ಕುಸ್ತಿಯ ಗತ್ತು.. ಗಮ್ಮತ್ತು..! : ತೊಡೆ ತಟ್ಟಿದ ಬಾಲಕ, ಬಾಲಕಿಯರು

ಕುಸ್ತಿ ನೋಡೋದೆ ಒಂದು ಕುತೂಹಲ..ಇನ್ನೂ ಕುಸ್ತಿಯಲ್ಲಿ ಬಾಲಕ, ಬಾಲಕಿಯರು ತೊಡೆ ತಟ್ಟಿ ನಿಂತಿದ್ರೆ ನೋಡುಗರ ಮೈ ಜುಂ ಎನ್ನಿಸದೇ ಇರಲಾರದು. ಕಾಫಿನಾಡಲ್ಲಿ ಮೂರು ದಿನಗಳ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಪ್ರಶಸ್ತಿಗಾಗಿ ಪೋರ-ಪೋರಿಯರ ಬಲಾಬಲ ನೋಡಿದವರು ವಾಹ್ ಅಂತಾ ಉದ್ಗಾರ ತೆಗೇತಿದ್ರು. ಅಷ್ಟಕ್ಕೂ ಹೇಗಿತ್ತು ಗೊತ್ತಾ.. ಕುಸ್ತಿಯ ಗತ್ತು ಗಮ್ಮತ್ತು…

ಕುಸ್ತಿಗೆ ರೆಡಿಯಾಗ್ತಿರೋ ಬಾಲಕರು, ಅದೇ ಅಖಾಡದಲ್ಲಿ ತೊಡೆ ತಟ್ಟಿ ಕುಸ್ತಿ ಆಡುತ್ತಿರುವ ಬಾಲಕಿಯರು, ಕುಸ್ತಿಯನ್ನು ನೋಡಿ ಎಂಜಾಯ್ ಮಾಡ್ತಿರೋ ಪ್ರೇಕ್ಷಕರು. ಅದೇನ್ ಪಟ್ಟು.. ಅದೇನ್ ತಾಕತ್ತು, ಯೆಸ್.. ಇಂಥದ್ದೊಂದು ರೋಮಾಂಚನಕಾರಿ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ಚಿಕ್ಕಮಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ. ನಗರದ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿತ್ತು. ರಾಜ್ಯದ 24 ಜಿಲ್ಲೆಗಳಿಂದ ಸುಮಾರು 849ಕ್ಕೂ ಹೆಚ್ಚು ಸ್ಪರ್ಧಾಳು ಭಾಗವಹಿಸಿದ್ರು. 14ರಿಂದ 17ನೇ ವಯಸ್ಸಿನ ಬಾಲಕ, ಬಾಲಕಿಯರು ಈ ಕುಸ್ತಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಹತ್ತಾರು ಬಾಲಕ ಬಾಲಕಿಯರು ಪ್ರಶಸ್ತಿ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ್ರು. ಕಳೆದ ಮೂರು ದಿನಗಳಿಂದ ನಡೀತಿದ್ದ ಕುಸ್ತಿ ಪಂದ್ಯಾಟ ಶನಿವಾರ ಸಂಜೆ ವೇಳೆ ಸಂಪನ್ನಗೊಂಡಿತು. ಇದಕ್ಕೂ ಮುಂಚೆ ಕುಸ್ತಿ ಪಟುಗಳ ಹಣಾಹಣೆಯಂತೂ ಸಖತ್ ರೋಮಾಂಚನಕರಿಯಾಗಿತ್ತು. ಬಾಲಕಿಯರು ಕೂಡ ನಾವ್ ಏನೂ ಕಮ್ಮಿಯಿಲ್ಲ ಅಂತಾ ತೊಡೆ ತಟ್ಟಿ ಶಕ್ತಿಪ್ರದರ್ಶನ ತೋರಿದ್ರು. ಪ್ರಶಸ್ತಿ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿಜೇತ ಸ್ಪರ್ಧಿಗಳ ಸಂತಸಕ್ಕೆ ಪಾರವೇ ಇರಲಿಲ್ಲ.

ಫ್ರೀ ಸ್ಟೈಲ್ ನಲ್ಲಿ 45 ರಿಂದ 110 ಕೆಜಿವರೆಗಿನ ನಾನಾ ವಿಭಾಗದಲ್ಲಿ ಪೈಲ್ವಾನರು ಅಖಾಡದಲ್ಲಿ ತಮ್ಮ ತಾಕತ್ತನ್ನ ಪ್ರದರ್ಶನ ಮಾಡಿದ್ರು. ಮಲೆನಾಡಲ್ಲಿ ನಡೆದ ಕುಸ್ತಿಯಲ್ಲಿ ರಾಜ್ಯದ 24 ಜಿಲ್ಲೆಗಳಿಂದ ಕುಸ್ತಿ ಪಟುಗಳು ಭಾಗಿವಹಿಸಿದ್ದು ಕ್ರೀಡಾಕೂಟದ ಯಶಸ್ಸಿಗೆ ಕಾರಣವಾಯ್ತು. ಇನ್ನು ಪಂದ್ಯದಲ್ಲಿ ಭಾಗಿಯಾದ ಕ್ರೀಡಾಪಟುಗಳು ಈ ಪಂದ್ಯಾವಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ರೆ, ಕುಸ್ತಿಯನ್ನು ನೋಡಿದ ಪ್ರೇಕ್ಷಕರು ಕೂಡ ಸಂತಸ ವ್ಯಕ್ತಪಡಿಸಿದ್ರು. ಕುಸ್ತಿ ಪಂದ್ಯಾವಳಿ ನೋಡಿದ ಸ್ಥಳೀಯರು ಸಖತ್ ಎಂಜಾಯ್ ಮಾಡಿದ್ರು. ಇನ್ನೂ ಕಾಫಿನಾಡಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಿ ಸೈ ಅನ್ನಿಸಿಕೊಂಡ ಶಿಕ್ಷಣ ಇಲಾಖೆಯ ಅಧಿಕಾರಿಗಳು ಚಿಕ್ಕಮಗಳೂರಿಗೆ ಪ್ರಶಸ್ತಿ ಬರ್ಲಿಲ್ಲವಾದ್ರೂ, ಆಯೋಜನೆ ಮಾಡಿ ಅಚ್ಚುಕಟ್ಟಾಗಿ ನಡೆಸಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ರು.

ಇದೇ ಮೊದಲ ಬಾರಿಗೆ ಕಾಫಿನಾಡಲ್ಲಿ ಕುಸ್ತಿ ಪ್ರದರ್ಶನ ನಡೆದಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಆದ್ರೂ ಚಿಕ್ಕಮಗಳೂರಿನ ಮಕ್ಕಳು ಕೂಡ ಭಾಗವಹಿಸಿ ಕುಸ್ತಿಯ ಮಸ್ತಿಯನ್ನ ಖುಷಿ ಖುಷಿಯಾಗಿಯೇ ಎಂಜಾಯ್ ಮಾಡಿದ್ರು. ಬಹುತೇಕ ಪ್ರಶಸ್ತಿಗಳು ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಪಾಲಾಗಿದ್ದು, ಆ ಭಾಗದಲ್ಲಿ ಕುಸ್ತಿಗೆ ಹೆಚ್ಚು ಒತ್ತು ಕೊಡ್ತಿರೋದು ಮತ್ತೊಮ್ಮೆ ಸಾಬೀತಾಯ್ತು. ಏನಿವೇ, ಕಳೆದ ಮೂರು ದಿನಗಳಿಂದ ಶಕ್ತಿ ಪ್ರದರ್ಶಿಸಿದ ನೂರಾರು ಪೈಲ್ವಾನರು ಅಖಾಡದಲ್ಲಿ ಬಿದ್ದು ಎದ್ದು ಗುದ್ದಾಡಿ ಕುಸ್ತಿಯ ರಂಗನ್ನ ಕಾಫಿನಾಡ ಪ್ರೇಕ್ಷಕರಿಗೆ ತೋರಿಸಿಕೊಟ್ಟಿದಂತೂ ಸುಳ್ಳಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights