FACT CHECK: ‘ನಾನು ಸ್ವಾತಂತ್ರ್ಯ ಹೋರಾಟದಲ್ಲೇ ಇರಲಿಲ್ಲ’ ಎಂದು ನೆಹರೂ ಹೇಳಿದ್ದಾರೆ ಎನ್ನಲಾದ ವಿಡಿಯೋದ ಅಸಲೀಯತ್ತೇನು?
ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ತಮಗೆ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರವಿರಲಿಲ್ಲ ಮತ್ತು ತಾವು ಅದನ್ನು ವಿರೋಧಿಸಿದ್ದಾಗಿ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದಾರೆ ಎನ್ನಲಾದ ವಿಡಿಯೋ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
“I was not involved in the freedom struggle at all. In fact, I opposed it.”
~ Jawaharlal Nehru
A rare video footage allegedly shows Nehru being interviewed by a British journalist.
In the interview, Nehru allegedly says that Gandhi did not want the partition of India, but that… pic.twitter.com/2TtU7h7dSL
— Boiled Anda (@AmitLeliSlayer) August 22, 2026
ಆ ಸಂದರ್ಶನದಲ್ಲಿ, ಗಾಂಧೀಜಿಯವರಿಗೆ ಭಾರತದ ವಿಭಜನೆ ಇಷ್ಟವಿರಲಿಲ್ಲ, ಆದರೆ ತಾವೇ ಆ ವಿಭಜನೆಗೆ ಕಾರಣರೆಂದು ನೆಹರೂ ಅವರೇ ಒಪ್ಪಿಕೊಂಡಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಪ್ರತಿಪಾದಿಸಿದಂತೆ ನೆಹರೂ ಅವರು ಹೇಳಿರುವುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಅದರಲ್ಲಿ ನೆಹರೂ “In fact, I opposed it” (ನಾನು ಅದನ್ನು ವಿರೋಧಿಸಿದೆ) ಎಂದು ಹೇಳುತ್ತಿಲ್ಲ, ಬದಲಿಗೆ “In fact, he opposed it” (ಅವರು ಅದನ್ನು ವಿರೋಧಿಸಿದರು) ಎಂದು ಹೇಳುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತದೆ.
ಇದರ ಆಧಾರದಲ್ಲಿ ಮೂಲ ವಿಡಿಯೋವನ್ನು ನಾವು ಗೂಗಲ್ ಸರ್ಚ್ ಇಂಜಿನ್ ಬಳಸಿ ಚೆಕ್ ಮಾಡಿದಾಗ, ‘ಪ್ರಸಾರ ಭಾರತಿ ಆರ್ಕೈವ್ಸ್’ (Prasar Bharati Archives) ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾದ ಮೂಲ ಮತ್ತು ಪೂರ್ಣ ಪ್ರಮಾಣದ ವಿಡಿಯೋ ಲಭ್ಯವಾಗಿದೆ. ಇದು ಮೇ 1964ರಲ್ಲಿ ಜವಾಹರಲಾಲ್ ನೆಹರೂ ಅವರು ನೀಡಿದ್ದ ಕೊನೆಯ ದೂರದರ್ಶನ ಸಂದರ್ಶನವಾಗಿದೆ.
ವಿಡಿಯೋದ 14:34 ಸಮಯದ ವೇಳೆಯಲ್ಲಿ, ಸಂದರ್ಶಕರು “ಸ್ವಾತಂತ್ರ್ಯ ಹೋರಾಟ ಮತ್ತು ದೇಶ ವಿಭಜನೆಯ ಸಮಯದಲ್ಲಿ ನೀವು, ಗಾಂಧೀಜಿ ಮತ್ತು ಜಿನ್ನಾ ಅವರೆಲ್ಲರೂ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿದ್ದಿರಿ.” ಎಂದು ಪ್ರಶ್ನಿಸುತ್ತಾರೆ.
ಅದಕ್ಕೆ ಉತ್ತರಿಸುವ ನೆಹರೂ, “ಶ್ರೀ ಜಿನ್ನಾ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲೇ ಇಲ್ಲ. ನಿಜ ಹೇಳಬೇಕೆಂದರೆ, ಅವರು ಅದನ್ನು ವಿರೋಧಿಸಿದ್ದರು” (“Mr Jinnah was not involved in the fight for independence at all. In fact, he opposed it”) ಎಂದು ಹೇಳುತ್ತಾರೆ.
ಈ ವೈರಲ್ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ಸಂಪೂರ್ಣವಾಗಿ ತಪ್ಪಾಗಿದೆ. ವೈರಲ್ ಮಾಡಲಾಗಿರುವ ವಿಡಿಯೋವನ್ನು ಎಡಿಟ್ ಮಾಡಿ, ದಾರಿ ತಪ್ಪಿಸುವಂತಹ ಸಬ್‌ಟೈಟಲ್‌ಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ನಿಜವಾದ ಸಂದರ್ಶನದಲ್ಲಿ ನೆಹರೂ ಅವರು ಮಾತನಾಡುತ್ತಿರುವುದು ತಮ್ಮ ಬಗ್ಗೆ ಅಲ್ಲ, ಬದಲಿಗೆ ಮೊಹಮ್ಮದ್ ಆಲಿ ಜಿನ್ನಾ ಅವರ ಬಗ್ಗೆ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವಿಡಿಯೋದಲ್ಲಿ ‘ಜಿನ್ನಾ’ (Jinnah) ಅವರ ಕುರಿತು ನೆಹರೂ ಹೇಳಿದ ಮಾತುಗಳನ್ನು ಕ್ರಾಪ್ ಮಾಡಿ, ನೆಹರೂ ತಾವೇ ಸ್ವತಃ ಸ್ವಾತಂತ್ರ್ಯ ಹೋರಾಟವನ್ನು ವಿರೋಧಿಸಿದ್ದರು ಎನ್ನುವಂತೆ ಸುಳ್ಳು ಸಬ್‌ಟೈಟಲ್ ನೀಡಿ ಹಂಚಿಕೊಳ್ಳಲಾಗುತ್ತಿದೆ. ಆದ್ದರಿಂದ ಈ ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳು ಮತ್ತು ದಾರಿತಪ್ಪಿಸುವಂತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

