ಬೆಂಗಳೂರಿನಲ್ಲಿ 838 ಕೋಟಿ ಮೊತ್ತದ ಭಾರೀ ಹಗರಣ: ಸ್ಥಳೀಯ ಶಾಸಕ ಭಾಗಿ?

ಬೆಂಗಳೂರು ಜಿಲ್ಲೆಯ ಆನೇಕಲ್‌ ತಾಲ್ಲೂಕಿನಲ್ಲಿ 838 ಕೋಟಿ ಭಾರೀ ಮೊತ್ತದ ಎರಡು ಬೃಹತ್‌ ಹಗರಣಗಳು ಬೆಳಕಿಗೆ ಬಂದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಎಸಿಬಿ ಮತ್ತು ಲೋಕಾಯುಕ್ತಕ್ಕೆ ಬೆಂಗಳೂರಿನ ಬಿಜೆಪಿ ನಾಯಕ ಎನ್‌ಆರ್‌ ರಮೇಶ್‌ ಅವರು ದೂರು ನೀಡಿದ್ದಾರೆ.

ಆನೇಕಲ್ ಯೋಜನಾ ಪ್ರಾಧಿಕಾರದ 576.60 ಕೋಟಿ ಮೊತ್ತದ ಹಗರಣ ಮತ್ತು ಆನೇಕಲ್ ತಾಲ್ಲೂಕಿನ 69 ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ 260.61 ಕೋಟಿ ಮೊತ್ತದ ಹಗರಣಗಳು ನಡೆದಿವೆ ಎಂದು ಆರೋಪಿಸಲಾಗಿದೆ.

ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ, ಆನೇಕಲ್‌ ಸ್ಥಳೀಯ ಶಾಸಕ ಶಿವಣ್ಣ, ಯೋಜನೆಯ ಗುತ್ತಿಗೆದಾರರು, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ನಲ್ಲಿ CEOಗಳಾಗಿ ಕಾರ್ಯ ನಿರ್ವಹಿಸಿದ್ದ IAS ಅಧಿಕಾರಿಗಳಾದ ಬೆಟ್ಟಸ್ವಾಮಿ, N. ಮಂಜುಶ್ರೀ, M. S.  ಅರ್ಚನಾ ಮತ್ತು K. ಶ್ರೀನಿವಾಸ್, “ಆನೇಕಲ್ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿರುವ K. N. ನಾರಾಯಣಗೌಡ ಮತ್ತು ವೆಂಕಟ ದುರ್ಗಾಪ್ರಸಾದ್ ಕುಂಚಾಲ ಸೇರಿದಂತೆ 10 ಕ್ಕೂ ಹೆಚ್ಚು ಇಂಜಿನಿಯರ್‌ಗಳು ಮತ್ತು “ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ 04 ಮಂದಿ ಕಾರ್ಯಪಾಲಕ ಅಭಿಯಂತರರ ವಿರುದ್ಧ ದೂರುಗಳನ್ನು ಎನ್‌ಆರ್‌ ರಮೇಶ್‌ ಅವರು ದಾಖಲಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

ಈ ಎಲ್ಲರೂ ಅಧಿಕಾರ ದುರುಪಯೋಗ, ವಂಚನೆ, ನಕಲಿ ದಾಖಲೆ ತಯಾರಿಕೆ, ಸಾರ್ವಜನಿಕ ಹಣ ದುರ್ಬಳಕೆ ಮತ್ತು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಇವರೆಲ್ಲರ ವಿರುದ್ಧ ಎಸಿಬಿ ಮತ್ತು ಲೋಕಾಯಕ್ತದಲ್ಲಿ ದೂರು ದಾಖಲಿಸಲಾಗಿದೆ. ಅಲ್ಲದೆ, ನಗರದ ACMM ನ್ಯಾಯಾಲಯದಲ್ಲಿಯೂ ಸಹ ಪ್ರಕರಣಗಳನ್ನು ದಾಖಲಿಸಲಾಗಿದೆ.

ಆನೇಕಲ್ ತಾಲ್ಲೂಕಿನಲ್ಲಿ ನಡೆದಿರುವ 838 ಕೋಟಿ ಮೊತ್ತದ ಎರಡು ಬೃಹತ್ ಹಗರಣಕ್ಕೆ ಸಂಬಂಧಿಸಿದ 5,700 ಪುಟಗಳ ದಾಖಲೆಗಳನ್ನು N. R. ರಮೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ.

ಸ್ಥಳೀಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆಯಲ್ಲಿ ಹಗರಣ:

2014-15 ರಿಂದ 2019-20ರ ಅವಧಿಯಲ್ಲಿ ಆನೇಕಲ್ ಯೋಜನಾ ಪ್ರಾಧಿಕಾರದ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿ (ರಸ್ತೆಗಳ ಅಭಿವೃದ್ಧಿ, ಚರಂಡಿ ಅಭಿವೃದ್ಧಿ ಮತ್ತು ಇನ್ನಿತರ ಅಭಿವೃದ್ಧಿ) ಕಾರ್ಯಗಳಿಗಾಗಿ ₹. 576,59,82,731ರೂ ಮೊತ್ತದ ಅನುದಾನ ಬಿಡುಗಡೆಯಾಗಿತ್ತು. ಆದರೆ, ಯೋಜನೆಗಳು ಸರಿಯಾದ ರೀತಿಯಲ್ಲಿ ಅನುಷ್ಟಾನವೇ ಆಗದೇ ಇದ್ದರೂ, ಆನೇಕಲ್ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ನಂಬಲಾರ್ಹವಲ್ಲದ ರೀತಿಯ ಮಾಹಿತಿಗಳನ್ನು ನೀಡಿದ್ದಾರೆ.

ಈ ಯೋಜನೆಗಳ ಅನುಷ್ಟಾನದ ಜವಾಬ್ದಾರಿಯನ್ನು “ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ” ಮತ್ತು “ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮ ನಿಯಮಿತ” (KRIDCL) ಸಂಸ್ಥೆಗಳಿಗೆ ನೀಡಲಾಗಿತ್ತು. ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗವು ಒಟ್ಟು 518,53,97,731 ರೂಗಳ ಮೊತ್ತದ ಕಾಮಗಾರಿಗಳನ್ನು ನಿರ್ವಹಿಸಿದೆ. KRIDCL ಸಂಸ್ಥೆಯು ಒಟ್ಟು 58,05,85,000 ರೂಗಳ ಮೊತ್ತದ ಕಾಮಗಾರಿಗಳನ್ನು ನಿರ್ವಹಿಸಿದೆ. ಇದಕ್ಕೆ ಸಂಭಂಧಿಸಿದಂತೆ ಈಗಾಗಲೇ ಒಟ್ಟು  576,48,58,731 ರೂಗಳನ್ನು ಗುತ್ತಿಗೆದಾರರಿಗೆ ಪಾವತಿ ಮಾಡಲಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ರಮೇಶ್‌ ಅವರು ತಿಳಿಸಿದ್ದಾರೆ.

ಆದರೆ,  ಆಯಾ ಕಾಮಗಾರಿಗಳನ್ನು ಪ್ರಾರಂಭಿಸುವ ಮೊದಲಿನ ಚಿತ್ರಗಳು, ಕಾಮಗಾರಿ ಚಾಲ್ತಿ ಇರುವಾಗ ತೆಗೆದ ಚಿತ್ರಗಳು ಮತ್ತು ಕಾಮಗಾರಿ ಪೂರ್ಣಗೊಂಡ ನಂತರದ ಚಿತ್ರಗಳನ್ನು RTI ಕಾಯ್ದೆಯಡಿಯಲ್ಲಿ ಕೇಳಿದಾಗ, ಮಾಹಿತಿ ನೀಡಲು ಅಧಿಕಾರಿಗಳು ವಿಫಲರಾಗಿದ್ದು, ತಾವು ನಿಸ್ಸಹಾಯಕರಾಗಿರುವುದಾಗಿ ತಿಳಿಸಿದ್ದಾರೆ. ಸ್ಥಳೀಯ ಶಾಸಕರ ಹಿಂಬಾಲಕ ಗುತ್ತಿಗೆದಾರರಿಗೇ ಎಲ್ಲಾ ಕಾಮಗಾರಿಗಳ ಗುತ್ತಿಗೆ ಕೊಡಿಸುವ ಉದ್ದೇಶದಿಂದ ವ್ಯವಸ್ಥಿತವಾಗಿ ಸಂಚು ನಡೆಸಲಾಗಿದೆ. ಶಾಸಕರ ರಾಜಕೀಯ ಒತ್ತಡಕ್ಕೆ ಮಣಿದು ಅಪಾರ ಪ್ರಮಾಣದ ಹಣ ಹಗಲು ದರೋಡೆಯಾಗಲು “ಆನೇಕಲ್ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ನೆರವಾಗಿದ್ದಾರೆ ಎಂದು ರಮೇಶ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಅಪೆಕ್ಸ್‌ ಬ್ಯಾಂಕ್‌ ಅಕ್ರಮ: ಸಿಬಿಐ ತನಿಖೆ ತಪ್ಪಿಸಿದ್ದರೇ ಕುಮಾರಸ್ವಾಮಿ?

ಅಧಿಕಾರಿಗಳು ತಾವು ಪೂರ್ಣಗೊಳಿಸಿರುವುದಾಗಿ ಹೇಳಿರುವ ಯಾವುದೇ ಕಾಮಗಾರಿಗೂ ಸಹ “ಗುಣಮಟ್ಟ ನಿಯಂತ್ರಣ ಇಲಾಖೆ”ಯಿಂದ “ಧೃಢೀಕರಣ ಪತ್ರಗಳನ್ನೇ ಪಡೆದಿಲ್ಲ. ಹೀಗಾಗಿ ಸಂದೇಹದಿಂದ ಅಧಿಕಾರಿಗಳು ನೀಡಿರುವ ಎಲ್ಲ ದಾಖಲೆಗಳನ್ನಿಟ್ಟುಕೊಂಡು ಆಯಾ ಪ್ರದೇಶಗಳನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದಾಗ, ಬಿಡುಗಡೆಯಾಗಿರುವ ಒಟ್ಟು ಅನುದಾನಗಳ ಪೈಕಿ ಶೇ. 25 ರಷ್ಟೂ ಸಹ ಯೋಜನೆಗಳಿಗೆ ಸದ್ಬಳಕೆಯಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಶಾಸಕರ ಹಿಂಬಾಲಕರು, ಗುತ್ತಿಗೆದಾರರು ಮತ್ತು ಅಧಿಕಾರಿಗಳು ಒಟ್ಟುಗೂಡಿ ಶೇ. 75 ರಷ್ಟು ಅನುದಾನವನ್ನು ರಾಜಾರೋಷವಾಗಿ ಲೂಟಿ ಮಾಡಿದ್ದಾರೆ ಎಂದು ರಮೇಶ್‌ ಅವರು ಗಂಭೀರ ಆರೋಪ ಮಾಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ನಲ್ಲಿ CEOಗಳಾಗಿ ಕಾರ್ಯ ನಿರ್ವಹಿಸಿದ್ದ ನಾಲ್ವರು IAS ಅಧಿಕಾರಿಗಳಾದ ಬೆಟ್ಟಸ್ವಾಮಿ, N. ಮಂಜುಶ್ರೀ, M. S.  ಅರ್ಚನಾ ಮತ್ತು K. ಶ್ರೀನಿವಾಸ್ ಮತ್ತು 10 ಮಂದಿ ಇಂಜಿನಿಯರ್‌ಗಳ ವಿರುದ್ದ ದೂರು ದಾಖಲಿಸಲಾಗಿದೆ.

ಕೆರೆ ಅಭಿವೃದ್ಧಿ ಹೆಸರಿನಲ್ಲಿ ಹಗರಣ:

ಬೆಂಗಳೂರು ನಗರದ ಕೋರಮಂಗಲ ಕಣಿವೆ ಮತ್ತು ಚಲ್ಲಘಟ್ಟ ಕಣಿವೆಗಳಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿಂದ ಆನೇಕಲ್ ತಾಲ್ಲೂಕಿನ 67 ಕೆರೆಗಳು ಮತ್ತು ಕನಕಪುರ ತಾಲ್ಲೂಕಿನ 02 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ 2017 ರಲ್ಲಿ “ಸಣ್ಣ ನಿರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ವತಿಯಿಂದ ಟೆಂಡರ್ ಆಹ್ವಾನಿಸಲಾಗಿತ್ತು.

ಈ ಎಲ್ಲಾ 69 ಕೆರೆಗಳ ವ್ಯಾಪ್ತಿಯಲ್ಲಿ GLR ಗಳ ನಿರ್ಮಾಣ, ಪಂಪ್ ಹೌಸ್ ಗಳ ನಿರ್ಮಾಣ, 09 ಪಂಪಿಂಗ್ ಯೂನಿಟ್ ಗಳು, ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಕೊಳವೆ ಮಾರ್ಗಗಳ ಅಳವಡಿಕೆ ಮತ್ತು Secondary Treated Sewage Water ಅನ್ನು ಹೊರ ಸಾಗಿಸುವ ಕಾರ್ಯಗಳನ್ನು ಟೆಂಡರ್‌ ಒಳಗೊಂಡಿತ್ತು.

ಈ ಯೋಜನೆಯ ಅನುಷ್ಠಾನಕ್ಕೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ M/s Megha Engineering & Infrastructure Ltd ಎಂಬ ಸಂಸ್ಥೆಗೆ ಗುತ್ತಿಗೆಯನ್ನು ನೀಡಲಾಗಿತ್ತು. ಈ ಸಂಸ್ಥೆಯು ಅಂದಾಜು (240 ಕೋಟಿ) ಮೊತ್ತಕ್ಕಿಂತಲೂ ಶೇ. 9.50% ರಷ್ಟು (260.61 ಕೋಟಿ) ಅಧಿಕ ಮೊತ್ತಕ್ಕೆ ಟೆಂಡರ್‌ ಪಡೆದುಕೊಂಡಿತ್ತು.

ಈ ಕಾಮಗಾರಿಯನ್ನು ಮಳೆಗಾಲವೂ ಸೇರಿದಂತೆ 15 ತಿಂಗಳ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಮತ್ತು 05 ವರ್ಷಗಳ ಕಾಲ ಈ 69 ಕೆರೆಗಳನ್ನು ನಿರ್ವಹಣೆ ಮಾಡಬೇಕು ಎಂಬ ನಿಬಂಧನೆಯ ಷರತ್ತಿನೊಂದಿಗೆ 10/07/2017ರಂದು ಟೆಂಡರ್ ನೀಡಲಾಗಿತ್ತು. ಆದರೆ, ಗುತ್ತಿಗೆದಾರರು “ಕಾರ್ಯಾದೇಶ ಪತ್ರ”ಪಡೆದು 41 ತಿಂಗಳುಗಳೇ ಕಳೆದಿದ್ದರೂ ಸಹ ಅಂದಾಜು ಪಟ್ಟಿಯಲ್ಲಿರುವ ಶೇ.40 ರಷ್ಟು ಕಾಮಗಾರಿಗಳನ್ನು ಇನ್ನೂ ಪೂರ್ಣಗೊಳಿಸಿಲ್ಲ. ಅಲ್ಲದೆ, ಪೂರ್ಣಗೊಂಡಿರುವ ಶೇ.60 ರಷ್ಟು ಕಾಮಗಾರಿಯೂ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಬಿಜೆಪಿ ನಾಯಕ ರಮೇಶ್‌ ಆರೋಪಿಸಿದ್ದಾರೆ.

ಇದನ್ನೂ ಓದಿ: ವೆಂಟಿಲೇಟರ್ ಖರೀದಿಯಲ್ಲಿ ಅಕ್ರಮ; ಲೋಕಾಯುಕ್ತಕ್ಕೆ ಬಿಜೆಪಿ ಮಾಜಿ ಶಾಸಕನಿಂದಲೇ ದೂರು!

ಸದರಿ ಅಭಿವೃದ್ಧಿ ಕಾಮಗಾರಿಯ ಟೆಂಡರ್ ನಿಯಮಗಳ ಪೈಕಿ 18 ನೇ ನಿಯಮದಂತೆ Water retaining structure ಅನ್ನು IS – 3370 ರ ಅನ್ವಯವೇ ನಿರ್ಮಿಸಬೇಕು. Fe – 500 D grade steel ಅನ್ನು ಮಾತ್ರವೇ ಉಪಯೋಗಿಸಿ ಮತ್ತು M-30 Concrete Structure ಅನ್ನು ಕಾಮಗಾರಿಯಲ್ಲಿ ಬಳಸಬೇಕು ಎಂದು ಹೇಳಲಾಗಿದೆ. ಆದರೆ, ಆದರೆ, ಸದರಿ ಗುತ್ತಿಗೆದಾರರು Fe-500 D grade steel ನ ಬದಲಾಗಿ ಕಳಪೆ ಗುಣಮಟ್ಟದ Steel ಅನ್ನು ಹಾಗೂ M-30 Concrete Structure ಬದಲಾಗಿ M-20 Concrete Structure ಅನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.

ಒಂದು Cubic Meter ಪ್ರಮಾಣದ M-30 Concrete Structure ನ ಮಾರುಕಟ್ಟೆ ಬೆಲೆ 4,700 ರೂ ಇದ್ದರೆ, ಒಂದು Cubic Meter ಪ್ರಮಾಣದ M-20 Concrete Structureನ ಮಾರುಕಟ್ಟೆ ಬೆಲೆ ಕೇವಲ 4,200 ರೂ ಇದೆ. ಹೀಗಾಗಿ ಪ್ರತಿಯೊಂದು Cubic Meter Concrete Structure ನಿಂದ ಸರಾಸರಿ 500 ರೂಪಾಯಿಗಳಿಗೂ ಹೆಚ್ಚು ಮೊತ್ತದ ಹಣವನ್ನು ಗುತ್ತಿಗರದಾರರು ಲೂಟಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಟೆಂಡರ್‌ ನೀಡಲಾಗಿದ್ದ ಮೊತ್ತದ ಪೈಕಿ ಶೇ. 84% ರಷ್ಟು (217.36 ಕೋಟಿ) ಮೊತ್ತವನ್ನು ಗುತ್ತಿಗೆದಾರರಿಗೆ part payment ಹೆಸರಿನಲ್ಲಿ ಅಧಿಕಾರಿಗಳು ಪಾವತಿಸಿದ್ದು, ಬೃಹತ್‌ ಪ್ರಮಾಣದ ಕರ್ತವ್ಯ ಲೋಪ ಎಸಗಿದ್ದಾರೆ. ಆಧಿಕಾರಿಗಳೂ ಕೂಡ ಗುತ್ತಿಗೆದಾರರೊಂದಿಗೆ ಷಾಮೀಲಾಗಿ ಪಾಲು ಪಡೆದುಕೊಂಡಿದ್ದಾರೆ ಎಂದು ರಮೇಶ್‌ ಅರೋಪಿಸಿದ್ದಾರೆ.

ಇದನ್ನೂ ಓದಿ: ಅಕ್ರಮ ಮರಳು ಸಾಗಾಣಿಕೆಗೆ ಅವಕಾಶ: ಚಾಮರಾಜನಗರ ಡಿವೈಎಸ್‌ಪಿ ಮೋಹನ್ ಅಮಾನತು

2017-18 ರಿಂದ 2020-21ರ ಅವಧಿಯಲ್ಲಿ “ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗ”ದ ಕಾರ್ಯಪಾಲಕ ಅಭಿಯಂತರರುಗಳಾಗಿ ಕಾರ್ಯ ನಿರ್ವಹಿಸಿರುವ ಡಿ. ದಯಾನಂದ, ಟಿ. ಜಿ. ತಿಮ್ಮೇಗೌಡ ಮತ್ತು ಎಂ. ಮುರಳೀಧರ ರವರ ಅವಧಿಯಲ್ಲಿ ಈ ಕಾಮಗಾರ ಪ್ರಕ್ರಿಯೆ ನಡೆಸಿದ್ದು, ಇವರೆಲ್ಲರೂ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ, ಇವರ ವಿರುದ್ಧ ದೂರು ದಾಖಲಿಸಲಾಗಿದೆ.

ಈ ಎರಡು ಪ್ರತ್ಯೇಕ ಇಲಾಖೆಗಳ ಕಾಮಗಾರಿಗಳ ಒಟ್ಟು ಮೊತ್ತ 838 ಕೋಟಿ ಅನುದಾನಗಳಲ್ಲಿ 400 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣದ ಲೂಟಿ ನಡೆದಿದೆ ಎಂದು ಆರೋಪಿಸಲಾಗಿದ್ದು, ಇದರಲ್ಲಿ ಆನೇಕಲ್ ತಾಲ್ಲೂಕಿಗೆ ಸಂಬಂಧಿಸಿದ ಎಂಜಿನಿಯರ್ ಗಳು, ಗುತ್ತಿಗೆದಾರರು ಮತ್ತು ಸ್ಥಳೀಯ ಶಾಸಕರ ಹಿಂಬಾಲಕರು ಭಾಗಿಯಾಗಿದ್ದಾರೆ ಎಂದು ಆರೋಪಿಸಿಲಾಗಿದೆ.

ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸುವಂತೆ ಎಸಿಬಿ ಮತ್ತು ಲೋಕಯುಕ್ತಕ್ಕೆ ದೂರು ನೀಡಲಾಗಿದೆ. ಅಲ್ಲದೆ, ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದಾಖಲೆಗಳ ಸಹಿತ ದೂರು ನೀಡರುವುದಾಗಿ N. R. ರಮೇಶ್ ತಿಳಿಸಿದ್ದಾರೆ.


ಇದನ್ನೂ ಓದಿ: ಕಲ್ಲಿದ್ದಲು ಹಗರಣ; ಬಿಜೆಪಿ ಮಾಜಿ ಸಚಿವ ದಿಲೀಪ್‌ ರೇ ಶಿಕ್ಷೆ ಅಮಾನತು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights