ಪಶ್ಚಿಮ ಬಂಗಾಳ : ಹಳ್ಳಕ್ಕೆ ಬಸ್ ಬಿದ್ದು ಆರು ವಲಸೆ ಕಾರ್ಮಿಕರು ದುರ್ಮರಣ..!
ಕಂದಕಕ್ಕೆ ಬಸ್ ಬಿದ್ದು ಕೆಲಸಕ್ಕೆ ಹೋಗುತ್ತಿದ್ದ ಆರು ವಲಸೆ ಕಾರ್ಮಿಕರು ಮೃತಪಟ್ಟ ದಾರುಣ ಘಟನೆ ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನ ವಿವಿಧ ಜಿಲ್ಲೆಗಳಿಂದ ಸುಮಾರು 20 ವಲಸೆ ಕಾರ್ಮಿಕರನ್ನು ಹೊತ್ತ ಚಾರ್ಟರ್ಡ್ ಬಸ್ ಉತ್ತರ ಪ್ರದೇಶದ ಲಕ್ನೋಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಜಾರ್ಖಂಡ್‌ನಿಂದ ಕೆಲ ಕಾರ್ಮಿಕರನ್ನು ಹತ್ತಿಸಿಕೊಂಡಿದ್ದ ಬಸ್ ಪಶ್ಚಿಮ ಬಂಗಾಳಕ್ಕೆ ಬಂದಿತು. ರಾಯ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ರೂಪಹಾರ್‌ನಲ್ಲಿನ ರಾಷ್ಟ್ರೀಯ ಹೆದ್ದಾರಿ -34 ರ ಕಂದಕಕ್ಕೆ ಬಸ್ ಬಿದ್ದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು ಅವರನ್ನು ರಾಯಗಂಜ್ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಂದಕಕ್ಕೆ ಬಿದ್ದ ಬಸ್ ನಿಂದ ಇನ್ನೂ ಕೆಲ ಕಾರ್ಮಿಕರು ನಾಪತ್ತೆಯಾಗಿದ್ದಾರೆಯೇ ಎಂದು ಕಂಡುಹಿಡಿಯಲು ಡೈವರ್‌ಗಳ ಸಹಾಯದಿಂದ ಹಳ್ಳವನ್ನು ಹುಡುಕುತ್ತಿದ್ದೇವೆ ಎಂದು ಪೊಲೀಸರು ಹೇಳಿದರು.
ಲಾಕ್‌ಡೌನ್ ಸಮಯದಲ್ಲಿ ತಮ್ಮ ಮನೆಗೆ ಮರಳಿದ್ದ ವಲಸೆ ಕಾರ್ಮಿಕರು ಲಸಿಕೆಯ ಎರಡೂ ಡೋಸ್ ಪಡೆದ ನಂತರ ತಮ್ಮ ಕೆಲಸದ ಸ್ಥಳಗಳಿಗೆ ಹಿಂತಿರುಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.