ಫೇಸ್‌ಬುಕ್‌ ಫೇಕ್‌ ಯುವತಿಯ ಲವ್‌ ದೋಖಾ- 15 ಲಕ್ಷ ಕಳೆದುಕೊಂಡ ಹುಬ್ಬಳ್ಳಿಯ ಯುವಕ

ಯುವತಿಯ ಹೆಸರಲ್ಲಿ ಪ್ರೀತಿಯ ನಾಟಕವಾಡಿ ಹುಬ್ಬಳ್ಳಿಯ ಯುವಕನಿಂದ ಹಣ ಸುಲಿಗೆ ನಡೆದಿದೆ. ಫೇಸ್‌ಬುಕ್‌ನಲ್ಲಿ ನಕಲಿ ಐಡಿ ತೆರೆದು ಲವ್‌ ದೋಖಾ ಮಾಡಲಾಗಿದೆ. ಮೆಸೇಜ್‌ ಮೋಡಿಗೆ ತುತ್ತಾಗಿ ಹದಿನೈದು ಲಕ್ಷ ರೂಪಾಯಿ ಕಳೆದುಕೊಂಡ ಯುವಕ ಈಗ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾನೆ. ಫೇಕ್‌ ಅಕೌಂಟ್‌ ನಂಬಿ ಹಣ ಕಳೆದುಕೊಂಡ.

ಹುಬ್ಬಳ್ಳಿಯ ರಾಯನಾಳ ನಿವಾಸಿ ರುದ್ರಗೌಡ ಪಾಟೀಲ್‌ ಎಂಬಾತನಿಗೆ ಫೇಸ್‌ಬುಕ್‌ನಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಬಂದಿತ್ತು. ಸುಷ್ಮಾ ಎನ್ನುವ ಹೆಸರಲ್ಲಿದ್ದ ಫೇಸ್‌ಬುಕ್‌ ಅಕೌಂಟ್‌ನಿಂದ ಬಂದಿದ್ದ ರಿಕ್ವೆಸ್ಟನ್ನು ರುದ್ರಗೌಡ ಅಕ್ಸೆಪ್ಟ್‌ ಮಾಡಿಕೊಂಡಿದ್ದ. ನಂತರ ಪರಸ್ಪರ ಚಾಟ್‌ ಮಾಡುತ್ತಾ ಸ್ನೇಹ ಬೆಳೆದಿತ್ತು. ಹಾಸನದ ಗಿಣಗೇರಿ ಗ್ರಾಮದ ನಿವಾಸಿ ಎಂದು ಪರಿಚಯ ಮಾಡಿಕೊಂಡಿದ್ದ ಸುಷ್ಮಾ ಜೊತೆ ರುದ್ರಗೌಡ ನಿರಂತರವಾಗಿ ಚಾಟ್‌ ಮಾಡುತ್ತಿದ್ದ. ಫೋನ್‌ನಲ್ಲಿ ಮಾತನಾಡಬೇಕೆಂದರೆ ತನಗೆ ಮಾತು ಬರಲ್ಲಾ ಎಂದು ಸುಷ್ಮಾ ಹೇಳಿದ್ದಳಂತೆ. ಹೀಗಾಗಿ ಕೇವಲ ಮೆಸೇಜ್‌ ಕಳಿಸುವುದಕ್ಕಷ್ಟೆ ಇಬ್ಬರ ಸಂವಹನ ಸೀಮಿತವಾಗಿತ್ತು. ರುದ್ರಗೌಡನೊಂದಿಗೆ ಸಲಿಗೆ ಬೆಳೆದ ನಂತರ ಸುಷ್ಮಾ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಮೊದಲ ಐದು ಸಾವಿರ ಕಳಿಸಿಕೊಡುವಂತೆ ಕೇಳಿಕೊಂಡಿದ್ದಳು. ಕಷ್ಟವಿದೆ ಎಂದು ಹೇಳಿಕೊಂಡಿದ್ದ ಕಾರಣ ರುದ್ರಗೌಡ ಐದು ಸಾವಿರ ರೂಪಾಯಿ ಕೊಟ್ಟಿದ್ದ. ತಮ್ಮ ತಂದೆ- ತಾಯಿ ಸರ್ಕಾರಿ ನೌಕರರು. ತನ್ನ ಹೆಸರಲ್ಲಿ ಮೂವತ್ತು ಎಕರೆ ಕಾಫಿ ತೋಟವಿದೆ. ತನ್ನ ಎಟಿಎಮ್‌ ತಂದೆಯವರ ಬಳಿಯಿದೆ. ಹೀಗಾಗಿ ಸ್ನೇಹಿತೆ ಪುಷ್ಪಾ ಅಕೌಂಟ್‌ಗೆ ಹಣ ಹಾಕುವಂತೆ ಸುಷ್ಮಾ ಹೇಳಿದ್ದನ್ನು ರುದ್ರಗೌಡ ನಂಬಿದ್ದ. ಹೀಗಾಗಿ ಪುಷ್ಪಾ ಅಕೌಂಟ್‌ಗೆ ಹಣ ಕಳಿಸಿದ್ದ. ಅದಾಗಿ ಸ್ವಲ್ಪ ದಿನಕ್ಕೆ ಮತ್ತೆ ಹಣಕ್ಕಾಗಿ ಕೇಳಿಕೊಂಡಿದ್ದ ಸುಷ್ಮಾ ಸ್ವಲ್ಪ ಸಾಲಾಗಿದೆ. ಕೆಲವರು ಹಣ ಕೊಡದೆ ಮೋಸ ಮಾಡಿದ್ದಾರೆ. ಹೀಗಾಗಿ ಸಾಲ ಬಗೆಹರಿಸಲು ಹಣ ಕಳಿಸಿ ಎಂದು ಮನವಿ ಮಾಡಿದ್ದಳು. ಪ್ರತಿನಿತ್ಯ ಫೇಸ್‌ಬುಕ್‌ ಚಾಟ್‌ನಲ್ಲಿ ರುದ್ರಗೌಡನ ಜೊತೆ ಹರಟೆ ಹೊಡೆಯುತ್ತಾ ಮರಳು ಮಾಡಿದ್ದಳು. ಸುಷ್ಮಾ ಮಾಡಿದ ಮೋಡಿಗೆ ಬಲಿಬಿದ್ದಿದ್ದ ರುದ್ರಗೌಡ ಕೇಳಿದಷ್ಟು ಹಣ ಕೊಟ್ಟಿದ್ದಾನೆ. ಪುಷ್ಪಾ, ಲಕ್ಷ್ಮಿ, ರಕ್ಷಿತಾ, ಪ್ರತಾಪಗೌಡ ಎಂಬುವವರ ಹೆಸರಲ್ಲಿರುವ ಅಕೌಂಟ್‌ಗಳಿಗೆ ಹದಿನೈದು ಲಕ್ಷ ರೂಪಾಯಿಯನ್ನು ಟ್ರಾನ್ಸ್‌ಫರ್‌ ಮಾಡಿದ್ದಾನೆ.
ಗಿಣಗೇರಿಯಲ್ಲಿ ಸಿಗಲಿಲ್ಲ ಗಿಣಿ.

ಪ್ರೀತಿಸುವುದಾಗಿ ಹೇಳಿದ್ದ ಸುಷ್ಮಾ ಪದೇಪದೇ ಹಣದ ಬೇಡಿಕೆ ಇಡುತ್ತಿದ್ದಳು. ವಿಡಿಯೋ ಕಾಲ್‌ ಮಾಡಲು ಹೇಳಿದರೆ ಸುಷ್ಮಾ ಒಪ್ಪಿರಲಿಲ್ಲ. ಸಂಶಯಗೊಂಡ ರುದ್ರಗೌಡ ತನ್ನ ಹಣವನ್ನು ವಾಪಸ್‌ ಕೊಡುವಂತೆ ಕೇಳಿದ್ದ. ಆದರೆ ಅದಕ್ಕೂ ಸ್ಪಂಧಿಸದ ಸುಷ್ಮಾ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಎರಡು ಬಾರಿ ಹಾಸನದ ಗಿಣಗೇರಿಗೆ ಹೋಗಿದ್ದ ರುದ್ರಗೌಡನಿಗೆ ಸುಷ್ಮಾ ಸಿಕ್ಕಿಲ್ಲ. ಗಿಣಗೇರಿಯ ಗಿಣಿ ಸಿಗದ್ದಕ್ಕೆ ರುದ್ರಗೌಡ ಕಂಗಾಲಾಗಿದ್ದಾನೆ.

ಸೈಬರ್‌ ಕ್ರೈಮ್‌ ಪೊಲೀಸರಿಗೆ ದೂರು.ತಾನು ಯಾವೆಲ್ಲಾ ಅಕೌಂಟ್‌ಗೆ ಹಣ ಕಳಿಸಿದ್ದನೋ ಅವರ ಕುರಿತು ಮಾಹಿತಿ ಕಲೆ ಹಾಕಿದ್ದಾನೆ. ಅಕೌಂಟ್‌ಗೆ ಹಣ ಟ್ರಾನ್ಸ್‌ಫರ್‌ ಮಾಡಿಸಿಕೊಂಡಿದ್ದ ಪ್ರತಾಪ್‌ಗೌಡ ಎಂಬಾತನಿಗೆ ಫೋನ್‌ ಮಾಡಿ ಮಾತನಾಡಿದ್ದಾನೆ. ಅದಕ್ಕೆ ಪ್ರತಾಪಗೌಡ ತಾನೇ ಫೇಕ್‌ ಅಕೌಂಟ್‌ ತೆರೆದು ಚಾಟ್‌ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ಹಣ ಮರಳಿಸಲು ಆಗಲ್ಲ ಎಂದಿದ್ದಾನೆ. ಹೀಗಾಗಿ ರುದ್ರಗೌಡ ಧಾರವಾಡ ಸೈಬರ್‌ ಕ್ರೈಮ್‌ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಆಸ್ತಿ ಸಿಗುತ್ತೆ ಎನ್ನುವ ಲೆಕ್ಕಾಚಾರವಿತ್ತಾ?

ರುದ್ರಗೌಡನಿಗೆ ಈಗಾಗಲೇ ಮದುವೆಯಾಗಿದೆ. ಆದರೂ ಸುಷ್ಮಾಳನ್ನು ಮದುವೆಯಾದರೆ ಕಾಫಿ ತೋಟ, ಅಪಾರ ಆಸ್ತಿ ಸಿಗುತ್ತೆ ಎನ್ನುವ ಆಸೆಗೆ ಬಲಿಯಾಗಿದ್ದ ಅನ್ನಿಸುತ್ತೆ. ಹೀಗಾಗಿ ಫೇಸ್‌ಬುಕ್‌ನಲ್ಲಿ ಕಂಡ ಸುಂದರ ಯುವತಿಯ ಫೋಟೋ ನೋಡಿ ಮಾತನಿ ಬಲೆಗೆ ಬಿದ್ದಿದ್ದಾನೆ. ಮೆಸೇಜ್‌ ಮೋಡಿಗೆ ಒಳಗಾಗಿ ಇದ್ದುಬದ್ದ ಹಣವನ್ನೆಲ್ಲ ಕಳೆದುಕೊಂಡು ಬೀದಿಗೆ ಬಂದಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರ ಜೊತೆ ಚಾಟ್‌ ಮಾಡುವಾಗ ಎಷ್ಟು ಎಚ್ಚರ ವಹಿಸಿದರೂ ಕಡಿಮೆಯೇ ಎನ್ನುವುದು ಮತ್ತೊಮ್ಮೆ ರುಜುವಾತಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights