ಕೊರೊನಾದಿಂದ ನಷ್ಟ ಅನುಭವಿಸಿದ ರಾಜ್ಯ; ರಾಜಧಾನಿಯ ಪರಿಸರಕ್ಕೆ ಲಾಭ!
ಕೊರೊನಾದಿಂದ ನಷ್ಟವಾಗಿದ್ದೇ ಹೆಚ್ಚು. ಹೊಟೇಲ್, ಟೂರಿಸಂ, ಬ್ಯುಸಿನೆಸ್ ಎಲ್ಲವೂ ಮಕಾಡೆ ಮಲಗಿದೆ. ದೇಶದ ಆರ್ಥಿಕ ಸ್ಥಿತಿ ಪಾತಾಳ ತಲುಪಿದೆ, ಕೋಟ್ಯಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ, ಇಷ್ಟಾದರು ಸಹ ಕೊರೊನಾ ಮಹಾಮಾರಿ ಹಿಡಿತಕ್ಕೆ ಬರುತ್ತಿಲ್ಲ… ಆದ್ರೆ ಪರಿಸರಕ್ಕೆ ಮಾತ್ರ ಕೊರೊನಾದಿಂದ ಲಾಭ ವಾಗಿದ್ದೆ ಹೆಚ್ಚು. ಬೆಂಗಳೂರಿನಲ್ಲಿ ಪ್ರತಿದಿನ ವಾಯುಮಾಲಿನ್ಯ ಪ್ರಮಾಣ ಹೆಚ್ಚುತ್ತಲೇ ಇತ್ತು. ಆದ್ರೆ ಕೊರೊನಾ ಬಂದ ಮೇಲೆ ಎಲ್ಲವೂ ಉಲ್ಟಾಪಲ್ಟಾ ಆಗಿದೆ. ಕೊರೊನಾದಿಂದಾಗಿ ವಾಹನಗಳ ಓಡಾಟ ಕಡಿಮೆ ಆಗಿದೆ. ಕಾರ್ಖಾನೆಗಳು ಕೂಡ ಕಡಿಮೆ ಕೆಲಸ ಮಾಡುತ್ತಿವೆ. ಹೀಗಾಗಿ ರಾಜಧಾನಿಯ ವಾಯುಮಾಲಿನ್ಯದ ಪ್ರಮಾಣವೂ ಸಾಕಷ್ಟು ಕಡಿಮೆಯಾಗಿದೆ. ಇದರ ಜೊತೆಗೆ ಶಬ್ದ ಮಾಲಿನ್ಯವೂ ಕಡಿಮೆಯಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.
ರಾಜ್ಯದಲ್ಲಿ ಮಾರ್ಚ್ ನಂತರ ವಿಧಿಸಲಾಗಿದ್ದ ಲಾಕ್ಡೌನ್, ಕರ್ಫ್ಯೂಗಳು ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಕಡಿಮೆ ಆಗಲು ಕಾರಣವಾಗಿದೆ. ಅಲ್ಲದೆ ಶಾಲೆಗಳು, ಕಾಲೇಜುಗಳು ಓಪನ್ ಆಗಿಲ್ಲ. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಕೊಟ್ಟಿದೆ. ಹೀಗಾಗಿ ವಾಹನಗಳ ಓಡಾಟ ಕಡಿಮೆ ಆಗಿದೆ. ಕೊರೊನಾ ಭಯದಿಂದ ಜನರ ಅನಗತ್ಯ ಓಡಾಟಕ್ಕೂ ಕಡಿವಾಣ ಬಿದ್ದಿದೆ. ಇದು ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಕಡಿಮೆಯಾಗಲು ಪ್ರಮುಖ ಕಾರಣ.
ವಾಯು ಗುಣಮಟ್ಟ ಮಾನಿಟರಿಂಗ್ ಕೇಂದ್ರಗಳನ್ನು ಬಳಸಿಕೊಂಡು ನಗರದಲ್ಲಿ ವಿವಿಧ ವ್ಯಾಪ್ತಿಯಲ್ಲಿನ ಏಳು ಪ್ರತ್ಯೇಕ ಸ್ಥಳಗಳಲ್ಲಿ ವಾಯು ಗುಣಮಟ್ಟದ ಮೇಲ್ವಿಚಾರಣೆ ನಡೆಸಲಾಗುತ್ತದೆ. ಹೆಬ್ಬಾಳ, ಜಯನಗರ, ಮೈಸೂರು ರಸ್ತೆ , ನಿಮ್ಹಾನ್ಸ್ ಆವರಣ , ಹೊಸೂರು ರಸ್ತೆ, ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಮತ್ತು ಎಸ್‌ಜಿ ಹಳ್ಳಿ ಪ್ರದೇಶಗಳಲ್ಲಿ ಈ ಪರೀಕ್ಷೆ ನಡೆಸಲಾಗುತ್ತದೆ. ಕಳೆದ ವರ್ಷ ಏಪ್ರಿಲ್ ಮತ್ತು ಜುಲೈನಲ್ಲಿ ಇದ್ದ ವಾಯುಮಾಲಿನ್ಯಕ್ಕೂ ಈಗಿನ ವಾಯುಮಾಲಿನ್ಯಕ್ಕೂ ಸಾಕಷ್ಟು ವ್ಯತ್ಯಾಸ ಕಂಡು ಬಂದಿದೆ. ಗಾಳಿಯ ಗುಣಮಟ್ಟದಲ್ಲಿ ಶೇಕಡಾ 29.7ರಷ್ಟು ಸುಧಾರಣೆ ಆಗಿದೆ ಎಂದು ರಾಜ್ಯಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯಲ್ಲಿದೆ.
ಇದರ ಜೊತೆಗೆ ಲಾಕ್ಡೌನ್ ಇದ್ದ ಕಾರಣ ಮತ್ತು ನೈಟ್ ಕರ್ಫ್ಯೂ ಇರುವ ಕಾರಣ ವಾಹನಗಳ ಓಡಾಟವೂ ಸಾಕಷ್ಟು ಕಡಿಮೆ ಆಗಿದೆ, ಕೊರೊನಾ ಭಯದಿಂದ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಶಬ್ದ ಮಾಲಿನ್ಯ ಪ್ರಮಾಣವೂ ಕಡಿಮೆ ಆಗಿದೆ. ಒಟ್ಟಿನಲ್ಲಿ ಕೊರೊನಾದಿಂದ ಜನ ಪ್ರಕೃತಿಯೇ ದೇವರು ಅನ್ನುವ ಮಟ್ಟಕ್ಕೆ ಬಂದಿರುವುದು ಸುಳ್ಳಲ್ಲ.
ಇದನ್ನೂ ಓದಿ: SSLC Result: ಚಿಕ್ಕಬಳ್ಳಾಪುರಕ್ಕೆ ಪ್ರಥಮ ಸ್ಥಾನ, ಯಾದಗಿರಿ ಕೊನೆ ಸ್ಥಾನ!