ಇಂದು ಮತ್ತೆ ಸಂಜೆ 4ಕ್ಕೆ ವಿತ್ತ ಸಚಿವೆ ಸುದ್ದಿಗೋಷ್ಠಿ : ಯಾವ ಕ್ಷೇತ್ರಕ್ಕಾಗಿ 4ನೇ ಆರ್ಥಿಕ ಪ್ಯಾಕೇಜ್ ?
ಮೇ.12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ಲಾಕ್ ಡೌನ್ ನಿಂದಾದ ನಷ್ಟವನ್ನು ಭರಿಸಲು, ಬಡವರ ಆರ್ಥಿಕ ಪುನರ್ಚೇತನಗೊಳಿಸಲು 20 ಲಕ್ಷ ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ. ಇದರ ವಿವರಣೆಯನ್ನು ಕಳೆದ ಮೂರು ದಿನಗಳಿಂದ ವಿತ್ತ ಸಚಿವೆ ಸಂಜೆ ಸರಿಯಾಗಿ ನಾಲ್ಕು ಗಂಟೆಗೆ ನೀಡುತ್ತಿದ್ದು. ಇಂದೂ ಕೂಡ ಆರ್ಥಿಕ ಪ್ಯಾಕೇಜ್ ನ ವಿವರಣೆ ನೀಡಲಿದ್ದಾರೆ.
ಹೌದು…… ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ಕರೆದಿದ್ದು ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ. ಸುದೀರ್ಘ ಮೂರು ಹಂತಗಳ ಮಾಹಿತಿ ನೀಡಿದ್ದ ನಿರ್ಮಲಾ ಸೀತಾರಾಮನ್ ಅವರು ಇಂದು ಮತ್ತೆ ಸುದ್ದಿಗೋಷ್ಠಿ ಕರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇಂದು ಸಂಜೆ 4 ಗಂಟೆಗೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ, ಮೀನುಗಾರಿಕೆಗೆ, ಕೃಷಿ ಮೂಲ ಸೌಕರ್ಯ ಅಭಿವೃದ್ಧಿಗೆ ಆರ್ಥಿಕ ನೆರವನ್ನು ಘೋಷಿಸಿದ ಸಚಿವೆ ಇಂದು ಯಾವ ಕ್ಷೇತ್ರಕ್ಕೆ ನೆರವನ್ನು ನೀಡುವರು ಎನ್ನುವ ಭಾರೀ ನಿರೀಕ್ಷೆ ಇದೆ. ಪ್ರಮುಖವಾಗಿ ಕೃಷಿ, ಸಂಬಂಧಿತ ಕ್ಷೇತ್ರಗಳಲ್ಲಿ ಚೇತರಿಕೆ ಸಾಧ್ಯವಾಗುವಂತಹ ಕ್ರಮಗಳನ್ನು ಅವರು ಘೋಷಿಸಿದ್ದರು. ಕೃಷಿವಲಯದಲ್ಲಿ ಮೂಲಸೌಕರ್ಯ ಸುಧಾರಿಸಲು 1 ಲಕ್ಷ ಕೋಟಿ ರೂ.ಗಳ ನಿಧಿ ಸ್ಥಾಪಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದರು. ಅಂತೆಯೇ ಲಾಕ್‌ಡೌನ್ ಅವಧಿಯಲ್ಲಿ ರೈತರ ಖಾತೆಗಳಿಗೆ 18,730 ಕೋಟಿ ರೂ ಹಣ ಜಮೆ ಮಾಡುವುದರೊಂದಿಗೆ, ರೈತರಿಂದ 74,300 ಕೋಟಿ ರೂ. ಕೃಷಿ ಉತ್ಪನ್ನಗಳನ್ನು ಖರೀಸಿರುವುದಾಗಿ ಹೇಳಿದ್ದಾರೆ ಕೃಷಿ, ಮೀನುಗಾರಿಕೆ, ಪಶುಸಂವರ್ಧನೆ, ಡೈರಿ ಮತ್ತು ಆಹಾರ ಸಂಸ್ಕರಣೆ ರಂಗಗಳಿಗೆ ಉತ್ತೇಜನ ನೀಡುವ ಕ್ರಮಗಳನ್ನು ಪ್ರಕಟಿಸಿದ್ದರು.
ಹೋಟೆಲ್, ರೆಸ್ಟೋರೆಂಟ್, ಹೋಂ ಸ್ಟೇ, ಲಾಡ್ಜ್, ಅತಿಥಿ ಗೃಹಗಳು, ಸಿನಿಮಾ ಮಂದಿರಗಳು ಮತ್ತಿತರ ವಿಷಯಗಳಿಗೆ ನೆರವು ನೀಡುವಂತಹ ಉಪ ಕ್ರಮಗಳನ್ನು ಇಂದಿನ ತಮ್ಮ ಸುದ್ದಿಗೋಷ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ವಿವರಿಸುವ ಸಾಧ್ಯತೆ ಇದೆ.

