ಕೊರೊನಾ ಸಮರದಲ್ಲಿ ಜಯಿಸಿದ ನ್ಯೂಜಿಲೆಂಡ್: ಕೋವಿಡ್ ಮುಕ್ತ ಇತರ 8 ದೇಶಗಳು ಇಲ್ಲಿವೆ..

ದಿನದಿಂದದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವ ಸುದ್ದಿಯೊಂದು ವರದಿಯಾಗಿದೆ.

ಹೌದು… ಕೊರೊನಾ ತನ್ನ ಕದಂಬಬಾಹುಗಳನ್ನು ಚಾಚಿಕೊಳ್ಳುವಲ್ಲಿ ಎಷ್ಟೇ ಯಶಸ್ವಿಯಾದರೂ ಮಹಾಮಾರಿ ವೈರಸ್ ವಿರುದ್ಧ ಹೋರಾಡಿ ಗೆದ್ದ ದೇಶಗಳು ಜಗತ್ತಿನಾದ್ಯಂತ ಇದ್ದು ಕೊಂಚ ಧೈರ್ಯ ತಂದಿದೆ. ವಿಶ್ವದಾದ್ಯಂತ 402,699 ಸಾವುಗಳು ಸೇರಿದಂತೆ 7 ಮಿಲಿಯನ್ ಗಡಿ ದಾಟಿದೆ ಕೊರೊನಾ ಸೋಂಕಿತರ ಸಂಖ್ಯೆ. ಹೀಗಿದ್ದರೂ ಸೋಂಕಿತರು ಚೇತರಿಕೆ ಕಂಡು ಕೊರೊನಾ ಮುಕ್ತವಾಗಿ ಯಶಸ್ವಿಯಾದ ದೇಶಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್ ಸೇರಿಕೊಂಡಿದೆ.

ನ್ಯೂಜಿಲೆಂಡ್‌ನಲ್ಲಿ ಕೇವಲ 1,500 ಕ್ಕೂ ಹೆಚ್ಚು ಜನರು ಕೊರೊನಾ ವೈರಸ್‌ಗೆ ತುತ್ತಾಗಿ , ಇದರಲ್ಲಿ 22 ಮಂದಿ ಸಾವನ್ನಪ್ಪಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ಹೊಸ ಪ್ರಕರಣ ವರದಿಯಾಗಿ 17 ದಿನಗಳು ಕಳೆದಿವೆ. ಈ ಸಮಯದಲ್ಲಿ ಹೆಚ್ಚುವರಿ 40,000 ಜನರನ್ನು ಪರೀಕ್ಷಿಸಲಾಗಿದೆ. ಸೋಮವಾರದಂದು ಫೆಬ್ರವರಿ ನಂತರ ಮೊದಲ ಬಾರಿಗೆ ಯಾವುದೇ ಸಕ್ರಿಯ ಪ್ರಕರಣಗಳು ಕಂಡುಬಂದಿಲ್ಲ ಎಂದು ಎಪಿ ವರದಿ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ಜಸಿಂಡಾ ಅರ್ಡೆರ್ನ್, ಎಲ್ಲಾ ನಿಯಂತ್ರಣ ಕ್ರಮಗಳನ್ನು ಹಿಂತೆಗೆದುಕೊಳ್ಳಲು ಸರ್ಕಾರ ಸಜ್ಜಾಗಿದ್ದರೂ ಗಡಿ ನಿಯಂತ್ರಣಗಳನ್ನು ತೆಗೆದುಹಾಕಲಾಗುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ವಿವಾಹಗಳು, ಕಾರ್ಯಗಳು ಮತ್ತು ಅಂತ್ಯಕ್ರಿಯೆಗಳಂತಹ ಖಾಸಗಿ ಕಾರ್ಯಕ್ರಮಗಳು, ಸಾರ್ವಜನಿಕ ಕಾರ್ಯಕ್ರಮಗಳನ್ನು ಮಿತಿಗಳಿಲ್ಲದೆ ನಡೆಸಬಹುದು. ದೇಶಾದ್ಯಂತ ಸಾರ್ವಜನಿಕ ಸಾರಿಗೆ ಮತ್ತು ಪ್ರಯಾಣವನ್ನು ಸಂಪೂರ್ಣವಾಗಿ ತೆರೆಯಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೊರೊನಾ ಮುಕ್ತ ಎಂಟು ದೇಶಗಳು ಇಲ್ಲಿವೆ…

ಆರ್ಥಿಕವಾಗಿ ಸಬಲವಾಗಿರುವ ಅಮೆರಿಕ, ಬ್ರಿಟನ್‌, ಭಾರತ ಸೇರಿ ಹಲವು ದೇಶಗಳು ಕೋವಿಡ್ ಕಪಿ ಮುಷ್ಠಿಯಿಂದ ಹೊರಬರಲಾಗದೆ ಪರದಾಡುತ್ತಿವೆ. ಆದರೆ, ತಾನು ಕೋವಿಡ್ ಮುಕ್ತ ದೇಶ ಎಂದು ನ್ಯೂಜಿಲೆಂಡ್‌ ಸೋಮವಾರ ಘೋಷಿಸಿಕೊಂಡಿದೆ. ಈ ನಡುವೆ ನ್ಯೂಜಿಲೆಂಡ್‌ ಹೊರತುಪಡಿಸಿ ಮಾಂಟೆನೆಗ್ರೊ, ಎರಿಟ್ರಿಯಾ, ಪಪುವಾ ನ್ಯೂ ಗಿನಿಯಾ, ಸೀಶೆಲ್ಸ್‌, ಹೋಲಿ ಸೀ, ಸೇಂಟ್‌ ಕಿಟ್ಸ್‌ ಆ್ಯಂಡ್‌ ನೆವೀಸ್‌, ಫಿಜಿ, ಪೂರ್ವ ಟಿಮೋರ್‌ ಎಂಬ ಎಂಟು ಚಿಕ್ಕ ರಾಷ್ಟ್ರಗಳು ಕೋವಿಡ್ ವೈರಾಣುವಿನ ಸವಾಲನ್ನು ಯಶಸ್ವಿಯಾಗಿ ಮೆಟ್ಟಿನಿಂತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights