ಅಭಿವೃದ್ಧಿಯ ಅಮಲಿನಲ್ಲಿ ಮೋದಿಯವರ ಪ್ಯಾಕೇಜ್ ಎಂಬ ಅಫೀಮು!
ಪ್ರಧಾನಿ ನರೇಂದ್ರ ಮೋದಿಯವರು 20 ಲಕ್ಷ ಕೋಟಿಯ ಪ್ಯಾಕೇಜ್ ಕೊರೊನಾ ಬಿಕ್ಕಟ್ಟಿನ ಪರಿಹಾರಕ್ಕಾಗಿ ಘೋಷಿಸಿದ್ದಾರೆ. ಈ ಬಗ್ಗೆ ಸಮಾಜದ ನಾನಾ ಸ್ತರದ ಜನರನ್ನು ಸಂಪರ್ಕಿಸದಾಗ ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಲಾರಂಬಿಸಿದ್ದಾರೆ. ರೈತರು, ಕ್ಷೌರಿಕರು-ಆಟೋ ಚಾಲಕರು ಅಸಮದಾನ- ಆಕ್ರೋಶ ಹೊರಹಾಕುತ್ತಿದ್ದಾರೆ. ಕೂಲಿ ಕಾರ್ಮಿಕರು, ವಲಸಿಗ ಕಾರ್ಮಿಕರು ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ.
ಆದರೆ, ಮದ್ಯಮ ವರ್ಗದ ( ಹೆಚ್ಚಿನವರನ್ನು ನೌಕರರಾಗಿ- ಉದ್ಯೋಗಿಗಳಾಗಿ ಕಾಣಬಹುದಾದ, ಸಮಾಜದಲ್ಲಿ ತಮ್ಮ ವರ್ಗದ ಪಾತ್ರದ ಅರಿವು ಕಾಳಜಿ ಲವಲೇಶವೂ ಇರದ, ಸದಾ ಭ್ರಮಾಲೋಕದಲ್ಲಿ ಬದುಕುವ, ಬಂಡವಾಳಶಾಹಿ ಔನ್ನತ್ಯವನ್ನು ಸದಾ ಬಯಸುತ್ತಾ ಅವರಿಗೆ ಅನುಕೂಲ ಸಿಂದುವಾದ, ಸಂದರ್ಭಕ್ಕೆ ತಕ್ಕಂತೆ ತನ್ನದೇ ಸಿದ್ದಾಂತ ಮಂಡಿಸುತ್ತಿರುವ, ಯಾವುದೇ ತಾರ್ಕಿಕ ನಲೆಗಟ್ಟಿನಿಂದ ಮಾತನಾಡಲಾರದ ನಮ್ಮ ನಡುವೆಯೇ ಇರುವ ಒಂದು ವರ್ಗ) ಮಾತ್ರ ಆಪ್ಯಾಯಮಾನತೆ ಅನುಭವಿಸುತ್ತಿರುವುದು ಗೋಚರಿಸುತ್ತಿದೆ. ಅವರು ಈ ದೇಶದ ಶ್ರೀಮಂತರ ಶ್ರೀಮಂತಿಕೆ ಹೆಚ್ಚುವುದನ್ನೇ ಆರ್ಥಿಕತೆ ಎಂದು ಪರಿಭಾವಿಸಿ ಬಿಟ್ಟಿದ್ದಾರೆ.
ನರೇಂದ್ರ ಮೋದಿಯವರು ಕೊರೊನಾ ನಿಮಿತ್ತ ದೇಶಕ್ಕೆ ನೀಡಿದ ವಿಮರ್ಶಾತ್ಮಕ 20 ಲಕ್ಷ ಕೋಟಿಯ ಪ್ಯಾಕೇಜಿನಲ್ಲಿ ಉದ್ದಿಮೆದಾರರಿಗೆ, MSME ಗಳಿಗೆ ಕೊಡಲಾದ ಭಾರಿ ರಿಯಾಯಿತಿ, ಸಾಲ ಸೌಲಭ್ಯಗಳ ಮಹಾಪೂರದಿಂದ ಈ ಮದ್ಯಮ ವರ್ಗ ಉಬ್ಬಿ ಹೋಗಿರುವಂತೆ ಕಾಣುತ್ತಿದೆ.
ಅಲ್ಲದೆ, ಮೋದಿಯವರ ಈ ಪ್ಯಾಕೇಜ್ ಅತ್ಯದ್ಭುತವಾಗಿದ್ದು, ಕುಸಿದಿರುವ ಆರ್ಥಿಕತೆಯನ್ನು ಪವಾಡ ಸದೃಷ ರೀತಿಯಲ್ಲಿ ಮೇಲೆತ್ತಲಿದೆ ಎಂದುಕೊಳ್ಳುತ್ತಿದೆ. ಮೋದಿಯವರ ನಡೆಯನ್ನು ಅತ್ಯಮೋಘವಾದದ್ದು ಎಂದು ಹಾಡಿ ಹೋಗಳುತ್ತಿದೆ.
ಉದ್ಯೋಗ- ಉದ್ದಿಮೆ-ವ್ಯಾಪಾರ ನಂಬಿ ಬದುಕುವ ಈ ವರ್ಗಕ್ಕೆ, ತಮಗೆ ಉದ್ಯೋಗ ನೀಡಿರುವ ಕಂಪೆನಿಗಳನ್ನು ಕೈ ಹಿಡಿದು ಮೇಲೆತ್ತಲಿದ್ದು ತಮಗೆ ಇನ್ನಷ್ಟು ಹೆಚ್ಚಿನ ಉದ್ಯೋಗ ದೊರೆಯುತ್ತದೆ ಎಂದೋ, ಆ ಮೂಲಕ ಪಾತಾಳ ಕಂಡಿರುವ ದೇಶದ ಆರ್ಥಿಕತೆ ಪಿನೀಕ್ಸ್ ಪಕ್ಷಿಯಂತೆ ಮತ್ತೊಮ್ಮೆ ಮೇಲೆದ್ದು ಬರಲಿದೆ ಎಂದು ಲೆಕ್ಕ ಹಾಕುತ್ತಿದೆ. ಈ ವರ್ಗವು ಆರ್ಥಿಕತೆಯೆಂದರೆ ತಮ್ಮ ಆಲೋಚನೆಗೆ ನಿಲುಕುವಂತೆ ನಂಬಿದೆ. ಸಮಾಜದ ಬಹುಪಾಲು ವರ್ಗ ಕೂಡ ಆರ್ಥಿಕತೆಯೆಂದರೆ ಕಂಪೆನಿಗಳ, ಶ್ರೀಮಂತರ ಹೆಚ್ಚುವ ಶ್ರೀಮಂತಿಕೆ ಎಂದು ಭಾವಿಸಿದೆ. ಇವರ ಶ್ರೀಮಂತಿಕೆ ಹಚ್ಚಿದರೆ ತಮಗೆ ಉದ್ಯೋಗ ನೀಡುತ್ತಾರೆ. ಹಾಗಾಗಿ ಅವರ ಉನ್ನತಿಯಾದರೆ ಅದು ಆರ್ಥಿಕತೆಯ ಉನ್ನತಿ ಎಂದು ಭಾವಿಸುತ್ತದೆ. ಆದುದರಿಂದ ಅವರಿಗೆ ಸರ್ಕಾರ ನೀಡುವ, ಘೋಷಿಸುವ ಸೌಲಭ್ಯ, ಸಹಾಯವನ್ನು ಸ್ವಾಗತಿಸುತ್ತದೆ.
ನಿಜವಾಗಿ ಹೇಳಬೇಕೆಂದರೆ ಮೋದಿಯವರ 20 ಲಕ್ಷ ಕೋಟಿಯ ಪ್ಯಾಕೇಜ್ ಜನರನ್ನು ವಂಚಿಸುವ,ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವ ಹುನ್ನಾರವಷ್ಟೇ.
ಲಾಕ್ ಡೌನ್ ನಿಂದ ಆರ್ಥಿಕತೆಯೇನೋ ಕುಸಿದಿದೆ, ನಿಜ. ಆದರೆ ಕುಸಿದಿರುವ ಆರ್ಥಿಕತೆ ಮೇಲೆತ್ತುವ ಪರಿ ಯಾವುದು…? ಉತ್ಪಾದನಾ ವಲಯಕ್ಕೆ ಉದ್ದವಾಗಿ ಸಾಲ ಸೌಲಭ್ಯ ಘೋಸಿಸಿದ ಸರ್ಕಾರ ಆರ್ಥಿಕ ಪುನಃಶ್ಚೇತನಕ್ಕೆ ಕಂಡುಕೊಂಡ ಮತ್ತೊಂದು ಮಾರ್ಗವೆಂದರೆ ಅದು PF ಕಾಂಟ್ರಿಬ್ಯೂಷನ್ ಕಡಿಮೆ ಮಾಡುವುದರ ಮೂಲಕ, ಕಾರ್ಮಿಕರ ದುಡಿಮೆಯ ಅವಧಿ ಹೆಚ್ಚಿಸುವುದರಲ್ಲಿ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಾರ್ಮಿಕ ಕಾಯ್ದೆಗಳನ್ನು ಅಮಾನತ್ ಗೊಳಿಸುವುದರಲ್ಲಿ ಕಂಡುಕೊಂಡಿತು. ಅರ್ಥಾತ್ ಜನರನ್ನು ಗುಲಾಮಗಿರಿಗೆ ತಳ್ಳುವದರಲ್ಲಿ ಕಂಡುಕೊಂಡಿತು.
ಆರ್ಥಿಕತೆಯ ಪುನಃಶ್ಚೇತನದ ಮಾರ್ಗೋಪಾಯಗಳೆಂದರೆ ಇದೇನಾ….? ಕಾರ್ಮಿಕರ ಎಲ್ಲ ಹಕ್ಕುಗಳನ್ನು ಹರಣ ಮಾಡುವುದೇ…? ದುರಂತವೆಂದರೆ ಸರ್ಕಾರದ ಇಂತ ಕಾರ್ಮಿಕ ವಿರೋಧಿ ನಿರ್ಧಾರವನ್ನು ಪ್ರಭಲವಾಗಿ ವಿರೋಧಿಸಬೇಕಾದ, ಇದಕ್ಕೆ ಬಲಿಯಾಗುತ್ತೇವೋ ವರ್ಗಗಳೇ ಆರ್ಥಿಕತೆಯ ಪುನಃಶ್ಚೇತನಕ್ಕೆ ಇಂತಹ ಕ್ರಮ ಅನಿವಾರ್ಯ ಎಂದು ವಾದಿಸುತ್ತಿರುವುದನ್ನು ಕಾಣಬಹುದಾಗಿದೆ. ಇದಕ್ಕೆಲ್ಲಕಾರಣವಾಗುತ್ತಿರುವ ಅಂಶವೆಂದರೆ ಸಮಾಜಕ್ಕೆ ಆರ್ಥಿಕತೆಯ ಕುರಿತಾಗಿ ಇರುವ ತಪ್ಪು ತಿಳುವಳಿಕೆ ಅಥವಾ ಅರಿವಿನ ಕೊರತೆ.
ಆರ್ಥಿಕತೆಯೆಂದರೆ ಏನು ಎಂಬ ಸ್ಪಷ್ಟ ತಿಳುವಳಿಕೆ ಹೊಂದಿರುವ ಸಮಾಜ ಮಾತ್ರ ಬಂಡವಾಳಶಾಹಿ ಪ್ರೇರಿತ ಯೋಜನೆಗಳು ತಂದೊಡ್ಡುತ್ತಿರುವಂತಹ ಇಂತಹ ಗಂಡಾಂತರವನ್ನು ಪ್ರಭಲವಾಗಿ ಪ್ರಶ್ನಿಸಬಲ್ಲುದು ಮತ್ತು ವಿರೋದಿಸಬಲ್ಲುದು ಮತ್ತು ಹಿಮ್ಮೆಟ್ಟಿಸಬಲ್ಲುದು.
ಮೂಲದಲ್ಲಿ ಶ್ರೀಮಂತರೆಂದರೆ ಸಂಪತ್ತಿನ ಮೇಲೆ ಏಕಸ್ವಾಮ್ಯ ಹೊಂದಿದವರಾಗಿದ್ದು, ಅವರ ಶ್ರೀಮಂತಿಕೆ ಹೆಚ್ಚಾಗುವುದಾದರೆ, ಅವರು ಹಣದುಬ್ಬರ ಇಮ್ಮಡಿಗೊಳಿಸುತ್ತಾರೆಯೇ ಹೊರತು ಆರ್ಥಿಕತೆಗೆ ಎಂದೂ ಶಕ್ತಿ ತುಂಬಲಾರರು. ಬಂಡವಾಳಿಗರು ಆರ್ಥಿಕತೆಯ ಚೈತನ್ಯದಾಯಕರು ಅಲ್ಲ. ಅವರು ಈ ಆರ್ಥಿಕತೆಯ ಫಲಾನುಭವಿಗಳು. ಆದುದರಿಂದ ಇದು ಬಂಡವಾಳವಾದಿ ಅರ್ಥ ವ್ಯವಸ್ಥೆ. ಇವರು ಜಾರಿಗೊಳಿಸುವ ಪ್ರತಿ ಯೋಜನೆಗಳು ಶ್ರೀಮಂತರಿಗೆ ಲಾಭ ತಂದು ಕೊಡುವುದೇ ಆಗಿರುತ್ತದೆ. ಜನ ಸಾಮಾನ್ಯರು ಬಲಿ ಹಾಕುತ್ತದೆ.
ಆರ್ಥಿಕತೆಯ ಪುನಃಶ್ಚೇತನಗೊಳಿಸುವವರು ಈ ದೇಶದ ರೈತರು, ವಲಸಿಗ ಕಾರ್ಮಿಕರು, ಶ್ರಮ ಜೀವಿಗಳು, ಕೃಷಿ ಕಾರ್ಮಿಕರನ್ನೊಳಗೊಂಡ ದುಡಿಯುವ ವರ್ಗ. ಇದೆಲ್ಲವನ್ನೂ ತಾರ್ಕಿಕ ನೆಲೆಗಟ್ಟಿನಿಂದ ಅವಲೋಕಿಸಿದಾಗ ಮೋದಿಯವರು ಘೋಷಿಸಿರುವ ಪ್ಯಾಟೇಜು ಎಷ್ಟು ಪೊಳ್ಳು (ಭಾರತದ ಆಳುವ ವರ್ಗ ಅನುಸರಿಸುತ್ತಿರುವ ಆರ್ಥಿಕ ನೀತಿಗಳು ಎಷ್ಟು ಜನವಿರೋದಿ) ಎಂದು ಅರ್ಥವಾಗುತ್ತದೆ.
ಆರ್ಥಿಕತೆಯೆಂದರೆ ಅದು ಶ್ರೀಮಂತಿಕೆಯಲ್ಲ, ಮಾರುಕಟ್ಟೆಯಲ್ಲಿ ನಿತ್ಯ ನಡೆಯ ಬಹುದಾದ ವಹಿವಾಟು ಮಾತ್ರ ಎಂಬುದನ್ನು ಸಮಾಜ ಮನದಟ್ಟು ಮಾಡಿಕೊಳ್ಳಬೇಕಿದೆ, ಜನತೆ ಖರೀದಿಯಲ್ಲಿ ತೊಡಗುವ ಪ್ರಕ್ರಿಯೆ ಮಾತ್ರ ಆರ್ಥಿಕತೆ ಎನಿಸಿ ಕೊಳ್ಳುತ್ತದೆ. ಹೆಚ್ಚು ಹೆಚ್ಚು ಖರೀದಿಯಲ್ಲಿ ತೊಡಗುವ ಸಮಾಜ ಅಥವಾ ದೇಶ ಭರವಸೆಯ ಅರ್ಥಾತ್ ಬೆಳೆಯುತ್ತಿರುವ ಆರ್ಥಿಕತೆ ಎಂದು ಕರೆಸಿಕೊಳ್ಳುತ್ತದೆ. ಜನರ ಕೊಳ್ಳುವಿಕೆ ಹೆಚ್ಚಿದಷ್ಟೂ ಆರ್ಥಿಕತೆಯ ಬೆಳವಣಿಗೆ ದರ ಅಥವಾ (GDP) ವೃದ್ಧಿ ದರ ಏರಿಕೆ ಕಾಣುತ್ತದೆ ಅಥವಾ ಬೆಳೆಯುತ್ತಿರುವ ಆರ್ಥಿಕತೆ ಎಂದು ಪರಿಗಣಿಸಲಾಗುತ್ತದೆ.
ಜನತೆ ಕೊಳ್ಳುವಿಕೆಯಲ್ಲಿ ಹೆಚ್ಚು ಹೆಚ್ಚು ತೊಡಗಬೇಕೆಂದರೆ ಅವರ ಕೊಳ್ಳುವ ಶಕ್ತಿ ಚನ್ನಾಗಿರಬೇಕು. ಅವರ ಕೊಳ್ಳುವ ಶಕ್ತಿ ಬೆಳೆಯ ಬೇಕೆಂದರೆ ಅವರಿಗೆ ಉದ್ಯೋಗವಿರಬೇಕು. ರೈತ ಬೆಳೆಯುವ ಬೆಳೆಗೆ ಉತ್ತಮ ಮಾರುಕಟ್ಟೆ ದೊರೆಯಬೇಕು. ಆಟೋ ಚಾಲಕನ ದಿನದ ಸಂಭಾವನೆ ಉತ್ತಮವಾಗಿರಬೇಕು, ಕ್ಷೌರಿಕನ ಆದಾಯವು ಚನ್ನಾಗಿರಬೇಕು. ಹಮಾಲಿಗಳ ಕೂಲಿ ಕೈತುಂಬ ಸಂಬಳ ತರುವಂತಿರ ಬೇಕು. ಸಮಾಜದ ಎಲ್ಲ ವರ್ಗದ ಜನರು ನಿಶ್ಚಿತ ಆದಾಯ ಹೊಂದಿದವರಾಗಿರಬೇಕು. ಆಗ ಮಾತ್ರ ಆರ್ಥಿಕತೆ ನಳನಳಿಸುತ್ತಿರುತ್ತದೆ.ಆದರೆ ಕರೋನ ಕಾರಣದಿಂದಾಗಿ ಲಾಕ್ ಡೌನ್ ಘೋಷಿಸಲಾಗಿ ಆರ್ಥಿಕತೆಯ ಏಣಿ- ಮೆಟ್ಟಿಲುಗಳು-ಬೆನ್ನೆಲುಬಾದ ಇವರೆಲ್ಲರ ಕೈ ಇಂದು ಬರಿದಾಗಿದೆ.
ಮೋದಿಯವರ ಘೋಷಿತ ಪ್ಯಾಕೇಜ್ ಇವರ ಬರಿದಾದ ಕೈ ಭರಿಸುವ ಕಾರ್ಯ ಮಾಡಬೇಕಿತ್ತು. ಅವರು ನಿಜಕ್ಕೂ ಆರ್ಥಿಕತೆಗೆ ಚೇತರಿಕೆ ತರಬಲ್ಲವರಾಗಿದ್ದರು.
ಕಾರ್ಪೋರೇಟ್ ಗಳ ತೆರಿಗೆ- ಸಾಲ-ಬಡ್ಡಿಮನ್ನಾ ಮಾಡಿ, ಷರತ್ತುಗಳನ್ನು ಸಡಿಲಗೊಳಿಸುವ ಉದ್ದೀಮೆಗಳಿಗೆ ಸಾಲ ನೀಡ ಹೊರಟದ್ದು ಮಧ್ಯಮ ವರ್ಗದ ದೌರ್ಬಲ್ಯದಲ್ಲಿ ತೊಳಲಾಡುತ್ತಿರುವವರನ್ನು ಸಂತೋಷಗೊಳಿಸುವುದಕ್ಕೆ ಸೀಮಿತಗೊಂಡಿರುವುದನ್ನು
ಗುರುತಿಸ ಬಹುದಾಗಿದೆ.
ಈ ಸಂದರ್ಭದಲ್ಲಿ ಬೆಳೆ ನಷ್ಟ ಹೊಂದಿದ ರೈತರ ನಷ್ಟ ಕಟ್ಟಿಕೊಡುವುದು ಸರ್ಕಾರದ ಹೊಣೆಯಾಗಬೇಕಾಗಿತ್ತು. ಕೈಸಾಲ ಸೇರಿದಂತೆ ಬೆಳೆ ಸಾಲ ಮನ್ನಾ ಮಾಡಬೇಕಿತ್ತು. ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದ ಕ್ಷೌರಿಕ- ಆಟೋ ಚಾಲಕ-ಹಮಾಲಿಗಳ-ವಲಸೆ ಕಾರ್ಮಿಕರಿಗೆ ಸರ್ಕಾರ ಪ್ರಾಮಾಣಿಕವಾಗಿ ಮತ್ತು ನೇರವಾಗಿ ಹಣ ತಲುಪಿಸುವ ಕಾರ್ಯ ಕೈಗೊಳ್ಳ ಬೇಕಿತ್ತು. ಗಗನದೆತ್ತರ ತಲುಪಿರುವ ಶಿಕ್ಷಣ ಶುಲ್ಕ-ಡೊನೇಷನ್ ನಿಂದ ಪೋಷಕರನ್ನು ಮುಕ್ತಿಗೊಳಿಸಬೇಕಿತ್ತು.
ಆರ್ಥಿಕತೆಯ ಕತ್ತು ಹಿಸುಕುತ್ತಿರುವ ಇವುಗಳಾವುವನ್ನೂ ಸಡಿಲಗೊಳಿಸದೆ ಆರ್ಥಿಕತೆಯನ್ನು ಪುನಃಶ್ಚೇತನಗೊಳಿಸುತ್ತೇವೆ ಎನ್ನುವ ಇವರ ಅಂಬೋಣ ಹುಸಿತನವೆನಿಸುವುದಿಲ್ಲವೇ….?
ಕೊಳ್ಳುವ ಕೈಗಳು ಸೋತು ಸೊರಗಿ ಮಾರುಕಟ್ಟೆ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿರುವಾಗ ಉತ್ಪಾದನೆ ಹೆಚ್ಚಿಸುವ ಕುರಿತು ಆಡುವ ಇವರ ಮಾತುಗಳು ಆಷಾಡ ಭೂತಿತನವಲ್ಲದೆ ಮತ್ತೇನಾಗಿರಲು ಸಾದ್ಯವಿಲ್ಲ.ಮಾರುಕಟ್ಟೆಯೇ ಇರದಿರುವಾಗ ಹೊಸದಾಗಿ ಉದ್ದಿಮೆ ಸ್ಥಾಪಿಸಲು ಉದ್ಯಮಿಗಳು ಹೇಗಾದರೂ ಮುಂದೆ ಬಂದಾರು..!
ಉದ್ಯಮಕ್ಕೆಂದು ಘೋಷಿಸಿರುವ ಭಾರಿ ರಿಯಾಯಿತಿಯ ಸಾಲ ಸೌಲಭ್ಯಗಳನ್ನು ಯಾರೂ ಮೂಸಲಾರರು. ಇದೊಂದು ಪುಂಗಿನಾದವಸ್ಟೆ. ಇದೆಲ್ಲಕ್ಕಿಂತ ಹೆಚ್ಚಾಗಿ ಕುಸಿದಿರುವ ಆರ್ಥಿಕತೆಗಾಗಿ ಕಳವಳ ಪಡುತ್ತಿರುವ ಪ್ರಭುತ್ವ ಹಸಿದವರ ಹಸಿವಿಗೆ ಮರುಗದಿರುವುದು, ಅಧಃಪತನಗೊಂಡಿರುವ ಇವರ ನೈತಿಕತೆಯನ್ನು ಎತ್ತಿ ತೋರಿಸುತ್ತಿದೆ.
ನಿರಾಶ್ರಿತರಂತೆ, ವಲಸಿಗ ಕಾರ್ಮಿಕರಾಗಿ ಬದುಕುತ್ತಿರುವ ಜನಸಾಮಾನ್ಯರ , ಉದ್ಯಮಿಗಳ ಎಲ್ಲ ಉತ್ಪನ್ನಗಳಿಗೆ ತಮ್ಮ ಕೃಷಿಯನ್ನು ಒಳಸುರಿಯಾಗಿಸಿಕೊಂಡಿರುವ ರೈತರ ಕೈಯಲ್ಲಿ ಇರುವ ಪ್ರತಿ ಪೈಸೆಯೂ ಈ ಆರ್ಥಿಕತೆಯ ಟಾನಿಕ್ ಆಗಿದ್ದು, ಅದು ತಮ್ಮ ಕಿಸೆಯನ್ನಲ್ಲದೆ ಬೇರೆಲ್ಲೂ ಸೇರಲಾರದು ಎನ್ನುವ ಸಣ್ಣ ಅರಿವಾದರೂ ಈ ಕಾರ್ಪೋರೇಟ್ ಗಳಿಗೆ ಇದ್ದಿದ್ದರೂ ಸಾಕಿತ್ತು. ಮೋದಿಯ ಪ್ಯಾಕೇಜಿನಲ್ಲಿ ರೈತ ಕಾರ್ಮಿಕರು ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದರು.
– ಆಲುವಳ್ಳಿ ಆರ್ ಅಣ್ಣಪ್ಪ.