Categories
Breaking News District State

ಗಗನಚುಕ್ಕಿ ಜಲಪಾತೋತ್ಸವ ಸಿದ್ಧತೆ : ಸೋಷಿಯಲ್ ಮೀಡಿಯಾದಿಂದ ವಿಘ್ನ – ವದಂತಿಗೆ ತೆರೆ

ಕಳೆದ ಮೂರ್ನಾಲ್ಕು ವರ್ಷದಿಂದ ಮಂಡ್ಯ ಜಿಲ್ಲೆಯಲ್ಲಿ ಮಳೆ ಬೆಳೆ ಇಲ್ಲದೆ ಬರಗಾಲ ಆವರಿಸಿತ್ತು. ಅದ್ರಿಂದಾಗ ಜಿಲ್ಲೆಯ ಗಗನಚುಕ್ಕಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮ ಸ್ಥಗಿತವಾಗಿತ್ತು. ಕಳೆದ ಬಾರಿ ಮತ್ತು ಈ ಬಾರಿ KRS ತುಂಬಿದ್ದು,ಈ ಬಾರಿ ಜಲಪಾತೋತ್ಸವಕ್ಕೆ ಜ-೧೮ ಮತ್ತು ೧೯ ದಿನಾಂಕ ನಿಗದಿಪಡಿಸಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಆದ್ರೆ ಈ ಜಲಪಾತೋತ್ಸವಕ್ಕೆ ಇದೀಗ ಸೋಷಿಯಲ್ ಮೀಡಿಯಾದಿಂದ ವಿಘ್ನವೊಂದು ಎದುರಾಗಿದ್ದು ಕೆ.ಆರ್.ಎಸ್. ಅಣೆಕಟ್ಟೆಯಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡಲಾಗುತ್ತಿದೆ ಎಂಬ ವದಂತಿ ಜಿಲ್ಲೆಯಲ್ಲಿ ಹರಡುತ್ತಿದೆ.
ಈ ವದಂತಿಗೆ ಮಂಡ್ಯ ಡಿಸಿ ವೆಂಕಟೇಶ್ ಸ್ಪಷ್ಟನೆ ನೀಡಿ ನೀರು ಕೇವಲ ನಾಲೆಗಳಿಗೆ ಬಿಡಲಾಗುತ್ತಿದೆ ಹೊರತು ತಮಿಳುನಾಡಿಗಲ್ಲ ಎಂದು ಸ್ಪಷ್ಟನೆ ನೀಡಿ ಗಗನಚುಕ್ಕಿ ಜಲಪಾತಕ್ಕಿದ್ದ ಆತಂಕದ ವದಂತಿಗೆ ತೆರೆ ಎಳೆದಿದ್ದಾರೆ.

ಹೌದು… ನಿನ್ನೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆಯಿಂದ ಮಂಡ್ಯ ಜಿಲ್ಲೆಯ ನಾಲೆಗಳಿಗೆ ನೀರನ್ನು ಬಿಡಲಾಗುತ್ತಿದೆ. ಕೆಲವ್ರು ಇದನ್ನು ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ ಎಂದು ವದಂತಿ ಹಬ್ಬಿಸಿದ್ರು. ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಮಂಡ್ಯ ಜಿಲ್ಲಾಧಿಕಾರಿ ಡಾ.ವೆಂಕಟೇಶ್, ಸಂಕ್ರಾಂತಿ ಹಿನ್ನಲೆಯಲ್ಲಿ ಜಾನುವಾರುಗಳನ್ನು ತೊಳೆಯಲು, ಕೃಷಿಗಾಗಿ ಜಿಲ್ಲೆಯ ವಿಶ್ವೇಶ್ವರಯ್ಯ ಹಾಗೂ ಚಿಕ್ಕದೇವರಾಜ ನಾಲೆಗಳಿಗೆ ನೀರು ಬಿಡಲಾಗಿದೆ. ಅಲ್ಲದೇ ಇದೇ 18 ಮತ್ತು 19ರಂದು ಗಗನಚುಕ್ಕಿ ಜಲಪಾತೋತ್ಸವ ಇರುವುದರಿಂದ ಜಲಪಾತ ವೈಭವದಿಂದ ಕಾಣಲಿ ಎಂದು ನೀರು ಬಿಡುಗಡೆ ಮಾಡಲಾಗಿದೆಯೇ ಹೊರತು ತಮಿಳುನಾಡಿಗೆ ನೀರು ಬಿಟ್ಟಿಲ್ಲ ಇದು ಕೇವಲ ವದಂತಿ ಎಂದು ಡಿಸಿ ಸ್ಪಷ್ಟಪಡಿಸಿದ್ರು.

ಇನ್ನು ಇದೇ ಜನವರಿ 18 ಮತ್ತು 19ರಂದು ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದಲ್ಲಿ ಗಗನುಚಕ್ಕಿ ಜಲಪಾತೋತ್ಸವ ಎರಡು ದಿನಗಳ ಕಾಲ ನಡೆಯಲಿದ್ದು, ಕಳೆದ ಆರು ವರ್ಷಗಳಿಂದ ಉತ್ಸವವನ್ನು ಬರಗಾಲದಿಂದ ಸ್ಥಗಿತಗೊಳಿಸಲಾಗಿತ್ತು. ಈ ಬಾರಿ ಅದ್ಧೂರಿ ಜಲಪಾತೋತ್ಸವ ನಡೆಯಲಿದ್ದು, ಶನಿವಾರ ಮತ್ತು ಭಾನುವಾರ ಸಂಜೆ ಉತ್ಸವ ವೈಭವದಿಂದ ಜರುಗಲಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಮ್ಯೂಸಿಕಲ್ ನೈಟ್, ಜಲಪಾತದ ಲೇಸರ್ ಲೈಟ್ ಷೋ ಸೇರಿ ಅನೇಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದ್ರು.

ಒಟ್ಟಾರೆ ಮೂರ್ನಾಲ್ಕು ವರ್ಷಗಳಿಂದ ಬರಗಾಲದಿಂದ ಕಂಗೆಟ್ಟಿದ್ದ ಮಂಡ್ಯ ಜಿಲ್ಲೆಯ ರೈತರಿಗೆ ಈ ಬಾರಿ ಮಳೆಯಿಂದ ಸಮೃದ್ಧಿಯಾಗಿ ನೀರು ಸಿಗುತ್ತಿದ್ದು, ಇದ್ರಿಂದ ಸದ್ಯ ಬೆಳೆಗಳಿಗೂ ನೀರು ತಲುಪುತ್ತಿದೆ. ಇದರ ಜೊತೆಗೆ ನೆನೆಗುದಿಗೆ ಬಿದ್ದಿದ್ದ ಗಗನಚುಕ್ಕಿ ಜಲಪಾತೋತ್ಸವ ಸಹ ಅದ್ದೂರಿಯಾಗಿ ನಡೆಯುತ್ತಿದ್ದು ಜಿಲ್ಲೆಯಲ್ಲಿ ಜನರ ಸಂತೋಷಕ್ಕೆ ಕಾರಣವಾಗಿದೆ.

Categories
Breaking News National Political Technology

Fake news : ಅತ್ಯಾಚಾರ ಆರೋಪಿ ನಿತ್ಯಾನಂದ ಸ್ವಾಮಿಯ ಕಾಲಿಗೆ ಬಿದ್ದ ಗೃಹ ಸಚಿವ ಅಮಿತ್ ಶಾ..

ತಮ್ಮ ವಿರೋಧಿಗಳ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಲು ಅಥವಾ ತಮ್ಮ ಕೆಟ್ಟ ಕೆಲಸಗಳನ್ನು ಮುಚ್ಚಿಹಾಕಲು ಫೇಕ್‌ ನ್ಯೂಸ್‌ಗಳನ್ನು ಹಲವಾರು ಜನ ಹರಡುತ್ತಿದ್ದಾರೆ. ಆದರೆ ಅದೇ ಫೇಕ್‌ನ್ಯೂಸ್‌ಗಳು ಒಂದು ದಿನ ತಮ್ಮ ವಿರುದ್ಧವೇ ತಿರುಗಿಬೀಳಬಹುದೆಂಬುದಕ್ಕೆ ಇಲ್ಲಿದೆ ಒಂದು ಉದಾಹರಣೆ.. ಅದು ಈ ದೇಶದ ಗೃಹಮಂತ್ರಿ, ಅತಿ ದೊಡ್ಡ ಪಕ್ಷದ ಅಧ್ಯಕ್ಷ ಅಮಿತ್‌ ಶಾರವರೆ ಅದಕ್ಕೆ ಬಲಿಯಾಗಿದ್ದಾರೆ.

ಅಂದು ಕಾಂಗ್ರೆಸ್ ಧರ್ಮಾಧಾರಿತವಾಗಿ ದೇಶವನ್ನು ವಿಭಜನೆ ಮಾಡಿತು: ಅಮಿತ್ ಶಾ

ಪೌರತ್ವ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸುವ ವೇಳೆ ಬಿಜೆಪಿ ಅಧ್ಯಕ್ಷ ಮತ್ತು ಗೃಹ ಸಚಿವ ಅಮಿತ್ ಶಾ ಅಂದು 1947ರಲ್ಲಿ ಕಾಂಗ್ರೆಸ್ ಭಾರತವನ್ನು ಧರ್ಮಾಧಾರಿತವಾಗಿ ದೇಶವನ್ನು ವಿಭಜನೆ ಮಾಡದಿದ್ದರೆ ಇಂದು ಈ ಮಸೂದೆಯ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ.

ಇವರ ಈ ಹೇಳಿಕೆ ನಿಜವೇ? ಭಾರತ ಪಾಕಿಸ್ತಾನ ವಿಭಜನೆಗೆ ಕಾಂಗ್ರೆಸ್‌ ಕಾರಣವೇ ಎಂದು ಹುಡುಕಹೊರಟರೆ ಮೇಲ್ನೋಟಕ್ಕೆ ಅದು ಸುಳ್ಳು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

1947ರಲ್ಲಿ ಜೆ.ಬಿ ಕೃಪಲಾನಿಯವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು. ಅದಕ್ಕೂ ಒಂದು ವರ್ಷದ ಮೊದಲು ಜವಹಾರಲಾಲ್‌ ನೆಹರು ಅಧ್ಯಕ್ಷರಾಗಿದ್ದರು. ಇವರೆಲ್ಲರೂ ಭಾರತದ ವಿಭಜನೆಗೆ ವಿರುದ್ಧವಾಗಿದ್ದರು. ಎಲ್ಲಕ್ಕಿಂತ ಹೆಚ್ಚು ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಭಾರತ ವಿಭಜನೆಯ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.

ವಾಸ್ತವವೆಂದರೆ ಹಾಲಿ ಬಿಜೆಪಿಯನ್ನು ಬೆಂಬಲಿಸುವ ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್‌ನ ಮೊಹಮ್ಮದ್ ಆಲಿ ಜಿನ್ನಾ ಧಾರ್ಮಿಕ ಆಧಾರದ ಮೇಲೆ ಭಾರತ ಪಾಕಿಸ್ತಾನ ವಿಭಜನೆಯನ್ನು ಬೆಂಬಲಿಸಿದವರು. ಆದರೆ ಕಾಂಗ್ರೆಸ್ ವಿಭಜನೆಗೆ ವಿರುದ್ಧವಾಗಿತ್ತು ಎಂದು ಅಮಿತ್‌ ಶಾ ಸುಳ್ಳು ಹೇಳಿದ್ದಾರೆ. ಆ ಮೂಲಕ ಜನರಲ್ಲಿ ಕಾಂಗ್ರೆಸ್‌ ವಿರೋಧಿ ಮನೋಭಾವವನ್ನು ಬಿತ್ತುವುದು ಮತ್ತು ಪೌರತ್ವ ತಿದ್ದುಪಡಿ ಮಸೂದೆಗೆ ಬೆಂಬಲ ಪಡೆಯುವುದು ಅವರ ಉದ್ದೇಶವಾಗಿದೆ.

ಸತ್ಯ ಏನೆಂದರೆ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಭಾರತ ವಿಭಜನೆಯನ್ನು ತಡೆಯಲು ಅತ್ಯುತ್ತಮ ಪ್ರಯತ್ನ ಮಾಡಿದ್ದರು..

ಈ ಸುಳ್ಳನ್ನು ಅಮಿತ್‌ ಶಾರವರು ಪಾರ್ಲಿಮೆಂಟ್‌ನಲ್ಲಿ ಹೇಳುತ್ತಿರುವಾಗಲೇ ಅವರ ಕುರಿತೇ ಇನ್ನೊಂದು ಸುಳ್ಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಅದೆನೆಂದು ಓದಿಬಿಡಿ

ಅತ್ಯಾಚಾರ ಆರೋಪಿ ನಿತ್ಯಾನಂದ ಸ್ವಾಮಿಯ ಕಾಲಿಗೆ ಬಿದ್ದ ಗೃಹ ಸಚಿವ  ಅಮಿತ್ ಶಾ..

ಅತ್ಯಾಚಾರ ಸೇರಿದಂತೆ ಹಲವು ಆರೋಪಗಳಲ್ಲಿ ಭಾಗಿಯಾಗಿರುವ ನಿತ್ಯಾನಂದ ಸ್ವಾಮಿ ದೇಶಬಿಟ್ಟು ಓಡಿ ಹೋಗಿದ್ದಾರೆ. ಆದರೆ ಅವರನ್ನು ಟ್ರೋಲ್ ಮಾಡುವ ಪೋಸ್ಟ್‌ಗಳು ಮಾತ್ರ ಹೆಚ್ಚು ಹೆಚ್ಚು ಓಡಾಡುತ್ತಿವೆ. ಅದರಲ್ಲಿ ಹೆಚ್ಚು ಟ್ರೋಲ್ ಆಗಿರುವುದು ಗೃಹ ಸಚಿವ ಅಮಿತ್ ಶಾರವರು ನಿತ್ಯಾನಂದ ಸ್ವಾಮಿಯ ಕಾಲಿಗೆ ಬೀಳುತ್ತಿರುವ ಪೋಸ್ಟ್ ವೈರಲ್ ಆಗಿದೆ.

ದೇಶದ ಗೃಹಮಂತ್ರಿಗಳು ಆರೋಪಿಯನ್ನು ಜೈಲಿಗೆ ಕಳಿಸುವುದು ಬಿಟ್ಟು ಅವರ ಕಾಲಿಗೆ ಬೀಳುತ್ತಿದ್ದಾರೆ. ಈಗಾದರೆ ಭಾರತದ ಪರಿಸ್ಥಿತಿ ಉದ್ದಾರ ಎಂದು ಜನ ಟ್ರೋಲ್‌ ಮಾಡಿದ್ದಾರೆ. ನೂರಾರು ಜನ ಈ ಪೋಸ್ಟರ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಷೇರ್‌ ಮಾಡಿ ಅಮಿತ್‌ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರ್‌ ಫ್ಯಾಕ್ಟ್‌ ಚೆಕ್‌ ಮಾಡಿದಾಗ ತಿಳಿದು ಬಂದ ಸತ್ಯ ಏನೆಂದರೆ ಆ ಫೋಟೊದಲ್ಲಿರುವ ವ್ಯಕ್ತಿ ಅಮಿತ್‌ ಶಾ ಅಲ್ಲ. ಅವರು ಅಮಿತ್ ಶಾರಂತೆ ಕಂಡರೂ ಸಹ ಅವರು ಮಾರಿಷಸ್‌ನ ಕಮಿಷನರ್ ಜಗದೀಶ್ವರ್‌ ಗೋಬುರ್ದನ್‌ ಆಗಿದ್ದಾರೆ. ಅವರು ನಿತ್ಯಾನಂದ ಸ್ವಾಮಿಯ ಆಶ್ರಮಕ್ಕೆ ಭೇಟಿ ನೀಡಿದ್ದಾಗ ಅವರು ಪಾದಕ್ಕೆರಗಿದ್ದರು. ಆ ಫೋಟೊವನ್ನು ತಪ್ಪಾಗಿ ಅಮಿತ್ ಶಾ ಎಂದು ಗುರುತಿಸಲಾಗಿದೆ.

ಅವರನ್ನು ಸ್ಪಷ್ಟವಾಗಿ ಗುರುತಿಸುವ ಒರಿಜಿನಲ್ ಫೋಟೊ ಇಲ್ಲಿದೆ ನೋಡಿ.

ಹಾಗಾಗಿ ಷೇರ್‌ ಮಾಡುವ ಮೊದಲು ಸತ್ಯವನ್ನು ಪರಿಶೀಲಿಸಬೇಕಾಗಿದೆ. ನಾವು ಯಾವುದೇ ಕಾರಣಕ್ಕೂ ಫೇಕ್‌ನ್ಯೂಸ್‌ಗಳನ್ನು ಷೇರ್ ಮಾಡಬಾರದು. ಎಲ್ಲಕ್ಕಿಂತ ಹೆಚ್ಚಾಗಿ ಅಮಿತ್‌ ಶಾ ರಂತವರು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಸುಳ್ಳನ್ನು ಹೇಳಬಾರದು. ಸುಳ್ಳು ಹೇಳದಿದ್ದವರ ವಿರುದ್ಧವೂ ಫೇಕ್‌ನ್ಯೂಸ್‌ಗಳು ಬರುತ್ತಿರುವುದು ನಿಜ. ಆದರೆ ನಮ್ಮನ್ನು ನಾವು ಸುಳ್ಳು ಹೇಳದಂತೆ, ಫೇಕ್‌ನ್ಯೂಸ್‌ ಹಂಚದಂತೆ ನೋಡಿಕೊಂಡರೆ ಈ ಸಮಸ್ಯೆಗೆ ಸ್ವಲ್ಪ ಪರಿಹಾರ ಸಿಗಬಹುದು.

Categories
Breaking News District State

ಮಳೆ ಆರ್ಭಟಕ್ಕೆ ರಸ್ತೆ ಕುಸಿದು ಲಾರಿ ಪಲ್ಟಿ…!

ಮಳೆ ಆರ್ಭಟಕ್ಕೆ ರಸ್ತೆ ಕುಸಿದು ಲಾರಿ ಪಲ್ಟಿಯಾದ ಘಟನೆ ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಕಡ್ಲರಬಾಳು ರಸ್ತೆಯ ಗ್ರಾಮದ ಮಧ್ಯೆ ನಡೆದಿದೆ.

ಸಿಮೆಂಟ್ ರಸ್ತೆಯ ಸೇತುವೆ ಬಳಿ ರಸ್ತೆಯೊಳಗೆ ಸಿಕ್ಕಿಕೊಂಡ ಟಿಪ್ಪರ್ ಲಾರಿ ಪಲ್ಟಿಯಾಗಿದೆ. ಕಳಪೆ ಸಿಮೆಂಟ್ ಕಾಮಗಾರಿಯಿಂದ ಕುಸಿದ ರಸ್ತೆಯಲ್ಲಿ ಲಾರಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಟಿಪ್ಪರ್ ಲಾರಿ ಚಾಲಕ ಬಚಾವಾಗಿದ್ದಾನೆ.

 

 

Categories
Breaking News District State

ಸಕ್ಕರೆ ನಾಡಲ್ಲೊಬ್ಬ ಪೊಲೀಸ್ ಗೂಂಡ..! : ರಾತ್ರಿ ವೇಳೆ ರಸ್ತೆ ಬದಿಯಲ್ಲಿ ನಿಂತ್ರೆ ಬೀಳುತ್ತೆ ಗೂಸಾ..!

ಸರ್ಕಾರ ಪೊಲೀಸ್ ಇಲಾಖೆಯನ್ನ ಜನಸ್ನೇಹಿ ಮಾಡಲು ನಾನಾ ಕಸರತ್ತು ನಡೆಸ್ತಿದೆ. ಆದ್ರೆ ಸಕ್ಕರೆನಾಡಲ್ಲಿರುವ ಈ ಪೊಲೀಸಪ್ಪ ಅದಕ್ಕೆ ತದ್ವಿರುದ್ಧ. ಜನಸ್ನೇಹಿಯಾಗಿ ಮಾದರಿಯಾಗ್ಬೇಕಿದ್ದ ಪೊಲೀಸ್ ಅಧಿಕಾರಿ ದಿನನಿತ್ಯ ಸಾರ್ವಜನಿಕರ ಮೇಲೆ ಗೂಂಡಾಗಿರಿ ನಡೆಸ್ತಾನಂತೆ. ಗೂಂಡಾ ಪೊಲೀಸಪ್ಪನ ದೌರ್ಜನ್ಯಕ್ಕೆ ಮುಗ್ಧ ಜನತೆ ಮೈ ಕೈ ಮೂಳೆ ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗುವಂತಾಗಿದೆ. ಸಕ್ಕರೆನಾಡಲ್ಲಿರುವ ಗೂಂಡಾ ಪೊಲೀಸಪ್ಪನ ದೌರ್ಜನ್ಯ ಕುರಿತ ಒಂದು ವರದಿ ಇಲ್ಲಿದೆ ನೋಡಿ…

ಪೊಲೀಸ್ ಇಲಾಖೆ ಇರೋದು ಕಾನೂನು ಸುವ್ಯವಸ್ಥೆ ಕಾಪಾಡಲು ಅನ್ನೋದು ಎಲ್ಲರಿಗೂ ಗೊತ್ತಿರುವಂತದ್ದೇ. ಆದರೆ, ಮಂಡ್ಯದ ಮಳವಳ್ಳಿಯ ವೃತ್ತ ನಿರೀಕ್ಷಕರ ಕಚೇರಿಯಲ್ಲಿರುವ ಸರ್ಕಲ್ ಇನ್ಸ್ ಪೆಕ್ಟರ್ ರಮೇಶ್, ಕಾನೂನು ಸುವ್ಯವಸ್ಥೆ ಕಾಪಾಡುವ ಹೆಸರಲ್ಲಿ ಸಾರ್ವಜನಿಕರ ಮೇಲೆ ಗೂಂಡಾಗಿರಿ ನಡೆಸ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

ಹೀಗೆ, ಸಾರ್ವಜನಿಕರನ್ನ ಮನಬಂದಂತೆ, ಹಿಗ್ಗಾಮುಗ್ಗ ಥಳಿಸುತ್ತಿರವ ಈತನ ಹೆಸರು ರಮೇಶ್.ಮಂಡ್ಯದ ಮಳವಳ್ಳಿ ಸರ್ಕಲ್ ಇನ್ಸ್ ಪೆಕ್ಟರ್. ಈತ ಮಳವಳ್ಳಿಗೆ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಬಂದಾಗಿಂದ ಸಾರ್ವಜನಿಕರನ್ನ ರಕ್ಷಣೆ ಮಾಡಿ, ಜನಸ್ನೇಹಿ ಆಗುವ ಬದಲು ಮಾರಕವಾಗ್ತಿದ್ದಾರಂತೆ. ಇದರ ಪರಿಣಾಮವಾಗಿ ಅಮಾಯಕರಿಬ್ಬರು ತಮ್ಮ ಮೈ-ಕೈ ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರುವಂತಾಗಿದೆ.

ತಮ್ಮ ದೇಹದ ಮೈ-ಕೈ ಮೂಳೆ ಮುರಿದು ಕೊಂಡು ನೋವಿನಲ್ಲಿ ನಿಂತಿರುವ ಇವರು ಶಿವಕುಮಾರ್ ಮತ್ತು ಸಿದ್ದಪ್ಪಾಜಿ ಅಂತಾ. ಇವರಿಬ್ಬರು ಅನಾರೋಗ್ಯದ ನಿಮಿತ್ತ ಚಿಕಿತ್ಸೆ ಪಡೆದುಕೊಳ್ಳುವ ಸಲುವಾಗಿ ತಮಿಳುನಾಡಿಗೆ ತೆರಳಿ ವಾಪಸ್ಸಾಗಿದ್ರು.ತಮಿಳುನಾಡಿನಿಂದ ಬರೋದು ತಡವಾದ್ರಿಂದ ವಿಧಿ ಇಲ್ಲದೆ ತಡರಾತ್ರಿ ಮಳವಳ್ಳಿ ಪಟ್ಟಣದಲ್ಲಿ ನಿಂತಿದ್ರು. ಏಕಾಏಕಿ ಶಿವಕುಮಾರ್, ಸಿದ್ದಪ್ಪಾಜಿ ಬಳಿ ಆಗಮಿಸಿದ ಸಿಪಿಐ ರಮೇಶ್ ಮನಬಂದಂತೆ, ಮನಸ್ಸೋ ಇಚ್ಛೆ ಇಬ್ಬರ ಮೇಲು ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ಮೊದಲೇ ತೋಳಿನ ಮೂಳೆ ಮುರಿದುಕೊಂಡಿದ್ದ ಸಿದ್ದಪ್ಪಾಜಿ ಜೊತೆಗೆ ಶಿವಕುಮಾರ್ ಅವರ ಸೊಂಟದ ಮೂಳೆ ಕೂಡ ಮುರಿದು ಗಾಯಗೊಂಡಿದ್ದಾರೆ. ಸಿಪಿಐ ರಮೇಶ್ ದೌರ್ಜನ್ಯ ಮತ್ತು ಗೂಂಡಾಗಿರಿ ವಿಡಿಯೋ ಸ್ಥಳೀಯ ಸಿಸಿಟಿವಿ ಒಂದರಲ್ಲಿ ರೆಕಾರ್ಡ್ ಆಗಿದೆ. ಸರ್ಕಲ್ ಇನ್ಸ್ ಪೆಕ್ಟರ್ ರಮೇಶ್ ವಿರುದ್ಧ ದೌರ್ಜನ್ಯದ ವಿಡಿಯೋ ದಾಖಲೆ ಸಹಿತ ದಕ್ಷಿಣ ವಲಯ ಐಜಿಪಿಗೆ ಗಾಯಾಳುಗಳು ದೂರು ನೀಡಿದ್ದು, ನಿರಂತರವಾಗಿ ಸಾರ್ವಜನಿಕರ ಮೇಲೆ ದೌರ್ಜನ್ಯ ಎಸಗುತ್ತಿರುವ ಗೂಂಡಾ ಪೊಲೀಸಪ್ಪನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಏನೇ ಆಗ್ಲೀ, ಜನಸ್ನೇಹಿ ಆಗ್ಬೇಕಿದ್ದ ಪೊಲೀಸ್ ಇಲಾಖೆಗೆ ಇಂತಹ ಗೂಂಡಾ ಪೂಲೀಸರು ಮಾರಕವೇ ಸರಿ. ಇನ್ನಾದರೂ, ಸಂಬಂಧಪಟ್ಟ ಹಿರಿಯ ಅಧಿಕಾರಿಗಳು, ಇಂತಹವರ ವಿರುದ್ಧ ಕ್ರಮವಹಿಸಿ ಇಲಾಖೆಯನ್ನ ಜನಸ್ನೇಹಿಯಾಗಿ ಮತ್ತು ಪೊಲೀಸ್ ಎಂದರೆ ಜನರಿಂದ ಭಯ ಮುಕ್ತವಾಗಿಸ್ತಾರ ಅನ್ನೋದನ್ನ ಕಾದುನೋಡ್ಬೇಕಿದೆ.

Categories
Breaking News District State

5 ಸಾವಿರ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಪಿಡಿಓ….!

ಲಂಚ ಕೇಳಿ ಅಮಾಯಕರಿಗೆ ಮೋಸ ಮಾಡುವಂತ ಲಂಚಕೋರರಿಗೆ ಇತ್ತೀಚೆಗೆ ಎಸಿಬಿ ಅಧಿಕಾರಿಗು ಬಿಸಿ ಮುಟ್ಟಿಸುತ್ತಿದ್ದಾರೆ. ಮತ್ತೊಬ್ಬ ಅಧಿಕಾರ ಲಂಚ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ.

ಹೌದು… ಪಿಡಿಓನೊಬ್ಬ ಜಮೀನು ವಿವಾದ ಸಂಬಂಧ ಕಾನೂನು ಹೋರಾಟಕ್ಕೆ ಮಹೇಶ್ ನಿಂದ ಲಂಚ ಕೇಳಿದ್ದ, ಲಂಚ ಪಡೆಯುವ ವೇಳೆ ಎಸಿಬಿ ಪೊಲೀಸರಿಗೆ ಸಿಕ್ಕಿಬಿದ್ದದ್ದಾನೆ. ದಾವಣಗೆರೆ ಮಳಲ್ಕೆರೆ ಗ್ರಾಮ ಪಂಚಾಯ್ತಿ ಪಿಡಿಓ ನಿಂಗಾಚಾರಿ ಎಂಬಾತನೇ ಎಸಿಬಿ ಬಲೆಗೆ ಬಿದ್ದ ವ್ಯಕ್ತಿ.

ಮಹೇಶ್ ಎಂಬಾತನಿಂದ 5 ಸಾವಿರ ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದಿದ್ದಾನೆ. ಈತನನ್ನು ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

 

 

Categories
Breaking News District Political State

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ…

ಬಿಜೆಪಿ-366, ಕಾಂಗ್ರೆಸ್-509, ಜೆಡಿಎಸ್-174, ಪಕ್ಷೇತರ-160

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೆಸ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಗುದ್ದು ನೀಡಿ ಭರ್ಜರಿ ಜಯಭೇರಿ ಬಾರಿಸಿದೆ.

ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ್ದ ಬಿಜೆಪಿ ಸ್ಥಳೀಯ ಮಟ್ಟದಲ್ಲಿ ಮತದಾರರ ನಾಡಿಮಿಡಿತ ತೋರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದರೇ ಜೆಡಿಎಸ್ ಸಾಧನೆ ಅಷ್ಟಕ್ಕಷ್ಟೆ ಎಂಬಂತಿದೆ.

ಬಹುತೇಕ ಎಲ್ಲ ಸ್ಥಾನಗಳಲ್ಲಿಯೂ ಮತೆಣಿಕೆ ಮುಕ್ತಾಯಗೊಂಡಿದ್ದು ಈಗಿರುವ ಮಾಹಿತಿ ಪ್ರಕಾರ ಕಾಂಗ್ರೆಸ್ 509 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಬಿಜೆಪಿ 366, ಜೆಡಿಎಸ್ 174 ಹಾಗೂ ಪಕ್ಷೇತರರು 160 ಸ್ಥಾನಗಳಲ್ಲಿ ಜಯಶಾಲಿಯಾಗಿದ್ದಾರೆ.

ಬೆಂಗಳೂರು ಮಹಾನಗರ ಪಾಲಿಕೆಯ ಎರಡು ವಾರ್ಡ್‌‌ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮೈತ್ರಿಕೂಟ ತಲಾ ಒಂದು ವಾರ್ಡ್‌ ಗೆದ್ದುಕೊಂಡಿದೆ. ಕಾವೇರಿಪುರ ಬಿಜೆಪಿ ಪಾಲಾದರೇ ಸಗಾಯಪುರ ದೋಸ್ತಿಗಳಿಗೊಲಿದಿದೆ.

ನಗರಸಭೆಯ 248, ಪಟ್ಟಣ ಪಂಚಾಯ್ತಿಯ 330, ಪುರಸಭೆಯ 783 ಸೇರಿದಂತೆ ಒಟ್ಟು 1,361 ಸ್ಥಾನಗಳಿಗೆ ಇದೇ 29ರಂದು ಚುನಾವಣೆ ನಡೆದಿತ್ತು.

Categories
Breaking News Nature

ಕಾಫಿನಾಡು ಚಿಕ್ಕಮಗಳೂರಿನ ಅದ್ಬುತವಾದ ಝರಿ ಜಲಪಾತಕ್ಕಿಳಿದು ನೋಡಿ..

ಹೌದು… ಜಿಲ್ಲೆಯ ಮಲೆನಾಡಿನ ಭಾಗದ ನದಿಗಳು, ಜಲಪಾತಗಳು, ಪ್ರೇಕ್ಷಣೀಯ ಸ್ಥಳಗಳು ನೋಡುಗರನ್ನು ಕೈ ಬೀಸಿ ಕರೆಯುತ್ತಿವೆ. ಅದೇ ರೀತಿ ಇಲ್ಲಿನ ಫಾಲ್ಸ್‌ಗಳು ಮಲೆನಾಡಿನ ಸೌಂದರ್ಯವನ್ನು ಮತ್ತಷ್ಟು ಇಮ್ಮುಡಿಗೊಳಿಸುತ್ತಿವೆ.

ಹೌದು… ಜಿಲ್ಲೆಯ ಮಲೆನಾಡಿನ ಭಾಗದ ನದಿಗಳು, ಜಲಪಾತಗಳು, ಪ್ರೇಕ್ಷಣೀಯ ಸ್ಥಳಗಳು ನೋಡುಗರನ್ನು ಕೈ ಬೀಸಿ ಕರೆಯುತ್ತಿವೆ. ಅದೇ ರೀತಿ ಇಲ್ಲಿನ ಫಾಲ್ಸ್‌ಗಳು ಮಲೆನಾಡಿನ ಸೌಂದರ್ಯವನ್ನು ಮತ್ತಷ್ಟು ಇಮ್ಮುಡಿಗೊಳಿಸುತ್ತಿವೆ.

ಚಿಕ್ಕಮಗಳೂರಿನಿಂದ ಕೇವಲ 25 ಕಿ.ಮೀ. ದೂರದಲ್ಲಿ ಪ್ರಕೃತಿಯ ಸೌಂದರ್ಯದ ಮಡಿಲಲ್ಲಿ ಉಗಮವಾಗಿರುವ ಹತ್ತಾರು ಫಾಲ್ಸ್ ಇವೆ. ನಗರದಿಂದ ಕವಿಕಲ್ ಗಂಡಿ ಮಾರ್ಗವಾಗಿ ಹೋದ್ರೆ ಮನಸ್ಸಿಗೆ ಮುದ ನೀಡುವ ಜುಳು ಜುಳು ಹರಿಯುವ ಝರಿ ಪಾಲ್ಸ್ ಎದುರಾಗುತ್ತದೆ.
ಜಲಪಾತದ ವಿಶೇಷವೆಂದ್ರೆ ವರ್ಷಪೂರ್ತಿ ತುಂಬಿ ಹರಿಯುತ್ತದೆ. ಪ್ರತಿನಿತ್ಯ ಹಾಲು ನೊರೆಯಂತೆ ಹರಿಯೋದರಿಂದ ಇದಕ್ಕೆ ಝರಿ ಫಾಲ್ಸ್ ಎಂದೂ ಕರೆಯಲಾಗುತ್ತದೆ. ನೂರಾರು ಅಡಿಗಳ ಮೇಲಿಂದ ಬೀಳುವ ಈ ಹಾಲು ಬಣ್ಣದ ನೀರನ್ನು ನೋಡುವುದೇ ಚೆಂದ.

ಇಲ್ಲಿನ ಈ ಜಲಪಾತ ಸೌಂದರ್ಯವನ್ನು ಮತ್ತು ಇಲ್ಲಿನ ಬಂಡೆಗಳ ಮೇಲೆ ಆಗಿರುವಂತಹ ಪ್ರಾಕೃತಿಕ ಕೆತ್ತನೆಗಳು ಮತ್ತು ಇದರ ಕಲೆಯನ್ನು ನೋಡೋದಕ್ಕಾಗಿಯೇ ಪ್ರತಿನಿತ್ಯ ರಾಜ್ಯದ ವಿವಿಧ ಮೂಲೆಗಳಿಂದ ಹತ್ತಾರು ಪ್ರವಾಸಿಗರು ಭೇಟಿ ನೀಡಿ ಸೌಂದರ್ಯ ಸವಿಯುವುದರ ಜೊತೆಗೆ ಇಲ್ಲಿ ಸ್ನಾನ ಮಾಡಿ ಖುಷಿ ಪಡುತ್ತಾರೆ.

ಇಲ್ಲಿನ ನೀರಿನಲ್ಲಿ ಔಷಧಿ ಗುಣವೂ ಸಹ ಇದೆ. ಶೋಲಾ ಅರಣ್ಯದಲ್ಲಿ ಈ ನೀರು ಹರಿದು ಬರೋದರಿಂದ ಇಲ್ಲಿ ಸ್ನಾನ ಮಾಡಿದರೆ ಚರ್ಮ ಕಾಯಿಲೆ ವಾಸಿ ಆಗುತ್ತದೆ ಎಂಬ ನಂಬಿಕೆಯೂ ಇದೆ. ದಿನದ 24 ಗಂಟೆಯೂ ಸಹ ಇಲ್ಲಿನ ನೀರು ಮಂಜುಗಡ್ಡೆಯಷ್ಟೇ ತಣ್ಣಗೆ ಇರೋದರಿಂದ ನೀರಿನಲ್ಲಿ ಇಳಿದ ತಕ್ಷಣ ಮನಸ್ಸಿಗೆ ಮುದ ನೀಡಿದಂತೆ ಆಗುತ್ತದೆ.
Categories
Breaking News International

ಐರ್ಲೆಂಡ್ : ಸೆಲ್ಫೀ ತೆಗೆಯುವಾಗ ಕಾಲುಜಾರಿ ಬಿದ್ದು ಭಾರತೀಯ ಮೂಲದ ವಿದ್ಯಾರ್ಥಿ ಸಾವು..!

ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬ ಸೆಲ್ಫೀ ಕ್ಲಿಕ್ಕಸಿವ ವೇಳೆ ಸಮುದ್ರ ತೀರದ ಕಡಿದಾದ ಬಂಡೆಯಿಂದ ಕಾಲುಜಾರಿ ಬಿದ್ದು ಮೃತಪಟ್ಟಿರುವ ಘಟನೆ ಐರ್ಲೆಂಡ್ ನಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಮೃತಪಟ್ಟ ಭಾರತೀಯ ಮೂಲದ ವಿದ್ಯಾರ್ಥಿ 26 ವರ್ಷ ವಯಸ್ಸಿನವನಾಗಿದ್ದು, ಡಬ್ಲಿನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ಎಂಬುದಾಗಿ ತಿಳಿದು ಬಂದಿದೆ.

ಐರ್ಲೆಂಡಿನ ಕೌಂಟಿ ಕ್ಲೇರ್ ನಲ್ಲಿರುವ ಪ್ರಸಿದ್ಧ ಪ್ರವಾಸೀ ತಾಣ ‘ಕ್ಲಿಫ್ಸ್ ಆಫ್ ಮೊಹೆರ್’ ಎಂಬಲ್ಲಿ ಈ ಘಟನೆ ನಡೆದಿದ್ದು, ಸೆಲ್ಫೀ ಕ್ಲಿಕಿಸುತ್ತಿದ್ದ ವೇಳೆ ಆಯತಪ್ಪಿ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಭಾರತೀಯ ರಾಯಭಾರಿ ಕಚೇರಿಯ ಪ್ರತಿನಿಧಿಯೊಬ್ಬರು ಶನಿವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಮೃತ ವಿದ್ಯಾರ್ಥಿ ಯಾರೆಂದು ಗುರುತಿಸಿರುವ ಸ್ಥಳೀಯ ಪೋಲೀಸರು ಭಾರತದಲ್ಲಿರುವ ಆತನ ಕುಟುಂಬ ಸದಸ್ಯರನ್ನು ಸಂಪರ್ಕಿಸುವ ಯತ್ನದಲ್ಲಿದ್ದಾರೆ.

Categories
Breaking News Political State

‘ಸಮ್ಮಿಶ್ರ ಸರ್ಕಾರ ಬಿದ್ದರೆ ನಾವು ಸರ್ಕಾರ ರಚನೆ ಮಾಡುತ್ತೇವೆ ಸುಮ್ಮನಿರಲು ಸನ್ಯಾಸಿಗಳಲ್ಲ’ – BSY

ಸಮ್ಮಿಶ್ರ ಸರ್ಕಾರ ಬಿದ್ದರೆ ನಾವು ಸರ್ಕಾರ ರಚನೆ ಮಾಡುತ್ತೇವೆ ಸುಮ್ಮನಿರಲು ನಾವು ಸನ್ಯಾಸಿಗಳಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನುಡಿದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು.  ಹೊಸವರ್ಷದಲ್ಲಿ ರಾಜಕೀಯ ಬದಲಾವಣೆಯಾಗುವ ಸಾಧ್ಯತೆ ಇದೆ. ಸಮ್ಮಿಶ್ರ ಸರ್ಕಾರದಲ್ಲಿ  ಭಿನ್ನ ಭಿನ್ನ ಹೇಳಿಕೆಗಳು ಬರುತ್ತಿವೆ. ಹೀಗಾಗಿ ಸಮ್ಮಿಶ್ರ ಸರ್ಕಾರ ಬಿದ್ದರೇ ನಾವು ಸರ್ಕಾರವನ್ನ ರಚನೆ ಮಾಡುತ್ತೇವೆ. ಸುಮ್ಮನೆ ಕೂರಲು ನಾವೇನು  ಸನ್ಯಾಸಿಗಳಲ್ಲ ಎಂದು ನುಡಿದರು.

ನಾವು ಯಾವುದೇ ಅಪರೇಷನ್ ಕಮಲ ಮಾಡುತ್ತಿಲ್ಲ. ಈ ಬಗ್ಗೆ ರಾಜ್ಯದ ಜನರಿಗೆ ಬಹಿರಂಗಪಡಿಸಬೇಕಿದೆ. ಸಮ್ಮಿಶ್ರ ಸರ್ಕಾರದ ನಾಯಕರು ತಾವಾಗಿಯೇ ಕಚ್ಚಾಡಿಕೊಂಡು  ಸರ್ಕಾರ ಬೀಳಲಿದೆ. ಕಾದು ನೋಡಿ ಎಂದು ಬಿಎಸ್ ವೈ ತಿಳಿಸಿದರು.

 

Categories
Breaking News National

250 ಅಡಿ ಪ್ರಪಾತಕ್ಕೆ ಬಿದ್ದ ಸಾರಿಗೆ ಬಸ್ : 14 ಮಂದಿ ದುರ್ಮರಣ, 18 ಜನರ ಸ್ಥಿತಿ ಗಂಭೀರ…!

ಉತ್ತರಖಂಡ : 250 ಮೀ ಆಳದ ಪ್ರಪಾತಕ್ಕೆ ಬಸ್ ಉರುಳಿ ಬಿದ್ದ ಪರಿಣಾಮ 14 ಜನರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಉತ್ತರಾಖಂಡ ರಾಜ್ಯದ ತೆಹರಿ ಜಿಲ್ಲೆಯಲ್ಲಿ ನಡೆದಿದೆ.

ಉತ್ತರಾಖಂಡದ ಸಾರಿಗೆ ನಿಗಮಕ್ಕೆ ಸೇರಿದ್ದ ಬಸ್ ಇದಾಗಿದ್ದು, ಉತ್ತರ ಕಾಶಿಯಿಂದ ಹರಿದ್ವಾರಕ್ಕೆ ಹೊರಟಿತ್ತು. ದಾರಿ ಮಧ್ಯದಲ್ಲಿ ಜಾರ್ಜ್ ಸಮೀಪದ ಸುಲೀಧರ್ ಪ್ರದೇಶದ ಎತ್ತರ ಪರ್ವತ ಶ್ರೇಣಿಯ ಕಡಿದಾದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಉರುಳಿ ಬಿದ್ದು ಈ ಅವಘಡ ಸಂಭವಿಸಿದೆ.

ಘಟನಾ ಸ್ಥಳದಲ್ಲಿಯೇ 14 ಜನರು ಮೃತಪಟ್ಟಿದ್ದು, 16 ಜನರು ಗಂಭೀರವಾಗಿ ಗಾಯಗೊಂಡಿದ್ದು, ಅದರಲ್ಲಿ 6 ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳನ್ನು ಹೃಷಿಕೇಶದ ಎಐಐಎಂಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು, ಅಧಿಕಾರಿಗಳು ಹಾಗೂ ಎಸ್‌ಡಿಆರ್‌ಎಫ್ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಅಪಘಾತದಲ್ಲಿ ಉತ್ತರಾಖಂಡ ರಾಜ್ಯ ಸರ್ಕಾರವು ಮೃತರ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದೆ.