ಐಟಿ ದಾಳಿ ಎದುರಿಸಲಾಗದೇ ಮಾಜಿ ಡಿಸಿಎಂ ಪರಮೇಶ್ವರ್ ಅವರ ಆಪ್ತ ಸಲಹೆಗಾರ ರಮೇಶ್ ಆತ್ಮಹತ್ಯೆಗೆ ಶರಣು…!
ನಾನು ಬಡವ ನನ್ನ ಮನೆಯ ಮೇಲೆ ಐಟಿ ದಾಳಿ ಮಾಡಿದ್ದಾರೆ. ಐಟಿ ವಿಚಾರಣೆ ಎದುರಿಸಲು ನನಗೆ ಆಗೋದಿಲ್ಲ. ನಾನು ನಿಯತ್ತಾಗಿದ್ದೇನೆ ಎಂದು ಹೇಳಿ ಮಾಜಿ ಡಿಸಿಎಂ ಪರಮೇಶ್ವರ್ ಅವರ ಆಪ್ತ ಸಲಹೆಗಾರ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಮೇಶ್ ಅವರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಟೈಪಿಸ್ಟ್ ಆಗಿದ್ದ ರಮೇಶ್ ಅವರನ್ನು ಪರಮೇಶ್ವರ್ ಅವರು ಡಿಸಿಎಂ ಆದ ಮೇಲೆ ಪಿಎ ಆಗಿ ನೇಮಕ ಮಾಡಿಕೊಂಡಿದ್ದರು. ಐಟಿ ವಿಚಾರಣೆಯಿಂದ ಮಾನಸಿಕವಾಗಿ ಕುಕ್ಕಿಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ರಮೇಶ್ ಇಬ್ಬರು ಆಪ್ತರಿಗೆ ಕರೆ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರೆ ಮಾಡಿದ ವೇಳೆ ನಾನೀಗ ವಿವಿ ಕ್ಯಾಂಪಸ್ ನಲ್ಲಿದ್ದೇನೆ ಎಂದು ಹೇಳಿದ್ದರು. ನಂತರ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.
ಕುಣಿಗಲ್ ಮೂಲದ ಮೆಳ್ಳಹಳ್ಳಿ ಗ್ರಾಮದ ನಿವಾಸಿ ರಮೇಶ್ ರನ್ನು ಅಕ್ಟೋಬರ್ 9 ರಂದು ಬೆಳಿಗ್ಗೆ ಪರಮೇಶ್ವರ್ ನಿವಾಸದಿಂದ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಬಳಿಕ ಅವರಿಗೆ ಸುದೀರ್ಘ ಪ್ರಶ್ನೆಗಳನ್ನು ಕೇಳಲಾಗಿದೆ. ಇಂದು ಬೆಳಿಗ್ಗೆ 6 ಗಂಟೆಗೆ ರಮೇಶ್ ನನ್ನು ಬಿಡಲಾಗಿತ್ತು.
ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.