

ಕೃಷಿ ನಿಲ್ಲದೂ.. ಆದರೆ…

ಇಷ್ಟಾಗಿಯೂ ರೈತರು ಕೃಷಿ ಮಾಡುವುದನ್ನು ನಿಲ್ಲಿಸುತ್ತಾರೆಯೇ? ಇಲ್ಲ. ಪ್ರಸ್ತುತ ಎಲ್ಲ ದುಡಿಯುವ ಮಾರ್ಗಗಳು ಸ್ತಬ್ದವಾಗಿರುವ ಕೃಷಿಯೊಂದೇ ಭರವಸೆಯಾಗಿರುವ ಹಿನ್ನೆಲೆಯಲ್ಲಿ ದರ ಹೆಚ್ಚಳವನ್ನು ಪರಿಗಣಿಸದೇ ಕೃಷಿಯಲ್ಲಿ ತೊಡಗುವ ಸಾಧ್ಯತೆ ಹೆಚ್ಚಿದೆ. ಕಳೆದ ವರ್ಷದ ಗೊಬ್ಬರ ಮಾರಾಟ ಮತ್ತು ಕೃಷಿ ಉತ್ಪನ್ನಗಳಲ್ಲಿ ಆಗಿರುವ ಹೆಚ್ಚಳವೇ ಇದಕ್ಕೆ ಸಾಕ್ಷಿ. ಈ ಬಾರಿ ಹೆಚ್ಚಾಗಿರುವ ಲಾಕ್‌ಡೌನ್‌ನಿಂದಾಗಿ ಗ್ರಾಮಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ವಲಸೆಗೆ ಕಾರಣವಾಗಿದ್ದು, ಕೃಷಿಯೊಂದೇ ಆಧಾರವಾಗಿದೆ.

ಆದರೆ ಬೆಳೆದ ಬೆಳೆಗೆ ಮಾರುಕಟ್ಟೆಯೂ ಇಲ್ಲದೆ , ಸೂಕ್ತ ಬೆಲೆ ಸಿಗದೆ, ರೈತ ಭವಿಷ್ಯ ಅತಂತ್ರವಾಗಿಯೇ ಇದೆ. ಭಾರತದ ಶೇ. 80%ರಷ್ಟು ರೈತರು ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರು. ಅವರಿಗೆ ರಸಗೊಬ್ಬರದ ದರದಲ್ಲಿ ಆಗಿರುವ ಹೆಚ್ಚಳ, ಒಟ್ಟು ಕೃಷಿ ಚಟುವಟಿಕೆಯ ವೆಚ್ಚದ ಹೊರೆಯನ್ನು ಹೆಚ್ಚಿಸುತ್ತದೆ.

ಯುವ ರೈತ ಮುಖಂಡ ಯಶವಂತ್‌ ಈ ವಿಷಯವನ್ನು ಹೀಗೆ ವಿವರಿಸುತ್ತಾರೆ; ಕಬ್ಬಿಗೆ ಒಂದು ಎಕರೆಗೆ 1.5 ಲಕ್ಷ ರೂ ವೆಚ್ಚವಾಗುತ್ತದೆ. ಗೊಬ್ಬರಕ್ಕೆ 35-40 ಸಾವಿರ ವೆಚ್ಚವಾಗುತ್ತದೆ.

ಬತ್ತ ಬೆಳೆಯಲು ಒಂದು ಎಕರೆಗೆ 35 ಸಾವಿರ ವೆಚ್ಚವಾಗುತ್ತದೆ. ಗೊಬ್ಬರಕ್ಕೆ 7 ರಿಂದ 8 ಸಾವಿರ ರೂ ವೆಚ್ಚವಾಗುತ್ತದೆ.
ರಾಗಿ ಬೆಳೆಯಲು ಒಂದು ಎಕರೆಗೆ 15-16 ಸಾವಿರ ಖರ್ಚಾಗುತ್ತದೆ. ಇದರಲ್ಲಿ 4-5 ಸಾವಿರ ರೂ ಗೊಬ್ಬರದ ವೆಚ್ಚ.
ಗೊಬ್ಬರ ಬಳಸದೇ ಕೃಷಿಯೇ ನಡೆಸಲು ಆಗದ ಸ್ಥಿತಿ ನಾವು ತಲುಪಿದ್ದೇವೆ. ಇಲಾಖೆ ಮತ್ತು ಕೃಷಿ ತಜ್ಞರು ನಿರ್ದಿಷ್ಟ ಬೆಳೆಗೆ ಇಂತಿಷ್ಟು, ಇಂತಹದ್ದೇ ಗೊಬ್ಬರ ಬಳಸಬೇಕೆಂದು ಶಿಫಾರಸು ಕೂಡ ಮಾಡಿದ್ದಾರೆ. ಅದೇ ಪ್ರಮಾಣದಲ್ಲಿ ಹಾಕಲು ರೈತ ಗೊಬ್ಬರದ ವೆಚ್ಚ ಭರಿಸದ ಸ್ಥಿತಿಯಲ್ಲಿ ಇದ್ದಾನೆ. ಹಾಗಾಗಿ ಡಿಎಪಿ ಬಳಸುವ ಜಾಗದಲ್ಲಿ ಯುರಿಯಾ ಬಳಸುತ್ತಾನೆ. ಇಂತಹ ಹೊತ್ತಲ್ಲಿ ಶೇ. 60ರಷ್ಟು ಗೊಬ್ಬರ ದರ ಹೆಚ್ಚಿಸಿರುವುದು ನಿಜಕ್ಕೂ ರೈತನನ್ನು ಸಂಕಷ್ಟಕ್ಕೆ ತಳ್ಳಿದೆ’ ಎನ್ನುತ್ತಾರೆ.

ಇದನ್ನೂ ಓದಿ: ಅಮಿತ್‌ ಶಾ ಕಾಣೆಯಾಗಿದ್ದಾರೆ: ಪೊಲೀಸ್‌ ಠಾಣೆಯಲ್ಲಿ ಮಿಸ್ಸಿಂಗ್‌ ಕೇಸ್‌ ದಾಖಲಿಸಿದ ಎನ್‌ಎಸ್‌ಯುಐ

ಇಷ್ಟೆಲ್ಲಾ ವಿವರಿಸುವ ಯಶವಂತ್‌ ಅವರು ದರ ಏರಿಕೆ ಎಂಬುದು ಯಾವುದೇ ಆತುರದ ನಿರ್ಧಾರವಲ್ಲ ಎನ್ನುತ್ತಾರೆ. ”ಗೊಬ್ಬರದ ದರ ಏರಿಕೆ ಸರ್ಕಾರದ ಪ್ರಜ್ಞಾಪೂರ್ವಕ ನಿರ್ಧಾರ. ಜನವಿರೋಧಿ ಕ್ರಮಗಳು ಮತ್ತು ಧೋರಣೆಗೆ ಜನರ ವಿರೋಧ ತಡೆಯಲು ಬಿಜೆಪಿ ಸುಳ್ಳಗಳ ಮೂಲಕ ಗೊಂದಲಗಳನ್ನು ಹುಟ್ಟಿಸಿ, ವಿರೋಧವನ್ನು ಸರಿದೂಗಿಸುತ್ತಿದೆ ಎಂದು ಅವರು ವಿಶ್ಲೇಷಿಸುತ್ತಾರೆ.

ಕೃಷಿ ವಲಯದ ನಿಯಂತ್ರಣವನ್ನು ಸಂಪೂರ್ಣವಾಗಿ ಕಾರ್ಪೋರೇಟ್‌ ವಲಯಕ್ಕೆ ದಾಟಿಸುವ ಒಟ್ಟೂ ಯೋಜನೆಯ ಭಾಗವಾಗಿ ಎಲ್ಲವೂ ನಡೆಯುತ್ತಿವೆ ಎಂಬುದು ಅವರ ಗ್ರಹಿಕೆ. ದರ ಹೆಚ್ಚಳದ ಸುದ್ದಿಯಾದಾಗ ಚುನಾವಣೆ ನಡೆಯುತ್ತಿತ್ತು. ಹಾಗಾಗಿ ಹಳೆಯ ದರದಲ್ಲೇ ಮಾಡುತ್ತೇವೆ ಎಂದು ಹೇಳಿಕೆ ನೀಡಿ ಗೊಂದಲ ಹುಟ್ಟಿಸಿತು. ದರ ಹೆಚ್ಚಿಸಿದ್ದನ್ನು ಮರೆಮಾಚಿ, ರೈತರಿಗೆ ಹಳೆಯದರದಲ್ಲಿ ಮಾರಾಟ ಮಾಡಿ ಹೇಳಿದ್ದೇ ಗೊಂದಲ ಹುಟ್ಟಿಸಲು ಎಂದು ಸರ್ಕಾರ ಸೂಕ್ಷ್ಮ ನಡೆಗಳನ್ನು ವಿವರಿಸುತ್ತಾರೆ.

” ಸರ್ಕಾರದ ಆರ್ಥಿಕ ಧೋರಣೆ ಸ್ಪಷ್ಟವಾಗಿವೆ. ಈಗಾಗಲೇ ಸಾಕಷ್ಟು ದಿವಾಳಿಯಾಗಿರುವ ರೈತ, ಮತ್ತಷ್ಟು ದಿವಾಳಿಯಾಗಿ ತನ್ನ ಜಮೀನು ಕಳಕೊಂಡು, ವ್ಯವಸಾಯ ಸಂಪೂರ್ಣ ತೊರೆಯಬೇಕು ಎಂಬ ಕಾರಣಕ್ಕೆ ಸರ್ಕಾರ ರೈತ ವಿರೋಧಿ ಕೃಷಿ ನೀತಿಯನ್ನು ಹೇರುತ್ತಿದೆ.” ಎಂದು ಯಶವಂತ್‌ ವ್ಯಾಖ್ಯಾನಿಸಿದ್ದಾರೆ.

ನಗರಕೇಂದ್ರಿತ ಅಭಿವೃದ್ಧಿಯಾಗಿದ್ದು, ಹಳ್ಳಿಯಿಂದ ಜನ ವಲಸೆ ಬಂದಿದ್ದರೂ ಶೇ. 55ರಷ್ಟು ಜನ ಹಳ್ಳಿಗಳಲ್ಲಿದ್ದಾರೆ. ಸಣ್ಣ, ಅತಿ ಸಣ್ಣ ರೈತರು ವಲಸೆ ಕಾರ್ಮಿಕರನ್ನಾಗಿ ಮಾಡಬೇಕು ಎನ್ನುವುದು ಬಂಡವಾಳ ಶಾಹಿ ವ್ಯವಸ್ಥೆಯ ಹುನ್ನಾರ. ಆದರೆ ಕೋವಿಡ್‌ ಕಾಲದಲ್ಲಿ ಎಲ್ಲರೂ ಮರಳಿ ವಲಸೆ ಹೊರಟಿದ್ದಾರೆ. ಅವರಿಗೆ ಇರುವ ಏಕೈಕ ಆಶ್ರಯ ಕೃಷಿ. ಆದರೆ ಸರ್ಕಾರ ಎಲ್ಲ ವಲಯಗಳನ್ನು ಖಾಸಗೀಕರಣಗೊಳಿಸಿದಂತೆ ಸರ್ಕಾರ ಕೃಷಿ ವಲಯವನ್ನು ಖಾಸಗಿ ಉದ್ಯಮಿಗಳಿಗೆ ಒಪ್ಪಿಸುವುದಕ್ಕೆ ಸಿದ್ಧವಾಗಿದೆ. ಆದರೆ ಕೋವಿಡ್‌ ಕಾಲದಲ್ಲಿ ಜಗತ್ತಿನ ಎಲ್ಲ ಕ್ಷೇತ್ರಗಳು ಬಿಕ್ಕಟ್ಟು ಅನುಭವಿಸುತ್ತಿರುವಾಗ, ಬಿಕ್ಕಟ್ಟುಗಳ ನಡುವೆಯೂ ಕೃಷಿ ಕ್ಷೇತ್ರ ಸಕ್ರಿಯವಾಗಿದೆ. ಬೆಳವಣಿಗೆ ಕಾಣುತ್ತಿದೆ. ಆದರೆ ಸರ್ಕಾರ ಕೃಷಿ ವಲಯಕ್ಕೆ ಪೂರಕವಾದ ನಿಲುವ ತಳೆಯದೇ, ಬಂಡವಾಳ ಶಾಹಿಗಳ ಹಿತಾಸಕ್ತಿಗೆ ಒತ್ತಾಸೆಯಾಗಿದ್ದು, ಇದು ದೇಶದ ಒಟ್ಟು ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಲಿದೆ. ಹಾಗಾಗಿ ಇದು ಕೃಷಿ ವಲಯವನ್ನು ನಿಯಂತ್ರಿಸುವ ಭರದಲ್ಲಿ ಸರ್ಕಾರದ ಆತ್ಮಹತ್ಯೆ ನಡೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಕರ್ನಾಟಕಕ್ಕೆ ದ್ರೋಹ: ರಾಜ್ಯಕ್ಕೆ ಕೇವಲ 120 ಮೆಟ್ರಿಕ್‌ ಟನ್‌ ಆಕ್ಸಿಜನ್‌; ಯುಪಿಗೆ 1630 ಮೆಟ್ರಿಕ್‌ ಟನ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights