ಜಾರ್ಜ್ ಫ್ಲಾಯ್ಡ್ ಹತ್ಯೆ ನೆನಪಿಸಿದ ಜೋಧಪುರದ ಅಮಾನವೀಯ ಘಟನೆ; ವೈರಲ್ ಆದ ವಿಡಿಯೋ

ಕೆಲವು ದಿನಗಳ ಹಿಂದೆ ಅಮೆರಿಕದಲ್ಲಿ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ಜನಾಂಗದ ವ್ಯಕ್ತಿಯ ಕತ್ತಿನ ಮೇಲೆ ಅಲ್ಲಿನ ಪೊಲೀಸ್ ಒಬ್ಬ ಮೊಣಕಾಲೂರಿ ದೌರ್ಜನ್ಯ ಎಸಗಿದ್ದರಿಂದ, ಆ ವ್ಯಕ್ತಿ ಸಾವಾಗೀಡಾಗಿದ್ದ ಘಟನೆ ರಾಷ್ಟ್ರದಾದ್ಯಂತ ಪ್ರತಿಭನೆಗಳಿಗೆ ಕಾರಣವಾಗಿತ್ತು. “ಐ ಕೆನಾಟ್ ಬ್ರೀತ್” ಎಂಬ ಸ್ಲೋಗನ್ ನೊಂದಿಗೆ ಅಮೆರಿಕಾದ್ಯಂತ ನಡೆದಿದ್ದ ಪ್ರತಿಭಟನೆಗಳು ಸರ್ಕಾರಗಳನ್ನು ಮತ್ತು ಆಡಳಿತ ವ್ಯವಸ್ಥೆಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತು. ಈಗ ಫ್ಲಾಯ್ಡ್  ಹತ್ಯೆಯನ್ನು ನೆನಪಿಸುವ ಅದೇ ಮಾದರಿಯ ದೌರ್ಜನ್ಯದ ಘಟನೆ ಭಾರತದ ರಾಜಸ್ಥಾನದ ಜೋಧಪುರದಲ್ಲಿ ನಡೆದಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಜೋಧಪುರದ ಪೊಲೀಸ್ ಒಬ್ಬ ವ್ಯಕ್ತಿಯನ್ನು ನೆಲದ ಮೇಲೆ ಬೀಳಿಸಿ ತಮ್ಮ ಮೊಣಕಾಲನ್ನು ಕುತ್ತಿಗೆಗೆ ಒತ್ತಿ ಹಿಡಿಯುವುದನ್ನು ಕಾಣಬಹುದಾಗಿದೆ. ಆನಂತರ ಆ ವ್ಯಕ್ತಿಗೆ ಪೊಲೀಸರು ಹಲ್ಲೆ ಮಾಡಿರುವುದು ದಾಖಲಾಗಿದೆ. ಈ ಘಟನೆಯ ವಿರುದ್ಧ ಜನ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಘಟನೆಯ ಹಿನ್ನೆಲೆ

ಗುರುವಾರ ಮುಖೇಶ್ ಕುಮಾರ್ ಪ್ರಜಾಪತ್ ಎಂಬ ವ್ಯಕ್ತಿಯೊಬ್ಬ ಜೋಧಪುರ ನಗರದಲ್ಲಿ ಮಾಸ್ಕ್ ಹಾಕಿಕೊಳ್ಳದೆ ಓಡಾಡಿದ್ದ ಕಾರಣಕ್ಕೆ ಆತನನ್ನು ವಿಚಾರಣೆ ನಡೆಸಿದ ಪೊಲೀಸರು ಕ್ರೌರ್ಯದಿಂದ ವರ್ತಿಸಿದ್ದು, ಆತನನ್ನು ನೆಲಕ್ಕೆ ಬೀಳಿಸಿ ಕತ್ತಿನ ಮೇಲೆ ಮೊಣಕಾಲಿಟ್ಟು ದೌರ್ಜನ್ಯವೆಸಗಿದ್ದಾರೆ. ಈ ಘಟನೆ ಅಮೆರಿಕದ ಜಾರ್ಜ್ ಫ್ಲಾಯ್ಡ್ ಸಾವಿನ ವೀಡಿಯೊವನ್ನು ನೆನಪಿಸುವಂತಿದೆ.

ಪ್ರಕರಣದ ಕುರಿತು ಸ್ಪಷ್ಟಪಡಿಸಿರುವ ದೇವ್ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಸೋಮ್ಕರನ್, “ಕೊರೋನಾ ಭೀತಿಯ ನಡುವೆಯೂ ಮುಕೇಶ್ ಕುಮಾರ್ ಎಂಬ ವ್ಯಕ್ತಿ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳದೆ ತಿರುಗಾಡುತ್ತಿದ್ದ. ಪೊಲೀಸರು ಆತನನ್ನು ವಿಚಾರಣೆ ನಡೆಸುವ ವೇಳೆ ಆತ ಆಕ್ರಮಣಕಾರಿಯಾಗಿ ವರ್ತಿಸಿದ್ದ. ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ. ಹೀಗಾಗಿ ಪೊಲೀಸರು ಬಲವಂತವಾಗಿ ಆತನನ್ನು ಬಂಧಿಸಿದ್ದಾರೆ. ಈ ಘಟನೆ ಗುರುವಾರ ಜೋಧಪುರ ನಗರದಲ್ಲಿ ನಡೆದಿದ್ದು ಜನ ಇದನ್ನು ವಿಡಿಯೋ ಮಾಡಿದ್ದಾರೆ. ಮುಖರ್ಜಿ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ “ಸಾಂಕ್ರಾಮಿಕ ಕಾಯ್ದೆಯ” ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ, ಆತನನ್ನು ಇಂದು ನ್ಯಾಯಾಲಯಕ್ಕೂ ಹಾಜರುಪಡಿಸಲಾಗಿದೆ” ಎಂದು ತಿಳಿಸಿದ್ದಾರೆ.

ಒಟ್ಟಾರೆ ಜೋಧಪುರದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಬ್ಬ ಪೋಲೀಸ್ ತನ್ನ ಮೊಣಕಾಲಿನಿಂದ ಕುತ್ತಿಗೆಯನ್ನು ಒತ್ತುತ್ತಿದ್ದರೆ, ಇತರ ಇಬ್ಬರು ಪೊಲೀಸರು ಯುವಕನ ಕಾಲುಗಳನ್ನು ಹಿಡಿದಿರುವುದು ಸ್ಪಷ್ಟವಾಗಿದೆ. ಅದೃಷ್ಟವಶಾತ್ ಆತನ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ.

ಜಾರ್ಜ್ ಫ್ಲಾಯ್ಡ್ ಎಂಬ 46 ವರ್ಷದ ಕಪ್ಪು ಜನಾಂಗದ ವ್ಯಕ್ತಿ ಮೇ 25 ರಂದು ಅಮೆರಿಕದ ಮಿನ್ನಿಯಾಪೋಲಿಸ್ ಅಂಗಡಿಯ ಹೊರಗೆ ಪೊಲೀಸರಿಂದ ಬಂಧಿಸಲ್ಪಟ್ಟ. ಆದರೆ, ಪೊಲೀಸರ ಅಮಾನವೀಯ ವರ್ತನೆಯಿಂದಾಗಿ ಆತ ನಡು ರಸ್ತೆಯಲ್ಲೇ ಪ್ರಾಣ ಬಿಟ್ಟಿದ್ದ. ಈ ಘಟನೆ ಇದೀಗ ಅಮೆರಿಕದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಜೋಧಪುರದಲ್ಲಿ ಘಟನೆ ಸಹ ಸಾಮಾಜಿಕ ಜಾಲತಾನದಲ್ಲಿ ಭಾರೀ ಸದ್ದು ಮಾಡುತ್ತಿದೆ.

Spread the love

Leave a Reply

Your email address will not be published. Required fields are marked *