ಎಚ್ಚೆನ್ ನೂರರ ನೆನಪು : ಶಿಕ್ಷಣದಲ್ಲಿ ಮೌಲ್ಯಗಳು ಹೆಚ್ಚಬೇಕು; ಮನೆಯಂಗಳದ ಮಾತುಕತೆಯಲ್ಲಿ…
[ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸುತ್ತಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಡಾ. ಎಚ್ ನರಸಿಂಹಯ್ಯನವರು ಭಾಗವಹಿಸಿದ್ದಾಗ ಆಡಿದ ಮಾತುಗಳು ಇವು. ಸ್ವಾತಂತ್ರ್ಯ ಹೋರಾಟಗಾರ, ಗಾಂಧೀವಾದಿ, ನ್ಯಾಶನಲ್ ಕಾಲೇಜು ಸಂಸ್ಥೆಯನ್ನು ಮತ್ತು ಬೆಂಗಳೂರು ವಿಶ್ವವಿದ್ಯಾಲಯವನ್ನು ಅತಿ ಎತ್ತರಕ್ಕೆ ಬೆಳೆಸಲು ಶ್ರಮಿಸಿದ ಶಿಕ್ಷಣತಜ್ಞ, ವಿಚಾರವಾದಿ ಡಾ. ಎಚ್ ನರಸಿಂಹಯ್ಯನವರ ಜನ್ಮಶತಾಬ್ಧಿಯ ನೆನಪಿಗೆ ಈ ಓದು. ಈ ಪಠ್ಯಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಆಭಾರಿ]
ಅತಿಥಿಗಳ ಮುಂಮಾತು : ನನ್ನ ಪರಿಚಯ ಹೇಳಬೇಕೆಂದರೆ ತಮಗೆಲ್ಲಾ ಗೊತ್ತಿರುವಂತೆ ನಾನು ವಿಜ್ಞಾನದ ಅಧ್ಯಾಪಕ. ಹಲವು ದಶಕಗಳ ಕಾಲ ವಿಜ್ಞಾನ ಕ್ಷೇತ್ರದಲ್ಲಿ ಸಾಧ್ಯವಾದಷ್ಟು ಕೆಲಸ ಮಾಡಿಕೊಂಡು ಬಂದಿದ್ದೇನೆ. ಶಿಕ್ಷಣ ಎಷ್ಟು ಮುಖ್ಯವೆಂದು ಹೇಳಬೇಕಾದ ಅಗತ್ಯವಿದೆ. ಶಿಕ್ಷಣ ಎನ್ನುವುದು ಎಲ್ಲಾ ಉದ್ಯೋಗ, ಉದ್ಯಮಗಳಿಗೂ ಕೂಡ ಮೂಲ.

ಈ ಹಿಂದೆ ನಮ್ಮ ದೇಶದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಾ ಬರುತ್ತಿರಲಿಲ್ಲ. ಆದರೂ ಏನಾಗುತ್ತದೆಂದರೆ ಜನಸಂಖ್ಯೆ ಹೆಚ್ಚಾಗಿ ಎಷ್ಟೇ ಇದಕ್ಕೆ ಆದ್ಯತೆ ಕೊಟ್ಟರೂ ಕಷ್ಟವಾಗುತ್ತದೆ. ಆದಕಾರಣ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆದ್ಯತೆ ಕೊಡಬೇಕಾಗಿದೆ. ಶಿಕ್ಷಣದ ಮಹತ್ವದ ಬಗ್ಗೆ ಸಕಾರಕ್ಕೂ ಕೂಡ ಗೊತ್ತಿಲ್ಲ. ಎಲ್ಲಾ ಸರ್ಕಾರಗಳೂ ಕೂಡ ಹಾಗಿಲ್ಲ. ಶಿಕ್ಷಣದಿಂದ ಅಂತಹ ಫಾಯಿದೆ ಏನೂ ಇಲ್ಲ ಎನ್ನುವ ಅಭಿಪ್ರಾಯವೂ ಇದೆ.
ಮೊನ್ನೆ ನಾನು ಎಲ್ಲೋ ಒಂದು ಕಡೆ ಮಾತನಾಡುತ್ತಿದ್ದಾಗ, ಶಿಕ್ಷಣವಿಲ್ಲದಿದ್ದರೆ ದೇಶಕ್ಕೆ ಎರಡು ರೀತಿಯ ಅಪಾಯಗಳಿವೆಯೆಂದು ಹೇಳಿದೆ. ಒಂದು, ಆಚೆಕಡೆಯಿಂದ ಬಂದಂಥ ಅಪಾಯ (ಎಕ್ಸಟರ್ನಲ್ ಡೇಂಜರ್). ಆಚೆಕಡೆ ಅಪಾಯದ ಬಗ್ಗೆ ವಿವರಿಸಬೇಕಾದ ಪಕ್ಷದಲ್ಲಿ ಇದರಿಂದ ನಮ್ಮ ದೇಶವನ್ನು ರಕ್ಷಿಸಿಕೊಳ್ಳಲು ತಮಗೆಲ್ಲಾ ಗೊತ್ತಿರುವಂತೆ ಸೈನ್ಯ ಬೇಕಾಗುತ್ತದೆ. ಅಲ್ಲಿ ಯಾಂತ್ರಿಕ ಅಪಾಯ ಇದೆ, ಸಮಸ್ಯೆಗಳಿವೆ. ನಮ್ಮಲ್ಲಿರುವ ಸಾಮಾಜಿಕ, ಆರ್ಥಿಕ ಸಮಸ್ಯೆಗಳು ಇವೆಲ್ಲವನ್ನು ಇಂಟರ್ನಲ್ ಡೇಂಜರ್ ಎಂದು ಹೇಳುತ್ತೇವೆ. ಈ ಅಪಾಯದಿಂದ ರಕ್ಷಿಸಿಕೊಂಡು ಸುಬಧ್ರವಾಗಿ ಕಾಪಾಡಬೇಕಾದ ಪಕ್ಷದಲ್ಲಿ ಸೈನ್ಯದಿಂದ ಆಗುವುದಿಲ್ಲ. ಒಳ್ಳೆಯ ಶಿಕ್ಷಣ ಪದ್ದತಿ ಅದನ್ನು ಕಾಪಾಡಬೇಕಾಗಿದೆ. ಶಿಕ್ಷಣದ ಗಮನ ಆ ಕಡೆ ಹೆಚ್ಚು ಹೋಗಿಲ್ಲ. ಇದರ ಬಗ್ಗೆ ಮೊದಲಿನಿಂದಲೂ ನನ್ನ ಆಕ್ಷೇಪವಿದೆ. ಏಕೆಂದರೆ, ಶಿಕ್ಷಣದ ಉದ್ದೇಶವೇನೆಂದರೆ: ಮನುಷ್ಯನ ಸಮಸ್ಯೆಗಳನ್ನು ತಾರ್ಕಿಕವಾಗಿ ಅರ್ಥೈಸಿಕೊಂಡು ತಾರ್ಕಿಕವಾಗಿ ಬಿಡಿಸುವುದು ಒಂದು. ಹಾಗೆಯೇ ನಮ್ಮ ಸಮಾಜದಲ್ಲಿ ಬೇಕಾದಷ್ಟು ಸಮಸ್ಯೆ ಅನಿಷ್ಠಗಳಿವೆ. ತಾತನ ಕಾಲದಿಂದ ದಶಕಗಳಿಂದ, ಶತಶತಮಾನಗಳಿಂದ ಬಂದಿರತಕ್ಕಂಥ ಸಾಕಷ್ಟು ನಂಬಿಕೆಗಳು, ನಂಬಿಕೆ ಮುಖ್ಯ, ಆದರೆ, ಎಂತಹ ನಂಬಿಕೆ ಎನ್ನುವುದು ಬಹಳ ಮುಖ್ಯ. ಅದಕ್ಕೋಸ್ಕರ ಅರ್ಥವಿಲ್ಲದಿರುವ ನಂಬಿಕೆಗಳು, ಅದರಿಂದ ಎಷ್ಟು ಹಾನಿಯಾಗುತ್ತದೆಂದು ನಾವು ತಿಳಿದುಕೊಂಡಿಲ್ಲ. ಮಾನಸಿಕವಾಗಿ, ಆರ್ಥಿಕವಾಗಿ ಹಾನಿಯಾಗುತ್ತಿದೆ. ಇದನ್ನೆಲ್ಲಾ ಬಿಡಿಸತಕ್ಕಂಥಾದ್ದು, ಸಮಾಜ ಸುಧಾರಣೆ ಮಾಡತಕ್ಕಂಥಾದ್ದು ಶಿಕ್ಷಣದ ಮುಖ್ಯವಾದ ಉದ್ದೇಶಗಳಲ್ಲೊಂದು.

ನಾನು ಸ್ಲಮ್ಸ್ ವಿಷಯದ ಬಗ್ಗೆ ಮಾತನಾಡುತ್ತೇನೆ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಸ್ಲಮ್ಸ್ ಹೆಚ್ಚಾಗಿ ಇರುತ್ತವೆ. ಆ ಸ್ಲಮ್ಸ್ ಅನ್ನು ದುಡ್ಡು ಕೊಟ್ಟು ಹೇಗೋ ಹಣ ಖರ್ಚು ಮಾಡಿ ಬೀಳಿಸುವುದಕ್ಕೆ ಪ್ರಯತ್ನ ಮಾಡಬಹುದು. ಆದರೆ, ಮೆಂಟಲ್ ಸ್ಲಮ್ಸ್ ಇದೆಯೆಲ್ಲ, ಅದು ಬಹಳ ಕಷ್ಟ… ತಲೆಯಲ್ಲಿ ಸ್ಲಮ್ಸ್ ಇರುತ್ತದೆ. ತಲೆಯಲ್ಲಿ ಕೊಳಚೆ ಪ್ರದೇಶವಿದ್ದರೆ ಗತಿ ಏನಾಗುತ್ತದೆ? ತಲೆಯ ಕೊಳಚೆಯನ್ನು ಶುದ್ಧ ಮಾಡತಕ್ಕಂಥಾದ್ದು ಶಿಕ್ಷಣದ ಮುಖ್ಯವಾದ ಉದ್ದೇಶ.
“ನರಸಿಂಹಯ್ಯನವರು ದೇವರನ್ನು ನಂಬುವುದಿಲ್ಲ”ವೆಂದು ನನ್ನ ಬಗ್ಗೆ ಹೇಳುತ್ತಾರೆ. ನಾನು “ಅಂತಹುದೆಲ್ಲ ಕಠಿಣವಾದುದು, ಕಠಿಣವಾದುದು” ಎಂದು ಹೇಳಿ ಯಾವ ದೇವರೆಂದು ಹೇಳುವುದೇ ನನಗೆ ಕಷ್ಟವಾಗುತ್ತದೆ. ನಾನು ವಿಜ್ಞಾನದ ವಿದ್ಯಾರ್ಥಿಯಾಗಿರುವುದರಿಂದ ಯಾವುದೋ ಒಂದು ಶಕ್ತಿ ಇದೆಯೆಂದು ಹೇಳುತ್ತೇನೆ. ಒಂದು ಶಕ್ತಿ ನಡೆಸಿಕೊಂಡು ಹೋಗುತ್ತದೆ. ಎಲ್ಲಿ ವ್ಯವಸ್ಥೆ ಇದೆಯೋ ಅಲ್ಲಿ ಶಕ್ತಿ ಇರುತ್ತದೆ. ಉದಾಹರಣೆಗೆ, ಟ್ರಾಫಿಕ್ ರೂಲ್ಸ್, ಸಂಚಾರದ ವ್ಯವಸ್ಥೆಯೂ ಅಷ್ಟೆ. ವ್ಯವಸ್ಥಿತವಾಗಿ ಹೋಗುತ್ತಿದ್ದ ಪಕ್ಷದಲ್ಲಿ ನಿಯಮವಿರುತ್ತದೆ ಅಷ್ಟೆ. ಇದೆಲ್ಲಕ್ಕೂ ಒಂದು ವ್ಯವಸ್ಥೆ ನಿಯಮ ಇದೆ. ಗಾಂಧೀಜಿಯವರು ಅದನ್ನೇ Truth is God ಎಂದು ಹೇಳಿದರು. ಇನ್ನೊಬ್ಬರು ಪ್ರಕೃತಿಯೇ ದೇವರೆನ್ನುತ್ತಾರೆ. ಒಂದು ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳಬಾರದು. ಈಗ ಎಲ್ಲಾ ದೇವರುಗಳು ಕಮರ್ಶಿಯಲ್ ಆಗಿವೆ. ಪ್ರತಿಯೊಂದೂ ಲೇವಾದೇವಿಯಾಗಿಬಿಟ್ಟರೆ ಗತಿ ಏನು? ಆದುದರಿಂದ ಇದನ್ನು ಮೊದಲಿನಿಂದಲೂ ವಿರೋಧಿಸುತ್ತಿದ್ದೇನೆ. ಅಲ್ಲದೆ, ದೇವರು ಇಲ್ಲವೆಂದು ಹೇಳುವುದಕ್ಕೆ ನನಗೆ ಧೈರ್ಯವೂ ಇಲ್ಲ, ಮಾಹಿತಿಯೂ ಇಲ್ಲ, ದೇವರು ಇದ್ದಾನೆ ಎಂದು ಹೇಳುವುದಕ್ಕೆ ಕೂಡ ಮಾಹಿತಿಯೂ ಇಲ್ಲ. ಅದು ನಂಬಿಕೆಯ ಮಾತಾಗುತ್ತದೆ ಅಷ್ಟೆ. ದೇವರ ಬಗ್ಗೆ ಅಗತ್ಯವಾಗಿ ನಂಬಿಕೆ ಇಟ್ಟುಕೊಳ್ಳಿ, ಅದೇನೂ ತಪ್ಪಲ್ಲ. ಅದು ನಿಮಗೆ ಮನೋಸ್ಥೈರ್ಯ ಕೊಡುವ ಪಕ್ಷದಲ್ಲಿ ಅಥವಾ ನಿಮಗೆ ಒಳ್ಳೆಯ ಕೆಲಸ ಮಾಡುವುದಕ್ಕೆ ಸಹಕಾರಿಯಾದ ಪಕ್ಷದಲ್ಲಿ ಅತ್ಯಗತ್ಯವಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಏಕೆಂದರೆ, ಯಾವುದೋ ಒಂದು ಆಸರೆ ಬೇಕಾಗುತ್ತದೆ. ಎಲ್ಲರಿಗೂ ತಂತಮ್ಮ ಸ್ವಶಕ್ತಿಯಿಂದಲೇ ಕೆಲಸ ಮಾಡುವುದಕ್ಕೆ ಧೈರ್ಯವಿರುವುದಿಲ್ಲ. ಅದಕ್ಕೋಸ್ಕರ ಅಗತ್ಯವಾಗಿ ಇಟ್ಟುಕೊಳ್ಳಿ ಎಂದು ಹೇಳುತ್ತಿದ್ದೇನೆ. ಅದನ್ನು ಉಪಯೋಗಿಸಿಕೊಳ್ಳಿ, ಆದರೆ ಅದನ್ನು ದುರುಪಯೋಗಪಡಿಸಿಕೊಳ್ಳಬೇಡಿ. ಸ್ವಲಾಭಕ್ಕೆ ಉಪಯೋಗಿಸಿಕೊಳ್ಳಬಾರದು. ಅದು ಮಾಡುವುದಕ್ಕಾಗುವುದಿಲ್ಲ, ಸಾಧ್ಯವಾಗುವುದಿಲ್ಲ, ಅದಕ್ಕೆ 25 ಶತಮಾನಗಳ ಹಿಂದೆಯೇ ಬುದ್ಧ ಹೇಳಿದ್ದಾನೆ. ದೇವರು ಮತ್ತು ಆತ್ಮದ ವಿಚಾರವಾಗಿ ಪ್ರಸ್ತಾಪವಾದಾಗ ಬುದ್ಧನನ್ನು ಆನಂದ ಕೇಳಿದಾಗ, “ನೋಡು, ಅದೆಲ್ಲಾ ಏಕೆ ಸುಮ್ಮನೆ ಯೋಚನೆ, ಚಿಂತನೆ ಮಾಡುತ್ತೀಯ? ಇದೆಲ್ಲವನ್ನೂ ಶತಮಾನಗಳಿಂದ ಚರ್ಚೆ ಮಾಡುತ್ತಿದ್ದರೂ ಬಗೆಹರಿದಿಲ್ಲ. ಆದಕಾರಣ, ಅವೆಲ್ಲವನ್ನೂ ಬಿಟ್ಟು, ಒಳ್ಳೆಯದನ್ನು ಮಾಡು, ಒಳ್ಳೆಯವನಾಗಿರು” ಎಂದು ಆತ ಹೇಳುತ್ತಾನೆ. ಎಲ್ಲಾ ಧರ್ಮಗಳೂ ಕೊನೆಕೊನೆಗೆ ಅಲ್ಲಿಗೇ ಬರುತ್ತವೆ. ಏನಾಗುತ್ತದೆಂದರೆ, ಈ ಧರ್ಮಗಳು ಸಂಪ್ರದಾಯ, ಆಚಾರಗಳಲ್ಲಿ ಸಿಲುಕಿಕೊಂಡು ಅಲ್ಲಿಯೇ ಇದ್ದು ಬಿಡುತ್ತವೆ, ಇದನ್ನು ತಲುಪುವುದಿಲ್ಲ.
ಅದೆಲ್ಲವನ್ನು ಬಿಟ್ಟುಬಿಟ್ಟು, Do Good Be Good ಎಂದು ಹೇಳಿದೆ. ಅದಕ್ಕೆ ಬದಲಾಗಿ ಅದನ್ನು ಹೇಳುವುದು ಬಿಟ್ಟು ಮಿಕ್ಕದುದನ್ನೆಲ್ಲವನ್ನೂ ಹೇಳಿ ಎಷ್ಟು ಕ್ಲಿಷ್ಟ ಮಾಡಬೇಕೋ ಅಷ್ಟೆಲ್ಲಾ ಮಾಡಿ ಈಗ ತುಂಬಾ ತಾಪತ್ರಯವಾಗಿದೆ. ಅದಕ್ಕೋಸ್ಕರವೇ ನಾನು ಶಿಕ್ಷಣದ ಮೌಲ್ಯಗಳ ಬಗ್ಗೆ ಒತ್ತಿ ಒತ್ತಿ ಹೇಳುವುದು. ಇವೊತ್ತು ಮೌಲ್ಯಗಳ ಅಧಃಪತನವಾಗುತ್ತಿರುವುದು ಎಲ್ಲರಿಗೂ ಗೊತ್ತಿದೆ. ನನಗೆ ಸ್ವಲ್ಪ ಹೆಚ್ಚಿಗೆ ಗೊತ್ತಿದೆ. ಏಕೆಂದರೆ, ನನಗೆ 82 ವರ್ಷವಾಗಿದೆ. ಸ್ವಾತಂತ್ರ್ಯ ಚಳವಳಿಯ ಆ ಕಾಲದಲ್ಲಿ ನಾವೆಲ್ಲರೂ ಜೈಲಿಗೆ ಹೋಗಿದ್ದೆವು. ಆ ಸಮಯದಲ್ಲಿ ನಾವೇನೋ ಒಂದು ಕನಸು ಕಾಣುತ್ತಿದ್ದೆವು. ಸ್ವಾತಂತ್ರ್ಯ ಬಂದ ನಂತರ ನಮ್ಮ ದೇಶಕ್ಕೆ ಸಂಪತ್ತು, ಹಣ ಹೀಗೆ ಪ್ರತಿಯೊಂದರಲ್ಲೂ ಸಮೃದ್ಧಿಯ ಕಾಲ ಬರುತ್ತದೆ, ಒಳ್ಳೆಯ ದೇಶವಾಗುತ್ತದೆ, ಸುಭಿಕ್ಷತೆಯಿಂದ ಕೂಡಿರುತ್ತದೆ, ಜನರೆಲ್ಲರೂ ನೆಮ್ಮದಿಯಿಂದ ಬದುಕುವ ಕಾಲ ಬರುತ್ತದೆಂದು ತಿಳಿದಿದ್ದೆವು. ಆದರೆ, ಇಂದು ಈ ಸ್ಥಿತಿ ಬಂತಲ್ಲವೆಂದು ನಿಜವಾಗಿಯೂ ನನಗೆ ತುಂಬಾ ಸಂಕಟವಾಗುತ್ತದೆ. ಹಾಗೆಂದ ಕೂಡಲೇ ನಾನು ನಿರಾಶವಾದಿಯಾಗುವುದಿಲ್ಲ. ನಾನು ಯಾವಾಗಲೂ ಕೂಡ ಆಶಾವಾದಿಯೇ. ಸಮಸ್ಯೆಗಳು ಬಂದಾಗ ಎದುರಿಸಬೇಕು ಮತ್ತು ಸಮಸ್ಯೆಗಳನ್ನು ಬಿಡಿಸುವುದಕ್ಕೆ ಪ್ರಯತ್ನ ಪಡಬೇಕು.

ಐನ್ಸ್ಟೀನ್ ಈ ಶತಮಾನದ ಅಂತಾರಾಷ್ಟ್ರೀಯ ಖ್ಯಾತಿಯ ಅತ್ಯಂತ ಶ್ರೇಷ್ಠ ವಿಜ್ಞಾನಿ, ಅಷ್ಟೆ ಮಾನವತಾವಾದಿ. ಅವರು ತಮ್ಮ ಮನೆಯಲ್ಲಿ ಮೂರು ಫೋಟೋಗಳನ್ನು ಇಟ್ಟುಕೊಂಡಿದ್ದರು. ಅವರು ಭಾರತಕ್ಕೆ ಬಂದಿರಲಿಲ್ಲ, ಗಾಂಧೀಜಿಯವರನ್ನೂ ನೋಡಿರಲಿಲ್ಲ. ಆದರೂ ಅವರ ಬಗ್ಗೆ ಓದಿದ್ದರು. ಅವರು ವಿಜ್ಞಾನಿಯಷ್ಟೇ ಅಲ್ಲ, ಮಾನವೀಯ ಮೌಲ್ಯಗಳ ಬಗ್ಗೆ ತುಂಬಾ ಕಾಳಜಿ, ಕಳಕಳಿ ಇದ್ದಂಥವರು. ಆ ಮೂರು ಫೋಟೋಗಳಲ್ಲಿ ಒಂದು ನ್ಯೂಟನ್ನ ಫೋಟೋ. ಆತ ಫಿಸಿಕಲ್ ಸೈನ್ಸ್ನ ಪಿತಾಮಹ. ಎರಡು, ಮ್ಯಾಕ್ಸ್ವೆಲ್ನ ಫೋಟೋ. ಆತ ಎಲೆಕ್ಟ್ರೋ ಮ್ಯಾಗ್ನೆಟಿಕ್ ಥಿಯರಿಯ ಪಿತಾಮಹ. ಈತನ ಬಗ್ಗೆ ಬಹಳ ಜನರಿಗೆ ಗೊತ್ತಿಲ್ಲದಿರಬಹುದು. ನಿಮಗೆ ಆಶ್ಚರ್ಯ, ಸಂತೋಷವಾಗಬಹುದು. ಮೂರನೆಯ ಫೋಟೋ, ಮಹಾತ್ಮ ಗಾಂಧಿಯವರದ್ದು…
ನೀವು ದಯವಿಟ್ಟು ಯೋಚನೆ ಮಾಡಿ. ಅಂತಹ ದೊಡ್ಡ ಮನುಷ್ಯ ನಮ್ಮ ದೇಶಕ್ಕೆ ಬಂದಿಲ್ಲ, ಮಹಾತ್ಮ ಗಾಂಧಿಯನ್ನು ನೋಡಿಲ್ಲ, ಆದರೆ, ಅವರ ಬಗ್ಗೆ ಅಧ್ಯಯನ ಮಾಡಿದ್ದಾರೆ. ಮಹಾತ್ಮ ಗಾಂದಿ ಫೋಟೋ ಏಕೆ ಹಾಕಿಕೊಂಡಿದ್ದೀರಿ ಎಂದು ಒಬ್ಬರು ಕೇಳಿದಾಗ, ‘ನನಗೆ ಅವರ ಮೌಲ್ಯಗಳು ಏನೆಂದು ಗೊತ್ತಿದೆ’ ಎಂದರು.
ಮಹಾತ್ಮ ಗಾಂಧಿ ಮಾಡಿದ್ದೆಲ್ಲವೂ ಸತ್ಯವೆಂದಲ್ಲ, ಅವರ ವಿಚಾರಗಳೆಲ್ಲವನ್ನೂ ಒಪ್ಪಬೇಕೆಂದು ನಾನು ಹೇಳುತ್ತಿಲ್ಲ. ಆದರೆ ಪ್ರಾಮಾಣಿಕವಾಗಿ ಎಂತಹ ಮೌಲ್ಯಗಳಿಗಾಗಿ ಅವರು ಬದುಕಿದ್ದರು ಎಂಬುದನ್ನು ಯೋಚಿಸಬೇಕಾಗುತ್ತದೆ. ಅವರು Ends and Means ಎಂದು ಹೇಳುತ್ತಿದ್ದರು. ಉದ್ದೇಶಗಳು ಮತ್ತು ಅದನ್ನು ಸಾಧಿಸತಕ್ಕಂಥ ಮಾರ್ಗಗಳ ಬಗ್ಗೆ ಗಾಂಧೀಜಿಯವರು ಹೇಳುತ್ತಿದ್ದುದು ಏನೆಂದರೆ, ಒಳ್ಳೆಯ ಮಾರ್ಗವನ್ನು ಅನುಸರಿಸಿ. Ends will take care of themselve. ನಾವು ಈಗ ಏನು ಮಾಡುತ್ತಿದ್ದೇವೆಂದರೆ, ಉದ್ದೇಶಗಳಿವೆಯಲ್ಲ, ಅದನ್ನು ಸಾಧಿಸುವುದಕ್ಕೆ ಯಾವುದೇ ಮಾರ್ಗವನ್ನು ಅನುಸರಿಸಬಹುದೆಂದು ತಿಳಿದುಕೊಂಡಿರುವುದಕ್ಕೇ ಇಂತಹ ಸ್ಥಿತಿ ಬಂದಿರುವುದು. ಅದೇ ಐನ್ಸ್ಟೀನ್ ಏನು ಹೇಳುತ್ತಿದ್ದನೆಂದರೆ, It is better to be a man of value than a man of success ಎಂದು. ಅಲ್ಲಿ ಯಶಸ್ವಿಯಾಗಬೇಕಾದರೆ Not at the cost of values. Values ಬಹಳ ಮುಖ್ಯವಾದುದು. ಯಶಸ್ಸಿಗಿಂತಲೂ ಮೌಲ್ಯಗಳು ಮುಖ್ಯ. ಅದಕ್ಕೋಸ್ಕರ ಮೌಲ್ಯಗಳನ್ನು ಇಟ್ಟುಕೊಳ್ಳಿ. ಯಶಸ್ಸು ಬರುತ್ತದೋ ಇಲ್ಲವೋ, ಬರದಿದ್ದರೆ ಅಡ್ಡಿಯಿಲ್ಲ. ಏಕೆಂದರೆ, ನೀವು ಅನುಸರಿಸುತ್ತಿರುವ ಮಾರ್ಗ ಶುದ್ಧವಾಗಿರಲಿ. ಇಂತಹುದನ್ನು ನಾವು ಶಿಕ್ಷಣದಲ್ಲಿ ಹೇಳಿಕೊಡಬೇಕು. ನನಗೆ ಏನು ಸಂಕಟವಾಗುತ್ತದೆಂದರೆ, ಈಗ ಅವೆಲ್ಲಾ ಇಲ್ಲ. ಎಲ್ಲಾ ಕಡೆಯೂ ಅಭಾವ ಎದ್ದು ಕಾಣುತ್ತಿದೆ. ಉಳಿದೆಲ್ಲ ಕೆಲವು ಒಳ್ಳೆಯದಿರಬಹುದು. ಪಠ್ಯಪುಸ್ತಕದಲ್ಲಿ ಒಳ್ಳೆಯದಿಲ್ಲವೆಂದು ಹೇಳುತ್ತಿಲ್ಲ. ಆದರೆ, ಮೌಲ್ಯಗಳ ಬಗ್ಗೆ ಒತ್ತಿ ಹೇಳಬೇಕಾಗುತ್ತದೆ. ಅದರ ಜೊತೆಗೆ ಶಿಕ್ಷಣವೆಂದರೆ, ಮನೋಭಾವ ಬದಲಾವಣೆ ಮಾಡತಕ್ಕಂಥಾದ್ದು. ಮನೋಭಾವ ಬದಲಾವಣೆಯೆಂದರೆ ಏಕಾಏಕಿ ಆಗುವುದಿಲ್ಲ, 5-10 ವರ್ಷಕ್ಕೆ ಆಗುವುದಿಲ್ಲ. ಅದನ್ನು ನಿರಂತರವಾಗಿ ಅನುಸರಿಸಿದರೆ ದಶಕಗಟ್ಟಲೆ ನಿಧಾನವಾಗಿ ಆ ಮನೋಭಾವ ಬದಲಾವಣೆ ಮಾಡುವುದಕ್ಕೆ ಸಾಧ್ಯವಾಗುತ್ತದೆ.
ಮಾತುಕತೆ :
ಪ್ರಶ್ನೆ : ವೈಜ್ಞಾನಿಕ ಮನೋಭಾವ ಬೇಕು. ಅದನ್ನು ಶಾಲೆಗಳಲ್ಲಿ ಪ್ರತ್ಯಕ್ಷವಾಗಿ ಬೆಳೆಸುವುದು ಹೇಗೆ?
ಡಾ. ಎಚ್ಚೆನ್ : ವೈಜ್ಞಾನಿಕ ಮನೋಭಾವ ಅತ್ಯಂತ ಮುಖ್ಯವಾದುದೆಂದು ಹೇಳುತ್ತೇನೆ. ಪ್ರತಿಯೊಂದನ್ನೂ ಪ್ರಶ್ನೆ ಮಾಡಿಯೇ ಒಪ್ಪಿಕೊಳ್ಳಬೇಕು, ಯಾವುದೇ ಇರಲಿ, ಯಾವ ಕ್ಷೇತ್ರವೇ ಆಗಿರಲಿ, ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳಕೂಡದು. ಅದು ಧಾರ್ಮಿಕ ಕ್ಷೇತ್ರಕ್ಕೆ ಹೆಚ್ಚೆಚ್ಚು ಅವಲಂಬಿಸಬೇಕಾಗುತ್ತದೆ. ಇಲ್ಲಿ ಹಿಂದಿನ ಕಾಲದಿಂದಲೂ ತುಂಬಾ ನಂಬಿಕೆಗಳು ಬಂದಿವೆ. ಹಿಂದಿನದೆಲ್ಲವೂ ತಪ್ಪೆಂದು ಹೇಳುತ್ತಿಲ್ಲ, ಯಾವುದು ಸುಸಂಬಂದ್ಧವಾಗಿದೆಯೋ, ಈಗಿನ ಸಮಾಜಕ್ಕೆ ಅದನ್ನು ಇಟ್ಟುಕೊಂಡು ಉಳಿದುದನ್ನು ಬಿಡೋಣ. ಅದನ್ನು ಖಂಡಿಸಬೇಕಾದ ಅಗತ್ಯವಿಲ್ಲ. ಅದು ನ್ಯಾಯವೂ ಅಲ್ಲ. ಯಾವುದೋ ಕಾಲದಲ್ಲಿ ಅವಕ್ಕೆಲ್ಲಾ ಇತಿಮಿತಿ ಇತ್ತು. ಈಗಿನ ಕಾಲಕ್ಕೆ ಅದೆಲ್ಲಾ ಹೊಂದುವುದಿಲ್ಲವಾದ್ದರಿಂದ ಬಿಟ್ಟುಬಿಡಬೇಕು. ಪುನ: ಅದನ್ನು ಹೇಗೆ ತೆಗೆದುಕೊಳ್ಳಬೇಕೋ ಹಾಗೆ ತೆಗೆದುಕೊಳ್ಳಬೇಕು.
ಸಿಲಬಸ್ ತಯಾರು ಮಾಡುವಾಗ ವೈಜ್ಞಾನಿಕ ಮನೋಭಾವದ ಬಗ್ಗೆ ಪಾಠ ಇಟ್ಟುಕೊಳ್ಳಬೇಕು. ವೈಜ್ಞಾನಿಕ ಮನೋಭಾವದ ಲಕ್ಷಣಗಳು ತುಂಬಾ ಮುಖ್ಯ. ಈಗ ಬೇಕಾದಷ್ಟು ಜಾತಿಗಳಿವೆ. ಅವೆಲ್ಲವೂ ನಾವು ಮಾಡಿಕೊಂಡಿರುವುದಕ್ಕೆ ತಾನೇ ಇರುವುದು? ನಮ್ಮಲ್ಲಿ ಸಾಕಷ್ಟು ನಂಬಿಕೆಗಳಿವೆ. ಕೆಲವು ನಂಬಿಕೆಗಳಂತೂ ಅಪಾಯದಿಂದ ಕೂಡಿವೆ. ಈ ಬಗ್ಗೆ ನಾವು ಮಕ್ಕಳಿಗೆ ಬಹಳ ಎಚ್ಚರದಿಂದ ಹೇಳಿಕೊಡಬೇಕಾಗಿದೆ. ಮಕ್ಕಳು ಅಧ್ಯಾಪಕರ ಮೇಲೆ ಅವಲಂಬಿಸಿರುತ್ತಾರೆ. ಯಾವುದೋ ಒಂದು ಜಾತಿಯನ್ನು ಬೈಯುವುದಕ್ಕೆ ಹೋಗುವುದು ಅಥವಾ ಇನ್ಯಾವುದೋ ಮಾಡುವುದಕ್ಕೆ ಹೋಗುವುದು, ಯಾವುದೋ ಧರ್ಮವನ್ನು ಹಿಯಾಳಿಸುವುದಕ್ಕೆ ಹೋಗುವುದು, ಹಾಗೆಲ್ಲಾ ಮಾಡಬಾರದು. ಅದು ವೈಜ್ಞಾನಿಕ ಮನೋಭಾವದ ಲಕ್ಷಣ ಅಲ್ಲವೇ ಅಲ್ಲ. ಪ್ರತಿಯೊಂದನ್ನೂ ಪ್ರಶ್ನೆ ಮಾಡಿಯೇ ಒಪ್ಪಿಕೊಳ್ಳಬೇಕು.
ಅನಂತರ, “ತೆರೆದಮನ” ಇರಬೇಕು. ಈಗ ನನ್ನದು ಯಾವುದೋ ಒಂದು ಅಭಿಪ್ರಾಯ ಇದೆ, ಅದು ಎಲ್ಲಾ ಕಾಲಕ್ಕೂ ಅನ್ವಯಿಸುವುದಿಲ್ಲ, ಅನ್ವಯಿಸಬೇಕಾಗಿಲ್ಲ. ಅದಕ್ಕೆ ಏನು ಮಾಡಬೇಕೆಂದರೆ, ಪ್ರಶ್ನೆ ಕೇಳುವ ಮನೋಭಾವದ ಉದ್ದೇಶವಿಟ್ಟುಕೊಂಡಲ್ಲಿ ಅನುಭವ ಮತ್ತು ಮಾಹಿತಿಗಳು ಲಭ್ಯವಾದ ಪಕ್ಷದಲ್ಲಿ ನಾನು ನಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳುವುದಕ್ಕೆ ಸಿದ್ಧವಾಗಿರಬೇಕಷ್ಟೆ. ಇಲ್ಲದೆ ಹೋದರೆ ಮೊಂಡುತನವಾಗುತ್ತದೆ. ಹಾಗಾಗಬಾರದು. ವಿಜ್ಞಾನದಲ್ಲಿ ಯಾವುದೋ ಒಂದು ನಿಯಮವಿದೆ, ಇವೊತ್ತಿಗೆ ಒಂದು ನಿಯಮವಿದ್ದರೆ ಅದು ಸತ್ಯವಾದುದೆಂದು ಹೇಳುತ್ತಾರೆ, Today is true ಎಂದು ಹೇಳುತ್ತಾರೆ. ಆದರೆ, ಮೊಂಡುವಾದಿಗಳು ಏನು ಮಾಡುತ್ತಾರೆಂದರೆ, ತಾನು ಹೇಳಿದ್ದೇ ಸತ್ಯ ಎಂದೆಂದಿಗೂ ಬದಲಾವಣೆಯಾಗುವುದಿಲ್ಲ ಎಂದು. ಅದಕ್ಕೋಸ್ಕರ ಇಂತಹುದೆಲ್ಲವನ್ನೂ ಸೂಕ್ಷ್ಮವಾಗಿ ಉದಾಹರಣೆಯಾಗಿ ಕೊಟ್ಟು ಸರಿಪಡಿಸಬೇಕು. ಸುಮಾರು ಐದು ಸಾವಿರ ವರ್ಷಗಳ ಹಿಂದೆ ಯಾವುದೋ ಒಂದು ಪುಸ್ತಕದಲ್ಲಿರುವುದೆಲ್ಲವೂ ಕೂಡ ಸತ್ಯವಾಗಬೇಕಾದ ಅಗತ್ಯವಿಲ್ಲ. ಆ ಕಾಲಕ್ಕೆ ಅವರಿಗೆ ಸತ್ಯವೆಂದು ಕಂಡಿರಬಹುದು, ಈ ಕಾಲಕ್ಕೆ ವೈಜ್ಞಾನಿಕ ಯುಗದಲ್ಲಿ ಬೇಕಾದಷ್ಟು ಬದಲಾವಣೆಗಳಾಗಿವೆ. ಹಾಗೆಯೇ ನಮ್ಮ ಅಭಿಪ್ರಾಯಗಳನ್ನೂ ಕೂಡ ನಿಯಮಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಬೇಕು.

ಪ್ರಶ್ನೆ : ಈಗ ಶಿಕ್ಷಣ ತುಂಬಾ ಕಮರ್ಷಿಯಲೈಸ್ ಆಗಿ ಮಿತಿಮೀರಿ ಹೋಗುತ್ತಿದೆ. ಇದನ್ನು ನಿಲ್ಲಿಸಲು ಸಾಧ್ಯವಿಲ್ಲವೇ? ಮಧ್ಯಮ ವರ್ಗದವರಿಗೆ ಮತ್ತು ಅತಿ ಬಡವರಿಗೆ ಶಿಕ್ಷಣವೆನ್ನುವುದು ಭ್ರಮನಿರಸನವಾಗುತ್ತಿದೆ. ಇದಕ್ಕೆ ತಮ್ಮ ಸಲಹೆ ಏನು?
ಡಾ. ಎಚ್ಚೆನ್ : ಒಂದು, ಶಿಕ್ಷಣ ಉದ್ಯೋಗವಾಗಿರುವುದು ನಿಜ. ಇದು ತುಂಬಾ ಕಷ್ಟವಾದುದು. ನಾನು ಇದರ ಬಗ್ಗೆ ಸುಮ್ಮನೆ ಸಲಹೆ ಕೊಡಬಹುದಷ್ಟೆ. ಲಂಚ ಹೆಚ್ಚಾಗುತ್ತಿದೆ. ಲಂಚವನ್ನು ನಿರ್ಮೂಲನೆ ಮಾಡಬೇಕೆಂಬ ಅಭಿಪ್ರಾಯವಿದ್ದರೂ ಇದನ್ನು ಕಾರ್ಯಗತಗೊಳಿಸುವುದು ತುಂಬಾ ಕಷ್ಟ. ಇದನ್ನು ಶಿಕ್ಷಣದ ಮೂಲಕವೇ ತೊಡೆದು ಹಾಕಬೇಕು. ಶಿಕ್ಷಣ ಕಮರ್ಷಿಯಲೈಸ್ ಆಗುತ್ತಿರುವುದು ತಮಗೆಲ್ಲಾ ಗೊತ್ತಿದೆ. ಈಗ ಎಲ್ಲಾ ಕಡೆಗಳಲ್ಲೂ ಇಂಗ್ಲೀಷ್ ಮಾಧ್ಯಮ ಶಾಲೆಗಳಾಗುತ್ತಿವೆ. ಆಂಗ್ಲ ಮಾಧ್ಯಮಿಕ ಶಾಲೆಗಳೆಲ್ಲವೂ ಕಮರ್ಷಿಯಲ್ ಆಗುತ್ತಿವೆ. ಕನ್ನಡ ಮಾಧ್ಯಮಿಕ ಶಾಲೆಗಳೆಲ್ಲವೂ ಮುಚ್ಚುತ್ತಿವೆ. ಎಲ್ಲೆಲ್ಲಿ ಕಾಲೇಜುಗಳಾಗುತ್ತಿವೆ, ಎಲ್ಲೆಲ್ಲಿ ಇಂಗ್ಲೀಷಿಗೆ ಪ್ರಾಶಸ್ತ್ಯ ಇದೆಯೋ ಅಲ್ಲಿ ಇಂತಹ ಕೋರ್ಸುಗಳನ್ನು ಓದಲು ಇಷ್ಟವಿಲ್ಲ. ಅಂತಹ ಶಾಲೆಗಳಿಗೆ ಹೆಚ್ಚು ದುಡ್ಡು ತೆತ್ತು ಹೋಗುತ್ತಿದ್ದಾರೆ. ಹೋಗಲಿ, ಅಲ್ಲಿಗೆ ಹೋಗಿ ಏನು ಕಲಿತುಕೊಂಡು ಬಂದೆ? ನಮ್ಮ ಸಂಸ್ಕೃತಿ ಬಗ್ಗೆ ಏನು ತಿಳಿವಳಿಕೆ ಬಂತು? ಎಂದರೆ ಬರೀ ಇಂಗ್ಲೀಷಿನ ವ್ಯಾಮೋಹ.
ಇವೊತ್ತು ಒಂದು ವಿಧದಲ್ಲಿ ನನಗೇನನಿಸುತ್ತದೆ ಎಂದರೆ ನಮಗೆ ರಾಜಕೀಯ ಸ್ವಾತಂತ್ರ್ಯ ಬಂದರೂ ತುಂಬಾ ಜನರಿಗೆ ಇನ್ನೂ ಗುಲಾಮತನದ ಮನೋಭಾವ ಹೋಗಿಲ್ಲ. ನಾನು ಇಂಗ್ಲೀಷ್ ಬೇಡವೆಂದು ಹೇಳುತ್ತಿಲ್ಲ. ನಾನು ವಿಜ್ಞಾನದ ವಿದ್ಯಾರ್ಥಿಯಾಗಿ ಹೇಳುತ್ತಿದ್ದೇನೆ. ಇಂಗ್ಲೀಷ್ ಅತ್ಯಗತ್ಯವಾಗಿ ಬೇಕಾಗಿದೆ. ಇಂಗ್ಲೀಷ್ ಅಂತರರಾಷ್ಟ್ರೀಯ ಭಾಷೆ. ಇಂಗ್ಲೀಷ್ ವಿಜ್ಞಾನ ಮತ್ತು ತಂತ್ರಜ್ಞಾನದ ಭಾಷೆಯಾಗಿರುವುದರಿಂದ ಅದು ಅತ್ಯಗತ್ಯವಾಗಿ ಬೇಕು. ಆದರೆ ಅದನ್ನು ಎಲ್ಲಿ ಇಟ್ಟುಕೊಳ್ಳಬೇಕೋ ಅಲ್ಲಿ ಇಟ್ಟುಕೊಳ್ಳಗಬೇಕಷ್ಟೆ. ಅದು ನನ್ನ ತಂದೆ-ತಾಯಿಯಾಗಲು ಸಾಧ್ಯವಿಲ್ಲ. ಅದು ಎಂದೆಂದಿಗೂ ಸಾಧ್ಯವಿಲ್ಲ. ಮಾತೃಭಾಷೆ ನನ್ನ ತಾಯಿಯಾಗುತ್ತದಷ್ಟೆ ವಿನಾ ಇಂಗ್ಲೀಷ್ ಆಗಲು ಸಾಧ್ಯವಿಲ್ಲ. ಅದನ್ನು ಕಲಿತುಕೊಳ್ಳೋಣ ಅಷ್ಟೆ. ಆದರೆ ನಮಗೆ ಮೊದಲಿನಿಂದಲೂ ಬಂದಿರುವ ಆಸೆ ಇದೆಯೆಲ್ಲ, ಆ ಇಂಗ್ಲೀಷಿನ ವ್ಯಾಮೋಹ ಹೋದ ಪಕ್ಷದಲ್ಲಿ ಮಾತ್ರವೇ ಕನ್ನಡ ಕಲಿಯಬೇಕೆನ್ನುವ ಹಂಬಲವುಂಟಾಗುತ್ತದೆ.
ಇನ್ನು ಟ್ಯೂಷನ್ ಕುರಿತು ಹೇಳುವುದಾದರೆ, ನಾವು ಅಂಕಿಗಳಿಗೆ ಮಿತಿಮೀರಿ ಪ್ರಾಶಸ್ತ್ಯ ಕೊಡುತ್ತಿದ್ದೇವೆ. ಕೊಡದಿದ್ದರೆ ವಿಧಿಯಿಲ್ಲ. ಇದರ ಬಗ್ಗೆ ಸುಮ್ಮನೆ ಬಿಟ್ಟಿ ಸಲಹೆ ಮಾಡುತ್ತಿದ್ದೇನೆಂದಲ್ಲ. ಶೇಕಡ 95ಕ್ಕೂ ಹೆಚ್ಚು ಅಂಕಗಳಿಸಿದವರಿಗೆ ಉಚಿತವಾಗಿ ಇಂಜಿನಿಯರಿಂಗ್, ಮೆಡಿಕಲ್ ಸೀಟ್ ಕೊಡುತ್ತೇವೆಂದಾಗ ಎಲ್ಲರೂ ಆದಷ್ಟು ಹೆಚ್ಚು ಅಂಕಗಳನ್ನು ಗಳಿಸಬೇಕೆಂದು ಬಯಸುತ್ತಾರೆ. ಆದರೆ, ಇಂಗ್ಲೀಷ್ ಕಲಿತಿದ್ದರೆ ಮಾತ್ರ ನಾನು ಮುಂದೆ ಹೋಗುವುದಕ್ಕೆ ಸಾಧ್ಯವೆಂದು ತಿಳಿದುಕೊಂಡಿದ್ದರೆ ಅದು ತಪ್ಪು, ಈ ವ್ಯಾಮೋಹವನ್ನು ನಿಧಾನವಾಗಿ ಬಿಡಿಸಬೇಕು. ಅದು ಕೂಡ ಶಿಕ್ಷಣದ ಒಂದು ಭಾಗವಾಬೇಕು.
ಪ್ರಶ್ನೆ : ಇತ್ತೀಚೆಗೆ ತಾವು ಗಮನಿಸಿರಗಬೇಕು. ಹೊರದೇಶಗಳಲ್ಲಿ ಭಾರತೀಯ ಶಿಕ್ಷಕರಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಇದರಿಂದಾಗಿ ಸಾಕಷ್ಟು ಸಂಖ್ಯೆಯಲ್ಲಿ ಶಿಕ್ಷಕರು ಹೊರದೇಶಗಳಿಗೆ ಹೋಗುತ್ತಿದ್ದಾರೆ. ನಮ್ಮಲ್ಲಿ ಉತ್ತಮ ಶಿಕ್ಷಕರ ಕೊರತೆ ಹೆಚ್ಚಿರುವಾಗ, ಉತ್ತಮ ಶಿಕ್ಷಣವನ್ನು ಕೊಡಲು ಸಾಧ್ಯವಾಗದಿರುವಂಥ ಪರಿಸ್ಥಿತಿಯಲ್ಲಿ, ಇರುವ ಶಿಕ್ಷಕರುಗಳೇ ಹೊರದೇಶಗಳಿಗೆ ತೆರಳಿದರೆ ನಮ್ಮ ಶಿಕ್ಷಣ ಪದ್ಧತಿಯ ಗತಿ ಏನಾಗಬೇಕು?
ಡಾ. ಎಚ್ಚೆನ್ : ಇದನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಮುಂದೆ ಉತ್ತಮ ಶಿಕ್ಷಕರು ಸಿಗುವ ಸಂಭವ ಇನ್ನೂ ಕಡಿಮೆಯಾಗುತ್ತದೆ! ಏಕೆಂದರೆ, ಈಗ ನನಗೆ ಕಾಲೇಜಿನ ಸಂಪರ್ಕವಿದ್ದು, ನಾನೊಬ್ಬ ಅಧ್ಯಾಪಕನಾಗಿದ್ದು ಹೈಸ್ಕೂಲು, ಕಾಲೇಜುಗಳನ್ನು ನಡೆಸುತ್ತಿದ್ದೇನೆ. ಬಿ.ಎ. ಓದಲು ಹಳ್ಳಿಗಳಿಂದ ವಿದ್ಯಾರ್ಥಿಗಳು ಬರುತ್ತಾರೆ, ಆದರೆ, ಬಿಎಸ್ಸಿ ಓದಿದ ವಿದ್ಯಾರ್ಥಿಗಳು ಉತ್ತಮ ಶಿಕ್ಷಕರಾಗುತ್ತಾರೆಂದು ಹೇಳುವುದಕ್ಕಾಗುವುದಿಲ್ಲ. ಆದಾಗ್ಯೂ ಶೈಕ್ಷಣಿಕವಾಗಿ ಒಳ್ಳೆಯ ವಿದ್ಯಾರ್ಥಿಗಳು ಕೂಡ ಬಹಳ ಮುಖ್ಯ. ಈಗ ಬಿಎಸ್ಸಿಗೆ ಹೋಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಕಾರಣ, ವರ್ಷಕ್ಕೆ 10-15 ಇಂಜಿನಿಯರಿಂಗ್ ಕಾಲೇಜುಗಳು ಸ್ಥಾಪನೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಷ್ಟು ಸೀಟುಗಳಿವೆಯೋ ಶೇಕಡ 50 ರಷ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಇಂಜಿನಿಯರಿಂಗ್, ಮೆಡಿಕಲ್ಗೆ ಹೋಗುತ್ತಾರೆ. ಸೀಟು ಸಿಗದಿರುವ, ತುಂಬಾ ಕಡಿಮೆ ಅಂಕಗಳನ್ನು ಗಳಿಸಿರುವ ಸೀಟುಸಿಗದೇ ಜುಗುಪ್ಸೆ ಹೊಂದಿರುವವರು ಪದವಿ ಪಡೆಯಲು ಬಂದಾಗ ಅಂತಹವರು ಒಳ್ಳೆಯ ಅಧ್ಯಾಪಕರಾಗುತ್ತಾರೆಂದು ನಿರೀಕ್ಷಿಸುವುದಕ್ಕಾಗುತ್ತದೆ?
ಅದೇ ರೀತಿ ಬಿಎಸ್ಸಿ ಮಾಡಿರುವವರು ಎಂಎಸ್ಸಿ ಮಾಡುತ್ತಾರೆ. ಅವರಿಗೆ ಉತ್ಸಾಹವಾಗಲಿ, ಆಸಕ್ತಿಯಾಗಲೀ ಇರುವುದಿಲ್ಲ. ಅದಕ್ಕೋಸ್ಕರ ಶಿಕ್ಷಕರಾದವರು ಹೇಗಿರಬೇಕೆಂದರೆ ನಿಜವಾಗಿಯೂ ಪಾಠ ಮಾಡಬೇಕೆನ್ನುವುದೇ ನನ್ನ ಧ್ಯೇಯ ಎನ್ನುವವರು ಇಂದು ಬೇಕಾಗಿದ್ದಾರೆ. ಆ ಕಡೆ ನಮ್ಮ ಗಮನ ಹೋಗುತ್ತಿಲ್ಲ. ಹೊರದೇಶಗಳಿಗೆ ಏಕೆ ಹೋಗುತ್ತಾರೆಂದು ಹೇಳುವುದಾದರೆ, ಬೇರೆ ದೇಶಗಳಿಗೆ ಹೋಗುವವರನ್ನು ಕಂಡರೆ ನನಗೆ ಎಷ್ಟು ಕೋಪ ಬರುತ್ತದೆಂದರೆ, ನಾನೂ ಅಲ್ಲಿಗೆ ಹೋಗಿದ್ದೆ, ನಾನು ನಮ್ಮ ವಿದ್ಯಾರ್ಥಿಗಳಿಗೆ ಹೇಳುತ್ತೇನೆ ಏನೆಂದರೆ “ನೀವು ಹೊರದೇಶಗಳಿಗೆ ಹೋಗಿ ಎಂಎಸ್ಸಿ, ಪಿಹೆಚ್ಡಿ ಮಾಡಿಕೊಳ್ಳಿ, ಹಣ ಮಾಡಿಕೊಳ್ಳಬೇಕೆಂದರೆ, 3-4 ವರ್ಷ ಅಲ್ಲಿಯೇ ಇದ್ದು ಹಣ ಮಾಡಿಕೊಂಡು ವಾಪಸ್ಸು ಬನ್ನಿ” ಎಂದು. ಈಗ ಏನಾಗುತ್ತಿದೆಯೆಂದರೆ, ಇಂಜಿನಿಯರ್, ಡಾಕ್ಟರ್ ಹಾಗೂ ಕಂಪ್ಯೂಟರ್ ಇಂಜಿನಿಯರ್ ಆಗಿರುವವರೆಲ್ಲರೂ ಹೊರದೇಶಗಳಲ್ಲಿ ಜಾಸ್ತಿ ಸಂಬಳ ಕೊಡುತ್ತಾರೆಂದು ಹೊರಟು ಹೋಗುತ್ತಾರೆ. ಅವರೆಲ್ಲರೂ ಪರದೇಶಿಗಳಾಗಿ ಆ ದೇಶದ ಆಸ್ತಿಯಾಗುತ್ತಾರೆಯೇ ವಿನಾ ಅವರೆಂದೂ ನಮ್ಮ ದೇಶದ ಆಸ್ತಿಗಳಾಗುತ್ತಿಲ್ಲ. ಅವರು ನಮ್ಮ ಆಸ್ತಿ ಆಗುವುದು ಬಹಳ ಮುಖ್ಯ.
ನಮ್ಮ ದೇಶದಲ್ಲಿರುವ ಐ.ಐ.ಟಿ.ಗಳ ಬಗ್ಗೆ ಎಷ್ಟು ಕೋಪ ಬರುತ್ತದೆಂದರೆ, ಅಲ್ಲಿ ಎರಡನೇ, ಮೂರನೇ ವರ್ಷದಲ್ಲಿ ಓದುತ್ತಿದ್ದಾಗ ಹೊರದೇಶದವರು ಅವರನ್ನು ಇಂಟರ್ವ್ಯೂ ಮಾಡಿ ಹದ್ದು ಎತ್ತಿಕೊಂಡು ಹೋಗುವಂತೆ ಎತ್ತಿಕೊಂಡು ಹೋಗಿಬಿಡುತ್ತಾರೆ. ಬಡವರ ದುಡ್ಡು ಉಪಯೋಗಿಸಿಕೊಂಡು ಅವರಿಗೆ ಶಿಕ್ಷಣ ಕೊಡಿಸುವ ಮೂಲಕ ಅಮೆರಿಕಾದವರು ಕೋಟ್ಯಾಂತರ ರೂಪಾಯಿಗಳನ್ನು ಮಾಡಿಕೊಂಡಿದ್ದಾರೆ. ಇದರಿಂದ ಏನು ಬಂದಂತಾಯಿತು? ಅಲ್ಲಿ ಹೋದವರಿಗೆ ದೇಶ, ತಾಯಿ ಏನೂ ಬೇಕಾಗಿಲ್ಲ. ಅವರ ತಂದೆ – ತಾಯಿಂದಿರು ಅನಾಥರಾಗಿ ವೃದ್ಧಾಶ್ರಮದಲ್ಲಿರುತ್ತಾರೆ. ಅದನ್ನು ನೋಡಿದರೆ ನನಗೆ ಸಂಕಟವಾಗುತ್ತದೆ. ಹೆತ್ತ ತಾಯಿಯನ್ನೇ ಮರೆತು ಹೊರದೇಶಗಳಲ್ಲಿರುವವರಿಗೆ ಏನು ಹೇಳಬೇಕು? ನಾವು ಅಂತಹ ಶಿಕ್ಷಣ ಕೊಡುತ್ತಿದ್ದೇವೆ! “ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎನ್ನುವಂತೆ ಹೆತ್ತ ತಾಯಿಯೇ ಮುಖ್ಯವೆಂದು ಒತ್ತಿ ಒತ್ತಿ ಹೇಳಬೇಕಾಗುತ್ತದೆ. ಆಗಲೇ ಮೌಲ್ಯಗಳು ಬದಲಾವಣೆ ಹೊಂದಲು ಸಾಧ್ಯ. ಹೆಚ್ಚು ಸಂಬಳ ಕೊಡುತ್ತಾರೆನ್ನುವ ಕಾರಣಕ್ಕಾಗಿ ಹೊರದೇಶಗಳಿಗೆ ಹೋಗುತ್ತಾರೆ, ನಾವು ಇಲ್ಲಿ ಹೆಚ್ಚು ಸಂಬಳ ಕೊಡುವುದಕ್ಕಾಗುತ್ತದೆಯೇ? ಅಲ್ಲಿ ಹತ್ತು ಸಾವಿರ ಡಾಲರ್ಗಳಷ್ಟು ಸಂಬಳ ಕೊಟ್ಟರೆ ಇಲ್ಲಿಗೆ ಬಂದರೆ ಅವರಿಗೆ ನಲ್ವತ್ತು ಸಾವಿರ ರೂಪಾಯಿಗಳನ್ನು ಕೊಡುತ್ತಾರೆ. ನಾವು ನಮ್ಮ ದೇಶದಲ್ಲಿ ಹುಟ್ಟಿರುವುದಕ್ಕೆ ಹೆಮ್ಮೆ ಪಡಬೇಕು. ನಾನು ನನ್ನ ಹಳೆಯ ವಿದ್ಯಾರ್ಥಿಯನ್ನು “ಇಲ್ಲಿಗೆ ಬಾ” ಎಂದರೆ ಆತ “ಪೊಲ್ಯೂಶನ್, ಪೊಲ್ಯೂಶನ್” ಎಂದಾಗ “ನಿನಗೆ ಕಪಾಳಕ್ಕೆ ಹೊಡೆಯಬೇಕು. ನೀನು ಇಲ್ಲಿಯೇ ಹುಟ್ಟಿ ಬೆಳೆದವನು. ಅಲ್ಲಿ ಹೋಗಿ ಪೊಲ್ಯೂಶನ್ ಎಂದರೆ ಹೇಗೆ? ಇಲ್ಲಿಗೆ ಬಾ, ಏನೂ ಆಗುವುದಿಲ್ಲ. ಇಲ್ಲಿ ನಿನಗಿಂತಲೂ ಚೆನ್ನಾಗಿ ಬದುಕಿದ್ದೇನೆ, ಬಾ” ಎಂದು ಹೇಳುತ್ತೇನೆ!
ಆಯ್ದು ಮಾತು …..

- ಪರೀಕ್ಷೆಗಳಲ್ಲಿ ಅಂಕಗಳನ್ನು ಗಳಿಸುವುದು ಕ್ವಾಲಿಟಿ ಎಂದು ಹೇಳುವುದು ತುಂಬಾ ತಪ್ಪಾಗುತ್ತದೆ. ಕ್ವಾಲಿಟಿ ಎನ್ನುವುದಕ್ಕೆ ವ್ಯಾಪಕವಾದ ಅರ್ಥವಿದೆ. ಪರೀಕ್ಷೆಗಳಲ್ಲಿ ಅಂಕಗಳನ್ನು ಗಳಿಸುವುದು ಅದೊಂದು ಭಾಗ, ಅಂಶ ಅಷ್ಟೆ. ಆದುದರಿಂದ ಎಲ್ಲಾ ಕಡೆಯೂ ವ್ಯಾಪಕವಾಗಿ ಕ್ವಾಲಿಟಿ ಇರಬೇಕು, ಜೀವನದಲ್ಲೂ ಕ್ವಾಲಿಟಿ ಇರಬೇಕು, ಮಾಡುವ ಕೆಲಸ ಕ್ವಾಲಿಟಿ ಇರಬೇಕು.
- ಗ್ರಹಣದಲ್ಲಿ ನಂಬಿಕೆಯಿರುವ ಕೆಲವರು ಆ ದಿವಸ ಅಡುಗೆ ಮಾಡಬಾರದು, ಊಟ ಮಾಡಬಾರದು, ಮನೆಯೆಲ್ಲೇ ಇರಬೇಕೆಂದು ಬಯಸುತ್ತಾರೆ. ಆದರೆ, ಗ್ರಹಣದ ಸಮಯದಲ್ಲಿ ಸಿಟಿ ಮಾರ್ಕೆಟ್ನಲ್ಲಿ ಬಿರಿಯಾನಿ ತಿನ್ನುತ್ತಾ ಕುಳಿತಿರುವವರಿಗೆ ಏನೂ ಆಗುವುದಿಲ್ಲ!
- ಪುನರ್ಜನ್ಮ ಎಂಬುದು ಇದ್ದು, ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯವರಾಗಿ ಹುಟ್ಟುವ ಸಂಭವವಿದೆ. ಕೆಟ್ಟ ಕೆಲಸ ಮಾಡಿದರೆ ಕೆಟ್ಟವರಾಗಿ ಹುಟ್ಟುವ ಸಂಭವವಿದೆಯೆಂದಾಗ ಆ ಭಯಕ್ಕಾದರೂ ಏನಾದರೂ ಒಳ್ಳೆಯದು ಮಾಡಬೇಕೆಂದು ತಿಳಿದುಕೊಂಡು ಸನ್ಮಾರ್ಗದಲ್ಲಿ ನಡೆಯುತ್ತಾರೆ.
- ನಾನು ಗಾಂಧೀಜಿಯವರ ಅನುಯಾಯಿ ಏನೇ ಆಗಲಿ, ಇವೊತ್ತಿನ ರಾಜಕೀಯ ನಾಯಕರನ್ನು ಕಂಡಾಗ ಮನಸ್ಸಿಗೆ ತುಂಬಾ ನೋವುಂಟಾಗುತ್ತದೆ, ಸಂಕಟವಾಗುತ್ತದೆ. ಇನ್ನೇನೂ ಇಲ್ಲ.
(ಕೃಪೆ): ಕನ್ನಡ ಮತ್ತು ಸಂಸ್ಕೃತಿ ಇಲಾಖೆ – ಮನೆಯಂಗಳದಲ್ಲಿ ಮಾತುಕತೆ

