FACT CHECK | ರಾಮ ಮತ್ತು ಹನುಮನ ಮೂರ್ತಿಗಳಿಗೆ ಹಾನಿ ಮಾಡಿದ್ದು ಮುಸ್ಲಿಂ ಯುವಕರಲ್ಲ..!!

ಮುಸ್ಲಿಂ ವ್ಯಕ್ತಿಗಳು ಹಿಂದೂ ದೇವರಾದ ರಾಮ ಮತ್ತು ಹನುಮಂತನ ಮೂರ್ತಿಗೆ ಹಾನಿ ಮಾಡುತ್ತಾ ಹಿಂದೂ ಧರ್ಮದ ಸಮುದಾಯಕ್ಕೆ ನೋವುಂಟಾಗುವಂತೆ ನಡೆದುಕಂಡಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಜಾತ್ಯಾತೀತ ಸು**ಳೇ ನೊಡ್ರೋ ಇಲ್ಲಿ..!! ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಮುಸ್ಲಿಮರು ರಾಮ ಮತ್ತು ಹನುಮಂತನ ವಿಗ್ರಹಗಳನ್ನು ಹೇಗೆ ಮಾಡುತ್ತಿದ್ದಾರೆ ನೋಡಿ’’ ಎಂದು ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಕೆಲವು ಯುವಕರು ಧಾರ್ಮಿಕ ವಿಗ್ರಹಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದು ಕಾಣಬಹುದು. ವಿಡಿಯೋದಲ್ಲಿ, ಒಂದು ಕೈಗೆ ಮಾತ್ರ ಶರ್ಟ್ ಹಾಕದ ಯುವಕನೊಬ್ಬ ಭಗವಾನ್ ಶ್ರೀರಾಮ ಮತ್ತು ಹನುಮಂತನ ವಿಗ್ರಹಗಳಿಗೆ ಹೊಡೆಯುತ್ತಾರೆ. ಇದರ ಜೊತೆಗೆ ಆತನ ಇತರ ಸಹಚರರು ಸಹ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಕ್ಯಾಮೆರಾದ ಹಿಂದಿನಿಂದ ನಗುತ್ತಾ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ. ಈ ಕೃತ್ಯವನ್ನು ಎಸಗಿದವರು ಮುಸ್ಲಿಮರು ಎಂಬ ಹೇಳಿಕೆಯೊಂದಿಗೆ ವೀಡಿಯೊ ಹಂಚಿಕೊಳ್ಳಲಾಗುತ್ತಿದೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, Chauchak Media ಆಗಸ್ಟ್ 11 ರಂದು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿರುವುದು ಲಭ್ಯವಾಗಿದೆ. ‘‘ಛತ್ತೀಸ್‌ಗಢದಲ್ಲಿ ಕುಡಿದ ಮತ್ತಿನಲ್ಲಿ ಕೆಲವರು ಶ್ರೀರಾಮ ಮತ್ತು ಹನುಮಾನ್ ವಿಗ್ರಹಗಳೊಂದಿಗೆ ಅನುಚಿತವಾಗಿ ವರ್ತಿಸಿದ ವಿಡಿಯೋ ಕಂಕೇರ್ ಜಿಲ್ಲೆಯಿಂದ ಹೊರಬಂದಿದೆ’’ ಎಂಬ ಶೀರ್ಷಿಕೆ ನೀಡಲಾಗಿದೆ.

ವರದಿಯ ಪ್ರಕಾರ, ‘‘ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆ ಪ್ರದೇಶದ ನವಗಾಂವ್‌ನಲ್ಲಿರುವ ಇಶಾನ್ವನ್‌ನಲ್ಲಿ ಈ ಘಟನೆ ನಡೆದಿದೆ. ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಹಿಂದೂ ಸಂಘಟನೆಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವೀಡಿಯೊದಲ್ಲಿ ಕಾಣುವ ಯುವಕರು ಕೊಂಡಗಾಂವ್ ಜಿಲ್ಲೆಯ ಅಲೋರ್ ಗ್ರಾಮದ ನಿವಾಸಿಗಳಾದ ಮಹೇಶ್ ಕೊರ್ರಂ, ಶಿವಲಾಲ್, ಲೋಚನ್, ಸಂಜೀವ್ ಮಾರ್ಕಮ್. ಮೂರರಿಂದ ನಾಲ್ಕು ಯುವಕರು ಈ ಆಕ್ಷೇಪಾರ್ಹ ನಡವಳಿಕೆಯಲ್ಲಿ ನೇರವಾಗಿ ಭಾಗಿಯಾಗಿದ್ದರೆ, ಇತರರು ವೀಡಿಯೊ ಮಾಡುತ್ತಿದ್ದರು’’ ಎಂದು ಹೇಳಲಾಗಿದೆ.

Fatafat News ಕೂಡ ಆಗಸ್ಟ್ 11 ರಂದು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಮಾಡಿದೆ. ‘‘ಕಂಕೇರ್ ಜಿಲ್ಲೆಯ ಪ್ರವಾಸಿ ತಾಣ ಇಶಾನ್ವನ್‌ನಲ್ಲಿರುವ ಶ್ರೀರಾಮ ಮತ್ತು ಹನುಮಾನ್ ಪ್ರತಿಮೆಗಳನ್ನು ಸಮಾಜ ವಿರೋಧಿಗಳು ಥಳಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ, ವಿವಿಧ ಸಾಮಾಜಿಕ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಸಾಮಾಜಿಕ ಸಂಘಟನೆಗಳು ವೀಡಿಯೊದ ಆಧಾರದ ಮೇಲೆ ಸಮಾಜ ವಿರೋಧಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇವರಲ್ಲಿ ಓರ್ವ ಅಪ್ರಾಪ್ತ ವಯಸ್ಕಿನವ. ಕೊಂಡಗಾಂವ್ ಜಿಲ್ಲೆಯ ಅಲೋರ್ ನಿವಾಸಿಗಳಾದ ಮಹೇಶ್ ಕೊರ್ರಂ, ಶಿವಲಾಲ್ ಲೋಚನ್, ಸಂಜೀವ್ ಮಾರ್ಕಮ್ ಎಂದು ಆರೋಪಿಗಳನ್ನು ಗುರುತಿಸಲಾಗಿದೆ’’ ಎಂಬ ಮಾಹಿತಿ ಇದರಲ್ಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಇತರೆ ವರದಿಗಳನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ರಾಮ ಮತ್ತು ಹನುಮಂತನ ವಿಗ್ರಹಕ್ಕೆ ಹಾನಿ ಮಾಡುತ್ತಿರುವ ಈ ವ್ಯಕ್ತಿಗಳು ಮುಸ್ಲಿಮರಲ್ಲ ಬದಲಾಗಿ ಅವರು ಹಿಂದೂಗಳು ಎಂದು ಸೌತ್‌ಚೆಕ್ ವರದಿ ಮಾಡಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: FACT CHECK | ಸದನಕ್ಕೆ ಟಿ-ಶರ್ಟ್ ಧರಿಸಿ ಬಂದ ರಾಹುಲ್ ಗಾಂಧಿಗೆ ವಾರ್ನಿಂಗ್ ಕೊಟ್ರಾ ಸ್ಪೀಕರ್ ಓಂ ಬಿರ್ಲಾ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights