ವೈದ್ಯರ ಕಾಲುಗಳಿಗೆ ಬಿದ್ದು ಡೆಂಗ್ಯೂ ಪೀಡಿತ ಮಗನನ್ನು ಕಾಪಾಡಲು ಬೇಡಿಕೊಂಡ ಮಹಿಳೆ!

ಡೆಂಗ್ಯೂ ಪೀಡಿತ ಮಗನನ್ನು ಕಾಪಾಡುವಂತೆ ಮಹಿಳೆಯೊಬ್ಬಳು ವೈದ್ಯರ ಕಾಲುಗಳಿಗೆ ಬಿದ್ದು ಪರಿಪರಿಯಾಗಿ ಬೇಡಿಕೊಳ್ಳುವ ವಿಡಿಯೋ ಸಾಮಾಜಿ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಉತ್ತರಪ್ರದೇಶದ ಫಿರೋಜಾಬಾದ್‌ನ ಸರ್ಕಾರಿ ಆಸ್ಪತ್ರೆಯ ಹೊರಗೆ ಭಾನುವಾರ ಸಂಜೆ ಚಿಕಿತ್ಸೆಗಾಗಿ ಒಂದು ಗಂಟೆಗೂ ಹೆಚ್ಚು ಕಾಲ ಕಾದಿದ್ದ ಮಹಿಳೆ 12 ವರ್ಷದ ಡೆಂಗ್ಯೂ ಪೀಡಿತ ಮಗನನ್ನು ಕಾಪಾಡುವಂತೆ ವೈದ್ಯರ ಕಾಲುಗಳಿಗೆ ಬೀಳುವ ದೃಶ್ಯ ವೈರಲ್ ಆಗಿದೆ. ತನ್ನ ಮಗನಿಗೆ ಆಸ್ಪತ್ರೆಯಲ್ಲಿ ಪ್ರವೇಶ ಸಿಗದೆ ಗಂಟೆಗಟ್ಟಲೆ ಕಾದಿದ್ದ ಮಹಿಳೆ ವೈದ್ಯರು ಆಗಮಿಸುತ್ತಿದ್ದಂತೆ ಕಾಲಿಗೆ ಬಿದ್ದು ಬೇಡಿಕೊಂಡಿದ್ದಾಳೆ. ಬಳಿಕ ಆ ಮಗುವಿಗೆ ಆಸ್ಪತ್ರೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

ಫಿರೋಜಾಬಾದ್ ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ ಡೆಂಗ್ಯೂನಿಂದ 40 ಮಕ್ಕಳು ಸೇರಿದಂತೆ ಕನಿಷ್ಠ 53 ಜನರು ಸಾವನ್ನಪ್ಪಿದ್ದಾರೆ. ಈ ಹೆಚ್ಚಿನ ಸಾವುಗಳು ಸಂಭವಿಸಿದ್ದು ಡೆಂಗ್ಯೂ ಹೆಮರಾಜಿಕ್ ಫೀವರ್ ನಿಂದಾಗಿ ಎಂದು ರಾಜ್ಯ ಸರ್ಕಾರ ಹೇಳಿದೆ. ಈ ರೋಗ ಜಿಲ್ಲೆಯಲ್ಲಿ ಹೆಚ್ಚು ಮಕ್ಕಳನ್ನು ಬಾಧಿಸುತ್ತಿದ್ದು ಪೋಷಕರಲ್ಲಿ ಆತಂಕ ಮೂಡಿಸಿದೆ.

ಭಾನುವಾರ ಫಿರೋಜಾಬಾದ್‌ನಲ್ಲಿ ಡೆಂಗ್ಯೂ ಪ್ರಕರಣಗಳಿಗೆ ಚಿಕಿತ್ಸೆ ನೀಡುವ ಮೀಸಲಾದ ಆಸ್ಪತ್ರೆಯಿಂದ ವರದಿ ಮಾಡುವ ಪತ್ರಕರ್ತರು ಚಿತ್ರೀಕರಿಸಿದ ವೀಡಿಯೋಗಳಲ್ಲಿ ಇದು ಸೆರೆಯಾಗಿದೆ. ವೀಡಿಯೋದಲ್ಲಿ ಹುಡುಗನೊಬ್ಬ ಹುಡುಗಿಯ ಮಡಿಲಲ್ಲಿ ನೆಲದ ಮೇಲೆ ಮಲಗಿದ್ದು ತಾಯಿ ಮತ್ತು ಇತರರು ಅವನ ಸುತ್ತ ಕುಳಿತು ಕಾಯುತ್ತಿರುವುದನ್ನು ನೋಡಬಹುದು. ವ್ಯಕ್ತಿಯೊಬ್ಬ ಹುಡುಗನನ್ನು ಎತ್ತಿಕೊಂಡು ಆಸ್ಪತ್ರೆಯೊಳಗೆ ಕರೆದೊಯ್ಯುತ್ತಾನೆ.

ಈ ವೇಳೆ ಹುಡುಗನ ತಾಯಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಗೀತಾ ಅನೀಜಾ ಅವರ ಪಾದದ ಮೇಲೆ ಬೀಳುತ್ತಾರೆ. ತಾಯಿ ತನ್ನ ಸೀರೆಯಿಂದ ಕಣ್ಣೀರು ಒರೆಸಿಕೊಳ್ಳುತ್ತಿದ್ದಂತೆ, ಡಾ ಅನೀಜಾ ಆಕೆಯನ್ನು ಸಮಾಧಾನಪಡಿಸುತ್ತಾರೆ. ಜೊತೆಗೆ ಸಿಬ್ಬಂದಿಗೆ ಮಗುವನ್ನು ಒಳಗೆ ಕರೆದುಕೊಂಡು ಹೋಗುವಂತೆ ಸೂಚಿಸುತ್ತಾರೆ.

ಈ ವೇಳೆ ಡಾ ಅನೀಜಾ ಮಹಿಳೆಗೆ “ಇಲ್ಲಿ 540 ಮಕ್ಕಳು ಪ್ರವೇಶ ಪಡೆದಿದ್ದಾರೆ ಎಲ್ಲರೂ ಪ್ರವೇಶ ಪಡೆಯಲು ಬಯಸುತ್ತಾರೆ. ಕೆಲವರು ಒಂದೇ ಹಾಸಿಗೆಯ ಮೇಲೆ ಇಬ್ಬರು ಸಹ ಇದ್ದಾರೆ. ಜೀವಗಳನ್ನು ಉಳಿಸುವುದು ನಮ್ಮ ಕರ್ತವ್ಯ. ಯಾವುದೇ ರೋಗಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ನಾನು ಇಲ್ಲಿಯೇ ಕುಳಿತಿದ್ದೇನೆ “ಎಂದು ದಾಖಲಾತಿ ವಿಳಂಬದ ಬಗ್ಗೆ ಧೈರ್ಯ ತುಂಬಿದರು.

ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು NDTV ಗೆ ಫಿರೋಜಾಬಾದ್ ಮತ್ತು ಹತ್ತಿರದ ಪ್ರದೇಶಗಳಿಂದ ಸಂಗ್ರಹಿಸಿದ ಅಂದಾಜು 200 ಮಾದರಿಗಳಲ್ಲಿ ಶೇಕಡ 50 ಕ್ಕಿಂತ ಹೆಚ್ಚು ಡೆಂಗ್ಯೂಗೆ ಧನಾತ್ಮಕ ಪರೀಕ್ಷೆ ಬಂದಿವೆ ಎಂದು ಹೇಳಿದೆ.

“ನಾವು 755 ಕಣ್ಗಾವಲು ತಂಡಗಳನ್ನು ಹೊಂದಿದ್ದೇವೆ ಮತ್ತು ಇಂದು (ಭಾನುವಾರ) ನಾವು 64 ವಿಶೇಷ ಶಿಬಿರಗಳನ್ನು ಮಾಡಿದ್ದೇವೆ. ಅಲ್ಲಿ ಇಂದು 4,469 ರೋಗಿಗಳು ಬಂದಿದ್ದಾರೆ. ಅದರಲ್ಲಿ 3044 ರೋಗಿಗಳು ಜ್ವರದಿಂದ ಬಳಲುತ್ತಿದ್ದಾರೆ. 236 ಮಾದರಿಗಳು ಡೆಂಗ್ಯೂಗೆ ಧನಾತ್ಮಕವಾಗಿವೆ ಮತ್ತು ನಮಗೆ 4 ದೃಢಪಟ್ಟ ಲೆಪ್ಟೋ ಸ್ಪಿರೋಸಿಸ್ ಪ್ರಕರಣಗಳಿವೆ. ಸ್ಕ್ರಬ್ ಟೈಫಸ್ ಪ್ರಕರಣಗಳು ಕೂಡ ಸಿಕ್ಕಿವೆ “ಎಂದು ಫಿರೋಜಾಬಾದ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ ದಿನೇಶ್ ಕುಮಾರ್ ಪ್ರೇಮಿ ಹೇಳಿದರು.

ಪಶ್ಚಿಮ ಯುಪಿಯ ಇತರ ಜಿಲ್ಲೆಗಳಾದ ಮಥುರಾ ಮತ್ತು ಆಗ್ರಾದಲ್ಲಿಯೂ ಕೂಡ ಡೆಂಗ್ಯೂ ಹೆಚ್ಚಾಗಿದೆ ಎಂದು ವರದಿ ಹೇಳಿದೆ. ಈ ಪ್ರದೇಶಗಳು ವೈರಲ್ ಜ್ವರ ಮತ್ತು ನಿರ್ಜಲೀಕರಣದಿಂದ ಬಳಲುತ್ತಿರುವ ಮಕ್ಕಳಿಂದ ಆಸ್ಪತ್ರೆಗಳು ತುಂಬಿವೆ.

ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (NCDC) ಮತ್ತು ರಾಷ್ಟ್ರೀಯ ವೆಕ್ಟರ್ ಬೋರ್ನ್ ಡಿಸೀಸ್ ಕಂಟ್ರೋಲ್ ಪ್ರೋಗ್ರಾಂನ ತಜ್ಞರ ತಂಡವನ್ನು ಆರೋಗ್ಯ ಅಧಿಕಾರಿಗಳಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ಫಿರೋಜಾಬಾದ್‌ಗೆ ಕಳುಹಿಸಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೆಲವು ದಿನಗಳ ಹಿಂದೆ ಫಿರೋಜಾಬಾದ್‌ಗೆ ಭೇಟಿ ನೀಡಿದ್ದರು. ಚಿಕಿತ್ಸೆ ಅಗತ್ಯವಿರುವವರಿಗೆ ಸಹಾಯ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights