ನರೇಗಾಗೆ 10 ಕೋಟಿ: ‘ಒಂದು ಭಾರತ ಏಕ ವೇತನ’ ಪದ್ಧತಿ ಜಾರಿಗೆ ಚಿಂತನೆ!
ಭಾರತದಲ್ಲಿ ಹದಗೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ನ್ನು ಒಕ್ಕೂಟ ಸರ್ಕಾರ ಬಿಡುಗಡೆ ಮಾಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ಯಾಕೇಜ್ ಕೆಲ ವಿವರಗಳನ್ನು ನಿನ್ನೆ ಪ್ರಸ್ತಾಪಿಸಿದ್ದರು. ಇಂದು ಮಾಧ್ಯಮಗೋಷ್ಟಿಯಲ್ಲಿ ಮತ್ತಷ್ಟು ವಿವರಣೆ ನೀಡಿದ್ದು, ಮಾತನಾಡಿದ ಅವರು ವಲಸೆ ಕಾರ್ಮಿಕರಿಗೆ ನೆರವು ನೀಡವ ಆಶ್ವಾಸನೆ ನೀಡಿದ್ದಾರೆ.
ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ವಿತ್ತ ಸಚಿವೆ, ಮಹಿಳೆಯರಿಗೆ ರಾತ್ರಿ ಪಾಳೆ ಕೆಲಸ ಮಾಡುವ ಕಾನೂನು ಜಾರಿಗೆ ತರುತ್ತೇವೆ. ಒಂದು ಭಾರತ ಏಕ ವೇತನ ಪದ್ಧತಿ ಜಾರಿ ಮಾಡಲಾಗುವುದು. ರೈತರ ಸಾಲ ಮರುಪಾವತಿ ಅವಧಿ ವಿಸ್ತರಣೆ ಮಾಡಲಾಗುವುದು. ಅಗತ್ಯವಿದ್ದರೆ ಮನ್ರೇಗಾಗೆ ಹೆಚ್ಚಿನ ಹಣ ಬಿಡುಗಡೆ ಮಾಡುತ್ತೇವೆ ಎಂದರು.
ಎಲ್ಲಾ ವಲಸಿಗರಿಗೆ ಉಚಿತ ಆಹಾರ ಧಾನ್ಯ ವಿತರಣೆಗೆ ನಿರ್ಧರಿಸಲಾಗಿದೆ. ಇದರಿಂದ 8 ಕೋಟಿ ವಲಸಿಗರಿಗೆ ನೆರವಾಗಲಿದೆ. ಪಡಿತರ ಕಾರ್ಡ್ ಇಲ್ಲದವರಿಗೆ ಮುಂದಿನ 2 ತಿಂಗಳವರೆಗೆ ಪ್ರತಿ ಒಬ್ಬರಿಗೂ 5 ಕೆ.ಜಿ ಅಕ್ಕಿ/ಗೋಧಿ 1 ಕೆ.ಜಿ ಬೇಳೆ ವಿತರಣೆ ಮಾಡಲಾಗುತ್ತದೆ. ವಲಸೆ ಕಾರ್ಮಿಕರಿಗೆ 3 ಹೊತ್ತು ಊಟ ನೀಡಲಾಗುವುದು. ಮನ್ರೆಗಾ 10 ಕೋಟಿ ಅನುದಾನ ಮೀಸಲಿಡಲಾಗಿದೆ.
ಯಾವುದೇ ರಾಜ್ಯದಲ್ಲಿ ದೇಶದ ಯಾವುದೇ ಮೂಲೆಯಲ್ಲಾದರೂ ಪಡಿತರ ಕಾರ್ಡ್ ನ್ನು ಬಳಕೆ ಮಾಡಬಹುದು. ಇದು ದೇಶದ 76 ಕೋಟಿ ಜನರಿಗೆ ಉಪಯೋಗವಾಗುತ್ತದೆ ಎಂದು ತಿಳಿಸಿದ್ದಾರೆ.

