ಕಾಫಿನಾಡಲ್ಲಿ ಕೇಸರಿ ಜಾತ್ರೆ : ಸಚಿವ ಸಿಟಿ ರವಿ ಸಖತ್ ಡ್ಯಾನ್ಸ್ – ವಿಡಿಯೋ ನೋಡಿ

ಹದಿನೈದು ಸಾವಿರಕ್ಕೂ ಅಧಿಕ ಭಕ್ತರು, ಐದು ಸಾವಿರಕ್ಕೂ ಅಧಿಕ ಪೊಲೀಸರು. ಭಕ್ತರ ಕೈಯಲ್ಲಿ ಕೇಸರಿ ಬಾವುಟ. ಪೊಲೀಸರ ಕೈಯಲ್ಲಿ ಮಾರುದ್ದ ಲಾಠಿ. ಇದು ಚಿಕ್ಕಮಗಳೂರಿನ ವಿವಾದಿತ ಧಾರ್ಮಿಕ ಕೇಂದ್ರ ದತ್ತಪೀಠದ ದತ್ತಜಯಂತಿ ಕಾರ್ಯಕ್ರಮದ ಬಂದೋಬಸ್ತ್. ಪೊಲೀಸರ ಸರ್ಪಗಾವಲಿನಲ್ಲಿ ವಿವಾದಿತ ಸ್ಥಳದ ಉತ್ಸವ ಶಾಂತಿಯುತವಾಗಿ ಮುಗಿದಿದ್ದು ಪೊಲೀಸರು ಹಾಗೂ ಕಾಫಿನಾಡಿಗರು ನಿಟ್ಟುಸಿರು ಬಿಟ್ಟಿದ್ದಾರೆ. ಆದ್ರೆ, ದತ್ತಪೀಠ ಹಿಂದುಗಳ ಪೀಠ, ಸರ್ಕಾರ ದಾಖಲೆಗಳನ್ನ ಪರಿಶೀಲಿಸಿ ಪೀಠವನ್ನ ಹಿಂದೂಗಳಿಗೆ ವಹಿಸಬೇಕೆಂಬ ಕೂಗು ಮಾತ್ರ ಮಾಮೂಲಿಯಂತಿತ್ತು.

 

ಕೇಸರಿ ಬಾವುಟ ಹಿಡಿದು ಕುಣಿಯುತ್ತಿರೋ ಯುವಕರು. ದತ್ತಪೀಠ ಹಿಂದೂಗಳ ಪೀಠ ಎಂದು ಕೂಗುತ್ತಿರೋ ಭಜರಂಗಿಗಳು. ಕಾಫಿನಾಡು ಕೇಸರಿನಾಡು. ಹೌದು, ಇಂದು ಕಾಫಿನಾಡು ಚಿಕ್ಕಮಗಳೂರು ಅಕ್ಷರಶಃ ಕೇಸರಿ ಮಯವಾಗಿತ್ತು. ದತ್ತ ಜಯಂತಿಯ 2ನೇ ದಿನವಾದ ಇಂದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಸಲಾಯ್ತು. ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ದತ್ತಾತ್ರೇಯನಿಗೆ ವಿಶೇಷ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದ್ರು. ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮೂಲಕ ಸಾಗಿದ ಶೋಭಾಯಾತ್ರೆ ಆಜಾದ್ ವೃತ್ತದಲ್ಲಿ ಕೊನೆಗೊಳ್ತು. ಶೋಭಾಯಾತ್ರೆಯಲ್ಲಿ ಹದಿನೈದು ಸಾವಿರಕ್ಕೂ ಅಧಿಕ ದತ್ತ ಭಕ್ತರು ಪಾಲ್ಗೊಂಡಿದ್ರು. ಶೋಭಾಯಾತ್ರೆಯಲ್ಲಿ ಸಚಿವ ಸಿ.ಟಿ.ರವಿ ಕೈಯಲ್ಲಿ ಕತ್ತಿ ಹಿಡಿದು ನೃತ್ಯ ಮಾಡಿ, ಕಹಳೆ ಊದುವ ಮೂಲಕ ಎಲ್ಲರ ಗಮನ ಸೆಳೆದ್ರು. 20ಕ್ಕೂ ಹೆಚ್ಚು ಕಲಾ ತಂಡಗಳು ಮೆರವಣಿಗೆಯುದ್ಧಕ್ಕೂ ಶೋಭಾಯಾತ್ರೆಗೆ ಮೆರಗು ತಂದ್ವು.

ಭಜನೆ, ವೀರಗಾಸೆ, ಭರ್ಜರಿ ಡಿಜೆ, ಡೊಳ್ಳು ಕುಣಿತ, ಶೋಭಾಯಾತ್ರೆಗೆ ಮತ್ತಷ್ಟು ಮೆರಗು ತಂದ್ವು. ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷದ್‍ನ ಸಾವಿರಾರು ಕಾರ್ಯಕರ್ತರು ಬ್ಯಾಂಡ್ ವಾದ್ಯಕ್ಕೆ ಹೆಜ್ಜೆ ಹಾಕಿದ್ರು. ಶೋಭಯಾತ್ರೆಯ ಉದ್ದಗಲಕ್ಕೂ ಕೇಸರಿಯ ಬಾವುಟಗಳು ರಾರಾಜಿಸಿದ್ವು. ಇನ್ನು ಸಂಘ ಪರಿವಾರದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ರು. ಶೋಭಾಯಾತ್ರೆ ಸಾಗಿ ಹೋಗುವ ಮಾರ್ಗದುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ಸಾಗುವ ವೇಳೆ ಬಿಲ್ಡಿಂಗ್‍ಗಳ ಮೇಲೆ ಸಾವಿರಾರು ಮಹಿಳೆಯರು ನಿಂತು ಶೋಭಾ ಯಾತ್ರೆಯನ್ನ ಕಣ್ತುಂಬಿಕೊಂಡ್ರು. ಡಿಜೆ ಶಬ್ಧಕ್ಕೆ ಮೂರ್ನಾಲ್ಕು ಸಾವಿರ ಯುವಕ-ಯುವತಿಯರು ನಾವಾ-ನೀವಾ ಅಂತ ಕುಣಿದು ಕುಪ್ಪಳಿಸಿದ್ರು.

ಒಟ್ಟಾರೆ, ನಾಳೆ ರಾಜ್ಯದ 25 ಸಾವಿರಕ್ಕೂ ಅಧಿಕ ದತ್ತಭಕ್ತರು ಪೀಠಕ್ಕೆ ತೆರಳಲಿದ್ದಾರೆ. ಮುಂಜಾನೆಯಿಂದಲೇ ದತ್ತಭಕ್ತರು ದತ್ತಪೀಠಕ್ಕೆ ತೆರಳಿ ಹೋಮ, ಹವನ ನಡೆಸುವುದರ ಜೊತೆಗೆ ಗುಹೆಯಲ್ಲಿನ ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ಈ ಮೂಲಕ ಮೂರು ದಿನಗಳ ಕಾಲ ನಡೆದ ದತ್ತಜಯಂತಿ ಸಮಾಪನಗೊಳ್ಳಲಿದೆ. ಈ ನಡುವೆ ನಾಳೆ ಕೂಡ ಯಾವುದೇ ಅಹಿತಕರ ಘಟನೆ ನಡೆಯದಂತೆ ದತ್ತಜಯಂತಿ ಶಾಂತಿಯುತವಾಗಿ ನಡೆಯಲೆಂಬುದು ಚಿಕ್ಕಮಗಳೂರಿಗರ ಆಶಯ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights