ನನಗೆ ನಿಂಬೆಹಣ್ಣು ರೇವಣ್ಣ ಎಂದು ಗೇಲಿ, ನೀವು ಯುದ್ಧ ವಿಮಾನದ ಚಕ್ರಗಳಿಗೆ ನಿಂಬೆಹಣ್ಣು ಯಾಕೆ ಇಟ್ರಿ..?

ನನಗೆ ನಿಂಬೆಹಣ್ಣು ರೇವಣ್ಣ ಎಂದು ಗೇಲಿ ಮಾಡುವ ಬಿಜೆಪಿಯ ಮುಖಂಡರು ನಿಂಬೆಹಣ್ಣಿನ ಬಗ್ಗೆ ಈಗ ಮಾತನಾಡಲಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

ಹೊಳೆನರಸೀಪುರದ ಚಾಕೇನಹಳ್ಳಿಯಲ್ಲಿ ಮಾತನಾಡಿದ ಅವರು, ಫ್ರಾನ್ಸ್ ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಫೇಲ್ ಯುದ್ಧ ವಿಮಾನಕ್ಕೆ ಪೂಜೆ ಸಲ್ಲಿಸಿದ ನಂತರ ವಿಮಾನ ಹಾರಾಟಕ್ಕೂ ಮುನ್ನ ಚಕ್ರಗಳಿಗೆ ನಿಂಬೆಹಣ್ಣು ಇಟ್ಟಿದ್ದಾರೆ. ನನಗೆ ನಿಂಬೆಹಣ್ಣು ರೇವಣ್ಣ ಎಂದು ಗೇಲಿ ಮಾಡುವ ಬಿಜೆಪಿ ನಾಯಕರು ಈಗ ನಿಂಬೆಹಣ್ಣಿನ ಬಗ್ಗೆ ಮಾತನಾಡಲಿ ಎಂದು ಹೇಳಿದರು.

ಕಾವೇರಿ ಕೊಳ್ಳದಲ್ಲಿರುವ ಡ್ಯಾಂಗಳಲ್ಲಿ ನಡೆಯಬೇಕಿದ್ದ ಕೆಲಸಗಳಿಗೆ ಮುಖ್ಯಮಂತ್ರಿ ತಡೆಹಿಡಿದಿದ್ದಾರೆ. ಮೈಸೂರು, ಮಂಡ್ಯ, ಮಡಿಕೇರಿಯ ಸೇರಿದಂತೆ ವಿವಿಧೆಡೆ ನಡೆಯಬೇಕಿದ್ದ 5 ಸಾವಿರ ಕೋಟಿ ರೂ.ಗಳ ಕಾಮಗಾರಿಗಳಿಗೆ ತಡೆ ನೀಡಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಪ್ರಾಬಲ್ಯ ಇರುವ ಕ್ಷೇತ್ರದ ಕಾಮಗಾರಿಗಳಿಗೆ ತಡೆ ಕೊಟ್ಟಿದ್ದಾರೆ. ಟೆಂಡರ್ ಆಗಿ ವರ್ಕ್ ಆರ್ಡರ್ ಆಗಿದ್ದರೂ ಕಾಮಗಾರಿ ನಿಲ್ಲಿಸಿದ್ದಾರೆ. ಬಿಜೆಪಿ ಸೇರಿದ ಅನರ್ಹರ ಕ್ಷೇತ್ರಗಳಿಗೆ ಮತ್ತು ಬಿಜೆಪಿ ಗೆದ್ದ ಕೆಲ ಕ್ಷೇತ್ರದ ಕಾಮಗಾರಿಗಳಿಗೆ ಈಗ ಕೆಲಸಕ್ಕೆ ಅನುಮತಿ ನೀಡುತ್ತಿದ್ದಾರೆ. ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿನ ಕಾಮಗಾರಿಗಳಿಗೆ ತಡೆ ನೀಡಿದ್ದಾರೆ ಎಂದು ಆರೋಪಿಸಿದರು.

ದ್ವೇಷದ ರಾಜಕಾರಣ ಬಿಡದೆ ಇದ್ದರೆ ಮುಂದಿನ ದಿನಗಳಲ್ಲಿ ಅನುಭವಿಸಬೇಕಾಗುತ್ತದೆ. ಉತ್ತರ ಕರ್ನಾಟಕದ ಜನರ ಪರಿಸ್ಥಿತಿ ಸಹ ಹಾಗೆಯೇ ಇದೆ. ಸುಮ್ಮನೆ ಕೇಂದ್ರ ಸರ್ಕಾರದ ಮೇಲೆ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ರಾಜಕೀಯ ದ್ವೇಷ ಬಿಟ್ಟು ಕೆಲಸಮಾಡಿ. ಕಾಮಗಾರಿ ತಡೆ ಹಿಡಿದ ಜಿಲ್ಲೆಗಳ ಜನತೆ ಕರ್ನಾಟಕದವರಲ್ಲವೇ? ಈ ಕುರಿತು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮರು ಚುನಾವಣೆಯಲ್ಲಿ ಕೆ.ಆರ್.ಪೇಟೆ ಸೇರಿದಂತೆ ಎಲ್ಲ ಕಡೆ ಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆ. ಬಿಜೆಪಿಯನ್ನು ರಾಜ್ಯದಿಂದ ತೆಗೆಯುವ ಗುರಿಯೇ ನಮ್ಮ ಕೆಲಸ ಎಂದು ಬಿಜೆಪಿ ವಿರುದ್ಧ ಗುಡುಗಿದರು.

ಹೊಳೆನರಸೀಪುರದ ಚಾಕೇನಹಳ್ಳಿ ಮಿನಿ ಡ್ಯಾಂಗೆ ಹೆಚ್.ಡಿ.ರೇವಣ್ಣ ಮತ್ತು ಕುಟುಂಬದವರಿಂದ ಬಾಗಿನ ಅರ್ಪಿಸಲಾಯಿತು. ಸಂಸದ ಪ್ರಜ್ವಲ್ ರೇವಣ್ಣ ಮತ್ತು ಜಿಲ್ಲಾ ಪಂಚಾಯತ್ ಸದಸ್ಯೆ ಭವಾನಿ ರೇವಣ್ಣ ಭಾಗಿಯಾಗಿದ್ದರು. ಚಾಕೆನಹಳ್ಳಿ ಡ್ಯಾಂ 12 ವರ್ಷಗಳ ನಂತರ ಭರ್ತಿಯಾಗಿದ್ದು, ಕಾಮಸಮುದ್ರ ಏತನೀರಾವರಿ ಮೂಲಕ ಡ್ಯಾಂಗೆ ನೀರು ಹರಿಸಲಾಗಿದೆ. 5 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಡ್ಯಾಂಗೆ ಇಂದು ಬಾಗಿನ ಅರ್ಪಿಸಲಾಯಿತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights