ಚೊಚ್ಚಲ ‘ಗೌರಿ ಲಂಕೇಶ್’ ಪ್ರಶಸ್ತಿ ನೈಜ ಪತ್ರಕರ್ತ ರವೀಶ್‍ಕುಮಾರ್ ಮಡಿಲಿಗೆ: ಸೆಪ್ಟೆಂಬರ್ 22ರಂದು ಬೆಂಗಳೂರಿನಲ್ಲಿ ಪ್ರದಾನ

ಕಳೆದ ಬಾರಿಯಂತೆ ಈ ಸಾರಿಯೂ ಗೌರಿ ಸ್ಮಾರಕ ಟ್ರಸ್ಟ್ ಗೌರಿ ನೆನಪಿನ ದಿನವನ್ನು ಸಾಂವಿಧಾನಿಕ ಮೌಲ್ಯಗಳಾದ ವಾಕ್ ಸ್ವಾತಂತ್ಯ ಮತ್ತು ಭಿನ್ನಮತದ ಹಕ್ಕನ್ನು ಎತ್ತಿಹಿಡಿಯುವ, ತನ್ಮೂಲಕ ಪ್ರಜಾತಂತ್ರವನ್ನು ಪೊರೆಯುವ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ. ಅಲ್ಲದೆ ಪ್ರಭುತ್ವಕ್ಕೆ ಎದಿರಾಗಿ ಸತ್ಯವನ್ನು ಸಾರಿ ಹೇಳುವುದರ ಪ್ರಾಮುಖ್ಯತೆಯನ್ನೂ, ಅನಿವಾರ್ಯತೆಯನ್ನೂ ಈ ದಿನ ಪ್ರತಿನಿಧಿಸುತ್ತದೆ. ಈ ಆಶಯಕ್ಕೆ ಅನುಗುಣವಾಗಿ ಟ್ರಸ್ಟ್ ಗೌರಿ ಲಂಕೇಶ್ ಹೆಸರಿನಲ್ಲಿ ಒಂದು ವಾರ್ಷಿಕ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದೆ. ಪತ್ರಿಕೋದ್ಯಮಕ್ಕೆ ಘನತೆ ತರುವಂಥ, ಸಂಕಷ್ಟದ ಸಮಯದಲ್ಲೂ ತಮ್ಮ ವೃತ್ತಿಗೆ ಬದ್ಧತೆಯಿಂದ ದುಡಿವ, ನಿರ್ಭಿಡೆಯಿಂದ ವರದಿಮಾಡುವ ಪತ್ರಕರ್ತರಿಗೆ ನೀಡಬೇಕೆಂಬುದು ಟ್ರಸ್ಟಿನ ಆಶಯವಾಗಿದೆ ಎಂದು ಅಧ್ಯಕ್ಷರಾದ ಎಚ್.ಎಸ್.ದೊರೆಸ್ವಾಮಿ ಮತ್ತು ಕಾರ್ಯದರ್ಶಿಗಳಾದ ಕೆ.ಎಲ್.ಅಶೋಕ್ ತಿಳಿಸಿದರು.

ಟ್ರಸ್ಟ್ ನ ಹಿರಿಯ ಪತ್ರಕರ್ತರಾದ ಸಿದ್ಧಾರ್ಥ ವರದರಾಜನ್, ಮಾನವಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ ವಾಡ್, ಹಾಗೂ ಕನ್ನಡದ ಖ್ಯಾತ ಚಿಂತಕ ಪ್ರೊ.ರಹಮತ್ ತರೀಕೆರೆಯವರು ಸದಸ್ಯರಾಗಿರುವ ಸಮಿತಿಯ ಸರ್ವಾನುಮತದ ನಿರ್ಧಾರದಂತೆ ನಾಡಿನ ಖ್ಯಾತ ಪತ್ರಕರ್ತ ಹಿಂದಿ ಎನ್.ಡಿ.ಟಿ.ವಿಯ ಹಿರಿಯ ವರದಿಗಾರರಾದ ಶ್ರೀಯುತ ರವೀಶ್ ಕುಮಾರ್ ಅವರನ್ನು ‘ಗೌರಿ ಪ್ರಶಸ್ತಿ’ಗೆ ಆಯ್ಕೆಮಾಡಲಾಗಿದೆ. ಇದಾದ ನಂತರ ರವೀಶ್ ಕುಮಾರ್ ಅವರಿಗೆ ಪ್ರತಿಷ್ಟಿತ ಮ್ಯಾಗಸೆಸೆ ಪ್ರಶಸ್ತಿಯೂ ಲಭಿಸಿದ್ದು ನಮಗೆ ಹೆಮ್ಮೆ ಎನಿಸಿದೆ ಎಂದರು.

ರವೀಶ್ ಕುಮಾರ್ ಅವರು ತಮ್ಮ ಹರಿತವಾದ ಸುದ್ದಿ ವಿಶ್ಲೇಷಣೆಗೆ ಮತ್ತು ರಾಜಿ ಇಲ್ಲದ ಸೆಕ್ಯುಲರ್ ನಿಲುವಿಗೆ ಬದ್ಧರಾಗಿದ್ದಾರಷ್ಟೇ ಅಲ್ಲದೆ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ತಮ್ಮ ವೃತ್ತಿ ಘನತೆಯನ್ನು ಎತ್ತಿಹಿಡಿಯುತ್ತಾ, ಪ್ರಜಾತಾಂತ್ರಿಕ ನಿಲುವಿಗೆ ಅಚಲವಾದ ನಿಷ್ಠಯನ್ನು ತೋರುತ್ತಾ ಬಂದಿದ್ದಾರೆ. ಇಂಥವರು ಗೌರಿ ಪ್ರಶಸ್ತಿಯ ಮೊದಲ ಪುರಸ್ಕೃತರು ಎಂಬುದು ನಮಗೆಲ್ಲಾ ಹೆಮ್ಮೆಯ ವಿಷಯ. ಪ್ರಶಸ್ತಿಯು ಗೌರವ ಫಲಕ ಮತ್ತು ಒಂದು ಲಕ್ಷ ರೂ.ಗಳ ಸನ್ಮಾನ ಧನವನ್ನು ಒಳಗೊಂಡಿರುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹಿರಿಯ ಪತ್ರಕರ್ತೆ ಗೌರಿ ಲಂಕೇಶರ ಹತ್ಯೆಯಾಗಿ ಇಂದಿಗೆ ಎರಡು ವರ್ಷಗಳಾಗುತ್ತದೆ. ಈ ಭೀಕರ ಹತ್ಯೆ ದೇಶ ವಿದೇಶಗಳಲ್ಲಿ ತಲ್ಲಣ ಸೃಷ್ಟಿಸಿತಲ್ಲದೆ, ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣತೆ, ವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಯನ್ನು ಯಾವ ಅನುಮಾನವೂ ಇಲ್ಲದಂತೆ ದೃಢೀಕರಿಸಿತು. ಗೌರಿ ಹತ್ಯೆಯನ್ನು ಕುರಿತು ವಿಚಾರಣೆ ನಡೆಸಿರುವ ವಿಶೇಷ ತನಿಖಾ ದಳ ಹಿಂದೂ ಮೂಲಭೂತವಾದಿ ಸಂಘಟನೆಯಾದ ‘ಸನಾತನ ಸಂಸ್ಥೆ’ಯ ಜತೆ ನಂಟಿರುವ ಹಲವಾರು ಮಂದಿಯನ್ನು ಆರೋಪಿಗಳನ್ನಾಗಿಸಿದೆ. ಅಲ್ಲದೆ ಇವರಿಗೂ ಮತ್ತು ಪ್ರೊ.ಕಲಬುರ್ಗಿ, ಗೋವಿಂದ ಪಾನ್ಸರೆ ಹಾಗೂ ಡಾ.ನರೇಂದ್ರ ಧಾಬೊಲ್ಕರ್ ಅವರ ಕೊಲೆಗೂ ಸಂಬಂಧವಿದೆ ಎಂಬ ಆಘಾತಕಾರಿ ಸುದ್ದಿಯನ್ನು ಹೊರಹಾಕಿದೆ. ಇದು ಸೆಕ್ಯುಲರ್ ಹಾಗೂ ವಿಚಾರವಾದದ ಮೇಲೆ ಮೂಲಭೂತವಾದಿಗಳು ನಡೆಸಿರುವ ವ್ಯವಸ್ಥಿತ ಸಂಚು ಎಂದು ತನಿಖೆ ಎತ್ತಿಹಿಡಿದಿದೆ; ಅಲ್ಲದೆ ಭಾರತ ಫ್ಯಾಸಿಸಂ ಕಡೆ ವಾಲುತ್ತಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ. ಕೋರ್ಟಿನಲ್ಲಿ ನಡೆಯುತ್ತಿರುವ ವಿಚಾರಣೆ ಒಂದು ತಾರ್ಕಿಕ ಘಟ್ಟವನ್ನು ಆದಷ್ಟು ಬೇಗ ತಲುಪಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕೆಂದು ಗೌರಿ ಸ್ಮಾರಕ ಟ್ರಸ್ಟ್ ಈ ಸಂದರ್ಭದಲ್ಲಿ ಒತ್ತಾಯಿಸುತ್ತದೆ ಎಂದು ಕೆ.ಎಲ್ ಅಶೋಕ್ ತಿಳಿಸಿದರು.

ಗೌರಿ ಪ್ರಶಸ್ತಿ ಪ್ರಧಾನ ಸಮಾರಂಭವು ಸೆಪ್ಟೆಂಬರ್ 22ರ ಭಾನುವಾರ ಸಂಜೆ 4 ಗಂಟೆಗೆ ಬೆಂಗಳೂರು ನಗರದ ಟೌನ್ ಹಾಲ್ ನಲ್ಲಿ ನಡೆಯಲಿದೆ. ಅಂದು ಟ್ರಸ್ಟಿನ ಗೌರವ ಕಾರ್ಯದರ್ಶಿಗಳೂ, ಹಿರಿಯ ಭಾಷಾ ಶಾಸ್ತ್ರಜ್ಞರೂ ಆಗಿರುವ ಪ್ರೊ. ಗಣೇಶ ದೇವಿಯವರು ಗೌರಿ ನೆನಪಿನ ಉಪನ್ಯಾಸವನ್ನು ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights