ಏ. 14ರವರೆಗೆ ಸಂತೆ ರದ್ದು, ಮನೆಬಾಗಿಲಿಗೇ ತರಕಾರಿ ಗಾಡಿ
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದ್ದು ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದು ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ಆದೇಶಿಸಿದರು. ದಿನಸಿ ಅಂಗಡಿ ಅಥವಾ ಔಷಧಾಲಯಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯ. ಇನ್ನು ಮುಂದೆ, ಏ.14 ರವರೆಗೆ ಜಿಲ್ಲೆಯಲ್ಲಿ ಎಲ್ಲಾ ಸಂತೆಗಳನ್ನು ರದ್ದುಪಡಿಸಬೇಕು. ಸಂತೆಗೆ ಬರುತ್ತಿದ್ದ ತರಕಾರಿಗಳ ವಾಹನಗಳನ್ನು ವಾರ್ಡ್‍ವಾರು ಕಳಿಸಿ ಮನೆಗಳ ಬಾಗಿಲ ಮುಂದೆಯೇ ಜನರಿಗೆ ಖರೀದಿಗೆ ಲಭ್ಯವಾಗುವಂತೆ ಮಾಡಬೇಲಾಗುವುದು. ಮಾರ್ಕಿಂಗ್ ಹಾಗೂ ಮೇಲ್ವಿಚಾರಣೆ ಮಾಡದಿದ್ದರೆ ಮಾರಾಟ ಪರವಾನಗಿ ರದ್ದುಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಪಾರ್ಕ್ಗಳು ಹಾಗೂ ಮೈದಾನಗಳಲ್ಲಿ ಬೆಳಗಿನ ಮತ್ತು ಸಂಜೆಯ ವಾಕಿಂಗ್ ನಿರ್ಬಂಧಿಸಲಾಗಿದ್ದು, ಜನರು ಇದನ್ನು ಪಾಲನೆ ಮಾಡಬೇಕು. ಎಲ್ಲಾ ತಾಲ್ಲೂಕುಗಳಲ್ಲಿ ಸ್ವಯಂ ಸೇವಕರನ್ನು ನೇಮಕ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ತರಬೇತಿ ನೀಡಿಲಾಗುವುದು. ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಸ್ವಯಂ ಸೇವಕರನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದ್ದಾರೆ.
ಮಹಾರಾಷ್ಡ್ರ, ಬೆಂಗಳೂರು-ಕೇರಳ ಕಡೆಯಿಂದ ಬಂದಿರುವವರ ಮೇಲೆ ವಿಶೇಷ ನಿಗಾವಹಿಸಿ.
ಎಲ್ಲಾ ತಹಶೀಲ್ದಾರರು, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳು ಈ ಜವಾಬ್ದಾರಿಯನ್ನು ನಿರ್ವಹಿಸಬೇಕು. ಎಲ್ಲಾ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು, ಆಶಾ ಕಾರ್ಯಕರ್ತೆಯರನ್ನು ಗ್ರಾಮ ಸಹಾಯಕರುಗಳನ್ನು ಬಳಸಿಕೊಂಡು ತಕ್ಷಣ ಗುರಿ ಮುಗಿಸಿ ಎಂದು ಹೇಳಿದರು.
ಏ. 14 ರವರೆಗೆ ರಾಗಿ ಮತ್ತು ಭತ್ತವನ್ನು ಬೆಂಬಲ ಬೆಲೆಯೊಂದಿಗೆ ಖರೀದಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ತುರ್ತು ಸಂದರ್ಭದಲ್ಲಿ ತಹಶೀಲ್ದಾರರು ಸ್ಥಳೀಯವಾಗಿ ನಿರ್ಧಾರ ಮಾಡಿ ಮಾನವ ಸಂಪನ್ಮೂಲ ಕ್ರೂಢೀಕರಿಸಿಕೊಳ್ಳಿ. ಹಣಕಾಸು ವಹಿವಾಟು ನಡೆಸುವ ಬ್ಯಾಂಕ್ ಗಳು ಕಾರ್ಯನಿರ್ವಹಿಸಬೇಕು, ಇದೇ ರೀತಿ ತುರ್ತು ಸೇವಾ ಇಲಾಖೆಗಳು ದೈನಂದಿನ ಕೆಲಸ ಕಾರ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದರು.