ಆತನಿಗೆ ಆ ವಾಹನವೇ ಸರ್ವಸ್ವ, ಜೀವಾಳ : ಆದರೆ ಆತನದ್ದು ಸಾರಥಿ ಇಲ್ಲದ ಜೀವನ..!

ಆತನಿಗೆ ಆ ಆಟೋನೇ ಸರ್ವಸ್ವ.. ಅದೇ ಆತನಿಗೆ ಜೀವಾಳ ಕೂಡ ಆಗಿತ್ತು.. ಆತನ ಇಡೀ ಸಂಸಾರದ ರಥವನ್ನ ಎಳೆಯೋ ಸಾರಥಿಯಾಗಿತ್ತು ಆ ಆಟೋ.. ಆದ್ರೆ ಮಹಾಮಳೆಯ ಆರ್ಭಟಕ್ಕೆ ಕಣ್ಮುಂದೆಯೇ ಕೊಚ್ಚಿ ಪ್ರಪಾತ ಸೇರಿ, ಅದರ ಕುರುಹು ಕೂಡ ಇಲ್ದಂಗೆ ಆಗಿತ್ತು.. ಸದ್ಯ ಕಿಲೋ ಮೀಟರ್ ದೂರ ಕೊಚ್ಚಿ ಕೊಂಡು ಹೋಗಿದ್ದ ಆಟೋದ ಅವಶೇಷ ಪತ್ತೆಯಾಗಿದ್ದು, ತನ್ನ ಸಾರಥಿಯ ಸ್ಥಿತಿ ಕಂಡು ಆತ ಮಮ್ಮುಲ ಮರುಗುತ್ತಿದ್ದಾನೆ. ಅಷ್ಟೇ ಅಲ್ಲ ಸಾರಥಿ ಇಲ್ಲದ ಆತನ ಜೀವನವೂ ಕೂಡ ಮೂರಾಬಟ್ಟೆಯಾಗಿದೆ..

ನುಜ್ಜುಗುಜ್ಜಾಗಿರೋ ಆಟೋವನ್ನ ನೋಡಿ ಸಂಕಟ ಪಡ್ತಿರೋ ವ್ಯಕ್ತಿ, ಅಯ್ಯೋ.. ಈ ಪರಿಸ್ಥಿತಿ ಬಂದ್ಬಿಟ್ತಲ್ಲಾ ಅಂತಾ ಚಿಂದಿ ಚಿತ್ರಾನ್ನ ಆಗಿರೋ ಆಟೋವನ್ನ ನಿಬ್ಬೆರಾಗಿ ನೋಡ್ತಿರೋ ಜನ್ರು.. ಬೃಹದಾಕಾರದ ಬಂಡೆಗಳ ನಡುವೆ ಹೇಳ ಹೆಸರಿಲ್ಲದಂತಾಗಿರೋ ಆಟೋ.. ಪದೇ ಪದೇ ಈ ಸ್ಥಳಕ್ಕೆ ಬಂದು ತನ್ನ ಸ್ನೇಹಿತನ ಕಂಡು ಹೀಗಾಗಿ ಬಿಡ್ತಲಾ ಅಂತಾ ಕಣ್ಣೀರಾಕ್ತಿರೋ ಜೀವ.. ಯೆಸ್.. ಇಂಥದೊಂದು ಕರುಳು ಹಿಂಡೋ ದೃಶ್ಯ, ಸದ್ಯ ಈ ಜಾಗಕ್ಕೆ ಬಂದ್ರೆ ನಿಮಗೆ ಪ್ರತಿನಿತ್ಯ ಗೋಚರವಾಗ್ತಲೇ ಇರುತ್ತೆ.. ಅಂದಾಗೆ ಇದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ತಪ್ಪಲಿನಲ್ಲಿರೋ ಅಲೇಖಾನ್ ಹೊರಟ್ಟಿಯ ಪ್ರದೇಶ. ಆಗಸ್ಟ್ 9ರಂದು ಮಹಾಮಳೆಯ ಆರ್ಭಟಕ್ಕೆ ಸಿಲುಕಿದ ಈ ಆಟೋ ನೀರಿನಲ್ಲಿ ಕಾಗದದ ದೋಣಿ ತೇಲಿ ಹೋಗೋ ರೀತಿಯಲ್ಲಿ ಕಣ್ಣೆದುರೇ ಕೊಚ್ಚಿ ಹೋಗಿತ್ತು.. ಅತ್ತಿಗೆರೆಯ ಉಮೇಶ್ ಅನ್ನುವವರು ಬಾಡಿಗೆಗೆ ಕರೆ ಬಂದ ಹಿನ್ನೆಲೆಯಲ್ಲಿ ಈ ಆಟೋದಲ್ಲಿ ಅಲೇಖಾನ್ ಗ್ರಾಮಕ್ಕೆ ಹೋಗಿ ವಾಪಸ್ಸಾಗುತ್ತಿದ್ದರು.

ಈ ವೇಳೆ ಕಾಫಿ ತೋಟದ ಮಧ್ಯೆ ದಾರಿಯಲ್ಲಿ ಬರೋ ವೇಳೆಯಲ್ಲಿ ಮೇಲಿನಿಂದ ಬಂದ ಮಹಾ ಪ್ರವಾಹ ಕಂಡು ಆಟೋದಲ್ಲಿದ್ದವರೆಲ್ಲಾ ಅರೆಕ್ಷಣ ಕಕ್ಕಾಬಿಕ್ಕಿಯಾಗಿದ್ರು. ಆದ್ರೆ ಯೋಚ್ನೆ ಮಾಡೋದಕ್ಕೂ ಸಮಯವಿಲ್ಲದಿದ್ದರಿಂದ ಆಟೋದಲ್ಲಿದ್ದ ಆರು ಮಂದಿ ಕೂಡ ಬದುಕಿದೆಯೋ ಬಡ ಜೀವವೇ ಅಂತ್ಹೇಳಿ ಪ್ರವಾಹದಿಂದ ಪವಾಡ ಸದೃಶ ರೀತಿಯಲ್ಲಿ ತಪ್ಪಿಸಿಕೊಂಡರು. ನತದೃಷ್ಟವಶಾತ್ ಉಮೇಶ್ ಪಾಲಿಗೆ ಎಲ್ಲವೂ ಆಗಿದ್ದ ಈ ಆಟೋ ಮಾತ್ರ ಕೊಚ್ಚಿಕೊಂಡು ಹೋಗಿ ಪ್ರಪಾತ ಸೇರಿತು. ಆ ಕ್ಷಣದಲ್ಲಿ ಜೀವ ಉಳಿಸಿಕೊಂಡಿದ್ದೇ ದೊಡ್ಡ ಸಾಧನೆಯಾಗಿತ್ತು, ಎಷ್ಟೇ ಹುಡುಕಾಟ ನಡೆಸಿದ್ರೂ ಕೂಡ ಆಟೋ ಕಣ್ಣಿಗೆ ಬಿದ್ದಿರಲಿಲ್ಲ. ಸದ್ಯ ಆಟೋದ ಅವಶೇಷಗಳು ಪತ್ತೆಯಾಗಿದ್ದು, ತನ್ನ ಕುಟುಂಬದ ಜೀವನಾಧಾರವಾಗಿದ್ದ ಈ ಸಾರಥಿಯ ಸ್ಥಿತಿಯನ್ನ ಕಂಡು ಉಮೇಶ್ ಅಕ್ಷರಶಃ ಕಣ್ಣೀರು ಹಾಕುತ್ತಿದ್ದಾರೆ..

ಆಗಸ್ಟ್ ನಲ್ಲಿ ಸುರಿದ ಮಹಾಮಳೆಯ ಆರ್ಭಟಕ್ಕೆ ಇಡೀ ಮಲೆನಾಡಿಗೆ ಮಲೆನಾಡೇ ಬೆಚ್ಚಿಬಿದ್ದಿತ್ತು.. ಅದೆಷ್ಟೋ ಜೀವಗಳು ಕೂಡ ಮಣ್ಣಾಡಿ ಆಗಿ ಉಸಿರು ಚೆಲ್ಲಿದ್ದವು.. ಅದೇ ರೀತಿ ಈ ಸಾರಥಿಯೂ ಕೂಡ ರಣಮಳೆಯ ಹೊಡೆತಕ್ಕೆ ಸಿಲುಕಿ ಪ್ರವಾಹದಲ್ಲಿ ತನ್ನ ಜೀವವನ್ನ ಕಳೆದುಕೊಂಡು ಬಿಡ್ತು.. ಇದೇ ಆಟೋವನ್ನ ಓಡಿಸಿ ಜೀವನ ನಡೆಸುತ್ತಿದ್ದ ಉಮೇಶ್ ಕುಟುಂಬ ಇದೀಗ ಅಕ್ಷರಶಃ ಬೀದಿಗೆ ಬಿದ್ದಿದೆ.. ಇಲ್ಲಿವರೆಗೂ ಸರ್ಕಾರದಿಂದಾಗಲಿ, ಜನಪ್ರತಿನಿಧಿಗಳಿಂದಾಗಲಿ ಬಿಡಿಗಾಸಿನ ಪರಿಹಾರ ಸಿಗದೇ ಇರೋದ್ರಿಂದ ಉಮೇಶ್ ಕುಟುಂಬ ಕಷ್ಟದಲ್ಲೇ ಜೀವನ ನಡೆಸುವಂತಾಗಿದೆ. ಆಟೋ ಕೊಳ್ಳುವಾಗ ಸಂಘದಿಂದ ಸಾಲ ಪಡೆದುಕೊಂಡಿದ್ದ ಉಮೇಶ್ ಪತ್ನಿ ಯಶೋಧನಿಗೆ ಆಕಾಶವೇ ಕಳಚಿ ಬಿದ್ದಂಗಾಗಿದೆ. ಉಮೇಶ್ಗೆ ಮೂವರು ಮಕ್ಕಳಿದ್ದು, ವಿದ್ಯಾಭ್ಯಾಸಕ್ಕೆ ಹಣ ಒದಗಿಸಲಾಗುತ್ತಿಲ್ಲ. ಪ್ರವಾಹ ಸಮಯದಲ್ಲಿ ಅಧಿಕಾರಿಗಳು ಆಟೋಗೆ ಪರಿಹಾರ ನೀಡೋದಾಗಿ ಹೇಳಿದ್ರು, ಆದ್ರೇ ಈವರೆಗೂ ಒಂದು ರೂ ಕೂಡ ಪರಿಹಾರ ಪರದೇ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಉಮೇಶ್.

ಪ್ರಕೃತಿ ವಿಕೋಪಕ್ಕೆ ಯಾವುದೇ ಇನ್ಸ್ರೆ ನ್ಸ್ ಕೂಡ ಅಪ್ಲೈ ಆಗದೇ ಹಿನ್ನೆಲೆಯಲ್ಲಿ ವಿಮೆ ಹಣ ಕೂಡ ಉಮೇಶ್ಗೆ ದಕ್ಕಿಲ್ಲ.. ಇನ್ನೂ ಈ ಸ್ಥಿತಿಯನ್ನ ನೋಡಿ ಜಿಲ್ಲಾಡಳಿತ ವಾಗಲಿ, ಜನಪ್ರತಿನಿಧಿಗಳೇ ಉಮೇಶ್ ಸಹಾಯಕ್ಕೆ ಧಾವಿಸಬೇಕಿತ್ತು. ಆದ್ರೆ ಯಾರೂ ಕೂಡ ಸಂತ್ರಸ್ಥ ಉಮೇಶ್ ನೆರವಿಗೆ ಧಾವಿಸಿಲ್ಲ. ಹೀಗಾಗೀ ಒಂದೆಡೆ ಸಂಸಾರದ ರಥವನ್ನ ಎಳೆಯುತ್ತಿದ್ದ ಸಾರಥಿಯೇ ಇಲ್ಲದಾಗೆ ಆಗಿರೋದ್ರಿಂದ, ಆತನ ಮೇಲಿದ್ದ ಸಾಲದ ಬಾಧೆಯೂ ಉಮೇಶ್ ಕುಟುಂಬವನ್ನ ಇನ್ನಿಲ್ಲದಂತೆ ಭಾದಿಸುತ್ತಿದೆ. ಆತನಿಗೆ ಪರಿಹಾರ ನೀಡಿ ಜವಾಬ್ದಾರಿ ಮೆರೆಯಬೇಕಾಗಿದ್ದ ಜಿಲ್ಲಾಡಳಿತ ಕೊನೆಪಕ್ಷ ಇನ್ನಾದ್ರೂ ಆತನ ನೆರವಿಗೆ ಧಾವಿಸುವಂತಾಗಲಿ ಅನ್ನೋದು ನಮ್ಮ ಆಶಯ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights