ಚೀನಾ ಕಂಪನಿಗೆ ನೀಡಲಾಗಿದ್ದ ಗುತ್ತಿಗೆಯನ್ನು ರದ್ದು ಪಡಿಸಿದ ಭಾರತೀಯ ರೈಲ್ವೇ!
ಭಾರತ ಮತ್ತು ಚೀನಾ ನಡುವಿನ ಗಡಿ ಘರ್ಷಣೆ ತೀವ್ರ ಗೊಂಡಿದ್ದು, ಕೇಂದ್ರ ಸರ್ಕಾರ ಮೌನ ತಾಳಿರುವುದರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇದೇ ಅವಧಿಯಲ್ಲಿ ರೈಲ್ವೇ ಕಳಪೆಗಾರಿಯ ಕಾರಣ ನೀಡಿ ಭಾರತೀಯ ರೈಲ್ವೆ ಇಲಾಖೆಯು ಚೀನಾದ ಕಂಪನಿಯೊಂದಕ್ಕೆ ನೀಡಿದ್ದ 471 ಕೋಟಿ ಮೌಲ್ಯದ ಗುತ್ತಿಗೆಯನ್ನು ರದ್ದು ಮಾಡಿರುವುದಾಗಿ ತಿಳಿಸಿದೆ.
ಭಾರತೀಯ ರೈಲ್ವೇ ಇಲಾಖೆಯು ಕಾನಪುರ ಮತ್ತು ಮುಘಲ್ಸರಾಯ್ ಮಾರ್ಗದ 417 ಕಿಮೀ ಉದ್ದದ ಕಾರಿಡಾರ್ನಲ್ಲಿ ಸಿಗ್ನಲ್ ಮತ್ತು ಟೆಲಿಕಮ್ಯೂನಿಕೇಶನ್ ಕಾಮಗಾರಿ ಕೆಲಸದ ಗುತ್ತಿಗೆಯನ್ನು ಬೀಜಿಂಗ್ ನ್ಯಾಷನಲ್ ರೈಲ್ವೆ ರೀಸರ್ಚ್ ಸಂಸ್ಥೆಗೆ 2016ರಲ್ಲಿ ನೀಡಲಾಗಿತ್ತು. ಆದರೆ, ಕಾಮಗಾರಿ ಬಹಳ ವಿಳಂಬವಾಗಿರುವ ಕಾರಣಕ್ಕೆ ರೈಲ್ವೆ ಇಲಾಖೆ ಈ ಗುತ್ತಿಗೆ ರದ್ದು ಮಾಡಿದೆ.
ನಾಲ್ಕು ವರ್ಷದಲ್ಲಿ ಕೇವಲ 20ರಷ್ಟು ಕೆಲಸ ಮಾತ್ರ ಪೂರ್ಣಗೊಂಡಿದ್ದು ಕಳಪೆ ಸಾಧನೆ ಎಂಬ ಕಾರಣ ನೀಡಿ ಒಪ್ಪಂದವನ್ನು ಕೇಂದ್ರ ರೈಲ್ವೆ ಸಚಿವಾಲಯ ರದ್ದು ಮಾಡಿದೆ.
ಡೆಡಿಕೇಟೆಡ್ ಫ್ರೀಟ್ ಕಾರಿಡಾರ್ ಕಾರ್ಪೋರೇಶನ್ ಇಂಡಿಯಾ(ಡಿಎಫ್ಸಿಸಿಐಎಲ್) ಸಂಸ್ಥೆಯು ಬೀಜಿಂಗ್ ನ್ಯಾಷನಲ್ ರೈಲ್ವೆ ರೀಸರ್ಚ್ ಅಂಡ್ ಡಿಸೈನ್(ಬಿಎನ್ಆರ್ಆರ್ಡಿಡಿಐ) ಸಂಸ್ಥೆ ಜೊತೆಗಿನ ಒಪ್ಪಂದವನ್ನು ರದ್ದು ಮಾಡಿದೆ.

