ವೆಂಟಿಲೇಟರ್ ಖರೀದಿಯಲ್ಲಿ ಅಕ್ರಮ; ಲೋಕಾಯುಕ್ತಕ್ಕೆ ಬಿಜೆಪಿ ಮಾಜಿ ಶಾಸಕನಿಂದಲೇ ದೂರು!
ಐಎಸ್ಓ ಗುಣಮಟ್ಟ ಪ್ರಮಾಣ ಪತ್ರ ಮತ್ತು ಸೂಕ್ತ ಪುರಾವೆಗಳೇ ಇಲ್ಲದ ಹಾಗೂ ಈಗಾಗಲೇ ಕೆಲವು ಆಸ್ಪತ್ರೆಗಳಲ್ಲಿ ವರ್ಷಗಳ ಕಾಲ ಬಳಸಿರುವ ಮತ್ತು ಈಗ ಬಳಕೆಗೆ ಯೋಗ್ಯವಲ್ಲದ ಕಳಪೆ ವೆಂಟಿಲೇಟರ್ಗಳನ್ನು ಖರೀದಿಸಲಾಗಿದ್ದು, ವೆಂಟಿಲೇಟರ್ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ದೂರಿನ ಆಧಾರದ ಮೇಲೆ ಪುಕರಣದ ತನಿಖೆಯನ್ನು ಲೋಕಾಯುಕ್ತ ಆರಂಭಿಸಿದೆ.
ಬಿಜೆಪಿಯ ಮಾಜಿ ಶಾಸಕ ಡಾ ಸಾರ್ವಭೌಮ ಬಗಲಿ ಅವರು 2020 ರ ಮೇ ನಲ್ಲಿ ಕರ್ತವ್ಯ ಲೋಪದಡಿ ನೀಡಿರುವ ದೂರನ್ನು 2020ರ ಜೂನ್ 9 ರಂದು ಲೋಕಾಯುಕ್ತ ಸಂಸ್ಥೆ ಸ್ವೀಕರಿಸಿತ್ತು. ಕಳಪೆ ವೆಂಟಿಲೇಟರ್ ಪ್ರಕರಣದ ತನಿಖೆ ಆರಂಭಿಸಿರುವ ಲೋಕಾಯುಕ್ತ , ಜೂನ್ 25 ರಂದು ಪ್ರಕರಣದ ಮೊದಲ ಪ್ರತಿವಾದಿಯಾಗಿರುವ ಕರ್ನಾಟಕ ಸ್ಟೇಟ್ ಡ್ರಗ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿಯ ಮುಖ್ಯ ಪರಿವೀಕ್ಷಕ ಡಾ ಮಹೇಶ್ಕುಮಾರ್ ಅವರಿಂದ ವಿವರಣೆ ಕೇಳಿದೆ. ಈ ಪ್ರಕರಣದಲ್ಲಿ ಡಾ ಪ್ರಿಯಲತಾ ಅವರು 2 ನೇ ಮತ್ತು ಡಾ ಲತಾ ಪರಿಮಳ ಅವರು 3 ನೇ ಪ್ರತಿವಾದಿಯಾಗಿದ್ದಾರೆ.

ಕೋವಿಡ್ -19 ರ ನಿರ್ವಹಣೆ ಸಂಬಂಧ ವೈದ್ಯಕೀಯ ಪರಿಕರಗಳನ್ನು ದುಪ್ಪಟ್ಟು ದರದಲ್ಲಿ ಖರೀದಿಯಾಗಿವೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದು, ಲೆಕ್ಕಕೊಡಿ ಆಂದೋಲನ ನಡೆಸುತ್ತಿದ್ದಾರೆ. ಅಲ್ಲದೆ, ಸ್ವತಃ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಕೂಡ ವೈದ್ಯಕೀಯ ಪರಿಕರ ಖದೀರಿಯಲ್ಲಿ ಅಕ್ರಮ ನಡೆದಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಆರೋಪಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ಪೆನ್ಡ್ರೈವ್ ಕೂಡ ಇದೆ ಎಂದು ಅವರು ಹೇಳಿದ್ದರು.
ಇದರ ಬೆನ್ನಲ್ಲೇ ಬಿಜೆಪಿ ಮಾಜಿ ಶಾಸಕ ಡಾ ಸಾರ್ವಭೌಮ ಬಗಲಿ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದು, ತನಿಖೆ ಚುರುಕುಗೊಂಡಿದೆ.
ಪ್ರಕರಣ ವಿವರ
ದೆಹಲಿ ಮೂಲದ ಆರ್ ಕೆ ಮೆಡಿಕಲ್ ಸೊಲೂಷನ್ಸ್ ಕಂಪನಿಯು ರಾಜ್ಯಕ್ಕೆ 3.88 ಕೋಟಿ ರೂ ಮೊತ್ತದ, ಡ್ರಾಗರ್ ಹೆಸರಿನ ಒಟ್ಟು 15 ವೆಂಟಿಲೇಟರ್ಗಳನ್ನು 2020 ರ ಏಪ್ರಿಲ್ 14 ರಂದು ಪೂರೈಸಿತ್ತು. ಆದರೆ, ಈ ವೆಂಟಿಲೇಟರ್ಗಳ ಮೇಲೆ ಐಎಸ್ಒ, ಸಿಎ ಮತ್ತು ಎಫ್ಡಿಎ, ಮಾಡಲ್, ಉತ್ಪಾದನ ವಿವರ ಮತ್ತು ಉತ್ಪಾದನೆ ವರ್ಷಕ್ಕೆ ಸಂಬಂಧಿಸಿದಂತೆ ಯಾವ ಪುರಾವೆಗಳೂ ಇಲ್ಲ. ಆದರೂ ಈ ಉಪಕರಣಗಳನ್ನು ಅಧಿಕಾರಿಗಳು ಖರೀದಿಸಿದ್ದರು.
ಕ್ರಮ ಸಂಖ್ಯೆ ಎಆರ್ಎನ್ಕೆ -0251, ಇವಿಐಟಿಎ -4, 04:22 ಮಾಡಲ್ ವೆಂಟಿಲೇಟರ್ 2007 ರ ಜನವರಿ 1 ರಂದು ಉತ್ಪಾದನೆಯಾಗಿದೆ. ಈ ಉಪಕರಣ 46,583 ಗಂಟೆಗಳ ಕಾಲ ಬಳಕೆಯಾಗಿದೆ. ಖರೀದಿ ಆದೇಶ ಪುಕಾರ ಈ ಉಪಕರಣದ ಮೇಲೆ ತಾಂತ್ರಿಕತೆಗೆ ಸಂಬಂಧಿಸಿದಂತೆ ನಿರ್ದಿಷ್ಟ ವಿವರಗಳಿಲ್ಲ. ಅಲ್ಲದೆ, ಈ ಉಪಕರಣವನ್ನು ಹೇಗೆ ಬಳಕೆ ಮಾಡಬೇಕು ಎಂಬ ಬಗ್ಗೆ ಮೂಲ ಉತ್ಪಾದಕ ಕಂಪನಿ ತನ್ನ ಪ್ರತಿನಿಧಿಯನ್ನು ನಿಯೋಜಿಸಿರಲಿಲ್ಲ.

ಪ್ರಕರಣ ಕುರಿತು ತಡವಾಗಿ ಕ್ರಮ ಕೈಗೊಂಡಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಹೆಚ್ಚುವರಿ ನಿರ್ದೇಶಕರಾದ ಮಂಜುಶ್ರೀ ಅವರು ದೆಹಲಿ ಮೂಲದ ಸರಬರಾಜುದಾರ ಆರ್ ಕೆ ಮೆಡಿಕಲ್ ಸೋಲೂಷನ್ ಕಂಪನಿಗೆ 2020 ರ ಏಪ್ರಿಲ್ 28 ರಂದು ನೋಟೀಸ್ ಜಾರಿಗೊಳಿಸಿದರು.
ಅಲ್ಲದೆ ಈ ಕಂಪನಿ ಸರಬರಾಜು ಮಾಡಿರುವ ಹಲವು ವಂಟಿಲೇಟರ್ಗಳು 13 ವರ್ಷಗಳ ಹಿಂದೆಯೇ ಉತ್ಪಾದನೆಗೊಂಡಿದ್ದವು. ಅವುಗಳಲ್ಲಿ, ಹಲವು ವೆಂಟಿಲೇಟರ್ಗಳು ಆಸ್ಪತ್ರೆಗಳಲ್ಲಿ ಬಹುಕಾಲ ಬಳಕೆ ಆಗಿದ್ದವು. ಆದರೆ ಅಧಿಕಾರಿಗಳು ಇದಾವುದನ್ನೂ ಪರಿಶೀಲಿಸದೆಯೇ ಖರೀದಿ ಮಾಡಿದ್ದಾರೆ .
ಇದಲ್ಲದೆ ಹಲವು ಸರಬರಾಜುದಾರರು ಪೂರೈಸಿರುವ ವೆಂಟಿಲೇಟರ್ಗಳ ಮೇಲೆ ಗುಣಮಟ್ಟ ಪ್ರಮಾಣಾಂಕನ ಸಂಸ್ಥೆಯ ಪ್ರಮಾಣಪತ್ರಗಳೇ ಇರಲಿಲ್ಲ. ಸರಬರಾಜುದಾರು ಪೂರೈಸಿದ ವೆಂಟಿಲೇಟರ್ಗಳನ್ನು ಪರಿಶೀಲನೆ ಮಾಡದೆಯೇ ಸ್ವೀಕರಿಸಿ ದಾಸ್ತಾನಿಗೆ ಪಡೆದಿರುವುದರ ಹಿಂದೆ ಭಾರೀ ಅಕ್ರಮ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಧಿಕಾರಿಗಳ ಕರ್ತವ್ಯಲೋಪದಿಂದಾಗಿ ಸರ್ಕಾರಕ್ಕೆ ಕೋಟ್ಯಂತರ ರು.ನಷ್ಟ ಸಂಭವಿಸಿದೆ ಎಂಬ ಆರೋಪ ಕೇಳಿ ಬಂದಿತ್ತು.
ಕೋಟ್ಯಂತರ ರೂ. ಮೌಲ್ಯದ ವೆಂಟಿಲೇಟರ್ಗಳನ್ನು ದಾಸ್ತಾನಿಗೆ ಪಡೆಯುವ ಮುನ್ನ ಅದರ ಗುಣಮಟ್ಟ , ತಯಾರಿಕೆ ವರ್ಷ ಮತ್ತು ತಾಂತ್ರಿಕ ಇನ್ನಿತರ ಗುಣಮಟ್ಟ ಅಂಶಗಳನ್ನು ಪರಿಶೀಲನೆ ಕುರಿತು ಹೊಣೆಗಾರಿಕೆ ನಿಭಾಯಿಸಬೇಕಿದ್ದ ಕರ್ನಾಟಕ ಡ್ರಗ್ಸ್ ಅಂಡ್ ಲಾಜಿಸ್ಟಿಕ್ಸ್ ಸಂಸ್ಥೆಯ ತಾಂತ್ರಿಕ ಮತ್ತು ವೈದ್ಯಕೀಯ ಅಧಿಕಾರಿಗಳ ಬಹುದೊಡ್ಡ ಲೋಪವೂ ಈ ಪ್ರಕರಣದಲ್ಲಿ ಬಹಿರಂಗವಾಗಿತ್ತು.
ಯಾವುದೇ ಒಂದು ವೈದ್ಯಕೀಯ ಉಪಕರಣಕ್ಕೆ ಕನಿಷ್ಟ 7 ವರ್ಷ ಬಾಳಿಕೆ ಇದೆ. 7 ವರ್ಷದ ನಂತರ ಉಪಕರಣ ಬಳಕೆಗೆ ಯೋಗ್ಯವಾಗಿರುವುದಿಲ್ಲ. ಆದರೆ, ಲಾಭಕೋರ ಸರಬರಾಜುದಾರರು ಬಳಕೆಗೆ ಯೋಗ್ಯವಲ್ಲದ ವೆಂಟಿಲೇಟರ್ಗಳನ್ನು ಪೂರೈಕೆ ಮಾಡಿದ್ದರೂ ಅಧಿಕಾರಿಗಳು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.
ಖಾಸಗಿ ಆಸ್ಪತ್ರೆಗಳು ಬಳಸಿ ಬಿಸಾಡಿದ್ದವು ಎನ್ನಲಾಗಿರುವ ವೆಂಟಿಲೇಟರ್ಗಳನ್ನು ಪೂರೈಕೆ ಮಾಡಿರುವ ಸರಬರಾಜುದಾರರಿಗೆ ನೋಟೀಸ್ ಕೊಟ್ಟು ಕೈ ತೊಳೆದುಕೊಂಡಿರುವ ಕರ್ನಾಟಕ ಡ್ರಗ್ಸ್ ಅಂಡ್ ಲಾಜಿಸ್ಟಿಕ್ಸ್ ಸಂಸ್ಯೆ ಸರಬರಾಜುದಾರನಿಗೆ ಮುಂಗಡವಾಗಿ ಕೋಟ್ಯಂತರ ರು.ಗಳನ್ನು ಪಾವತಿ ಮಾಡಿತ್ತು.
ಇದನ್ನೂ ಓದಿ: ವೆಂಟಿಲೇಟರ್ ಖರೀದಿಯಲ್ಲಿ ಯಡಿಯೂರಪ್ಪ ಸರ್ಕಾರದ ಭಾರೀ ಅಕ್ರಮ; ದಾಖಲೆಗಳು ಇಲ್ಲಿವೆ!

