ಮನಕುಲುಕುವ ದಾರುಣ ಘಟನೆ : ಸಿಡಿಲಿನ ಹೊಡೆತಕ್ಕೆ ಜೊತೆಯಾಗಿ ಉಸಿರು ಬಿಟ್ಟ ಅಕ್ಕ ತಂಗಿ
ಅವರಿಬ್ರು ಒಡಹುಟ್ಟಿದ ಅಕ್ಕತಂಗಿಯರಾಗದೇ ಇದ್ರೂ ತುಂಬಿದ ಕುಟುಂಬದಲ್ಲಿ ಅಕ್ಕ ತಂಗಿ ಬಾಂಧವ್ಯದ ಸಂಬಂಧ ಬೆಸಗಿದ್ರು. ಮದುವೆಯಾಗಿ ಬಂದ ಮೇಲೆ ಸಹೋದರಿಯರಿಬ್ರ ಸಂಬಂಧ ಗಟ್ಟಿಯಾಗಿತ್ತು. ಆದರೆ ಅದಾವ ವಿಧಿಯಾಟವೋ ಗೊತ್ತಿಲ್ಲ. ಕೊನೆ ಉಸಿರು ನಿಲ್ಲೋವಾಗಲೂ ಸಹ ಅವರಿಬ್ರೂ ಜೊತೆಯಾಗಿಯೇ ಉಸಿರು ನಿಲ್ಲಿಸಿದ್ದಾರೆ.
ವಿಧಿಯ ಬರಹವೇನೋ ಗೊತ್ತಿಲ್ಲ. ದೇವರ ಆಟ ಬಲ್ಲವರಾರು ಎಂಬಂತೆ ಆ ದುರ್ಘಟನೆಯೊಂದು ನಡೆದು ಹೋಗಿದೆ.. ಮಳೆರಾಯ ತನ್ನ ಆಯುಧಗಳನ್ನ ಬಳಸಿ ಒಂದೊಂದೆ ಬಲಿ ಪಡಿತಾನೆ ಇದಾನೆ. ನೆನ್ನೆ ಮನಕುಲುಕುವ ದಾರುಣ ಘಟನೆಯೊಂದು ನಡೆದು ಹೋಗಿದೆ. ಮಧ್ಹ್ಯಾನ್ಹದ ವೇಳೆಗೆ ಮಳೆರಾಯ ಅಷ್ಟಾಗಿ ಆರ್ಭಟಿಸದೇ ಇದ್ರೂ ತನ್ನ ಗುಡುಗು ಸಿಡಿಲಿನಿಂದ ಆರ್ಭಟಿಸಿದ್ದೇ ಹೆಚ್ಚು. ಪರಿಣಾಮ ಸಿಡಿಲಿನ ಹೊಡೆತ ಅಕ್ಕ ತಂಗಿ ಅಂತಾನೂ ನೋಡದೇ ಒಂದೇ ವೇಳೆಗೆ ಅವರ ಉಸಿರ ಬಡಿತ ನಿಲ್ಲಿಸಿಬಿಟ್ಟಿದ್ದಾನೆ. ಹೌದು ಗದಗ ಜಿಲ್ಲೆಯ ಕಿರಟಗೇರಿ ಅನ್ನೋ ಗ್ರಾಮದ ಒಂದೇ ಮನೆ ಸೊಸೆಯಂದಿರಾಗಿ ಬಂದು ಅಕ್ಕ ತಂಗಿಯರಿಗಿಂತ ಒಂದು ಕೈ ಹೆಚ್ಚಾಗಿಯೇ ಇದ್ದ ಮೂವತ್ತು ವರ್ಷದ ವಿಜಯಲಕ್ಷ್ಮೀ ಹಾಗೂ ನಲವತ್ತೆರೆಡು ವರ್ಷದ ದ್ರಾಕ್ಷಾಯಣಿ ಅನ್ನೋ ಇಬ್ಬರು ಮಹಿಳೆಯರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಬೆಳಿಗ್ಗೆಯೇ ಬುತ್ತಿಕಟ್ಟಿಕೊಂಡು ತಮ್ಮ ಹೊಲಕ್ಕೆ ಬಂದು ಕೃಷಿ ಕಾಯಕದಲ್ಲಿ ತೊಡಗಿದ್ದ ಇಬ್ಬರು ಸಹೋದರಿಯರು ಮಧ್ಹ್ಯಾಹ್ನ ಹೊಟ್ಟೆ ಹಸಿವಾಯಿತೆಂದು ಮರದ ನೆರಳಿನ ಆಸರೆ ಪಡೆದು ಊಟಕ್ಕೆ ಕುಳಿತಿದಾರೆ. ತಾವು ತಂದಿದ್ದ ಊಟದ ಬುತ್ತಿಗಂಟು ಬಿಚ್ಚಿ ಊಟ ಮಾಡೋಕೆ ಶುರು ಮಾಡಿದಾರೆ.ಆದರೆ ಜವರಾಯನಿಗೆ ಅದೇನು ಅವಸರವಿತ್ತೇನೋ..ಗೊತ್ತಿಲ್ಲ. ಅವರ ಊಟ ಸಂಪನ್ನವಾಗುವಷ್ಟರಲ್ಲೇ ಸಾವಿನ ಮನೆಗೆ ಕರೆದೊಯ್ಯದಿದ್ದಾನೆ.
ಬೆಳಿಗ್ಗೇಯೇ ಹೊಲಕ್ಕೆ ಹೋದವರು ರಾತ್ರಿ ವೇಳೆಯಾದ್ರೂ ಸಹ ಇಬ್ಬರು ಮನೆಗೆ ಬಾರದ್ದಕ್ಕೆ ಕುಟುಂಬಸ್ಥರು ಗಾಬರಿಗೊಂಡಿದಾರೆ. ನಂತರ ಸಂಬಂಧಿಕರೊಬ್ಬರು ಇವರನ್ನ ಕರೆಯಲು ಬಂದಾಗ ಸಹೋದರಿಯರು ಸಿಡಿಲು ಬಡಿದು ಸಾವನ್ನಪ್ಪಿರೋ ವಿಷಯ ತಿಳಿದು ಬಂದಿದೆ. ಸ್ಥಳಕ್ಕೆ ಗ್ರಾಮೀಣ ಪೊಲಿಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇನ್ನು ಮೃತ ವಿಜಯಲಕ್ಷ್ಮೀ ಹಾಗೂ ದ್ರಾಕ್ಷಾಯಿಣಿಗೂ ಒಬ್ಬೊಬ್ಬ ಹೆಣ್ಣುಮಕ್ಕಳಿದ್ದಾರೆ. ಅಮ್ಮಾ ಅನ್ನೋ ಕೂಗನ್ನೇ ಆ ದೇವರು ಮಕ್ಕಳಿಂದ ಕಸಿದುಕೊಂಡಿದ್ದು ಯಾವ ನ್ಯಾಯ ಅಂತ ಸಂಬಂಧಿಕರ ರೋಧನ ಮುಗಿಲು ಮುಟ್ಟಿದೆ. ಗ್ರಾಮದ ಒಂದೇ ಕುಟುಂಬದ ಸಹೋದರಿಯರ ಸಾವು ಗ್ರಾಮವನ್ನೇ ಬೆಚ್ಚಿಬೀಳಿಸಿದೆ. ಇಡೀ ಗ್ರಾಮಕ್ಕೆ ಸ್ಮಶಾನ ಮೌನ ಆವರಿಸಿಕೊಂಡಿದೆ. ಇನ್ನು ಇದೇ ಜಿಲ್ಲೆಯಲ್ಲಿ ಮತ್ತೊಂದು ಸಿಡಿಲಿನ ಅವಘಡ ನಡೆದು ಹೋಗಿದೆ. ರೋಣ ಪಟ್ಟಣದ ಐವತ್ತು ವರ್ಷದ ಶರಣಮ್ಮ ಹವಳಪ್ಪನವರ ಅನ್ನೋ ಮಹಿಳೆ ಸಿಡಿಲಿಗೆ ಬಲಿಯಾಗಿದ್ದಾಳೆ.ಸಂಜೆ ವೇಳೆ ಕೃಷಿ ಕಾಯಕ ಮುಗಿಸಿ ಹೊಲದಿಂದ ಮರಳಿ ಮನೆಗೆ ವಾಪಾಸ್ಸಾಗುತ್ತಿದ್ದಾಗ ಈ ಘಟನೆ ಜರುಗಿದೆ.ನಂತರ ರೋಣ ಪೊಲೀಸ್ ಠಾಣೆ ಪೊಲಿಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
ಇಂದು ನಡೆದು ಹೋದ ಈ ಎರೆಡು ದಾರುಣ ಘಟನೆಗಳಿಗೆ ಜಿಲ್ಲೆಯ ಜನತೆ ಕಂಬನಿ ಮಿಡಿದಿದೆ.ಜೊತೆಯಾಗಿಯೇ ಇಹಲೋಕ ತ್ಯಜಿಸಿದ ಸಹೋದರಿಯರ ಸಾವು ಕಿರಟಗೇರಿ ಗ್ರಾಮಕ್ಕೆ ಅತೀವ ದುಃಖವನ್ನೇ ತಂದೊಡ್ಡಿದೆ. ಜನ್ಮ ತಾಳುವಾಗ ಒಡಹುಟ್ಟಿದವರಾಗಲಿಲ್ಲ…ಆದರೆ ಸಾವಿನ ಪಯಣದಲ್ಲಿ ನೀವಿಬ್ರೂ ಒಂದಾಗಿ ಹೋದಿರಲ್ಲ ಅಂತ ಗ್ರಾಮದ ಜನತೆಯ ಕಣ್ಣೀರಿಗೆ ಕೊನೆಯಿಲ್ಲದಾಗಿದೆ.