ತೀವ್ರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಜಪಾನ್ ಪಿಎಂ ಶಿಂಜೊ ಅಬೆ ಭಾರತ ಭೇಟಿ ರದ್ದು?
ಭಾರತದಲ್ಲಿ ಎರಡು ಸದನಗಳಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾಗಿ ರಾಷ್ಟ್ರಪತಿಗಳ ಅಂಕಿತ ಸಹ ಬಿದ್ದು ಕಾಯ್ದೆಯಾಗಿ ಜಾರಿಯಾಗಿದೆ. ಆದರೆ ಅದರ ವಿರುದ್ಧದ ಪ್ರತಿಭಟನೆಗಳು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಮುಖ್ಯವಾಗಿ ಈಶಾನ್ಯ ಭಾರತ ಹೊತ್ತಿ ಉರಿಯುತ್ತಿದೆ.
ಈ ಹಿನ್ನೆಲೆಯಲ್ಲಿ ಜಪಾನ್‌ನ ಪ್ರಧಾನಿ ಶಿಂಜೊ ಅಬೆ ಅವರು ಭಾನುವಾರ ಆರಂಭವಾಗಲಿರುವ ಭಾರತ ಪ್ರವಾಸವನ್ನು ರದ್ದುಗೊಳಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಜಪಾನ್‌ನ ಜಿಜಿ ಪ್ರೆಸ್ ಅನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಅಬೆ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಗುವಾಹಟಿಯಲ್ಲಿ ಶೃಂಗಸಭೆ ಆಯೋಜನೆಗೊಂಡಿತ್ತು. ಆದರೀಗ ಅಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದ ಹಿನ್ನೆಲೆಯಲ್ಲಿ ತಮ್ಮ ಪ್ರವಾಸವನ್ನು ರದ್ದುಗೊಳಿಸಬೇಕಾದ ಅನಿವಾರ್ಯತೆ ಬಂದಿದೆ ಎನ್ನಲಾಗುತ್ತಿದೆ.
ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್ ಮೊಮೆನ್ ಮತ್ತು ದೇಶದ ಗೃಹ ಸಚಿವರು ಗುರುವಾರ ಈಶಾನ್ಯ ಭಾರತಕ್ಕೆ ಭೇಟಿ ನೀಡಬೇಕಿತ್ತು. ಆದರೆ ಈಶಾನ್ಯದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಮಧ್ಯೆ ಅವರು ಭಾರತಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಇಂದು ಕಾರ್ಯಕ್ರಮಕ್ಕಾಗಿ ಬಾಂಗ್ಲಾದೇಶ ಗೃಹ ಸಚಿವ ಖಾನ್ ಮೇಘಾಲಯಕ್ಕೆ ಭೇಟಿ ನೀಡಬೇಕಿತ್ತು. ಅದು ಕೂಡ ರದ್ದಾಗಲಿದೆ.
ಕಳೆದ ಎರಡು ದಿನಗಳಲ್ಲಿ ಅಸ್ಸಾಂ ಭಾರಿ ಪ್ರತಿಭಟನೆಗೆ ಸಾಕ್ಷಿಯಾಗಿದ್ದು, ಸಾವಿರಾರು ಜನರು ಬೀದಿಗಿಳಿದು ನಿಷೇಧಾಜ್ಞೆಗಳನ್ನು ಧಿಕ್ಕರಿಸಿ ಕಾಯ್ದೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿದ್ದಾರೆ. ಅಬೆ ಅವರನ್ನು ಸ್ವಾಗತಿಸಲು ಗುವಾಹಟಿಯಲ್ಲಿ ನಿರ್ಮಿಸಲಾದ ಹೋರ್ಡಿಂಗ್‌ಗಳನ್ನು ಬುಧವಾರ ಪ್ರತಿಭಟನಾಕಾರರು ಧ್ವಂಸಗೊಳಿಸಿದ್ದಾರೆ.
“ಜಪಾನ್ ಸರ್ಕಾರ ಮತ್ತು ಭಾರತೀಯ ಸರ್ಕಾರಗಳು ಕೊನೆಯ ಸಾಧ್ಯತೆಯನ್ನು ಅನ್ವೇಷಿಸುತ್ತಲೇ ಇವೆ” ಎಂದು ಜಪಾನಿನ ಪತ್ರಿಕೆಗಳ ವರದಿ ತಿಳಿಸಿವೆ.
ಪಿಎಂ ಮೋದಿ ಮತ್ತು ಅಬೆ ನಡುವೆ ಶೃಂಗಸಭೆ ಡಿಸೆಂಬರ್ 15 ಮತ್ತು 17 ರ ನಡುವೆ ನಡೆಯಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಘೋಷಿಸಿದ್ದರು. ಶೃಂಗಸಭೆಯ ಸ್ಥಳವನ್ನು ಸರ್ಕಾರ ಘೋಷಿಸದಿದ್ದರೂ, ಗುವಾಹಟಿಯಲ್ಲಿ ಆತಿಥ್ಯ ವಹಿಸಲು ಸಿದ್ಧತೆಗಳು ನಡೆಯುತ್ತಿವೆ. ಸ್ಥಳವನ್ನು ಸ್ಥಳಾಂತರಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆಯೇ ಎಂದು ಕೇಳಿದಾಗ, ಕುಮಾರ್ ಹೇಳಿದರು: “ನಾನು ಅದರ ಬಗ್ಗೆ ಸ್ಪಷ್ಟಪಡಿಸುವ ಸ್ಥಿತಿಯಲ್ಲಿಲ್ಲ” ಎಂದು ಹೇಳಿದ್ದಾರೆ.
ಸಿದ್ಧತೆಗಳನ್ನು ಪರಿಶೀಲಿಸಲು ಜಪಾನಿನ ತಂಡ ಬುಧವಾರ ಗುವಾಹಟಿಗೆ ಭೇಟಿ ನೀಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.