ಕೊರೊನಾ ಹರಡಲು ವೈಜ್ಞಾನಿಕ ಮನೋಭಾವದ ಕೊರತೆಯೇ ಕಾರಣ

ವೈಜ್ಞಾನಿಕ ಮನೋಭಾವವನ್ನು ಡಿಫೈನ್ ಮಾಡುವುದು ಸ್ವಲ್ಪ ತ್ರಾಸದಾಯಕ ಕೆಲಸವೇ. ತಂತ್ರಜ್ಞಾನದ ಎಲ್ಲಾ ಸವಲತ್ತುಗಳನ್ನು ಪಡೆದು, ಆಧುನಿಕ ಸಲಕರಣೆಗಳನ್ನು ಮಡಿಲಲ್ಲಿ ಇಟ್ಟುಕೊಂಡು ದಿನಬೆಳಗಾದರೆ ಅವೈಜ್ಞಾನಿಕವಾಗಿ ಚಿಂತಿಸುವ – ಅತಾರ್ಕಿಕ ಚಿಂತನಕ್ರಮವನ್ನು ಹರಡುವ – ಮೂಢನಂಬಿಕೆ, ಸುಳ್ಳುಸುದ್ದಿಗಳನ್ನು ಪ್ರಚಾರ ಮಾಡುವ ಬಹುಸಂಖ್ಯಾತರು ಒಂದು ಕಡೆ. ದಿನಪತ್ರಿಕೆ-ವಾರಪತ್ರಿಕೆಗಳಲ್ಲಿ ತಂತ್ರಜ್ಞಾನದ ಬಗ್ಗೆ, ವಿಜ್ಞಾನದಲ್ಲಿ ನಡೆದಿರುವ ಸಂಶೋಧನೆಗಳ ಸಾರಗಳನ್ನು ಜನಪ್ರಿಯವಾಗಿ ಬರೆದು ಪರಿಣಿತರೆನಿಸಿಕೊಂಡು, ಕೊನೆಗೆ ಜನಾಂಗೀಯ ನಿಂದನೆ ಮಾಡುವುದರಲ್ಲಿ, ಒಂದು ಸಮುದಾಯ-ಜಾತಿ ಶ್ರೇಷ್ಠ ಎಂದು ಹೇಳಿಕೊಳ್ಳುವುದರಲ್ಲಿ ನಿರತರಾಗಿರುವ ವ್ಯಕ್ತಿಗಳು ಮತ್ತೊಂದು ಕಡೆ. ರೀಸನಿಂಗ್ (ತಾರ್ಕಿಕತೆ), ಪ್ರಯೋಗ, ನಂತರ ಫಲಿತಾಂಶ ವಿಜ್ಞಾನದ – ವೈಜ್ಞಾನಿಕ ಸಂಶೋಧನೆಯ ತಳಪಾಯ ಎಂದು ಕರೆಯಬಹುದಾದರೆ, ಯಾವುದೇ ಸಮಸ್ಯೆ ಎದುರಾಗಾದ ಅದರ ಬಹುಮೊಗ್ಗುಲುಗಳನ್ನು ಚಿಂತಿಸಿ, ಸತ್ಯದ ಕಡೆಗೆ, ಎಲ್ಲ ಸಮುದಾಯಗಳ ಎಲ್ಲ ಜನರ ಒಳಿತಿನ ಕಡೆಗೆ ಮುಖಮಾಡುವ ಚಿಂತನೆ ಮೈಗೂಡಿಸಿಕೊಳ್ಳುವುದು ವೈಜ್ಞಾನಿಕ ಮನೋಭಾವ ಎಂದು ಕರೆಯಬಹುದೇನೋ!

ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಬಲಪಂಥೀಯ ಸರ್ಕಾರಗಳು ಜನರಿಗೆ ನೀಡುತ್ತಿರುವ ಬಹು ದೊಡ್ಡ ಕೊಡುಗೆ ಧಾರ್ಮಿಕ ರಾಷ್ಟ್ರೀಯತೆ. ಅಲ್ಪಸಂಖ್ಯಾತ ಕೋಮುಗಳ ಬಗ್ಗೆ ಕೃತಕ ಭಯ ಹುಟ್ಟಿಸಿ ಕೆರಳಿಸುವ ಈ ಧಾರ್ಮಿಕ ರಾಷ್ಟ್ರೀಯತೆಗೂ ತಳಪಾಯ ಅವೈಜ್ಞಾನಿಕತೆ. ಆದುದರಿಂದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಲೀ, ಭಾರತದ ಪ್ರಧಾನಿ ನರೇಂದ್ರ ಮೋದಿಯವರಾಗಲೀ ಅಥವಾ ಇಟಲಿಯಲ್ಲಿ ನಾಲ್ಕು ಅವಧಿಗಳ ಕಾಲ ಪ್ರಧಾನಿಯಾಗಿದ್ದ (ಮಾಜಿ) ಸಿಲ್ವಿಯೋ ಬೈರ್ಲುಸ್ಕೊನಿ ಆಗಲಿ ಅವರ ಮೊದಲ ಆದ್ಯತೆ ವೈಜ್ಞಾನಿಕ ಸಮುದಾಯವನ್ನು ಕಡೆಗಣಿಸುವುದು ಮತ್ತು ವೈಜ್ಞಾನಿಕ ಮನೋಭಾವದ ಮೇಲೆ ದಾಳಿ ಮಾಡುವುದಾಗಿರುತ್ತದೆ. ಇಂತಹ ಸಮಯದಲ್ಲಿ ರಾಮದೇವ್ ನಂತರ ಯೋಗಪಟುಗಳು ವೈರಸ್ ಬಗ್ಗೆಯೂ, ರೋಗಗಳ ಬಗ್ಗೆಯೂ, ಕೊನೆಗೆ ರಾಜಕೀಯ ವಿಜ್ಞಾನದ ಬಗ್ಗೆಯೂ ಪರಿಣಿತರಾಗುತ್ತಾರೆ. ಇವರ ಆಣಿಮುತ್ತುಗಳೇ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ನರ್ತಿಸುತ್ತವೆ.

2020ರ ಅತಿ ದೊಡ್ಡ ಜಾಗತಿಕ ಸಮಸ್ಯೆಯಾಗಿ ತಲೆದೋರಿರುವ ಕೊರೊನ ವೈರಾಣು ಸಾಂಕ್ರಾಮಿಕಕ್ಕೆ ವೈಜ್ಞಾನಿಕ ಸಂಶೋಧನೆಯ ಪ್ರತಿಫಲ ಇನ್ನೂ ಸಿಕ್ಕಿಲ್ಲ. ಆದರೆ ಅದಕ್ಕೆ ಪರಿಹಾರ ಹುಡುಕುವ ಹಾದಿಯಲ್ಲಿ ವೈದ್ಯಕೀಯ ವಿಜ್ಞಾನ-ಜೈವಿಕ ರಸಾಯನಶಾಸ್ತ್ರ ಹೆಜ್ಜೆ ಇಟ್ಟಿದೆ. ಮನುಷ್ಯ ಕುಲ ಇಂತಹ ಸ್ಥಿತಿ ತಲುಪಿದ್ದಕ್ಕೆ ಕಾರಣಗಳನ್ನು ಹುಡುಕುತ್ತಿದೆ ಪರಿಸರ ವಿಜ್ಞಾನ. ಆದರೆ ಬಹುತೇಕ ದೇಶಗಳಲ್ಲಿ ಈ ಬಿಕ್ಕಟ್ಟಿನ ಸನ್ನಿವೇಶವನ್ನು ನಿಭಾಯಿಸುವಲ್ಲಿ ಸೋತು ಪರಿಸ್ಥಿತಿ ಬಿಗಡಾಯಿಸುವುದಕ್ಕೆ ಕಾರಣ ಆಗಿರುವುದು ಬಹುಸಂಖ್ಯಾತ ಜನರಲ್ಲಿರುವ ವೈಜ್ಞಾನಿಕ ಮನೋಭಾವದ ಕೊರತೆ.

ಈ ಸಾಂಕ್ರಾಮಿಕ ಚೈನಾದಲ್ಲಿಯೇ ಮೊದಲು ದಟ್ಟವಾಗಿ ಹರಡಿದ್ದು. ಅದು ಬೇರೆ ದೇಶಕ್ಕೆ ಹರಡುವ ಮುಂಚೆಯೇ, ವೈರಾಣು ಹರಡುವ ಸ್ವಭಾವ, ಅದು ಮನುಷ್ಯನ ಕೋಶಗಳ-ಪ್ರೋಟೀನ್‌ಗಳ ಮೇಲೆ ನಡೆಸುವ ದಾಳಿ, ಇದಕ್ಕೆ ಅದು ತೆಗೆದುಕೊಳ್ಳುವ ಸಮಯ ಇತ್ಯಾದಿ ವಿಷಯಗಳ ಬಗ್ಗೆ ತಿಳಿದಿತ್ತು. ಇದನ್ನು ಜಗತ್ತಿನಾದ್ಯಂತ ಸಾಮಾನ್ಯ ಜನರಿಗೆ ತಿಳಿಸುವ ಸಮರ್ಪಕ ಕೆಲಸ ಆಗಬೇಕಿತ್ತು, ಆದರೆ ಇಲ್ಲಿ ತಾಂಡವವಾಡಿದ್ದು ತಪ್ಪು ಮಾಹಿತಿಗಳು, ಮೂಢ ನಂಬಿಕೆಗಳ ಅನಾವರಣ, ಸಮಸ್ಯೆಯ ನಿವಾರಣೆಯ ಬಗ್ಗೆ ಹುಸಿ ನಂಬಿಕೆಯ ಪ್ರಯತ್ನಗಳು.

ಜಗತ್ತಿನ ಹಲವು ವೈಜ್ಞಾನಿಕ ಅನ್ವೇಷಣೆಗಳ ತಿಳುವಳಿಕೆ ನಮ್ಮ ಪುರಾತನ ಗ್ರಂಥಗಳಲ್ಲಿಯೇ ಇತ್ತು ಎಂದು ಮಂಡಿಸಲು ಸದಾ ಸಿದ್ಧರಾಗುವ ಧಾರ್ಮಿಕ ರಾಷ್ಟ್ರೀಯವಾದಿಗಳು ಕೊರೊನ ಸಮಯದಲ್ಲಿಯೂ ವಿಶ್ವದಾದ್ಯಂತ ಬಿಕ್ಕಟ್ಟಿಗೆ ಹೆಗಲು ಕೊಟ್ಟಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಪರಿಪರಿಯಾಗಿ ಬಿಡಿಸಿ ಹೇಳಿದ್ದರೂ, ದೇವಸ್ಥಾನಗಳಲ್ಲಿ, ಮಸೀದಿಗಳಲ್ಲಿ, ಚರ್ಚ್ ಮತ್ತು ಇತರ ಪ್ರಾರ್ಥನಾ ಮಂದಿರಗಳಲ್ಲಿ ಪ್ರಾರ್ಥನೆಯ ನೆಪದಲ್ಲಿ, ಹಬ್ಬಗಳ ನೆಪದಲ್ಲಿ ಜನ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಯಮವನ್ನು ಲೀಲಾಜಾಲವಾಗಿ ಮುರಿದಿದ್ದಾರೆ. ಇದು ಭಾರತದಲ್ಲಿಯೂ ನಡೆದಿದೆ, ಇಟಲಿಯಲ್ಲಿಯೂ ಪರಿಣಮಿಸಿದೆ. ಈ ದೇಶದ ಪ್ರಧಾನಮಂತ್ರಿ 21 ದಿನಗಳ ಲಾಕ್ ಡೌನ್ ಘೋಷಿಸಿದ ನಂತರವೂ, ಉತ್ತರಪ್ರದೇಶದ ಮುಖ್ಯಮಂತ್ರಿ ಗುಂಪು ಕಟ್ಟಿಕೊಂಡು ಅಯೋಧ್ಯೆಯಲ್ಲಿ ಪೂಜೆ ಪುನಸ್ಕಾರ ಮಾಡಿದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು.

ನಂಬಿಕೆ ಮತ್ತು ವಿಜ್ಞಾನದ ಪ್ರಶ್ನೆ ಮೂಡಿ ಬಂದಾಗ, ವಿಜ್ಞಾನವಾದಿಗಳ ಮತ್ತು ವೈಜ್ಞಾನಿಕ ಸಮುದಾಯದ ಬಗ್ಗೆ ಅಸಹನೆ ಪ್ರಪಂಚದಾದ್ಯಂತ ಎದ್ದು ಕಾಣುತ್ತಿದೆ. ನಂಬಿಕೆ, ಬದಲಿ ವಿಜ್ಞಾನಗಳ ಪ್ರಶ್ನೆಗೆ ತಾತ್ವಿಕ ನೆಲೆಯಲ್ಲಿ ಆಧುನಿಕೋತ್ತರವಾದದ (Postmodernism) ಚಿಂತಕರು ಚರ್ಚಿಸಿದ ಸಂಗತಿಗಳು ಕೆಲವೊಂದು ಹೊಸ ಹೊಳಹುಗಳನ್ನು ನೀಡಿತ್ತು. ಆಧುನಿಕತೆ ಬದಲಿ ವಿಜ್ಞಾನವನ್ನು ಅವಗಣನೆ ಮಾಡುತ್ತಿದೆ, ಬದಲಿ ವೈದ್ಯಕೀಯ ವ್ಯವಸ್ಥೆಯನ್ನು (ಆಯುರ್ವೇದ, ಯುನಾನಿ, ಹೋಮಿಯೋಪತಿಯಲ್ಲಿ ಇರಬಹುದಾದ ಒಳ್ಳೆಯ ಅಂಶಗಳು) ಈ ಆಧುನಿಕ ವೈದ್ಯವಿಜ್ಞಾನ ಕೊಲ್ಲುತ್ತಿದೆ, ಕೆಲವು ವಿಜ್ಞಾನದ ಮೂಲಭೂತವಾದಿಗಳು, ಶುದ್ಧ ವಿಜ್ಞಾನದ ನೆಪದಲ್ಲಿ ಮೈಮರೆತು ಅಣುಶಕ್ತಿ ಹೇಗೆ ಮನುಕುಲಕ್ಕೆ ಮಾರಕ ಎಂಬ ಅಂಶವನ್ನೇ ಮರೆಯುತ್ತಿದ್ದಾರೆ, ಉಪಸಂಸ್ಕೃತಿಗಳಲ್ಲಿ ಅಥವಾ ಭಾರತೀಯ ಸನ್ನಿವೇಶದಲ್ಲಿ ಅವೈದಿಕ ಚಿಂತನೆಗಳಲ್ಲಿ ಇರಬಹುದಾದ ಮುಗ್ಧ ಮತ್ತು ಮಾರಕವಲ್ಲದ ಚಿಂತನೆಗಳು ಅಪಮಾನಕ್ಕೆ ಒಳಗಾಗಬಾರದು ಎಂಬ ಚರ್ಚೆಗಳು ಬಹಳ ಮಹತ್ವದ್ದಾಗಿದ್ದವು. ಇಂತಹ ಚಿಂತನೆಗಳನ್ನು ಆಶೀಶ್ ನಂದಿ, ಶಿವ್ ವಿಶ್ವನಾಥ್ ನಂತಹ ಚಿಂತಕರು ಭಾರತಕ್ಕೆ ಹೊತ್ತು ತಂದರು. ಆದರೆ ಈ ಚಿಂತನೆ ಇವುಗಳ ನಂತರದ ಪ್ರತಿಪಾದಕರಲ್ಲಿ ಉಗ್ರ ರೂಪ ಪಡೆಯಿತು ಮತ್ತು ಕೆಲವೊಮ್ಮೆ ಆ ಚರ್ಚೆಗಳು ಭ್ರಷ್ಟಗೊಳ್ಳುತ್ತಾ ಹೋದವು. ಇಂತಹುದೇ ಚರ್ಚೆಗಳ ಭಾಗವಾಗಿ, ಇಲ್ಲಿಯ ಶ್ರೇಣೀಕೃತ ವ್ಯವಸ್ಥೆಯಲ್ಲಿ ಪ್ರಬಲ ಜಾತಿಗಳು ತಮ್ಮ ಶ್ರೇಯೋಭಿವೃದ್ಧಿಗಾಗಿ ಮಾತ್ರ ಸೃಷ್ಟಿಸಿಕೊಂಡಿದ್ದ ತಾರತಮ್ಯದ ನಂಬಿಕೆಗಳನ್ನು ಮತ್ತು ಮೂಢನಂಬಿಕೆಗಳನ್ನೂ ಸಮರ್ಥಿಸಿಕೊಳ್ಳುವ ಕೆಲಸಗಳು ಆದವು. ಇದರಲ್ಲಿ ತಕ್ಷಣಕ್ಕೆ ನೆನಪಿಕೊಳ್ಳುವುದಾದರೆ, ಕುಕ್ಕೆ ಸುಬ್ರಮಣ್ಯದಲ್ಲಿ ನಡೆಯುವ ಅಸಹ್ಯಕರವಾದ ಆಚರಣೆ ಮಡೆಸ್ನಾನವನ್ನು ಸಮರ್ಥಿಸಿಕೊಂಡು ನಡೆದ ವಾದಗಳನ್ನು ನೆನಪಿಸಿಕೊಳ್ಳಬಹುದು.

ಮೂಢನಂಬಿಕೆಗಳ ಗೂಡಾಗಿದ್ದ ಭಾರತ ದೇಶಕ್ಕೆ, ಭ್ರಷ್ಟಗೊಂಡ ಆಧುನಿಕೋತ್ತರದ ಚರ್ಚೆಗಳು ಸೇರಿಕೊಂಡು ಧಾರ್ಮಿಕ ಮೂಲಭೂತವಾದ ಬೆಟ್ಟದಂತೆ ಬೆಳೆಯಲು ಅವಕಾಶ ಮಾಡಿಕೊಟ್ಟಿತು. ಅಣುಶಕ್ತಿ ಭಗವದ್ಗೀತೆಯ ಶ್ಲೋಕಗಳಲ್ಲೇ ಇದೆ ಎಂದು ವಾದ ಮಾಡುವವರು – ಪುರಾಣಗಳು ಮತ್ತು ವೈದಿಕ ಗ್ರಂಥಗಳಲ್ಲಿ ವಿಶ್ವದಲ್ಲಿ ಈಗ ಲಭ್ಯವಿರುವ ಎಲ್ಲಾ ವಿಜ್ಞಾನವೂ ಅಡಗಿತ್ತು, ಆದುದರಿಂದ ಅವುಗಳನ್ನು ಪತ್ತೆಹಚ್ಚಲು ಸಂಸ್ಥೆಗಳನ್ನು ಹುಟ್ಟಿಹಾಕಿ ಅದಕ್ಕಾಗಿ ಬೇಕಾದ ಸಂಪನ್ಮೂಲಗಳನ್ನು ವ್ಯಯಿಸುವ ಸರ್ಕಾರಗಳು – ಸಮಾಜವನ್ನು, ವಿಜ್ಞಾನದ ಮತ್ತು ವಿಜ್ಞಾನದ ಮಾದರಿಗಳ ಮೂಲಕ ತಿಳಿಯುವ-ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ ರ್ಯಾಷನಲಿಸ್ಟ್ ಗಳನ್ನು ಅಪಮಾನಿಸುವ, ಕಡೆಗಣಿಸುವ ಮನೋಭಾವ ಹೀಗೆ ಅಪಸವ್ಯಗಳು ಹೆಚ್ಚಾಗುತ್ತ ಬಂದವು. ಇಂಗ್ಲೆಂಡಿನ ಪ್ರಖ್ಯಾತ ರ್‍ಯಾಷನಲಿಸ್ಟ್ (ವಿಚಾರವಾದಿ) – ಗಣಿತಜ್ಞ – ಬರಹಗಾರ ಬರ್ಟ್ರಾಂಡ್ ರಸೆಲ್ ನಂತಹ, ಭಾರತದಲ್ಲಿ ದೇವಿಪ್ರಸಾದ್ ಚಟ್ಟೋಪಾಧ್ಯಾಯರಂತಹ ಚಿಂತಕರನ್ನು ಓದದಂತೆ, ಅವರ ವಿಚಾರಗಳು ಹೆಚ್ಚು ಹರಡದಂತೆ ಒಂದು ವರ್ಗ ಪಿತೂರಿ ಮಾಡಿತ್ತು. ಇಲ್ಲಿ ಪ್ರಮುಖ ಅಂಶ ಎಂದರೆ ತನ್ನ ಧರ್ಮ ಕ್ರಿಶ್ಚಿಯಾನಿಟಿ ತಿರಸ್ಕರಿಸಿದ್ದ ರಸೆಲ್ ನಂತಹ ಪ್ರಖರ ವಿಚಾರವಾದಿ ಅತಿ ದೊಡ್ಡ ಮಾನವತಾವಾದಿಯಾಗಿದ್ದರು, ಅಣು ಶಕ್ತಿಯ ವಿರೋಧಿಯಾಗಿದ್ದರು. ಯುದ್ಧಗಳ ವಿರೋಧಿಯಾಗಿದ್ದರು. 1962 ರಲ್ಲಿ ನಡೆದ ಭಾರತ ಮತ್ತು ಚೈನಾದ ನಡುವಿನ ಯುದ್ಧದಲ್ಲಿ ಅಂದಿನ ಚೈನಾಧ್ಯಕ್ಷ ಚೌ ಎನ್-ಲಾಯ್ ಮತ್ತು ಭಾರತದ ಪ್ರಧಾನಿ ಜವಹಾರ್ ಲಾಲ್ ನೆಹರೂ ನಡುವೆ ಸ್ನೇಹ ಸೇತುವೆಯಾಗಿ ಸ್ವತಃ ತಾವೆ ಶ್ರಮಿಸಿದ್ದರು.

ಭಾರತದ ವಿಚಾರವಾದಿಗಳ ಮೇಲೆ ಕೂಡ ಧಾರ್ಮಿಕ ಮೂಲಭೂತವಾದಿಗಳು ಮೊದಲಿಂದಲೂ ದಾಳಿ ಮಾಡುತ್ತಾ ಬಂದಿದ್ದಾರೆ. ಕನ್ನಡದ ಮಟ್ಟಿಗೆ ಎಚ್ ನರಸಿಂಹಯ್ಯನವರದ್ದು ಮೂಢ ನಂಬಿಕೆಗಳ ವಿರೋಧಿ ಚಳವಳಿಕಾರನಾಗಿ, ಶೈಕ್ಷಣಿಕ ತಜ್ಞರಾಗಿ ಪ್ರಮುಖ ವ್ಯಕ್ತಿತ್ವ. ಅವರು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದಾಗ, ಸದಾ ಟೀಕಿಸುತ್ತಿದ್ದ ಸಾಯಿಬಾಬಾನ ಭಕ್ತರು ಅವರಿಗೆ ಕೊಟ್ಟ ಕಿರುಕುಳ ಗೊತ್ತಿರುವುದೇ. ನಮ್ಮ ನೆರೆಯ ರಾಜ್ಯದ ವಿಚಾರವಾದಿ, ಬ್ರಾಹ್ಮಣ್ಯದ ವಿರುದ್ಧ ಹೋರಾಟ ಕಟ್ಟಿದ್ದ ಪೆರಿಯಾರ್ ಅವರನ್ನು- ಅವರ ವ್ಯಕ್ತಿತವನ್ನು ಒಂದು ವರ್ಗ ಇಂದಿಗೂ ವಿನಾಶ ಮಾಡಲು ಪ್ರಯತ್ನಿಸುತ್ತಲೇ ಇದೆ. ಈ ವಿಚಾರವಾದದ ದ್ವೇಷ ಕೊನೆಗೆ ಎಷ್ಟು ಎತ್ತರಕ್ಕೆ ಬೆಳೆಯಿತೆಂದರೆ, ಮಹಾರಾಷ್ಟ್ರದ ವೈದ್ಯ, ಸಾಮಾಜಿಕ ಕಾರ್ಯಕರ್ತ ಮತ್ತು ವಿಚಾರವಾದಿ ನರೇಂದ್ರ ಧಬೋಲ್ಕರ್ ಅವರನ್ನು ಹಿಂದೂ ಮೂಲಭೂತವಾದಿಗಳು ಗುಂಡಿಕ್ಕಿ ಕೊಂದರು. ಈ ಧಾರ್ಮಿಕ ರಾಷ್ಟ್ರೀಯತೆಗೆ ವಿಚಾರವಾದಿಗಳಾದ ಲೇಖಕ ಗೋವಿಂದ ಪನ್ಸಾರೆ, ಶಾಸನ ತಜ್ಞ –ಲೇಖಕ ಎಂ ಎಂ ಕಲ್ಬುರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಕೂಡ ಕೊಲೆಯಾದರು.

ಸುಳ್ಳು ಸುದ್ದಿ ಮತ್ತು ವಿಜ್ಞಾನ

ಭಾರತದಲ್ಲಿ ಸುಳ್ಳುಸುದ್ದಿಗಳು ಹರಡುತ್ತಿರುವ ಮಾದರಿಯನ್ನು ನೀವು ಗಮಸಿರಬಹುದು. “ಸ್ಪೇನ್ ವೈದ್ಯರು ಕೊರೊನ ನಿಯಂತ್ರಣಕ್ಕೆ ಶಿವನ ಮೊರೆ ಹೋಗಿ ಸ್ತ್ರೋತ್ರಗಳನ್ನು ಪಠಿಸಿದರು”, “ಬೇರೆಲ್ಲಾ ದೇಶಗಳು ಕೊರೊನ ನಿಯಂತ್ರಣಕ್ಕೆ ಹಿಂದೂ ಧರ್ಮದತ್ತ ಮುಖ ಮಾಡಿದ್ದಾರೆ” ಎಂಬಂತಹ ಸುಳ್ಳು ಸುದ್ದಿಗಳನ್ನು ಜನ ವ್ಯಾಪಕವಾಗಿ ಹಂಚುತ್ತಿದ್ದಾರೆ. ಇದು ರಾಜಕೀಯ ದುರುದ್ದೇಶದಿಂದ ಸೃಷ್ಟಿಯಾದ ಸುಳ್ಳುಗಳೇ ಆದರೂ, ಅಂತಹ ಸುದ್ದಿಗಳನ್ನು ಸ್ರವಿಸುವ ಮತ್ತು ಅವುಗಳನ್ನು ವ್ಯಾಪಕವಾಗಿ ಹರಡುತ್ತಿರುವ ಕಾರಣ ಜನಸಾಮಾನ್ಯರಲ್ಲಿ ಕೊರತೆಯಾಗಿರುವ ವೈಜ್ಞಾನಿಕ ಮನೋಭಾವವೆ ಕಾರಣ ಆಗಿದೆ.

ಭಾರತಕ್ಕೆ ಮಾತ್ರವೇ ಅಲ್ಲದೆ ಎಲ್ಲ ದೇಶಗಳಲ್ಲಿ, ಬಹುತೇಕ ಎಲ್ಲ ಜನಪ್ರಿಯ ಮಾಧ್ಯಮಗಳಲ್ಲಿ ತಮ್ಮ ಓದುಗರ ಸಂಖ್ಯೆಯನ್ನೊ, ವೀಕ್ಷಕರ ಸಂಖ್ಯೆಯನ್ನೋ ಹೆಚ್ಚಿಸಿಕೊಳ್ಳಲು ಪಿತೂರಿ ಸಿದ್ಧಾಂತಗಳನ್ನು ಹರಿದುಬಿಡಲಾಗುತ್ತದೆ. ಇಂತಹ ಪಿತೂರಿ ಸಿದ್ಧಾಂತಗಳು ದೇಶದೇಶಗಳ ನಡುವೆ ದ್ವೇಷದ ಭಾವನೆ ಸೃಷ್ಟಿಸಲು ಕಾರಣವಾಗಿದೆ. ಚೈನಾದಲ್ಲಿ ಜೈವಿಕ ಯುದ್ಧ ಶಸ್ತ್ರಾಸ್ತ್ರವಾಗಿ ರೂಪಿಸಲಾದ ವೈರಾಣು ಕೊರೊನ ಎಂಬುದು ಇಂತಹ ಪಿತೂರಿ ಸಿದ್ಧಾಂತಗಳಲ್ಲಿ ಜನಪ್ರಿಯವಾದದ್ದು. ಇಂತಹ ಪಿತೂರಿಗಳ ಊಹೆಯ ಹಿಂದೆ ವಿಜ್ಞಾನ ಆಗಲಿ ವಿಚಾರ ಆಗಲಿ ಕೆಲಸ ಮಾಡುತ್ತಿರುವುದಿಲ್ಲ. ಇತ್ತೀಚೆಗಷ್ಟೇ ‘ಸೈನ್ಸ್ ನ್ಯೂಸ್’ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಬರಹದಲ್ಲಿ ಇದು ಮಾನವ ನಿರ್ಮಿತ ವೈರಾಣು ಅಲ್ಲ, ಬಾವುಲಿಯಲ್ಲಿ ಇದ್ದ ಕೋವಿದ್ ಚಿಪ್ಪು ಹಂದಿಯಲ್ಲಿ ವಿಕಸನವಾಗಿ ಹೊಸದಾಗಿ ರೂಪುಗೊಂಡದ್ದಾಗಿತ್ತು ಎಂದು ವಿಶ್ಲೇಷಣೆ ಮಾಡಿದ್ದರು. ಇದರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆದು ಇನ್ನಷ್ಟು ಮಾಹಿತಿ ಹೊರಹೊಮ್ಮಬಹುದು. ಆದರೆ ಅದಕ್ಕೆ ರೀಸನಿಂಗ್ ಕೆಲಸ ಮಾಡಬೇಕು, ವಿಚಾರಹೀನ ಜನಪ್ರಿಯತೆ ಮುಖ್ಯವಾಗಬಾರದು. ಇಂತಹ ವೈಜ್ಞಾನಿಕ ಸಂಶೋಧನೆಯ ಲೇಖನಗಳು ಭಾರತೀಯ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಅದರಲ್ಲೂ ಟಿವಿ ವಾಹಿನಿಗಳಲ್ಲಿ ಕಾಣಿಸಿಕೊಳ್ಳುವುದು, ಚರ್ಚೆ ಆಗುವುದು ಇಲ್ಲವೇ ಇಲ್ಲ ಅನ್ನುವಷ್ಟು ವಿರಳ.

ಇನ್ನು ವಿಜ್ಞಾನದ ಬಗ್ಗೆ ತಿರಸ್ಕಾರದ ಭಾವನೆ ಹೊಂದಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಎಷ್ಟೋ ವೈದ್ಯಕೀಯ ವಿಜ್ಞಾನಿಗಳ ಎಚ್ಚರಿಕೆಯ ಹೊರತಾಗಿಯೂ ಈ ವೈರಸ್ ನಮ್ಮ ದೇಶಕ್ಕೆ ಹರಡುವುದಿಲ್ಲ ಎಂದು ಯಾವುದೇ ಮುನ್ನೆಚ್ಚರಿಕೆ ವಹಿಸದೆ ಕೂತಿದ್ದರು. ನಂತರ ಸಾಂಕ್ರಾಮಿಕ ಅಮೆರಿಕಾಗೆ ಬಂದಪ್ಪಳಿಸಿದ ಮೇಲೆ, ಮಲೇರಿಯಾ ರೋಗದ ಚಿಕಿತ್ಸೆಗೆ ಬಳಸುವ ಕ್ಲೋರೋಕ್ವ್ವಿನ್ ಎಂಬ ಔಷದಿಯನ್ನು ಬಳಸಿ ಎಂದು ಬಹಳ ಬೇಜವಾಬ್ದಾರಿತನದಿಂದ ಟ್ರಂಪ್ ಟ್ವೀಟ್ ಮಾಡಿದರು. ಈ ಔಷಧಿಯ ಬಗ್ಗೆ ಇನ್ನೂ ಯಾವುದೇ ನಿಖರ ಪ್ರಯೋಗಗಳು ನಡೆದಿರಲಿಲ್ಲ. ಇದರಿಂದ ಹಲವು ಕಡೆಗೆ ಸಮಸ್ಯೆ ಉಲ್ಬಣವಾಗಿದ್ದೂ ದಾಖಲಾಯಿತು.

ಭಾರತದಲ್ಲಿ ಕೊರೊನ ತಡೆಯಲು ಘೋಷಿಸಿದ ಲಾಕ್ ಡೌನ್ ನಿಂದ ತಲೆದೋರಿದ ವಲಸೆ ಕಾರ್ಮಿಕರ ಸಮಸ್ಯೆ, ಅವರ ಮೇಲೆ ನಡೆದ ಪೊಲೀಸರ ದೌರ್ಜನ್ಯಗಳು, ಅವರ ಮೇಲೆ ಅಮಾನವೀಯವಾಗಿ ಸಿಂಪಡಿಸಿದ ಸ್ಯಾನಿಟೈಸರ್ ಎಂದು ಹೇಳಲಾದ ರಾಸಾಯನಿಕ ಮಿಶ್ರಣಗಳ ದ್ರಾವಣ ಇವೆಲ್ಲವೂ ಅವೈಜ್ಞಾನಿಕ ಚಿಂತನೆಯ ಮುಂದುವರಿಕೆಯೇ! ನಮ್ಮ ದೇಶದ ಸಾಮಾಜಿಕ ಲಕ್ಷಣಗಳ, ರಾಜಕೀಯ ಲಕ್ಷಣಗಳ ಅರಿವಿಲ್ಲದೆ ಆಳುತ್ತಿರುವ ಸರ್ಕಾರ ಅಂತಹ ಲಕ್ಷಣಗಳನ್ನು, ಸಾಮಾಜಿಕವಾಗಿ ಕಡೆಗಣಿಸಲಾಗಿರುವ ಜನರ ಪರಿಸ್ಥಿತಿಯನ್ನು, ಲಾಕ್ ಡೌನ್ ನಿಂದಾಗಿ ಅವರು ತಲುಪಲಿರುವ ಅವಸ್ಥೆಯನ್ನು, ಇವುಗಳ ಅಂಕಿ ಅಂಶಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡದೆ ತೆಗೆದುಕೊಂಡ ಕ್ರಮಗಳ ಭಾಗವಾಗಿ ಇವತ್ತು ಕೊರೊನ ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸಿದೆ.

ಪ್ರಭುತ್ವಗಳು, ವಿಜ್ಞಾನ ಮತ್ತು ತಂತ್ರಜ್ಞಾನ

ಸರ್ವಾಧಿಕಾರಿ ಪ್ರಭುತ್ವಗಳು ಮತ್ತು ಸರ್ವಾಧಿಕಾರಿ ಧೋರಣೆಯುಳ್ಳ ಸರ್ಕಾರಗಳು ಇರುವ ಪ್ರಜಾಪ್ರಭುತ್ವಗಳು ತಾವು ವಿಜ್ಞಾನದ ಪೋಷಕರು, ಪ್ರತಿಪಾದಕರು ಎಂಬ ಪೋಷಾಕು ಧರಿಸಿ ಪ್ರಚಾರದಲ್ಲಿ ತೊಡಗಿರುತ್ತವೆ. ಆದರೆ ಅವರು ಸಾಮಾನ್ಯವಾಗಿ ಪೋಷಿಸುವುದು ತಂತ್ರಜ್ಞಾನದ ಸಂಪರ್ಕ ಮುಖವನ್ನು ಮಾತ್ರ. ಆ ತಂತ್ರಜ್ಞಾನವನ್ನು ಕೂಡ ಅವರ ಸಿದ್ದಾಂತದ ಪ್ರಚಾರಕ್ಕಾಗಿ ಮತ್ತೆ ಬಳಸಿಕೊಳ್ಳುತ್ತಾರೆ. ಸುಳ್ಳು ಸುದ್ದಿಗಳನ್ನು ಹರಡಿ ತಮ್ಮ ಪ್ರೊಪೋಗಾಂಡಕ್ಕೆ ನೆರವಾಗುವ ಈ ತಂತ್ರಜ್ಞಾನ ಅವರಿಗೆ ಮಾಯಾಮಂತ್ರದ, ಮೂಢ ನಂಬಿಕೆಗಳ ಮುಂದುವರಿಕೆಯಾಗಿಯೇ ಕಂಡಿದೆ. ನಾಜಿ ಜರ್ಮನಿಯಲ್ಲಿ ಅಂದಿನ ಸರ್ವಾಧಿಕಾರಿ ಪ್ರಭುತ್ವ ವಿಜ್ಞಾನದ ಆವಿಷ್ಕಾರ – ಸಂಶೋಧನೆಗಳಿಗೆ ಹೆಚ್ಚಿನ ಅವಕಾಶ ನೀಡಿತ್ತಾದರೂ ಅದಕ್ಕೆ ಜರ್ಮನ್ ರಾಷ್ಟ್ರೀಯತೆ ತಳುಕು ಹಾಕಿಕೊಂಡು ವಿನಾಶಕಾರಿ ದಾರಿ ಹಿಡಿದು ಯುದ್ಧ ಶಸ್ತ್ರಾಸ್ತ್ರಗಳ ಅಭಿವೃದ್ಧಿಗಾಗಿ, ಜನಾಂಗೀಯ ದ್ವೇಷವನ್ನು ಮಾನ್ಯ ಮಾಡುವುದಕ್ಕಾಗಿ ಉಪಯೋಗವಾಗಿ ಹಳ್ಳ ಹಿಡಿದಿತ್ತು.

ಇನ್ನು ಭಾರತದಲ್ಲಿ ಮೊಬೈಲ್ ಫೋನು, ಕಂಪ್ಯೂಟರ್ – ಸಾಮಾಜಿಕ ಜಾಲತಾಣಗಳು ಇಂತಹ ತಂತ್ರಜ್ಞಾನ ಸಂಪರ್ಕ ಮಾಧ್ಯಮವನ್ನೇ ವಿಜ್ಞಾನ ಎಂಬ ತಪ್ಪು ತಿಳುವಳಿಕೆಯಿಂದ ಕೂಡಿರುವ ಮನೋಭಾವನೆಗೆ, ಪರಂಪರಾಗತವಾಗಿ ಇಲ್ಲಿ ನಿರ್ಮಿತವಾಗಿರುವ ಜಾತಿ-ಧಾರ್ಮಿಕ ಶ್ರೇಣಿಯ ಕಲುಷಿತ ಮನೋಭಾವನೆ, ಧಾರ್ಮಿಕ ಅಂಧಶ್ರದ್ದೆ, ಮತ್ತು ಮೂಢನಂಭಿಕೆಗಳ ಭಾವನೆಗೆ, ರಾಷ್ಟ್ರೀಯತೆ ಎಂಬ ಕಲ್ಪಿತ ಸಾಮುದಾಯಿಕ ಭಾವನೆ, ಕೊರೊನಾ ವೈರಾಣು ಮನುಷ್ಯ ಕೋಶದಲ್ಲಿರುವ ಪ್ರೋಟೀನ್ ನನ್ನು ಹಿಡಿದುಕೊಳ್ಳುವುದಕ್ಕಿಂತ ಬಹಳ ಬಿಗಿಯಾಗಿ ಹಿಡಿದಿದೆ. ಇಂತಹ ಹಿಡಿತದಲ್ಲಿ ಸೃಷ್ಟಿಯಾಗಿರುವ ಅಭೌದ್ಧಿಕತೆ, ಕೊರೊನ ಸಮಯದಲ್ಲಿ ಇನ್ನೂ ಭೀಕರವಾಗಿ ನಮ್ಮ ಮುಂದೆ ಅನಾವರಣಗೊಂಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.