ಕೊರೋನ ಮುಂಜಾಗ್ರತೆ: ಒಂದು ವಾರ ಬಂದ್ ಘೋಷಣೆ ಮಾಡಿದ ಕರ್ನಾಟಕ ಸರ್ಕಾರ
ಕೊರೋನ ವೈರಸ್ ಜಾಗತಿಕವಾಗಿ ವ್ಯಾಪಕವಾಗಿ ಹಬ್ಬುತ್ತಿದ್ದು ಭಾರತದಲ್ಲಿಯೂ 76 ಜನರಿಗೆ ಸೋಂಕು ಇರುವುದು ಪತ್ತೆಯಾಗಿದೆ. ದಿನದಿಂದ ದಿನಕ್ಕೆ ಈ ಸಂಖ್ಯೆ ಏರುತ್ತಿದ್ದು ಇದಕ್ಕೆ ಮುಂಜಾಗ್ರತ ಕ್ರಮವಾಗಿ ಹಲವು ಸಾರ್ವಜನಿಕ ಸಂಸ್ಥೆಗಳನ್ನು- ಕೇಂದ್ರಗಳನ್ನು ಮತ್ತು ಚಟುವಟಿಕೆಗಳನ್ನು ಒಂದು ವಾರದ ಕಾಲ ಬಂಧ್ ಮಾಡುವುದಾಗಿ ಕರ್ನಾಟಕ ಸರ್ಕಾರ ಘೋಷಿಸಿದೆ.
ಮಾಲ್, ಥಿಯೇಟರ್, ಮದುವೆ – ನಿಶ್ಚಿತಾರ್ಥ – ನಾಮಕರಣ ಸಮಾರಂಭಗಳು, ನೈಟ್ ಕ್ಲಬ್ಬುಗಳು, ಪಬ್ಬುಗಳು ಎಲ್ಲವನ್ನೂ ಒಂದು ವಾರ ನಿಲ್ಲಿಸಲಾಗಿದೆ. ಎಲ್ಲ ವಿಶ್ವವಿದ್ಯಾಲಯಗಳು, ಶಾಲೆ ಕಾಲೇಜುಗಳು ಕೂಡ ಒಂದು ವಾರ ಕಾರ್ಯ ನಿರ್ವಹಿಸುವುದಿಲ್ಲ. ಸರ್ಕಾರಿ ಕಚೇರಿಗಳು ಮತ್ತು ಅಧಿವೇಶನ ಮುಂದುವರೆಯಲಿವೆ.
#COVID19 ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಮಾಲ್, ಸಿನಿಮಾ ಮಂದಿರ, ಜನನಿಬಿಡ ಪ್ರದೇಶಗಳ ಕಾರ್ಯಕ್ರಮ ಹಾಗೂ ಬೃಹತ್ ಸಮಾವೇಶ ಕಾರ್ಯಕ್ರಮಗಳು ಬಂದ್ ಮಾಡಿ ಸರ್ಕಾರ ಆದೇಶಿಸಿದೆ. #CoronaOutbreak ಅನ್ನು ತಡೆಯಲು ನಾಗರೀಕರ ಸಹಕಾರ ಅತ್ಯಗತ್ಯವಾಗಿದೆ. ನಾವೆಲ್ಲರೂ ಸೇರಿ ಸಧೃಡ, ಆರೋಗ್ಯ ಸಮಾಜ ನಿರ್ಮಿಸೋಣ
— B Sriramulu (@sriramulubjp) March 13, 2020
ಅಧಿಕಾರಿಗಳ ಜೊತೆಗೆ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಈ ತುರ್ತು ಕ್ರಮಗಳನ್ನು ಘೋಷಿಸಿದ್ದಾರೆ. ಎಸ್ ಎಸ್ ಎಲ್ ಸಿ ಹೊರತುಪಡಿಸಿ ಉಳಿದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಐಟಿ ಸಂಸ್ಥೆಗಳ ನೌಕರರು ಮನೆಯಿಂದ ಕೆಲಸ ಮಾಡಲು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.