ನೆರೆ ಸಂತ್ರಸ್ತರ ಸಂಕಷ್ಟ ಆಲಿಸದ ಮೋದಿಯನ್ನ ದೇವರಿಗೆ ಹೋಲಿಸುವುದು ಬೇಡ – ಸಚಿವ ಹೆಚ್.ಕೆ ಪಾಟೀಲ್
ಪ್ರಧಾನಿ ಮೋದಿ ಬಗ್ಗೆ ಮಾತನಾಡುವವರು ಆಕಾಶಕ್ಕೆ ಉಗುಳಿದಂತೆ ಎಂದು ಹೇಳಿಕೆ ನೀಡಿದ್ದ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿರುವ ಮಾಜಿ ಸಚಿವ ಹೆಚ್.ಕೆ ಪಾಟೀಲ್ ನೆರೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಜನರ ಬಗ್ಗೆ ಅನುಕಂಪ ತೋರಿಸದ ಪ್ರಧಾನಿ ಮೋದಿ ಏನು ದೇವರಾ..? ಎಂದು ಕಿಡಿಕಾರಿದರು.
ಪ್ರತಾಪ್ ಸಿಂಹ ಹೇಳಿಕೆ ಕುರಿತು ಮಾಧ್ಯಮಗಳಿಗೆ ಇಂದು ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕ ಹೆಚ್.ಕೆ ಪಾಟೀಲ್, ಪ್ರತಾಪ್ ಸಿಂಹ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಸಂಭವಿಸಿದ ನೆರೆಯಿಂದಾಗಿ ನೂರಾರು ಜನ ಸಾವನ್ನಪ್ಪಿದ್ದಾರೆ. ಅಪಾರ ಪ್ರಮಾಣದ ಬೆಳೆ ನಾಶವಾಗಿ ಜನರು ನೆಲೆ ಕಳೆದುಕೊಂಡಿದ್ದಾರೆ. ಆದರೆ, ಇಂತಹ ಕಷ್ಟಕರ ಸನ್ನಿವೇಶದಲ್ಲಿ ಸಂಸದ ಪ್ರತಾಪ್ ಸಿಂಹ ಜನರ ಕಷ್ಟಕ್ಕೆ ಸ್ಪಂದಿಸದೆ ಬೇಜವಬ್ದಾರಿ ಹೇಳಿಕೆ ಕೊಡುವ ಮೂಲಕ ಪ್ರಧಾನಿ ಮೋದಿಯನ್ನು ಮೆಚ್ಚಿಸಲು ಮುಂದಾಗಿದ್ದಾರೆ ಎಂದು ಲೇವಡಿ ಮಾಡಿದರು.
ಉತ್ತರ ಕರ್ನಾಟಕದಲ್ಲಿ ನೆರೆಯಿಂದ . ಬೆಳೆ, ಜಾನುವಾರುಗಳು ನೀರುಪಾಲಾಗಿವೆ.ಹೀಗಿರುವಾಗ ಪ್ರಜ್ಞಾವಂತ ಸಂಸದರಾಗಿ ಹೀಗೆ ಹೇಳಿದ್ದು ಸರಿಯಲ್ಲ. ದೇವರು, ದೇವ ಮಾನವ ಅನ್ನೋದನ್ನ ಬಿಡಿ.ಅದು ನಮ್ಮ ದೇಶದಲ್ಲಿ ನಡೆಯಲ್ಲ. ಪ್ರವಾಹ ಅಪ್ಪಳಿಸಿ ಎರಡು ತಿಂಗಳಾದರು ಪರಿಹಾರ ನೀಡಿಲ್ಲ. ಜನರು ನೆಲೆ ಕಳೆದುಕೊಂಡಿದ್ದಾರೆ. ರೈತ ಪ್ರತಿನಿತ್ಯ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಇವರ ನೆರವಿಗೆ ಬರದ ಪ್ರಧಾನಿ ವರ್ತನೆ ನಿಜಕ್ಕೂ ಬೇಜಾವಾಬ್ದಾರಿತನದಿಂದ ಕೂಡಿದೆ ಎಂದು ಪ್ರಧಾನಿ ಮೋದಿ ವಿರುದ್ದ ಹೆಚ್.ಕೆ ಪಾಟೀಲ್ ವಾಗ್ದಾಳಿ ನಡೆಸಿದರು