ಐಟಿ, ಇಡಿ ಇಲಾಖೆಯನ್ನ ಕೇಂದ್ರ ದುರುಪಯೋಗ ಆರೋಪ : ‘ಕೈ’ ಕಾರ್ಯಕರ್ತರ ಪ್ರತಿಭಟನೆ
ಐಟಿ, ಇಡಿ ಇಲಾಖೆಯನ್ನ ಕೇಂದ್ರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಎರಡು ಜಿಲ್ಲೆಗಳಲ್ಲಿಂದು ‘ ಕೈ’ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಹೌದು.. ಹುಬ್ಬಳ್ಳಿಯಲ್ಲಿ ಐಟಿ ಮತ್ತು ಇಡಿ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿವೆ ಎಂದು ಆರೋಪಿಸಿ ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ ಮಾಡಲಾಗುತ್ತಿದೆ.
ನವನಗರದ ಐಟಿ ಕಚೇರಿ ಎದುರು ಶಾಸಕ ಪ್ರಸಾದ್ ಅಬ್ಬಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ್, ಅನಿಲ್ ಪಾಟೀಲ್, ಸದಾನಂದ ಡಂಗನವರ್ ಸೇರಿದಂತೆ ಹಲವು ಮುಖಂಡರು , ಕಾರ್ಯಕರ್ತರಿಂದ ಧರಣಿಯಲ್ಲಿ ಪಾಲ್ಗೊಂಡಿದ್ದು, ಐಟಿ ಮತ್ತು ಇಡಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿ. ಪರಮೇಶ್ವರ್ ಪಿಎ ರಮೇಶ್ ಭಾವಚಿತ್ರ ಹಿಡಿದು ಹೋರಾಟ ಮಾಡುತ್ತಿದ್ದಾರೆ. ಐಟಿ ಕಚೇರಿ ಎದುರು ರಸ್ತೆ ಸಂಚಾರ ಬಂದ್ ಮಾಡಿ ಐಟಿ, ಇಡಿ ಮತ್ತು ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಪ್ರತಿಕೃತಿ ದಹನದ ವೇಳೆ ಕಾಂಗ್ರೆಸ್ ಕಾರ್ಯಕರ್ತನ ಕಾಲಿಗೆ ಬೆಂಕಿ ತಗುಲಿ, ಕೂಡಲೆ ಪ್ರತಿಭಟನಾಕಾರರು ಬೆಂಕಿ ನಂದಿಸಿದ್ದಾರೆ. ಈ ವೇಳೆ ಶಾಸಕ ಪ್ರಸಾದ ಅಬ್ಬಯ್ಯ ನೇತೃತ್ವದಲ್ಲಿ ಐಟಿ ಕಚೇರಿಗೆ ನುಗ್ಗಲು ಪ್ರಯತ್ನ ಮಾಡಲಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಪೊಲೀಸರು 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ
ಇತ್ತ ಚಿಕ್ಕಮಗಳೂರಿನಲ್ಲೂ ಐಟಿ, ಇಡಿ ಇಲಾಖೆಯನ್ನ ಕೇಂದ್ರ ದುರುಪಯೋಗ ಆರೋಪ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಮಾಡುತ್ತಿದ್ದಾರೆ. ನಗರದ ಹನುಮಂತಪ್ಪ ವೃತ್ತದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ.