FACT CHECK | ಇರಾನ್‌ನಲ್ಲಿ ಮೊಸಾದ್ ಗೂಢಾಚಾರರನ್ನು ಸಾರ್ವಜನಿಕವಾಗಿ ನೇಣಿಗೇರಿಸಿದ್ದು ನಿಜವೇ?
ವ್ಯಕ್ತಿಯೊಬ್ಬರನ್ನು ಸಾರ್ವಜನಿಕವಾಗಿ ನೇಣಿಗೆ ಹಾಕುತ್ತಿರುವ ವಿಡಿಯೋವೊಂದು ಸಾಮಾಝಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಇಸ್ರೇಲ್‌ನೊಂದಿಗಿನ ಯುದ್ಧ ನಿಂತ ನಂತರ ಇರಾನ್‌ನಲ್ಲಿ 700ಕ್ಕೂ ಹೆಚ್ಚು ಯಹೂದಿಗಳನ್ನು (ದೇಶದಲ್ಲಿರುವ ಯಹೂದಿಗಳ ಪೈಕಿ 10ನೇ ಒಂದರಷ್ಟು ಮಂದಿ) ಬಂಧಿಸಿದ್ದು, ಮೊಸಾದ್ ಏಜೆಂಟ್‌ಗಳು ಎಂದು ಆರೋಪಿಸಿ, ಅವರನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಲಾಗುತ್ತಿದೆ ಎಂದು ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ.

ಜುಲೈ 1, 2025 ರಂದು ಫೇಸ್‌ಬುಕ್ ಬಳಕೆದಾರರೊಬ್ಬರು ಈ ಪೋಸ್ಟ್ ಅನ್ನು ಹಂಚಿಕೊಂಡು, “ಇರಾನ್‌ನಲ್ಲಿ ಸುಮಾರು 7,000 ಯಹೂದಿಗಳು ವಾಸಿಸುತ್ತಿದ್ದಾರೆ, ಅವರೆಲ್ಲರೂ ತಮ್ಮ ದೇಶದ ದೇಶಭಕ್ತರು. ಇರಾನಿನ ಯಹೂದಿಗಳು ಇರಾನ್‌ನ ಮಿಲಿಟರಿಯಲ್ಲಿ ಉನ್ನತ ಹುದ್ದೆಗಳನ್ನು ಹೊಂದಿದ್ದಾರೆ, ಇದರಲ್ಲಿ ಇಬ್ಬರು ಜನರಲ್‌ಗಳು ಸೇರಿದ್ದಾರೆ ಮತ್ತು ಒಬ್ಬರು ಕ್ಯಾಬಿನೆಟ್ ಮಂತ್ರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಆದಾಗ್ಯೂ, ಇಸ್ರೇಲ್‌ನೊಂದಿಗಿನ ಯುದ್ಧ ಮುಗಿದ ನಂತರ, ಇರಾನಿನ ಇಸ್ಲಾಮಿಕ್ ಆಡಳಿತವು 700 ಕ್ಕೂ ಹೆಚ್ಚು ಇರಾನಿನ ಯಹೂದಿಗಳನ್ನು ಬಂಧಿಸಿದೆ – ಇರಾನ್‌ನ ಯಹೂದಿ ಜನಸಂಖ್ಯೆಯ ಸುಮಾರು 10% – ಅವರನ್ನು ‘ಮೊಸಾದ್ ಏಜೆಂಟ್‌ಗಳು’ ಎಂದು ಸುಳ್ಳು ಆರೋಪಿಸಿದರು ಮತ್ತು ಕ್ರೇನ್‌ಗಳಿಂದ ಸಾರ್ವಜನಿಕವಾಗಿ ನೇತುಹಾಕಿದರು. ಮಾನವ ಹಕ್ಕುಗಳ ಕಾರ್ಯಕರ್ತರು ಎಲ್ಲಿದ್ದಾರೆ???” ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ತಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಅಲಿರೆಝಾ ಡೊನ್ಯಾಡಿಡೆ ಎನ್ನುವ ಯೂ ಟ್ಯೂಬ್ ವಾಹಿನಿನಲ್ಲಿ 2024ರ ಏ.16ರಂದು (ಇರಾನ್–ಪ್ಯಾಲಿಸ್ಟೀನ್ ಸಂಘರ್ಷಕ್ಕೂ ಹಿಂದೆಯೇ) ಅಪ್‌ಲೋಡ್ ಮಾಡಲಾಗಿದ್ದ ಮೂಲ ವಿಡಿಯೊ ಲಭ್ಯವಾಗಿದೆ.
https://www.youtube.com/watch?v=2rdkAYX1ySI
ಇಸ್ರೇಲ್-ಇರಾನ್ ಸಂಘರ್ಷದ ಬಗ್ಗೆ ತಪ್ಪು ಮಾಹಿತಿ ಹರಡುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಮೊಸಾದ್ ಪರ ಬೇಹುಗಾರಿಕೆ ನಡೆಸಿದ್ದಕ್ಕಾಗಿ ಭಾರತೀಯನೊಬ್ಬನನ್ನು ಇರಾನ್‌ನಲ್ಲಿ ಬಂಧಿಸಲಾಗಿದೆ ಎಂದು ಸುಳ್ಳು ಹೇಳುವ ಫೋಟೋ ಕೂಡ ವೈರಲ್ ಆಗಿತ್ತು ಮತ್ತು ವಿಶ್ವಾಸ್ ನ್ಯೂಸ್ ಆ ಹೇಳಿಕೆಯನ್ನು ಅಲ್ಲಗಳೆದಿದೆ.
‘ಬೀ ಬಡಾನ್’ ಎನ್ನುವ ಸಿನಿಮಾ ಚಿತ್ರೀಕರಣದ ದೃಶ್ಯವನ್ನು ಅಲಿರೆಝಾ ಎನ್ನುವ ಸ್ಟಂಟ್‌ಮ್ಯಾನ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಆನ್‌ಲೈನ್‌ನಲ್ಲಿ ಲಭ್ಯವಿರುವ ಚಿತ್ರದಲ್ಲಿಯೂ ಈ ದೃಶ್ಯವನ್ನು ಕಾಣಬಹುದಾಗಿದೆ. ಸಿನಿಮಾವೊಂದರ ತುಣುಕನ್ನು ಹಂಚಿಕೊಂಡು ಕೆಲವರು ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಆಗಿರುವ ವಿಡಿಯೋ ಚಲನಚಿತ್ರ ದೃಶ್ಯ ಎಂಬುದು ಸ್ಪಷ್ಟವಾಗಿದೆ. ಮೊಸಾದ್ ಬೇಹುಗಾರಿಕೆ ಆರೋಪದ ಮೇಲೆ ಇರಾನ್‌ನಲ್ಲಿ ಸಾರ್ವಜನಿಕ ಮರಣದಂಡನೆಗಳ ಬಗ್ಗೆ ತಪ್ಪುದಾರಿಗೆಳೆಯುವ ಹೇಳಿಕೆಗಳೊಂದಿಗೆ ಚಲನಚಿತ್ರ ಚಿತ್ರೀಕರಣದ ತುಣುಕನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಗೊರಿಲ್ಲಾವೊಂದು ಮಗುವನ್ನು ತಾಯಿಗೆ ನೀಡುತ್ತಿರುವ ವಿಡಿಯೋದ ಅಸಲೀಯತ್ತೇನು?

