ಕೊರೊನಾ ವೈರಸ್: ಕರ್ನಾಟಕ ಸರ್ಕಾರ ಕೈಗೊಂಡಿರುವ ಪ್ರಮುಖ 10 ಕ್ರಮಗಳು
ಕೊರೊನಾ ಮಾರಕ ಕೊರೋನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇಂದು ಸಚಿವರು ಹಾಗೂ ಅಧಿಕಾರಿಗಳ ತುರ್ತು ಸಭೆ ನಡೆಸಲಾಗಿದೆ. ಸಭೆಯಲ್ಲಿ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗಿದೆ.
- ರಾಜ್ಯದಲ್ಲಿ ಕೊರೋನಾ ವೈರಸ್ ಹರಡುವಿಕೆಯನ್ನು ನಿರ್ಬಂಧಿಸುವ ಕುರಿತು ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಮುಂದಿನ ಆದೇಶದವರೆಗೆ ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ಮತ್ತು ಇತರ ಎಲ್ಲ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ.
- ರಾಜ್ಯದ ಎಲ್ಲಾ ಗಡಿ ಭಾಗಗಳನ್ನೂ ತಾತ್ಕಾಲಿಕವಾಗಿ ಬಂದ್ ಮಾಡಲು ತೀರ್ಮಾನಿಸಲಾಗಿರುವುದರಿಂದ ರಾಜ್ಯದಿಂದ ಹೊರಹೋಗುವ ಮತ್ತು ಒಳಬರುವ ಎಲ್ಲ ವಾಹನಗಳನ್ನು ಮತ್ತು ಚಾಲಕರನ್ನು ತಪಾಸಣೆಗೆ ಒಳಪಡಿಸಲು ನಿರ್ಧರಿಸಲಾಗಿದೆ.
- ಬೆಂಗಳೂರಿನಲ್ಲಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 1700 ಹಾಸಿಗೆಯಳ್ಳು ವಾರ್ಡ್ಗಳನ್ನು ಕೋವಿಡ್-19 ಚಿಕಿತ್ಸೆಗೆ ಮೀಸಲಿಡಲು ತೀರ್ಮಾನ ಕೈಗೊಳ್ಳಲಾಗಿದೆ.
- ಐಸಿಎಂಆರ್ ಮತ್ತು ಎನ್ಐವಿ ಸಹಕಾರದೊಂದಿಗೆ ಸರ್ಕಾರಿ ಮತ್ತು ಸರ್ಕಾರೇತರ ಆಸ್ಪತ್ರೆಗಳಿಗೂ ಕೋವಿಡ್ ತಪಾಸಣೆಗೆ ಪರವಾನಿಗೆ ಕೊಡಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
- ಲ್ಯಾಬ್ ಟೆಸ್ಟ್ಗಳ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದ್ದು, ಖಾಸಗಿ ಲ್ಯಾಬ್ ಗಳಲ್ಲೂ ಕೊರೋನಾ ಪರೀಕ್ಷೆ ಮಾಡಲು ತೀರ್ಮಾನಿಸಲಾಗಿದೆ.
- ಸ್ಥಳೀಯ ವಿಮಾನ ಪ್ರಯಾಣಿಕರಿಗೂ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ರಾಜ್ಯದಲ್ಲಿ ನಡೆಯಬೇಕಿರುವ ಎಲ್ಲಾ ಚುನಾವಣೆಗಳನ್ನೂ ಮುಂದೂಡಿಕೆ ಮಾಡಲಾಗಿದೆ.
- ಬೆಂಗಳೂರಿನಲ್ಲಿರುವ ಬಾಲಬ್ರೂಯಿ ಅತಿಥಿ ಗೃಹ ಕೊರೊನಾ ವಾರ್ ರೂಂ ಆಗಿ ಪರಿವರ್ತನೆ ಮಾಡಲಾಗುತ್ತದೆ. ಇಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಎಲ್ಲಾ ಕಾರ್ಯಗಳು ನಡೆಯಲಿವೆ.
- ಮುಂದಿನ 15 ದಿನಗಳ ಕಾಲ ನಗರದಿಂದ ಯಾರು ಹಳ್ಳಿಗಳಿಗೆ ಹೋಗದಂತೆ ಮುಖ್ಯಮಂತ್ರಿಗಳ ಮನವಿ ಮಾಡಿದ್ದಾರೆ.
- ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ಎರಡು ತಿಂಗಳ ಪಡಿತರ ಒದಗಿಸಲು ಸೂಚಿಸಲಾಗಿದೆ. ನೀರು, ಆಹಾರ, ಧವಸ-ಧಾನ್ಯ, ಹಾಲು, ತರಕಾರಿ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ.
- ಮಾಲ್ಗಳು, ಥಿಯೇಟರ್ಗಳ ಬಂದ್ ಮತ್ತು ಸಮಾರಂಭಗಳ ರದ್ದು.

