ಜನತಾ ಕರ್ಫ್ಯೂ: CAA, NPR, NRC ವಿರುದ್ಧ ಬಾಲ್ಕನಿ ಪ್ರತಿಭಟನೆಗೆ ಕರೆ

ಭಾನುವಾರ ಸಂಜೆ 5 ಗಂಟೆಗೆ ದೇಶದ ಜನರೆಲ್ಲರೂ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ವಿರುದ್ಧ ತಮ್ಮ ಮನೆಗಳಲ್ಲಿನ ಕಿಟಿಕಿ-ಬಾಲ್ಕನಿ-ಗೇಟ್‌ಗಳಲ್ಲಿ ನಿಂತು ಪ್ರತಿಭಟನೆ ನಡೆಸಬೇಕೆಂದು ನಾಗರಿಕ ಸಮಾಜ ಗುಂಪು ಯುನೈಟೆಡ್ ಎಗೇನ್ಸ್ಟ್ ಹೇಟ್ ಕರೆ ನೀಡಿದೆ.

ಮಾರ್ಚ್‌ 22 ರಂದು ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಮನೆಯಲ್ಲಿಯೇ ಉಳಿದು, ಕಿಟಿಕಿ-ಬಾಲ್ಕನಿ-ಗೇಟ್‌ಗಳಲ್ಲಿ ಚಪ್ಪಾಳೆ ತಟ್ಟುವ ಮೂಲಕ ಜನತಾ ಕರ್ಫ್ಯೂ ಆಚರಿಸಬೇಕೆಂದು ಪ್ರಧಾನಿ ಮೋದಿಯವರು ಕರೆ ಕೊಟ್ಟ ಬೆನ್ನಲ್ಲೇ ಅದಕ್ಕೆ ಪ್ರತಿಯಾಗಿ ನಾವು ಚಪ್ಪಾಳೆ ತಟ್ಟುವುದಿಲ್ಲ; ಬದಲಾಗಿ ಪ್ರತಿಭಟನೆ ನಡೆಸುತ್ತೇವೆಂದು ಕರೆ ಕೇಳಿಬಂದಿದೆ.

ಆರೋಗ್ಯ ರಕ್ಷಣೆ ನೀಡುತ್ತಿರುವ ವೈದ್ಯಸಿಬ್ಬಂದಿಗೆ ಮತ್ತು ತುರ್ತು ಪರಿಸ್ಥಿತಿ ನಿರ್ವಹಿಸುತ್ತಿರುವವರಿಗೆ ಜನರು ಭಾನುವಾರ ಸಂಜೆ 5 ಗಂಟೆಗೆ ಚಪ್ಪಾಳೆ ತಟ್ಟಿ, ಗಂಟೆ ಬಾರಿಸುವ ಮೂಲಕ ಗೌರವ ಸಲ್ಲಿಸುತ್ತಾರೆ ಎಂದು ಮೋದಿ ಹೇಳಿದ್ದರು. ಕರೋನವೈರಸ್ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಎನ್‌ಪಿಆರ್ ನಡೆಸುವ ಸರ್ಕಾರದ ಕ್ರಮವನ್ನು ವಿರೋಧಿಸಿ ಪ್ರಜ್ಞಾವಂತರೆಲ್ಲವೂ ತಮ್ಮ ಮನೆಗಳಿಂದ ಘೋಷಣೆಗಳನ್ನು ಕೂಗುತ್ತಾರೆ ಎಂದು ಯುನೈಟೈಡ್‌ ಎಗೇನ್ಸ್ಟ್ ಹೇಟ್ ಹೇಳಿಕೆಯಲ್ಲಿ ತಿಳಿಸಿದೆ.

“ಮೊದಲು ನಾವು ಸೋಂಕಿತರನ್ನು ನೋಡಿಕೊಳ್ಳುವ, ಅಗತ್ಯ ವಸ್ತುಗಳನ್ನು ಪೂರೈಸುವ ಕೆಲಸ ಮಾಡುತ್ತಿರುವ ನಮ್ಮ ಸಹೋದರಿಯರು ಮತ್ತು ಸಹೋದರರಿಗೆ ಧನ್ಯವಾದ ಹೇಳುತ್ತೇವೆ … ತದನಂತರ ನಾವು ನಮ್ಮ ಬಾಲ್ಕನಿಗಳು ಮತ್ತು ಕಿಟಕಿಗಳಲ್ಲಿ ಎನ್ಆರ್‌ಸಿ, ಎನ್‌ಪಿಆರ್‌, ಸಿಎಎ ವಿರೋಧಿ ಫಲಕಗಳನ್ನು ಹಿಡಿದಿಟ್ಟುಕೊಳ್ಳುತ್ತೇವೆ. ಏಪ್ರಿಲ್ 1 ರಿಂದ ಎನ್‌ಪಿಆರ್‌ ಪ್ರಾರಂಭಿಸುವ ಸರ್ಕಾರದ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತೇವೆ ಎಂದು ಯುನೈಟೆಡ್ ಎಗೇನ್ಸ್ಟ್ ಹೇಟ್‌ ಸಂಘಟನೆಯ ನದೀಮ್ ಖಾನ್ ತಿಳಿಸಿದ್ದಾರೆ.

ಕೊರೊನಾ ವೈರಸ್‌ ವಿರುದ್ಧ ಹೋರಾಡುತ್ತಿರುವ ಸರ್ಕಾರದ ಬದ್ಧತೆಗೆ ನಾವೆಲ್ಲರೂ ಜೊತೆಯಾಗಿದ್ದೇವೆ. ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಜನರು ತಮ್ಮ ಮನೆಗಳ ಒಳಗೆ ಇರಬೇಕೆಂದು ಪ್ರಧಾನ ಮಂತ್ರಿ ಒತ್ತಾಯಿಸುತ್ತಿದ್ದರೆ, “ಈಶಾನ್ಯ ದೆಹಲಿಯಲ್ಲಿನ ಗಲಭೆಯಲ್ಲಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತ ಶಿಬಿರಗಳಲ್ಲಿ ಇರುವ ಜನರಿಗೆ ಪುನರ್ವಸತಿ ಕಲ್ಪಿಸುವಂತೆ ನಾವು ಅವರನ್ನು ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಗಲಭೆಯಲ್ಲಿ ಮನೆಗಳನ್ನು ಕಳೆದುಕೊಂಡ ಸುಮಾರು 1,200 ಜನರು ಮುಸ್ತಾಬಾದ್‌ನಲ್ಲಿ ಅನೈರ್ಮಲ್ಯದ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಪ್ರತಿಭಟನೆಯ ಭಾಗವಾಗಲಿರುವ ಇರ್ಕಾನ್ ಚೌಧರಿ ದೂರಿದ್ದಾರೆ.

“ಪ್ರಧಾನ ಮಂತ್ರಿ ಜನರು ತಮ್ಮ ಮನೆಗಳ ಒಳಗೆ ಇರಬೇಕೆಂದು ಕೇಳಿಕೊಂಡಿದ್ದಾರೆ. ಆದರೆ ನಮ್ಮ ಮನೆಗಳನ್ನು ಸುಟ್ಟು ಲೂಟಿ ಮಾಡಿದವರ ಬಗ್ಗೆ ಏನು ಹೇಳುವುದು? ಇಕ್ಕಟ್ಟಾದ, ಆರೋಗ್ಯಕರವಲ್ಲದ ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುವುದನ್ನು ಬಿಟ್ಟು ಅವರಿಗೆ ಬೇರೆ ದಾರಿಯಿಲ್ಲ. ಸೋಂಕು ತಗುಲುವ ತೀವ್ರ ಅಪಾಯಗಳಿರುವ ಈ ಸ್ಥಳಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದಾದರೂ ಹೇಗೆ ಎಂದು ಚೌಧರಿ ಪ್ರಶ್ನಿಸಿದ್ದಾರೆ.

ಇಡೀ ವಿಶ್ವವು ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಮೊದಲು ಇದರ ಬಗ್ಗೆ ಗಮನ ಹರಿಸಬೇಕು ಎಂದು ಸಮಾಜ ಸೇವಕ ಪರ್ವೇಜ್ ಆಲಂ ಹೇಳಿದ್ದಾರೆ. “ನಾನು ಪ್ರಧಾನ ಮಂತ್ರಿಯ ಜನತಾ ಕರ್ಫ್ಯೂ ಕರೆಯನ್ನು ಸ್ವಾಗತಿಸಿ, ಅನುಸರಿಸುತ್ತೇನೆ. ಆದರೆ ನಾವು ಪಾತ್ರೆಗಳನ್ನು ಬಡಿದು ಎನ್‌ಪಿಆರ್ ಮತ್ತು ಸಿಎಎ ವಿರುದ್ಧ ಪ್ರತಿಭಟಿಸುತ್ತೇವೆ ” ಎಂದು ಅವರು ಹೇಳಿದ್ದಾರೆ.

ಕೃಪೆ: ದಿ ಫೆಡರಲ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights