ಕೊರೊನ ಬಿಕ್ಕಟ್ಟು: ಜನಗಣತಿ ಮತ್ತು ಎನ್ ಪಿ ಆರ್ ಅನಿರ್ಧಿಷ್ಟ ಕಾಲಾವಧಿಗೆ ಮುಂದೂಡಿದ ಕೇಂದ್ರ ಸರ್ಕಾರ

ಕೊರೊನ ಇಡೀ ದೇಶವನ್ನು ಚಿಂತೆಗೀಡು ಮಾಡಿರುವ ಸಮಯದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೊಂದಣಿ (ಎನ್ ಪಿ ಆರ್) ನಿಲ್ಲಿಸಬೇಕು ಎಂಬ ಕೂಗು ಎಲ್ಲ ವಲಯಗಳಿಂದ ಕೇಳಿ ಬಂದಿತ್ತು. ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ವಿಷಯವಾಗಿ ಪತ್ರ ಬರೆದು, ಏಪ್ರಿಲ್ 1 ರಿಂದ ಪ್ರಾರಂಭವಾಗಬೇಕಿದ್ದ, ಎನ್ ಪಿ ಆರ್ ಪ್ರಕ್ರಿಯೆಯನ್ನು ಮುಂದೂಡಲು ಕೋರಿದ್ದರು.

ಈಗ ಮೊದಲ ಸುತ್ತಿನ 2021ನೇ ಸಾಲಿನ ಜನಗಣತಿ ಮತ್ತು ಎನ್ ಪಿ ಆರ್ ಪ್ರಕ್ರಿಯಯನ್ನು ಮುಂದಿನ ಆದೇಶದವರೆಗೆ ಮುಂದೂಡಿರುವುದಾಗಿ ಗೃಹ ಖಾತೆ ಸಚಿವಾಲಯ ಬುಧವಾರ ಘೋಷಿಸಿದೆ.

ಕೊರೊನ ಸೋಂಕಿತರ ಸಂಖ್ಯೆ ಈಗ ದೇಶದಾದ್ಯಂತ 562 ಆಗಿದ್ದು, 10  ಜನ ಮೃತಪಟ್ಟಿದ್ದಾರೆ. ಈಗ ಮುಂಜಾಗ್ರತಾ ಕ್ರಮಗಳಾಗಿ ದೇಶದಾದ್ಯಂತ ಸಾಂಕ್ರಾಮಿಕ ತಡೆ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದ್ದು, ಕರ್ಫ್ಯೂ ರೀತಿಯ ನಿರ್ಬಂಧಕ್ಕೆ ಜನ ಒಳಪಟ್ಟಿದ್ದಾರೆ. ಇಂತಹ ಸಮಯದಲ್ಲಿ ಈ ಸಾಂಕ್ರಾಮಿಕ ಕಳೆಯುವವರೆಗೆ ಈ ಪ್ರಕ್ರಿಯನನ್ನು ಮತ್ತೆ ತರುವ ಸೂಚನೆಗಳು ಇಲ್ಲ.

ಈ ಹಿಂದೆ ಪ್ರಧಾನಿಯವರಿಗೆ ಪತ್ರ ಬರೆದಿದ್ದ ನವೀನ್ ಪಟ್ನಾಯಕ್ ಅವರು “ಸದ್ಯಕ್ಕೆ ನಾವೆಲ್ಲ ಕೊರೊನ ಸಾಂಕ್ರಾಮಿಕವನ್ನು ತಡೆಯುವುದಕ್ಕೆ ಹೋರಾಟದಲ್ಲಿ ನಿರತರಾಗಿದ್ದೇವೆ. ಈ ಸಮಯದಲ್ಲಿ ಜನಗಣತಿ ಮತ್ತು ಅದರ ಜೊತೆಗಿನ ಎಲ್ಲ ಚಟುವಟಿಕೆಗಳಿಗೆ ಸಿಬ್ಬಂದಿಗಳನ್ನು ನಿಯೋಜಿಸುವುದು ಅಪಾಯಕಾರಿಯಾಗಿದೆ. ಈ ನಿಟ್ಟಿನಲ್ಲಿ ಜನಗಣತಿ ಮತ್ತು ಅದರ ಜೊತೆಗಿನ ಚಟುವಟಿಕೆಗಳನ್ನು ಮುಂದೂಡಬೇಕು” ಎಂದು ಹೇಳಿದ್ದರು.

ನವೀನ್ ಪಟ್ನಾಯಕ್ ಅವರು ಕೇಂದ್ರ ಸರ್ಕಾರ ಹೊಸ ನಾಗರಿಕ ತಿದ್ದುಪಡಿ ಕಾಯ್ದೆಗೆ (ಸಿ ಎ ಎ)  ಒಪ್ಪಿಗೆ ಸೂಚಿಸಿದ್ದರೂ, 2021ರ ಎನ್ ಪಿ ಆರ್ ಪ್ರಕ್ರಿಯೆಯಲ್ಲಿ, ಕೇಳಲಿದ್ದ ತಂದೆ-ತಾಯಿಯರ ಹುಟ್ಟಿದ ದಿನಾಂಕ ಮತ್ತು ಜನ್ಮ ಸ್ಥಳಗಳ ಮಾಹಿತಿ ಬಗೆಗಿನ ಪ್ರಶ್ನೆಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು.

2021ನೇ ಜನಗಣತಿ ಮತ್ತು ಎನ್ ಪಿ ಆರ್ ಪ್ರಕ್ರಿಯೆ ನಡೆಸಲು ಜನಸಂಪನ್ಮೂಲವನ್ನು ರಾಜ್ಯ ಸರ್ಕಾರಗಳೇ ಒದಗಿಸಬೇಕಾಗಿರುವ ಸಂದರ್ಭ ಇರುವುದರಿಂದ, ಕೊರೊನ ಭೀತಿಯ ಈ ಸಮಯದಲ್ಲಿ ಇದು ಹೆಚ್ಚಿನ ಸಮಸ್ಯೆ ಒಡ್ಡಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ ಆಗಿತ್ತು.

ಸಾಮಾನ್ಯವಾಗಿ ಜನಗಣತಿ ಮಾಡಲು ಶಾಲಾಶಿಕ್ಷಕರನ್ನು ನೇಮಿಸಲಾಗುತ್ತದೆ. ಈ ಶಾಲಶಿಕ್ಷಕ ಶಿಕ್ಷಕಿಯರು ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹ ಮಾಡುವುದು ವಾಡಿಕೆ. ಈಗ ಕೊರೊನ ಸಾಂಕ್ರಾಮಿಕ ಭೀತಿಯಲ್ಲಿ ಶಿಕ್ಷಕರು ಮನೆಮನೆಗೆ ತೆರಳಿ ಈ ಕೆಲಸ ಮಾಡುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.

ಜನಗಣತಿಗೆ ಎಲ್ಲ ರಾಜ್ಯಗಳು ಸಹಕರಿಸಲೇಬೆಕಿದೆ. ಆದರೆ ಎನ್ ಪಿ ಆರ್ ಗೆ ಆ ನಿರ್ಬಂಧ ಇಲ್ಲ.  ಪಶ್ಚಿಮ ಬಂಗಾಳ, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ರಾಜಸ್ಥಾನ, ಪಂಜಾಬ್, ಮಧ್ಯಪ್ರದೇಶ, ಚತ್ತೀಸ್ ಘರ್ ಮತ್ತು ಪುದುಚೆರಿ ವಿಧಾನಸಭೆಗಳಲ್ಲಿ ಎನ್ ಪಿ ಆರ್ ಪ್ರಕ್ರಿಯೆ ವಿರುದ್ಧ ನಿರ್ಣಯ ಮಂಜೂರು ಮಾಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.