3 ಕೃಷಿ ಕಾಯ್ದೆ ವಿರೋಧಿಸಿ ರೈತ ಮೋರ್ಚಾದಿಂದ ಸೋಮವಾರ ಭಾರತ್ ಬಂದ್ ಗೆ ಕರೆ!
3 ಕೃಷಿ ಕಾಯ್ದೆ ವಿರೋಧಿಸಿ ರೈತ ಮೋರ್ಚಾದಿಂದ ಸೋಮವಾರ ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ೀ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಹೌದು.. ಸೆಪ್ಟೆಂಬರ್ 27ರಂದು ರೈತರು ಭಾರತ್ ಬಂದ್ ಗೆ ಕರೆಕೊಟ್ಟಿದ್ದು, ಕಾರ್ಮಿಕರು, ರಾಜಕೀಯ ಪಕ್ಷಗಳು, ಬ್ಯಾಂಕ್ ನೌಕರರು ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದಾರೆ. ಸೋಮವಾರದ ಬೃಹತ್ ಬಂದ್ ಗೆ ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾದಿಂದ ಕರೆ ನೀಡಲಾಗಿದ್ದು ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು, ಹಲವು ಸಂಘಟನೆಗಳ ಬೆಂಬಲ ದೊರೆತಿದೆ.
ಮೂರು ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿ ಗಡಿ ಭಾಗದಲ್ಲಿ ರೈತರ ಪ್ರತಿಭಟನೆಗೆ ಒಂದು ವರ್ಷ ಪೂರ್ಣಗೊಂಡಿದೆ. ಆದರೆ ಕೇಂದ್ರ ಸರ್ಕಾರ ರೈತರ ಮನವೊಲಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಪ್ರತಿಭಟನೆ ಆರಂಭವಾದಾಗಿನಿಂದಲೂ ರೈತರು ವಿವಿಧ ರೀತಿಯಲ್ಲಿ ಪ್ರತಿಭಟನೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುತ್ತಲೇ ಇದೆ. ಆದರೂ ಸರ್ಕಾರ ಮಾತ್ರ ರೈತರ ಕೂಗಿಗೆ ಕಿವಿಗೊಡುತ್ತಿಲ್ಲ. ಹೀಗಾಗಿ ಸೋಮವಾರ ಭಾರತ್ ಬಂದ್ ಗೆ ಕರೆ ನೀಡಲಾಗಿದೆ.
ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಭಾರತ್ ಬಂದ್ ಮಾಡುತ್ತಿದ್ದು, ಕಿಸಾನ್ ಮೋರ್ಚಾ ಕರೆಗೆ 300ಕ್ಕೂ ಹೆಚ್ಚು ರೈತ ಸಂಘಟನೆಗಳ ಸಾಥ್ ನೀಡುತ್ತಿದೆ. ಸೋಮವಾರ ಬೆಳಿಗ್ಗೆ 6ರಿಂದ ಸಂಜೆ 6ರವೆರೆಗೆ ಕರ್ನಾಟಕ ಬಂದ್ ಆಗಲಿದ್ದು, ತುರ್ತು ಸೇವೆಗಳಿಗೆ ಮಾತ್ರ ಅವಕಾಶವಿರಲಿದೆ.
ಈ ನಡುವೆ ಪೆಟ್ರೋಲ್, ಡೀಸೆಲ್, ಗ್ಯಾಸ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿಯೂ ಬಂದ್ ಮಾಡಲಾಗುತ್ತಿದೆ.