ನಾಯಿಗೆ ಕಾರು ಡಿಕ್ಕಿ ಹೊಡೆದ ಪ್ರಕರಣ ಸಂಬಂಧ ಓರ್ವ ಅಮಾಯಕ ಬಲಿ…!
ಇತ್ತೀಚಿನ ದಿನಗಳಲ್ಲಿ ಎಲ್ಲಾ ರಂಗಗಳೂ ಬಹಳ ಬೇಗ ಬೆಳೆದಿದ್ದು ಇಡೀ ಪ್ರಪಂಚವನ್ನೇ ಮನುಷ್ಯ ನಿಯಂತ್ರಿಸುವಷ್ಟರ ಮಟ್ಟಿಗೆ ಬೆಳೆದಿದ್ದಾನೆ. ಆದ್ರೆ ಇಡೀ ವಿಶ್ವವೇ ಬೆಳೆಯುತ್ತಿದ್ರೂ ಮಾನವ ಸ್ವಭಾವ ದಿನದಿಂದ ದಿನಕ್ಕೆ ಸಂಕುಚಿತಗೊಳ್ಳುತ್ತಿದೆ. ಇದಕ್ಕೊಂದು ಉದಾಹರಣೆಯನ್ನ ನೋಡುವುದಾದ್ರೆ ನಾವು ರಸ್ತೆಯಲ್ಲಿ ಚಲಿಸುವಾಗ ನಾಯಿಗಳು ಅಡ್ಡ ಬರುವುದು ಸಾಮಾನ್ಯ. ಆದ್ರೆ ನಾಯಿಯ ವಿಚಾರಕ್ಕೆ ಈ ಗ್ರಾಮದಲ್ಲಿ ಅಮಾಯಕ ವ್ಯಕ್ತಿಯನ್ನೇ ಕೊಲೆ ಮಾಡಲಾಗಿದ್ದು ಮನೆಗೆ ಬೆಂಕಿ ಹಚ್ಚಿ ಧ್ವಂಸ ಮಾಡಲಾಗಿದೆ. ಕೊಲೆ ಮಾಡಿದ್ದಾದ್ರೂ ಯಾಕೆ? ಯಾವ ಕಾರಣಕ್ಕಾಗಿ ಕೊಲೆ ನಡೆದಿದೆ ಅಂತೀರಾ ಅದಕ್ಕೆ ಉತ್ತರ ಇಲ್ಲಿದೆ ನೋಡಿ…
ಹಾಸನ ಜಿಲ್ಲೆ ಆಲೂರು ತಾಲೂಕಿನ ಹಾಂಜಿಹಳ್ಳಿ ಗ್ರಾಮದಲ್ಲಿ ನಾಯಿಯ ವಿಚಾರಕ್ಕೆ ಓರ್ವ ವ್ಯಕ್ತಿಯನ್ನೇ ಕೊಲೆ ಮಾಡಲಾಗಿದೆ. ಕಾರು ಚಲಿಸುವಾಗ ನಾಯಿ ಅಡ್ಡ ಬಂದು ಗಾಯಗೊಂಡಿದೆ ಸುಮ್ಮನಾಗದ ನಾಯಿಯ ಮಾಲೀಕ ಕಾರು ಚಾಲಕನನ್ನು ಮಚ್ಚಿನಿಂದ ಕೊಲ್ಲಲು ಯತ್ನಿಸಿದ ವೇಳೆ ಜಗಳ ಬಿಡಿಸಲು ಬಂದ ವ್ಯಕ್ತಿಯನ್ನೇ ಕೊಲೆ ಮಾಡಿದ್ದಾನೆ. ಮಹೇಶ್ ಎಂಬುವನು ರಾಮು ಎಂಬಾತನನ್ನ ಕೊಲೆ ಮಾಡಿದ್ದಾನೆ. ಧರ್ಮಪುರಿ ಗ್ರಾಮದ ಗಂಗಾಧರ್ ಎಂಬಾತ ಶುಂಠಿ ಕೆಲಸಕ್ಕೆ ತನ್ನ ವಾಹನದಲ್ಲಿ ನಿನ್ನೆ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದನು. ಈ ವೇಳೆ ಅದೇ ಗ್ರಾಮದ ಮಹೇಶ್ ಎಂಬುವರ ಸಾಕು ನಾಯಿ ವಾಹನಕ್ಕೆ ಸಿಲುಕಿ ಗಾಯಗೊಂಡಿದೆ. ಮಾನವೀಯ ದೃಷ್ಟಿಯಿಂದ ಗಂಗಾಧರ್ ನು ನಾಯಿಯ ಚಿಕಿತ್ಸೆಗೆ ಹಣ ಕೊಟ್ಟು ತೆರಳಿದ್ದಾನೆ. ಆದ್ರೆ ಇಷ್ಟಕ್ಕೆ ಸುಮ್ಮನಾಗದ ಮಹೇಶನು ನಿನ್ನೆ ಸಂಜೆ ವೇಳೆ ಗಂಗಾಧರ್ ಕೆಲಸ ಮುಗಿಸಿ ಸಂಜೆ ಹಿಂತಿರುಗುವಾಗ ವಾಹನ ಅಡ್ಡಗಟ್ಟಿ ಜಗಳ ತೆಗೆದಿದ್ದಾನೆ. ಈ ವೇಳೆ ಮಹೇಶ್ ನು ಗಂಗಾಧರನ ಮೇಲೆ ಏಕಾಏಕಿ ಮಚ್ಚಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ ಈ ವೇಳೆ ಮಿಸತ ಆಗಿ ಜಗಳ ಬಿಡಿಸಲು ಬಂದ ರಾಮುವಿನ ಕುತ್ತಿಗೆಗೆ ಮಚ್ಚಿನೇಟು ಬಿದ್ದಿದ್ದು ರಾಮು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಗಂಗಾಧರ್ ನಿಗೆ ಹಲ್ಲೆ ಮಾಡಲು ಯತ್ನಿಸಿದಾಗ ಈತನ ಬದಲು ರಾಮುವಿನ ಕುತ್ತಿಗೆಗೆ ಮಚ್ಚಿನೇಟು ಬಿದ್ದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಏನೂ ಮಾಡದ ತಪ್ಪಿಗೆ ಅಮಾಯಕ ರಾಮು ತನ್ನ ಜೀವ ಕಳೆದುಕೊಂಡಿದ್ದಾನೆ. ಗಂಗಾಧರ್ ನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಈ ಘಟನೆಯಿಂದಾಗಿ ರೊಚ್ಚಿಗೆದ್ದ ರಾಮುವಿನ ಸಂಭಂದಿಕರು ಗ್ರಾಮಕ್ಕೆ ನುಗ್ಗಿ ಮಹೇಶ್ ನ ಮನೆಗೆ ಬೆಂಕಿ ಹಚ್ಚಿ ಮಹೇಶ್ ನ ಕಾರಿಗೂ ಬೆಂಕಿಹಚ್ಚಿದ್ದು, ಇಡೀ ಮನೆಯನ್ನು ಧ್ವಂಸ ಮಾಡಿದ್ದಾರೆ. ಮನೆಯು ಸಂಪೂರ್ಣವಾಗಿ ಹಾಳಾಗಿದೆ ಘಟನೆ ಸಂಭಂದ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮಹೇಶ್ ನು ತಲೆಮರೆಸಿಕೊಂಡಿದ್ದು, ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ನಾಯಿಯ ವಿಷಯಕ್ಕೆ ಅಮಾಯಕ ಜೀವ ಕಳೆದುಕೊಂಡಿದ್ದಾನೆ. ಮತ್ತಿಬ್ಬರು ತಮ್ಮ ಜೀವನ ಹಾಳು ಮಾಡಿಕೊಂಡಿದ್ದಾರೆ ಆದ್ರೆ ಅರೋಪಿ ಮಹೇಶ್ ನಿಗೆ ತಕ್ಕ ಶಿಕ್ಷೆಯಾಗಬೇಕಿದೆ. ಈಗ ಮೂವರ ಸಂಸಾರವೂ ಬೀದಿಪಾಲಾಗಿದ್ದು ಬೇರೆಯವರು ಇಂತಹ ಘಟನೆಗಳಾಗದಂತೆ ಎಚ್ಚರವಹಿಸಬೇಕಿದೆ. ಆದ್ರೆ ಇಷ್ಟೇ ಅಲ್ಲದೇ ಮನೆ ಮೇಲೆ ದಾಳಿ ಮಾಡಿದವರ ಪತ್ತೆಗಾಗಿಯೂ ಪೊಲೀಸರು ದಸ್ತಗಿರಿ ಮಾಡುತ್ತಿದ್ದು 20 ಮಂದಿಯ ವಿರುದ್ದ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಇಂತಹ ಸಣ್ಣಪುಟ್ಟ ವಿಷಯವನ್ನೂ ಹೀಗೆ ದೊಡ್ಡದು ಮಾಡಿ ಜೀವ ಬಲಿಯಾಗಿದ್ದು, ನಿಜಕ್ಕೂ ದುರಂತವೇ ಸರಿ. ಒಟ್ಟಾರೆ ಈಗಲಾದ್ರೂ ಇಂತಹ ಸಣ್ಣಪುಟ್ಟ ವಿಚಾರದಲ್ಲಿ ಎಚ್ಚರವಹಿಸುವುದು ಅಗತ್ಯ.