ಬಿಬಿಎಂಪಿ ಚುನಾವಣೆಯಲ್ಲಿ ಉತ್ತರ ಕರ್ನಾಟಕದವರಿಗೆ ಇಪ್ಪತ್ತು ಸ್ಥಾನಕ್ಕೆ ಬೇಡಿಕೆ :ಶಂಕರ್ ಬಿದರಿ
ಬಿಬಿಎಂಪಿ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ವಾಸವಾಗಿರುವ ಉತ್ತರ ಕರ್ನಾಟಕದವರಿಗೆ ಕನಿಷ್ಟ ೨೦ ವಾರ್ಡ್ ಗಳಲ್ಲಿ ಟಿಕೆಟ್ ನೀಡುವಂತೆ ರಾಜಕೀಯ ಪಕ್ಷಗಳಿಗೆ ಒತ್ತಡ ಹೇರಬೇಕೆಂದು ನಿವೃತ್ತ ಡಿಜಿಪಿ ಹಾಗೂ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಯ ಗೌರವ ಅಧ್ಯಕ್ಷ ಶಂಕರ ಬಿದರಿ ಹೇಳಿದ್ದಾರೆ.
ಒಕ್ಕೂಟದ ಉದ್ಘಾಟನೆ ಕಾರ್ಯಕ್ರಮದ ಪೂರ್ವ ಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ವಾಸವಾಗಿರುವ ಉತ್ತರ ಕರ್ನಾಟಕದ ಜನರು ಹೆಚ್ಚಾಗಿ ವಾಸವಿರುವ ಪ್ರದೇಶಗಳಲ್ಲಿ ಟಿಕೆಟ್ ನೀಡುವಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲ ಪ್ರಮುಖ ಪಕ್ಷಗಳಿಗೂ ಮನವಿ ಮಾಡಿಕೊಳ್ಳುವಂತೆ ಹೇಳಿದ್ದಾರೆ. ಉತ್ತರ ಕರ್ನಾಟಕದ ಬೇಡಿಕೆಗಳಿಗೆ ಸ್ಪಂದಿಸುವ ಪಕ್ಷಕ್ಕೆ ಉತ್ತರ ಕರ್ನಾಟಕದ ಜನರ ಬೆಂಬಲ ನೀಡಬೇಕು ಎಂದರು.
ಪ್ರತ್ಯೇಕ ರಾಜ್ಯ ನಮ್ಮ ಗುರಿಯಲ್ಲ. ನಮ್ಮ ಭಾಗದ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಡ ಹೇರಲು ಹೋರಾಟ ಅನಿವಾರ್ಯವಾಗಿದೆ. ಕೃಷ್ಣಾ ಕೊಳ್ಳದ ಯೋಜನೆಗಳು, ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ತಿಳಿಸಿದರು.
ಉತ್ತರ ಕರ್ನಾಟಕದ ಜನರಿಗೆ ಯಾವ ರಾಜಕೀಯ ಪಕ್ಷವೂ ಅಸ್ಪಶ್ಯವಲ್ಲ. ನಮ್ಮ ಭಾಗದ ಸಮಸ್ಯೆಗಳನ್ನು ಪರಿಹರಿಸುವ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದರು ಕಳೆದ ೭೦ ವರ್ಷಗಳಲ್ಲಿ ಎಲ್ಲ ಪಕ್ಷಗಳೂ ಉತ್ತರ ಕರ್ನಾಟಕದ ನಿರ್ಲಕ್ಷ್ಯ ಮಾಡಿವೆ. ಯಾವದೇ ಪಕ್ಷದ ಅಧಿಕಾರ ಬಂದರೂ ಉತ್ತರ ಕರ್ನಾಟಕದ ಯೋಜನೆಗಳಿಗೆ ಆದ್ಯತೆ ನೀಡದಿರುವುದರಿಂದ ಆ ಭಾಗ ಇನ್ನೂ ಹಿಂದುಳಿಯುವಂತಾಗಿದೆ.
ಮುಂದಿನ ಪೀಳಿಗೆಗಾಗಿಯಾದರೂ ಆ ಭಾಗದಲ್ಲಿ ಒಳ್ಳೆಯ ಶಿಕ್ಷಣ, ಉದ್ಯೋಗ ದೊರೆಯಲು, ಕೈಗಾರಿಕೆಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಉತ್ತರ ಕರ್ನಾಟಕದ ಎಲ್ಲ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ಮಾಡುವುದು ಅನಿವಾರ್ಯ ಎಂದು ಹೇಳಿದರು.
ಸಭೆಯಲ್ಲಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಮೇಟಿ ಹಾಗೂ ಬೆಂಗಳೂರಿನ ೨೮ ಕ್ಕೂ ಹೆಚ್ಚು ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.