FACT CHECK | ಅಹಮದಾಬಾದ್ ವಿಮಾನ ಅಪಘಾತದ ಅಂತಿಮ ಕ್ಷಣ ಎಂದು 2023ರ ಹಳೆಯ ವೀಡಿಯೊ ಹಂಚಿಕೆ

ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ 242 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ ಗುರುವಾರ ಮಧ್ಯಾಹ್ನ ಅಪಘಾತಕ್ಕೀಡಾಯಿತು. ಲಂಡನ್-ಗ್ಯಾಟ್ವಿಕ್‌ಗೆ ತೆರಳುತ್ತಿದ್ದ ವಿಮಾನವು ಕೆಲವೇ ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡು ಜನನಿಬಿಡ ಮೇಘನಿನಗರ ಪ್ರದೇಶದಲ್ಲಿ ಪತನಗೊಂಡು, ಭಾರಿ ಸ್ಫೋಟ ಮತ್ತು ಬೆಂಕಿಗೆ ಕಾರಣವಾಯಿತು.

ಈ ಮಧ್ಯೆ, ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಅಹಮದಾಬಾದ್ ವಿಮಾನ ಅಪಘಾತದ ಲೈವ್ ವಿಡಿಯೋ’’ ಎಂದು ಬರೆದುಕೊಂಡಿದ್ದಾರೆ.

ಲಲಿತ್ ಮೋದಿ ಎಂಬ ಫೇಸ್‌ಬುಕ್ ಬಳಕೆದಾರೊಬ್ಬರು ಇದೇ ವಿಡಿಯೋವನ್ನು ಹಂಚಿಕೊಂಡು, ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ @airindia ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಟೇಕ್ ಆಫ್ ಆಗುವಾಗ ವೈದ್ಯಕೀಯ ಕಾಲೇಜಿಗೆ ಅಪ್ಪಳಿಸಿದ  ಡ್ರೀಮ್‌ಲೈನರ್ 787 ವಿಮಾನದಿಂದ ಬಂದ ಕೊನೆಯ ವೀಡಿಯೊ. ಈ ವಿಮಾನದಲ್ಲಿ 242 ಪ್ರಯಾಣಿಕರಿದ್ದರು. ಅವರು ಬದುಕುಳಿದಿರಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ ಹಳದಿ ಉಡುಪಿನಲ್ಲಿರುವ ವ್ಯಕ್ತಿಯೊಬ್ಬ ವಿಮಾನದ ಒಳಗಿನಿಂದ ಹೊರಗಿನ ದೃಶ್ಯವನ್ನು ಸೆರೆಹಿಡಿಯುತ್ತಿರುವುದು ಕಂಡುಬರುತ್ತದೆ. ನಂತರ ಅವನು ತನ್ನ ಮತ್ತು ತನ್ನ ಸಹ ಪ್ರಯಾಣಿಕರ ಕಡೆಗೆ ಕ್ಯಾಮೆರಾವನ್ನು ತಿರುಗಿಸುತ್ತಾನೆ, ನಂತರ ಹಠಾತ್ ಬೆಂಕಿ ಮತ್ತು ವಿಮಾನ ಅಪಘಾತದ ದೃಶ್ಯಗಳು ಗೋಚರಿಸುತ್ತವೆ. ಈ ದೃಶ್ಯಗಳನ್ನು ಹಂಚಿಕೊಳ್ಳುವವರು ಇದು ದುರಂತದ ಕೆಲವು ಕ್ಷಣಗಳ ಮೊದಲು ಅಹಮದಾಬಾದ್ ವಿಮಾನದ ಒಳಗಿನಿಂದ ನಡೆದ ಲೈವ್ ರೆಕಾರ್ಡಿಂಗ್ ಎಂದು ಹೇಳಿಕೊಳ್ಳುತ್ತಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು  ವಿಡಿಯೋದ ಕೀಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜನವರಿ 17, 2023 ರಂದು ಘಾನಾ ಮೂಲದ ವೆಬ್‌ಸೈಟ್ OccupyGh.com ಪ್ರಕಟಿಸಿದ ವರದಿ ಸಿಕ್ಕಿದೆ. ‘‘ನೇಪಾಳ ವಿಮಾನ ಅಪಘಾತ: ಫೇಸ್‌ಬುಕ್ ಲೈವ್ ವಿಮಾನ ಅಪಘಾತದ ಭಯಾನಕ ಅಂತಿಮ ಸೆಕೆಂಡುಗಳನ್ನು ಸೆರೆಹಿಡಿಯುತ್ತದೆ’’ ಎಂಬ ಶೀರ್ಷಿಕೆಯ ಈ ವರದಿಯು ಹಳದಿ ಉಡುಪಿನಲ್ಲಿರುವ ಅದೇ ವ್ಯಕ್ತಿಯನ್ನು ತೋರಿಸುವ ಚಿತ್ರಗಳು ಮತ್ತು ವೈರಲ್ ವೀಡಿಯೊದಲ್ಲಿರುವ ದೃಶ್ಯಗಳನ್ನು ಒಳಗೊಂಡಿದೆ.

ವರದಿಯ ಪ್ರಕಾರ, ಈ ಘಟನೆ ಜನವರಿ 15, 2023 ರಂದು ಸಂಭವಿಸಿದೆ, ಯೇತಿ ಏರ್ಲೈನ್ಸ್ ನಿರ್ವಹಿಸುತ್ತಿದ್ದ ATR 72 ವಿಮಾನವು ನೇಪಾಳದ ಪೋಖರಾದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ಪತನಗೊಂಡು ವಿಮಾನದಲ್ಲಿದ್ದ ಎಲ್ಲಾ 72 ಜನರು ಸಾವನ್ನಪ್ಪಿದರು. ATR 72 ವಿಮಾನದ ಅತ್ಯಂತ ಮಾರಕ ಅಪಘಾತ ಇದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜನವರಿ 17, 2023 ರಂದು ನಡೆದ ಘಟನೆಯ ಬಗ್ಗೆ ವರದಿ ಮಾಡಿದ ದಿ ಸ್ಟಾರ್ ಮಾಧ್ಯಮವು, ನೇಪಾಳದ ಪೋಖರಾ ನಗರದಲ್ಲಿ ವಿಮಾನ ಅಪಘಾತಕ್ಕೀಡಾಗುವ ಕೊನೆಯ ಕ್ಷಣಗಳನ್ನು ಭಾರತೀಯ ಪ್ರಯಾಣಿಕರೊಬ್ಬರು ನೇರ ಪ್ರಸಾರ ಮಾಡಿದ್ದಾರೆ ಎಂದು ಹೇಳಿದೆ. ವರದಿಯು ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್‌ನಿಂದ ತೆಗೆದ ಮುಖಪುಟ ಚಿತ್ರವನ್ನು ಒಳಗೊಂಡಿದೆ.

ಜನವರಿ 17, 2023 ರಂದು, ಪೋಖರಾದಲ್ಲಿ ನಡೆದ ಯೇತಿ ಏರ್ಲೈನ್ಸ್ ATR-72 ಅಪಘಾತದಲ್ಲಿ ಸಾವನ್ನಪ್ಪಿದ ಐದು ಭಾರತೀಯ ಪ್ರಜೆಗಳಲ್ಲಿ ನಾಲ್ವರು ವಿಮಾನ ಪತನಗೊಳ್ಳುವ ಸ್ವಲ್ಪ ಮೊದಲು ಫೇಸ್‌ಬುಕ್‌ನಲ್ಲಿ ವಿಮಾನದ ಅಂತಿಮ ಕ್ಷಣಗಳನ್ನು ನೇರಪ್ರಸಾರ ಮಾಡುತ್ತಿದ್ದರು ಎಂದು ಜಾಗರಣ್ ವರದಿ ಮಾಡಿದೆ. ಮುಖಪುಟದ ಚಿತ್ರವು ಹಳದಿ ಉಡುಪಿನಲ್ಲಿರುವ ವ್ಯಕ್ತಿ ವಿಮಾನದೊಳಗೆ ಚಿತ್ರೀಕರಣ ಮಾಡುತ್ತಿರುವ ವೈರಲ್ ವೀಡಿಯೊದಿಂದ ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2023 ರಲ್ಲಿ ನಡೆದ ನೇಪಾಳದ ಯೇಟಿ ಏರ್‌ಲೈನ್ಸ್ ವಿಮಾನ ದುರಂತಕ್ಕೆ ಸಂಬಂಧಿಸಿದ ವಿಡಿಯೋವನ್ನು  ಗುರುವಾರ ಮಧ್ಯಾಹ್ನ 12 ಗೂನ್‌ 2025ರಂದು ನಡೆದ ಅಹಮದಾಬಾದ್ ವಿಮಾನ ಅಪಘಾತ್ತದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಭಾರತೀಯ ಮುಸ್ಲಿಂ ಮಹಿಳೆಯೊಬ್ಬರು ಮಗನ ಮೂತ್ರ ಬೆರೆಸಿದ ಊಟವನ್ನು ಗ್ರಾಹಕರಿಗೆ ನೀಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights