ಕ್ವಾರಂಟೈನ್‌ ಕೇಂದ್ರದಲ್ಲಿ ಚಿಕನ್ ಕೊಟ್ಟಿಲ್ಲವೆಂದು ಆಶಾಕಾರ್ಯಕರ್ತೆಯ ಮೇಲೆ ಮಾರಣಾಂತಿಕ ಹಲ್ಲೆ

ಎಲ್ಲಾಕಡೆ ಕೊರೋನಾ ನಿಯಂತ್ರಣಕ್ಕಾಗಿ ಕೊರೋನಾ ವಾರಿಯರ್ಸ್ ಹಗಲಿರುಳು ಶ್ರಮಿಸುತ್ತಿದ್ದಾರೆ. ಹೊರ ರಾಜ್ಯಗಳಿಂದ ಬಂದವರನ್ನು, ಸೋಂಕಿತರ ಜೊತೆ ಒಡನಾಟ ಹೊಂದಿದ್ದವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಿಸುತ್ತಿದ್ದಾರೆ. ಕೆಲವು ಕ್ವಾರಂಟೈನ್ ಸ್ಥಳಗಳಲ್ಲಿ ಜನರಿಗೆ ಸರಿಯಾದ ವ್ಯವಸ್ಥೆ ಕಲ್ಪಸುತ್ತಿಲ್ಲವೆಂದು ಕ್ವಾರಂಟೈನ್‌ಗೆ ಒಳಗಾಗಿದ್ದವರು ಆರೋಪಿಸಿ ಪ್ರತಿಭಟನೆಯನ್ನೂ ಮಾಡಿದ್ದಾರೆ.

ಆದರೆ, ಕಲಬುರ್ಗಿ ಜಿಲ್ಲೆಯಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿರುವವರ ಬೇಡಿಕೆಗಳು ಮಾತ್ರ ಏರುತ್ತಿವೆ. ತಮಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲವೆಂದು ಹಲ್ಲೆ ಮಾಡುವಂತಹ ದುಷ್ಕೃತ್ಯಗಳೂ ನಡೆದಿವೆ. ಚಿಕನ್ ಊಟ ಕೊಡದಿದ್ದಕ್ಕೆ ಆಶಾ ಕಾರ್ಯಕರ್ತೆಯನ್ನು ಥಳಿಸಿದ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆ ನಡೆದಿರುವುದು ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಕಿಣ್ಣಿ ಅಬ್ಬಾಸ್ ಗ್ರಾಮದಲ್ಲಿ. ರೇಣುಕಾ ಕುಡಕಿ ಹಲ್ಲೆಗೊಳಗಾದ ಆಶಾ ಕಾರ್ಯಕರ್ತೆಯಾಗಿದ್ದಾಳೆ. ಆಶಾ ಕಾರ್ಯಕರ್ತೆಯ ಮೇಲೆ ಮಾರಣಾಂತಿಕ ಹಲ್ಲೆ ಆರೋಪ ಕೇಳಿ ಬಂದಿದೆ.

ರೇಣುಕಾ ಕೈ ಮೂಳೆ ಮುರಿದಿದ್ದು, ಆಳಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೋಮನಾಥ್ ಕಾಂಬಳೆ ಚಿಕನ್ ಗಾಗಿ ಹಲ್ಲೆ ಮಾಡಿದ ಭೂಪ. ಮುಂಬೈನಿಂದ ಬಂದು ಗ್ರಾಮದ ಸರ್ಕಾರಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿರುವ ಸೋಮನಾಥ. ಊಟಕ್ಕೆ ಚಿಕನ್ ಬೇಕು, ಮಕ್ಕಳಿಗೆ ಚಿಪ್ಸ್ ಬೇಕೆಂದು ಈ ಭೂಪ ಬೇಡಿಕೆ ಇಟ್ಟಿದ್ದಾನೆ. ಅಧಿಕಾರಿಗಳ ಗಮನಕ್ಕೆ ತರುವುದಾಗಿ ಆಶಾ ಕಾರ್ಯಕರ್ತೆ ಹೇಳಿದ್ದಳು. ಇದರಿಂದ ಕೋಪಗೊಂಡ ಸೋಮನಾಥ ಆಶಾ ಕಾರ್ಯಕರ್ತೆ ರೇಣುಕಾ ಮೇಲೆ ಹಲ್ಲೆ ಮಾಡಿದ್ದಾನೆ.

ಸೋಮನಾಥನ ಜೊತೆ ಹೆಂಡತಿ ಮತ್ತು ಕುಟುಂಬದ ಐವರು ಸದಸ್ಯರಿಂದ ಹಲ್ಲೆ ಆರೋಪ ಕೇಳಿ ಬಂದಿದೆ. ಕ್ವಾರಂಟೈನ್ ಇರುವ ಕಾರಣಕ್ಕೆ ಸದ್ಯಕ್ಕೆ ಆರೋಪಿಯನ್ನು ಬಂಧಿಸಿಲ್ಲ. ಕ್ವಾರಂಟೈನ್ ಮುಗಿದ ಮೇಲೆ ಆತನ ವಿರುದ್ಧ ಕ್ರಮ ಕೈಗೊಳ್ಳೋ ಸಾಧ್ಯತೆಗಳಿವೆ. ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆಶಾ ಕಾರ್ಯಕರ್ತೆ ಮತ್ತು ಆಕೆಯ ಮೇಲೆ ಹಲ್ಲೆ‌ಮಾಡಿದವರು ಪರಸ್ಪರ ಸಂಬಂಧಿಗಳಾಗಿದ್ದು, ಹಳೆಯ ಜಗಳ ಇತ್ತು. ಹಲ್ಲೆ ಮಾಡಿದಾತ ಕ್ವಾರಂಟೈನ್ ನಲ್ಲಿ ಇರೋದು ಬಿಟ್ಟು ಹೊರಗೆ ತಿರುಗುತ್ತಿದ್ದರಿಂದ ಈಕೆ ತಕರಾರು ಎತ್ತಿದ್ದಾರೆ. ಇದರ ಜೊತೆಗೆ ಚಿಕನ್, ಮೀನ್‌ ಊಟವೂ ಸೇರಿಕೊಂಡು ಸುದ್ದಿಯಾಗಿದೆ ಎಂದು ಸ್ಥಳೀಯ ಪತ್ರಕರ್ತರು ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights