ಬಹು ಅಂಗಾಂಗ ವೈಫಲ್ಯದಿಂದ ಮಾಜಿ ಸಚಿವ ಸಿ.ಚನ್ನಿಗಪ್ಪ ವಿಧಿವಶ….!
ಬಹು ಅಂಗಾಂಗ ವೈಫಲ್ಯದಿಂದ ಬೆಂಗಳೂರಿನ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸಚಿವ ಸಿ.ಚನ್ನಿಗಪ್ಪ ಇಂದು ಬೆಳಿಗ್ಗೆ 8.20 ಕ್ಕೆ ವಿಧಿವಶರಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಭೈರನಾಯಕನಹಳ್ಳಿ ಸಿ.ಚನ್ನಿಗಪ್ಪ ನವರ ಹುಟ್ಟೂರು. ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶ ಮಾಡಿದ್ದರು. ಕೊರಟಗೆರೆ ಕ್ಷೇತ್ರದಿಂದ ಮೂರು ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. 2006 ರ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಜೆಡಿಎಸ್ ಜಿಲ್ಲಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಇವರು, ಮಧುಗಿರಿ ದೊಡ್ಡಬಳ್ಳಾಪುರದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಶಾಸಕ ಡಿ.ಸಿ.ಗೌರಿಶಂಕರ್, ಜಿಪಂ ಸದಸ್ಯ ಡಿ.ಸಿ.ವೇಣುಗೋಪಾಲ್ ಸೇರಿದಂತೆ ಹೆಂಡತಿ,ಪುತ್ರಿ, ಸಹೋದರರನ್ನ ಅಗಲಿದ್ದಾರೆ.
ಇಂದು ಸಂಜೆ ನೆಲಮಂಗಲದ ಗೋವಿಂದರಾಜನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸುವ ಸಾಧ್ಯತೆ ಇದೆ.