ಏಪ್ರಿಲ್ 05ರ ರಾತ್ರಿ ದೀಪ ಹಚ್ಚದ ದಲಿತ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ

ಏಪ್ರಿಲ್‌ 5ರಂದು 9 ಗಂಟೆಗೆ ಮನೆಯ ಲೈಟ್‌ ಆಫ್‌ ಮಾಡಿ ದೀಪ ಹಚ್ಚಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರ ಕರೆಯನ್ನು ಪಾಲಿಸದ ದಲಿತ ಕುಟುಂಬದ ಮೇಲೆ ಗುಜ್ಜರ್‌ ಸಮುದಾಯದ 35 ಜನರು ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಹರಿಯಾಣ ರಾಜ್ಯದ ಪಲ್‌ವಾಲ ಜಿಲ್ಲೆಯ ಪಿಂಗೋರ್‌ ಗ್ರಾಮದಲ್ಲಿ ಜರುಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಪ್ರತಿಕ್ರಿಯೆಯಾಗಿ ದೀಪಗಳನ್ನು ಸ್ವಿಚ್ ಆಫ್ ಮಾಡದಿರುವ ಬಗ್ಗೆ ವಾಗ್ವಾದ ನಡೆದ ಹಿನ್ನೆಲೆಯಲ್ಲಿ ಮೇಲ್ಜಾತಿಯ ಪುರುಷರು ನಡೆಸಿದ ದಾಳಿಗೆ ಇಬ್ಬರು ಮಹಿಳೆಯರು ಸೇರಿದಂತೆ ಕುಟುಂಬದ ಎಂಟು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಫ್‌ಐಆರ್‌ನಲ್ಲಿ 31 ಜನರನ್ನು ಹೆಸರಿಸಲಾಗಿದೆ. ಆದರೆ ಈವರೆಗೆ ಯಾರನ್ನೂ ಬಂಧಿಸಿಲ್ಲ.

ಗುಜ್ಜರ್ ಸಮುದಾಯಕ್ಕೆ ಸೇರಿದ ಗ್ರಾಮದ ಸುಮಾರು 35 ಜನರು ರಾತ್ರಿ 9.30 ಕ್ಕೆ ತಮ್ಮ ಮನೆಯ ಮೆಲೆ ದಾಳಿ ಮಾಡಿದರು. ಕೋಲುಗಳು, ಕಬ್ಬಿಣದ ಸರಳುಗಳು ಮತ್ತು ಇಟ್ಟಿಗೆಗಳಿಂದ ಹಲ್ಲೆ ನಡೆಸಿದರು. ಜಾತಿಯ ಬೈಗುಳಗಳನ್ನು ಬಳಸಿದರು ಮತ್ತು ಇಡೀ ರಾತ್ರಿ ತಮ್ಮ ಮನೆಯ ದೀಪಗಳನ್ನು ಸ್ವಿಚ್ ಆಫ್ ಮಾಡಲು ಹೇಳಿದರು. ಈ ವಿಷಯವೇನಾದರೂ ಪೊಲೀಸರಿಗೆ ವರದಿಯಾದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು ಎಂದು ದೂರುದಾರರಾದ ಧನಪಾಲ್‌ ಆರೋಪಿಸಿದ್ದಾರೆ.

ಪ್ರಧಾನ ಮಂತ್ರಿಯ ಕರೆಗೆ ಪ್ರತಿಕ್ರಿಯೆಯಾಗಿ ಎರಡು ಕುಟುಂಬಗಳ ಮಕ್ಕಳು ಮನೆಯ ಲೈಟ್‌ಗಳನ್ನು ಸ್ವಿಚ್ ಆಫ್ ಮಾಡುವ ಬಗ್ಗೆ ಕಿಡಿಕಾರಿದ್ದರಿಂದ ವಿಷಯ ಉಲ್ಬಣಗೊಂಡಿದೆ. ಎರಡೂ ಕಡೆಯವರು ಒಬ್ಬರಿಗೊಬ್ಬರು ಕಲ್ಲು ಎಸೆದಿದ್ದು, ವಾಹನಕ್ಕೂ ಹಾನಿಯಾಗಿದೆ ಎಂದು ಸದರ್ ಸ್ಟೇಷನ್ ಹೌಸ್ ಅಧಿಕಾರಿ ಜಿತೇಂದರ್ ಕುಮಾರ್ ಹೇಳಿದ್ದಾರೆ.

ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. “ಬುಧವಾರ ಸಂಜೆ 5 ಗಂಟೆಯೊಳಗೆ ಆರೋಪಿಗಳನ್ನು ಪೊಲೀಸರ ಮುಂದೆ ಹಾಜರುಪಡಿಸುವಂತೆ ಗ್ರಾಮದ ಸರಪಂಚ್‌ ಮತ್ತು ಇತರ ಪ್ರಮುಖ ಗ್ರಾಮಸ್ಥರಿಗೆ ನಿರ್ದೇಶಿಸಲಾಗಿದೆ. ಇಂದು ಈ ವಿಷಯವನ್ನು ಪೊಲೀಸ್ ಮಟ್ಟದ ಉಪ ಅಧೀಕ್ಷಕರು ತನಿಖೆ ನಡೆಸುತ್ತಾರೆ ”ಎಂದು ಜಿತೇಂದರ್ ಕುಮಾರ್ ಹೇಳಿದರು.

ಭಾರತೀಯ ದಂಡ ಸಂಹಿತೆಯಡಿ ನೋವುಂಟು ಮಾಡುವು ಮತ್ತು ಕ್ರಿಮಿನಲ್ ಬೆದರಿಕೆಗೆ ಕಾರಣವಾದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights