ಆಪರೇಷನ್ ರಾಜ್ಯಸಭಾ; ಗುಜರಾತ್‌ನ ಕಾಂಗ್ರೆಸ್ ಶಾಸಕರು ಜೈಪುರ್ ಹೋಟೆಲ್‌ನಲ್ಲಿ
ಮಧ್ಯಪ್ರದೇಶದ ಬಳಿಕ ಗುಜರಾತ್ ಕಾಂಗ್ರೆಸ್‌ನಲ್ಲಿ ಭಿನ್ನಮತ ಉಂಟಾಗಿದೆ. ಈಗಾಗಲೇ 5 ಶಾಸಕರು ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಒಬ್ಬ ಶಾಸಕ ಕಾಂಗ್ರೆಸ್ ನಾಯಕರ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.
ಮಾರ್ಚ್ 26ರಂದು ಗುಜರಾತ್ ವಿಧಾನಸಭೆಯಿಂದ ನಾಲ್ವರು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ. ಈ ರಾಜ್ಯಸಭಾ ಚುನಾವಣಾ ಹಿನ್ನಲೆಯಲ್ಲಿ 68 ಶಾಸಕರ ಪೈಕಿ 67 ಶಾಸಕರನ್ನು ಕಾಂಗ್ರೆಸ್ ಜೈಪುರದಲ್ಲಿರುವ ಹೋಟೆಲ್‌ಗೆ ಕರೆದುಕೊಂಡು ಹೋಗಿದೆ.
182 ಬಲವಿರುವ ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ 73 ಶಾಸಕರ ಬಲ ಹೊಂದಿತ್ತು. 5 ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅನುಮೋದಿಸಿದ್ದು, ಕಾಂಗ್ರೆಸ್ ಬಲ 68ಕ್ಕೆ ಕುಸಿದಿದೆ.
25 ಶಾಸಕರು ಬಜೆಟ್ ಅಧಿವೇಶದಲ್ಲಿ ಸಭಾತ್ಯಾಗ ಮಾಡಿ ವಿಧಾನಸಭೆಯಿಂದ ಹೊರ ಹೋಗಿದ್ದರು. ಅವರು ಹೋರಹೋಗುತ್ತಿದ್ದಂತೆ ವಿಶೇಷ ವಿಮಾನದಲ್ಲಿ ಜೈಪುರಕ್ಕೆ ಕರೆದುಕೊಂಡು ಹೋಗಲಾಗಿದೆ. ಮತ್ತೊಂದು ಬ್ಯಾಚ್‌ನಲ್ಲಿ 42 ಶಾಸಕರನ್ನು ಕರೆದೊಯ್ಯಲಾಗಿದೆ. ಒಬ್ಬ ಶಾಸಕ ಸಂಪರ್ಕಕ್ಕೆ ಸಿಕ್ಕಿಲ್ಲ.
“ಜಿತು ಚೌಧರಿ ಎಂಬ ಶಾಸಕರ ಫೋನ್ ಸ್ವಿಚ್ ಆಫ್ ಆಗಿದೆ, ಅವರು ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಶಾಸಕರ ಜೊತೆ ವಿಮಾನದಲ್ಲಿ ಬಂದಿಲ್ಲ” ಎಂದು ಗುಜರಾತ್ ಕಾಂಗ್ರೆಸ್ ವಕ್ತಾರ ಮನೀಷ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಕ್ರಾಸ್ ಓಟಿಂಗ್ ನಡೆಯುವ ಸಾಧ್ಯಯನ್ನು ಕಾಂಗ್ರೆಸ್ ಗ್ರಹಿಸಿದೆ. ಆದ್ದರಿಂದ, ಶಾಸಕರನ್ನು ಜೈಪುರಕ್ಕೆ ಕರೆದುಕೊಂಡು ಹೋಗಲಾಗಿದೆ. ಮಾರ್ಚ್ 25ರ ತನಕ ಎಲ್ಲರೂ ಅಲ್ಲಿಯೇ ವಾಸ್ತವ್ಯ ಹೂಡುವ ನಿರೀಕ್ಷೆ ಇದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಜೈಪುರದಲ್ಲಿ ಶಾಸಕರಿಗೆ ಯಾವುದೇ ತೊಂದರೆ ಆಗುವುದಿಲ್ಲ.
ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ ಹೊಂದಿರುವ ಶಾಸಕರ ಬಲದ ಮೇಲೆ ರಾಜ್ಯಸಭೆಗೆ ಇಬ್ಬರು ಸದಸ್ಯರನ್ನು ಸುಲಭವಾಗಿ ಆರಿಸಿ ಕಳಿಸಲಿದೆ. ಒಂದು ವೇಳೆ ಕ್ರಾಸ್ ಓಟಿಂಗ್ ನಡೆದರೆ ಮೂರು ಸ್ಥಾನಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ.