ಉತ್ತರ ಪ್ರದೇಶ: ಕಸದ ವಾಹನದಲ್ಲಿ ಶವ ಸಾಗಿಸಿದ ಅಮಾನವೀಯ ಘಟನೆ
ಉತ್ತರ ಪ್ರದೇಶದ ಲಕನೌನಲ್ಲಿ ತ್ಯಾಜ್ಯ ಸಾಗಿಸುವ ವಾಹನಕ್ಕೆ ಶವವನ್ನು ತುಂಬಿದ ಅಮಾನವೀಯ ಘಟನೆ ನಡೆದಿದ್ದು, ವಿಡಿಯೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತಿರುವ ಉತ್ತರ ಪ್ರದೇಶ ಸರ್ಕಾರ ಮೂವರು ಪೊಲೀಸರು ಸೇರಿದಂತೆ ಏಳು ನೌಕರರನ್ನು ಅಮಾನತುಗೊಳಿಸಿದೆ.
ಮೃತಪಟ್ಟ ವ್ಯಕ್ತಿಯನ್ನು ಮೊಹಮ್ಮದ್ ಅನ್ವರ್ (45) ಎಂದು ಗುರುತಿಸಲಾಗಿದ್ದು. ಬಲರಾಂಪುರದ ಉತ್ರೂಲಾ ತಹಸೀಲ್ ಗೇಟ್ ಬಳಿ ಬುಧವಾರ ಸಂಜೆ ಈ ಘಟನೆ ನಡೆದಿದೆ. ಬಲರಾಂಪುರದ ನಿವಾಸಿಯಾದ ಅನ್ವರ್ ಸರ್ಕಾರಿ ಕಚೇರಿಗೆ ತೆರಳಿದ ವೇಳೆ ಗೇಟ್ ಬಳಿ ಕುಸಿದು ಬಿದ್ದು ಮೃತಪಟ್ಟಿದ್ದರು.
ಕಚೇರಿಯ ಗೇಟ್ ಬದಿಯಲ್ಲೇ ಆ್ಯಂಬುಲೆನ್ಸ್ ವಾಹನ ನಿಲ್ಲಿಸಲಾಗಿತ್ತು. ಆದರೆ ಕೊರೋನ ವೈರಸ್ ಸೋಂಕು ಹರಡುವ ಭೀತಿಯಿಂದ ಶವವನ್ನು ಅದರಲ್ಲಿ ಸಾಗಿಸಲು ನಿರಾಕರಿಸಿದರು ಎನ್ನಲಾಗಿದೆ. ನಂತರ ಪೌರಕಾರ್ಮಿಕರು ಮೃತದೇಹವನ್ನು ಕಸದ ವ್ಯಾನ್‌ಗೆ ಹಾಕಿದ್ದರು. ಇದನ್ನು ಸ್ಥಳೀಯರು ವೀಡಿಯೊ ಮಾಡಿದ್ದು ನಂತರ ಜಾಲತಾಣಗಳಿಗೆ ಹರಿಯಬಿಟ್ಟಿದ್ದರು.
Shameful , appalling visuals from Balrampur . The body of 42 year old Mohd Anwar , who collapsed and died outside a govt office yesterday , dumped in a garbage van in the presence of @balrampurpolice and taken away …. pic.twitter.com/N5DCwe0QC9
— Alok Pandey (@alok_pandey) June 11, 2020
ಪೌರಕಾರ್ಮಿಕರು ಶವವನ್ನು ಎತ್ತಿ ತ್ಯಾಜ್ಯ ಸಾಗಿಸುವ ವಾಹನಕ್ಕೆ ತುಂಬಿಸುತ್ತಿರುವ 20 ಸೆಕೆಂಡಿನ ವಿಡಿಯೊ ವೈರಲಾಗುತ್ತಿದ್ದಂತೆ ಹಲವಾರು ಜನರು ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಘಟನೆ ಬಗ್ಗೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ ಕೃಷ್ಣ ಕರುಣೇಶ್, “ಇದು ಅಮಾನವೀಯ ಘಟನೆ, ಕೊರೋನ ಭೀತಿಯಿಂದ ಹಾಗೆ ಮಾಡಿರಬಹುದು. ಆದರೆ ಅದು ಆಗಬಾರದಿತ್ತು. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿಲಾಗಿದ್ದು, ಪಿಎಸ್‌ಐ ರವೀಂದ್ರ ಕುಮಾರ್ ರಮಣ್, ಪೇದೆಗಳಾದ ಶುಭಂ ಪಾಟೀಲ್ ಮತ್ತು ಶೈಲೇಂದ್ರ ಶರ್ಮಾ ಅವರನ್ನು ತಕ್ಷಣಅಮಾನತು ಮಾಡಲಾಗಿದೆ” ಎಂದಿದ್ದಾರೆ.