ಮೀಸಲು ಅನ್ಯಾಯ ಮಾಡಿದ್ದಾರೆಂದು ರಾಜ್ಯದ ಅಡ್ವೋಕೇಟ್ ಜನರಲ್ ರಾಜೀನಾಮೆಗೆ ಎಚ್.ಡಿ ರೇವಣ್ಣ ಪಟ್ಟು!

ರಾಜ್ಯದ ಅಡ್ವೋಕೇಟ್ ಜನರಲ್ ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಬೇಕು ಎಂದು ಶಾಸಕ ಎಚ್.ಡಿ ರೇವಣ್ಣ ಆಗ್ರಹಿಸಿದ್ದಾರೆ. ಅಡ್ವೋಕೇಟ್ ಜನರಲ್ ನಗರಸಭೆ ಮತ್ತು ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿಯಲ್ಲಿ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆಂದು ರೇವಣ್ಣ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಹಾಸನ ನಗರಸಭೆಯಲ್ಲಿ 17 ಸ್ಥಾನ ಹೊಂದಿದ ಜೆಡಿಎಸ್ ಗೆ ಬಹುಮತವಿದ್ದರೂ, ಅದನ್ನು ತಪ್ಪಿಸಬೇಕೆಂದು ಅಧ್ಯಕ್ಷ ಸ್ಥಾನವನ್ನು ಎಸ್ ಟಿಗೆ ಉಪಾಧ್ಯಕ್ಷ ಸ್ಥಾನವನ್ನು ಬಿಸಿಎಂ ಮಹಿಳೆಗೆ ನಿಗದಿಪಡಿಸಲಾಗಿದೆ. ರಾಜ್ಯದ ಚುನಾವಣಾ ಅಧಿಕಾರಿಗಳು,ಮುಖ್ಯಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ರಾತ್ರಿಯೆಲ್ಲಾ ಕರ್ತವ್ಯ ನಿರ್ವಹಿಸಿ ರಾತ್ರೋರಾತ್ರಿ ಮೀಸಲು ಪ್ರಕಟಿಸಿ ಅನ್ಯಾಯ ಮಾಡಿದ್ದಾರೆ ಎಂದು ರೇವಣ್ಣ ದೂರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಬಿ.ವಿ ಕರೀಗೌಡ ಕೂಡ ಹಾಜರಿದ್ದರು.

ಇದೇ ಮಂಗಳವಾರ ಸಿಎಂ ಭೇಟಿ ಮಾಡಿ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡಬೇಡಿ ಎನ್ನುವ ಜೊತೆಗೆ ಅಧಿಕಾರಿಗಳ ವರ್ಗಾವಣೆ ದಂಧೆ ಬಗ್ಗೆ ವಿವರಿಸಿ ಬಂದಿದ್ದೆವು ಹೊರತು ನಗರಸಭೆ ಮೀಸಲು ವಿಷಯ ಪ್ರಸ್ತಾಪವಾಗಿಲ್ಲಾ ಎಂದು ರೇವಣ್ಣ ಹೇಳಿದರು.

ಮಾನದಂಡಗಳನ್ನು ಗಾಳಿಗೆ ತೂರಿ ಅರೆಸೀಕೆರೆ, ಹಾಸನ, ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿಯಾಗಿದೆ. ಇದರಿಂದ ತಮ್ಮ ಸದಸ್ಯರು ನ್ಯಾಯಾಲಯದ ಮೊರೆ ಹೋಗುವ ಕುರಿತು ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights