“ಅನ್ನದಾತೋ ಸುಖೀಭವಃ” : ಕೃಷಿಯಲ್ಲೇ ನಿತ್ಯ ಸತ್ತು ಬದುಕುತ್ತಿರುವ ದೇಶದ ಬೆನ್ನೆಲುಬು…!

ಕೃಷಿ ನಮ್ಮ ರಾಷ್ಟ್ರದ ಬೆನ್ನೆಲಬು,ಶೇ 70 ರಷ್ಟು ಜನತೆ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಕೃಷಿಕನಿಲ್ಲದ ಜಗತ್ತನ್ನು ನಾವು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಯಾಕಂದ್ರೆ ನಮಗೆಲ್ಲರಿಗೂ ಅನ್ನ ನೀಡೋ ಅನ್ನಬ್ರಹ್ಮನೇ ನೇಗಿಲಯೋಗಿ…. ಈ ಕಾರಣಕ್ಕಾಗಿಯೇ “ಅನ್ನದಾತೋ ಸುಖೀಭವಃ” ಅಂತಾ ನಮ್ಮ ಹಿರಿಯರು ಅನ್ನ ನೀಡೋ ಅನ್ನದಾತನ ಸುಖವನ್ನು ಬಯಸಿದ್ದರು. ಆಶೀರ್ವದಿಸಿದ್ದರು.

ಆದ್ರೆ ಆ ಅನ್ನದಾತ ನಿಜವಾಗಿಯೂ ಸುಖವಾಗಿದ್ದಾನ… ತಾನು ಮಾಡೋ ಕೃಷಿ ಕಾಯಕದಲ್ಲಿ ಸಂತೃಪ್ತಿಯಾಗಿದ್ದಾನ… ನೆಮ್ಮದಿಯ ಜೀವನ ನಡೆಸುತ್ತಿದ್ದಾನ… ಇಲ್ಲ… ಬಿಲ್ ಕುಲ್ ಇಲ್ಲ.. ಬದಲಿಗೆ ಇಂದೆಂದೂ ಕಂಡರಿಯದ ಸಂಕಷ್ಟದಲ್ಲಿದ್ದಾನೆ…ದೇಶದೆಲ್ಲಡೆ ಕೃಷಿ ಬಿಕ್ಕಟ್ಟು ಬಿಗಡಾಯಿಸಿರೋ ಸಂದಿಗ್ಧ ಪರಿಸ್ಥಿತಿಯಲ್ಲೇ ಕೃಷಿಯಲ್ಲೇ ನಿತ್ಯ ಸತ್ತು ಬದುಕುತ್ತಿದ್ದಾನೆ.

ಒಂದಡೆ ಅತೀವೃಷ್ಠಿ…. ಇನ್ನೊಂದಡೆ ಅನಾವೃಷ್ಠಿ… ಇವರಡನ್ನೂ ತಪ್ಪಿಸಿಕೊಂಡು ಅಕಸ್ಮಾತ್ ಬಂಪರ್ ಬೆಳೆ ತಗೆದರೆ ಅದಕ್ಕೆ ಸೂಕ್ತ ಬೆಲೆ ಇಲ್ಲ.ಇನ್ನು ಇದನ್ನೂ ಮೀರಿ ಉತ್ತಮ ಇಳುವರಿ ನಿರೀಕ್ಷೆಯಲ್ಲಿರೋ ರೈತರಿಗೆ ತಾವು ಬೆಳದ ಬೆಳೆಗೆ ದಿಢೀರ್ ಅಂತ ಬಂದರೆಗೋ ಕೀಟ ಮತ್ತು ರೋಗದ ಹಾವಳಿ…! ಹೀಗೆ ಅನ್ನದಾತನ ಪರಿಸ್ಥಿತಿ “ಪಾಪಿ ಸಮುದ್ರ ಹೊಕ್ಕರೂ ಮೊಣಕಾಲ್ ತನ್ಕ ನೀರು” ಅನ್ನೊ ಪರಿಸ್ಥಿತಿಯಾಗಿದೆ.ತನ್ನ ಕೃಷಿ ಕಾಯಕದ ಹೊಲವನ್ನೇ ಕೃಷಿ ವಿಶ್ವ ವಿದ್ಯಾಲಯವಾಗಿಸಿಕೊಂಡು ಕೃಷಿಯಲ್ಲಿ ಹಲವು ಪ್ರಯೋಗಗಳನ್ನು ಮಾಡಿ ಗೆದ್ದು ಬೀಗಿ ತನಗೆ ತಾನೇ ಕೃಷಿ ವಿಜ್ಞಾನಿಯಾಗಿದ್ದ ನಮ್ಮ ರೈತ ಇಂದು ಹಲವು ಗೊಂದಲಗಳ ನಡುವೆ ಅಡಕತ್ತರಿಯಲ್ಲಿ ಸಿಲುಕಿದ್ದಾನೆ.ಆಧುನಿಕತೆಯ ಅಬ್ಬರದಲ್ಲಿ ಕೃಷಿ ಕ್ಷೇತ್ರವೂ ಹಲವು ರೀತಿಯ ಬದಲಾವಣೆ ಕಾಣುತ್ತಿದೆ…

ಕೃಷಿಯಲ್ಲಿ ಆಗುತ್ತಿರೋ ಹೊಸ ತಾಂತ್ರಿಕತೆಯನ್ನು ಅಪ್ಪಿಕೊಂಡು ಒಪ್ಪಿಕೊಳ್ಳಬೇಕೋ ಅಥವಾ ನಿರಾಕರಿಸಬೇಕೋ ಎಂಬ ಗೊಂದಲದ ನಡುವೆ ರಾಸಾಯನಿಕ,ಸಾವಯವ,ನೈಸರ್ಗಿಕ ಕೃಷಿ ಇವುಗಳಲ್ಲಿ ಯಾವುದು ಸೂಕ್ತ ಎಂದು ಕೃಷಿ ವಿ.ವಿ.ಗಳ ಸಲಹೆ ಕೇಳೋ ಹಂತಕ್ಕೆ ನಮ್ಮ ನೇಗಿಲಯೋಗಿ ಬಂದಿದ್ದಾನೆ…ವಿಪರ್ಯಾಸ ಏನಪ್ಪ ಅಂದ್ರೆ ಹಸಿರುಕ್ರಾಂತಿ ಬರೋ ಮುನ್ನ ಭಾರತದಂತ ಕೃಷಿಪ್ರದಾನ ರಾಷ್ಟ್ರದಲ್ಲಿ ಇದ್ದದ್ದು ಒಂದೇ ಕೃಷಿ ಅದು ಪರಂಪರಾಗತ ಸಹಜ ಸಮೃದ್ಧ ಸಾವಯವ ಕೃಷಿ..ಅಲ್ಲಿ ಅವನೇ ವೈಸ್ ಚಾನ್ಸಲರ್ ಅವನೇ ಪ್ರೊಫೆಸರ್.ಆದ್ರೆ ಅದು ಈಗ ಹೆಚ್ಚು ಇಳುವರಿ,ಅಧಿಕ ಲಾಭ ಎಂಬ ರಾಸಾಯನಿಕ ಲಾಬಿ ಹೆಸರಿನಲ್ಲಿ ಇಡೀ ದೇಶದ ಅನ್ನದಾತನ ಅನ್ನದ ಬಟ್ಟಲಿನಲ್ಲಿ “ವಿಶ”ವಿಟ್ಟು ಸಾವಿಗೆ ಕೊರಳೊಡ್ಡುವಂತೆ ಮಾಡಿದೆ..

ಸ್ವಂತ ಬೀಜವೇ ಇಲ್ಲದ ಬೀಜ ಮಾರೋ ವಿದೇಶಿ ಕಂಪನಿಗಳು ನಮ್ಮ ಪರಂಪರಾಗತ ನಾಟಿ ಬೀಜಗಳ ನಾಶಕ್ಕೆ ನಾಂದಿ ಹಾಡಿ ಎಷ್ಟೋ ವರ್ಷಗಳು ಕಳೆದಿವೆ.ನಗರೀಕರಣ, ವಾಣಿಜ್ಯೀಕರಣ ಹಾಗೂ ಆಧುನೀಕರಣ ಎಂಬ ಮಹಾ ಮಾಯೆಗಳು ಸಮೃದ್ಧವಾಗಿದ್ದ ಕೃಷಿ ಭೂಮಿಯನ್ನು ಅಪೋಶನ ತೆಗೆದುಕೊಂಡು ಮುನ್ನುಗ್ಗುತ್ತಿವೆ.ಇನ್ನು ಕೃಷಿಯಲ್ಲಿ ಆಯಾ ಕಾಲಕ್ಕೆ ಅನುಗುಣವಾಗಿ ಮಾಡುತ್ತಿದ್ದ ಸಾಂದರ್ಭಿಕ ಕೃಷಿಯೇ ಮಾಯವಾಗಿದೆ.

ಇವೆಲ್ಲಕ್ಕಿಂತ ಮುಖ್ಯವಾಗಿ ಪ್ರಾದೇಶಿಕ ಹವಾಗುಣಕ್ಕೆ ಅನುಗುಣವಾಗಿ ಮಾಡುತ್ತಿದ್ದ ಕೃಷಿ ಇಲ್ಲವಾಗಿದೆ…ಇನ್ನು ಇದಷ್ಟೇ ಅಲ್ಲದೆ ಆಧುನಿಕತೆಯ ಭರಾಟೆಯಲ್ಲಿ ನಮ್ಮ ಭಾರತೀಯ ಪರಂಪರಾಗತ ಕೃಷಿಯ ಮೂಲ ಸ್ವರೂಪದಲ್ಲೇ ಬದಲಾವಣೆ ಕಂಡಿದೆ.ಒಂದು ಸಣ್ಣ ಕುಟುಂಬ ದ್ವಿದಳ ಧಾನ್ಯಗಳಿಗಾಗಿ ಅಂಗಡಿಗೆ ಹೋಗದಂತೆ ಮಾಡಿದ್ದ ರಾಗಿ ಹೊಲಗಳಲ್ಲಿನ “ಅಕ್ಕಡಿ ಸಾಲು” ಈಗ ಕೃಷಿ ವಿ.ವಿ.ಗಳ ಪ್ರಾತ್ಯಕ್ಷಿಕೆ ತಾಕುಗಳಲ್ಲಿ ನೋಡುವಂತಾಗಿದೆ.ಇನ್ನು ತಾನು ಬೆಳೆದ ಕೃಷಿ ಉತ್ಪನ್ನಗಳ ಒಕ್ಕಣೆ ಕಣಜವಾಗಿದ್ದ ಸಗಣಿ ಬಗಡದ “ಕಣ” ಕಾಂಕ್ರಿಟ್ ಅಥವ ಡಾಂಬರು ರಸ್ತೆಗಳಿಗೆ ಶಿಪ್ಟ್ ಆಗಿದೆ.ಒಗ್ಗಟ್ಟಿನಲ್ಲಿ ಬಲವಿದೆ…ಜಯವಿದೆ… ಎಂದು ಆವತ್ತಿನ ಕಾಲಕ್ಕೇ ತೋರಿಸಿಕೊಟ್ಟಿದ್ದ “ಮುಯ್ಯಾಳು” ಎಂಬ ಪದ ಮಾಯವಾಗಿ ಇಂದು ಕೃಷಿ ಕಾರ್ಮಿಕ ಸಮಸ್ಯೆ ಹೆಮ್ಮರವಾಗುವಂತೆ ಮಾಡಿದೆ.

ಅಂದು ಪ್ರತಿ ರೈತರ ಹೊಲ-ತೋಟಗಳ ಕೀಟ ಹಾಗು ರೋಗ ನಿಯಂತ್ರಿಸುತ್ತಿದ್ದ ಬೇವಿನ ಮರಗಳು ಆವತ್ತಿನ ಕಾಲಕ್ಕೆ ಯಾರೋ “ಗ್ಯಾಟ್ ಒಪ್ಪಂದದ” ಗುಮ್ಮನನ್ನು ಬಿಟ್ಟು ರಾತ್ರೋ ರಾತ್ರಿ ಇಲ್ಲದಂತೆ ಮಾಡಿದ್ರು…ಈಗ ವಿದೇಶಿ ಕಂಪನಿಗಳ ಕೀಟನಾಶಕಗಳ ಮೇಲೆ ಅವಲಂಬಿತವಾಗುವಂತೆ ಮಾಡಿದೆ.ಇನ್ನು ಹೊಲ ಹಾಗು ತೋಟದ ಸುತ್ತಲೂ ಇದ್ದ ಕತ್ತಾಳೆ ಬೇಲಿ ತೆಗೆಸಿ.. “ಪೆನ್ಸಿಂಗ್” ಪ್ಲಾನ್ಗೆ ಮಾರುಹೋಗಿದ್ದಾರೆ..ಇದರಿಂದ ಬೇಲಿಯಲ್ಲಿ ನೈಸರ್ಗಿಕವಾಗಿ ಸಿಗುತ್ತಿದ್ದ ಪೊಟ್ಯಾಷ್ ಹಾಗು ನೈಟ್ರೋಜನ್ ಮತ್ತು ಭೂಮಿಯ ಫಲವತ್ತತೆಗೆ ಕಾರಣವಾಗಿದ್ದ ಪೋಷಕಾಂಶಗಳು ಇಲ್ಲವಾಗಿ ಭೂಮಿ ಬರಡಾಗುತ್ತಿದೆ..ಇದನ್ನು ಅರಿತ ಕೆಲ ಮಲ್ಟಿನ್ಯಾಷನಲ್ ಕಂಪೆನಿಗಳು ಲಘು ಪೋಷಕಾಂಶಗಳ ಹೆಸರಿನಲ್ಲಿ ಹಣ ಕೊಳ್ಳೆ ಹೊಡೆಯುತ್ತಿವೆ…

ಇಂಥ ಎಲ್ಲ ಸಮಸ್ಯೆಗಳ ನಡುವೆಯೂ ನಮ್ಮ ಅನ್ನದಾತನಿಗೆ ಕೃಷಿ ಬಿಟ್ಟು ಬದುಕಲು ಸಾಧ್ಯವಿಲ್ಲ..ಯಾಕಂದ್ರೆ ಅವನಿಗೆ ಬೇರೆ ದಾರಿ ಗೊತ್ತಿಲ್ಲ….!  ನಮ್ಮನ್ನು ಬದುಕಲು ಬಿಡಿ..ನಮಗೆ ಸರಿಯಾದ ಸಹಕಾರ ನೀಡಿ..ನಾವು ಹಗಲು ಇರುಳೆನ್ನದೆ ಮೈ ಚಳಿಯ ಬಿಟ್ಟು ಬಿಸಿಲಲ್ಲಿ ಬೆವರ ಹರಿಸಿ ದುಡಿದು ನಿಮ್ಮನ್ನು ಬದುಕಿಸುತ್ತೇವೆ ಎಂದು ಬೇಡಿಕೊಳ್ಳುತ್ತಿದ್ದಾನೆ…

ಇದನ್ನ ಕೇಳಿಯೂ ಜಾಣ ಕಿವುಡು ಪ್ರದರ್ಶನ ಮಾಡುತ್ತಿರೋ ನಮ್ಮನ್ನಾಳುವ ಸರ್ಕಾರಗಳಿಗೆ,ಜನ ಪ್ರತಿನಿಧಿಗಳಿಗೆ ಹಾಗು ರೈತರಿಗೆ ಮಾರ್ಗದರ್ಶನ ಮಾಡಬೇಕಿದ್ದ ಕೃಷಿ ಇಲಾಖೆಯ ಅಧಿಕಾರಿಗಳಿಗೆ,ಕೃಷಿ ವಿಶ್ವ ವಿದ್ಯಾಲಯಗಳ ವಿಜ್ಞಾನಿಗಳಿಗೆ…. ದಿಕ್ಕಾರ…! ದಿಕ್ಕಾರ…! ದಿಕ್ಕಾರ…!!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights