ಮಹಾರಾಷ್ಟ್ರಕ್ಕೆ ನೀರು ಒದಗಿಸುವುದಾಗಿ ಸಿಎಂ ಭರವಸೆ : ಸಿಎಂ ಹೇಳಿಕೆ ಸಮರ್ಥಿಸಿಕೊಂಡ ಗೃಹ ಸಚಿವರು
ರಾಜ್ಯದಿಂದ ಮಹಾರಾಷ್ಟ್ರದ ಹಲವು ಗ್ರಾಮಗಳಿಗೆ ನೀರು ಒದಗಿಸುವುದಾಗಿ ಸಿಎಂ ಭರವಸೆ ನೀಡಿರುವ ವಿಚಾರವನ್ನು ಮೈಸೂರಿನಲ್ಲಿ ಗೃಹ ಸಚಿವ ಬಸವರಾಜ ಬೋಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ.
ಮುಖ್ಯಮಂತ್ರಿಯವರು ಮಹಾರಾಷ್ಟ್ರದ ಚುನಾವಣಾ ಪ್ರಚಾರಕ್ಕೆ ಹೋಗಿದ್ದರು. ಅಲ್ಲಿ ನೆರೆದಿದ್ದ ಜನರ ಕೋರಿಕೆಗೆ ಸ್ಪಂದಿಸಿ ಆ ರೀತಿ ಹೇಳಿದ್ದಾರೆ. ಅಲ್ಲದೇ ಅಲ್ಲಿನ ಜನರು ಕುಡಿಯಲು ನೀರು ಕೇಳುತ್ತಿದ್ದಾರೆ. ಕೊಡು ಕೊಳ್ಳುವಿಕೆಯ ಆಧಾರದ ಮಹಾರಾಷ್ಟ್ರ ನೀರು ಕೇಳಿದೆ. ನೀರು ಬಿಡುವ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಅಲ್ಲಿನ ಜನ ಮುಖ್ಯಮಂತ್ರಿಗಳನ್ನ ಪ್ರಶ್ನೆ ಮಾಡಿದಾಗ ಇಲ್ಲ ಎನ್ನಲಾಗದೇ ಸಿಎಂ ಆ ರೀತಿ ಉತ್ತರಿಸಿದ್ದಾರೆ ಅಷ್ಟೇ. ಮಹಾರಾಷ್ಟ್ರ ಕರ್ನಾಟಕದ ನಡುವೆ ಕೊಡು ಕೊಳ್ಳುವಿಕೆ ಬಹಳ ಕಾಲದಿಂದಲೂ ಮುಂದುವರೆಸಿಕೊಂಡು ಬಂದಿದೆ ಎಂದು ಸಿಎಂ ಪರ ಬ್ಯಾಂಟಿಂಗ್ ಮಾಡಿದ್ದಾರೆ.
ರಾಜ್ಯಕ್ಕೆ ಸ್ಲೀಪರ್ ಸೆಲ್ಸ್ಗಳ ಸುಳಿವು :-
ಇದೇ ವೇಳೆ ಸಚಿವರು ರಾಜ್ಯಕ್ಕೆ ಸ್ಲೀಪರ್ ಸೆಲ್ಸ್ಗಳು ನುಸುಳಿರುವ ಬಗ್ಗೆ ಮಾಹಿತಿ ಇದೆ ಎಂದಿದ್ದಾರೆ. ಕರಾವಳಿ, ಬೆಂಗಳೂರು, ಮೈಸೂರಿನಲ್ಲಿ ಅವರ ಆ್ಯಕ್ಟಿವಿಟಿ ಹೆಚ್ಚಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಾಂಗ್ಲಾ ಮೂಲದ ಉಗ್ರಗಾಮಿ ಸಂಘಟನೆ ಸದಸ್ಯರು ನುಸುಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಉಗ್ರರನ್ನು ಸದೆಬಡಿಯಲು ರಾಜ್ಯ ಪೊಲೀಸ್ ಕಾರ್ಯೋನ್ಮುಖವಾಗಿದೆ. ಜಮ್ಮು ಕಾಶ್ಮೀರ ಹಾಗೂ ಬಾಂಗ್ಲಾದೇಶದ ಗಡಿ ಮೂಲಕ ಉಗ್ರರು ದೇಶವನ್ನು ಪ್ರವೇಶಿಸಿದ್ದಾರೆ. ಬಾಂಗ್ಲಾದೇಶದವರು ಹೆಚ್ಚಾಗಿ ರಾಜ್ಯಕ್ಕೆ ಪ್ರವೇಶ ಮಾಡಿದ್ದಾರೆಂದು ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿದೆ ಎಂದರು.
ರಾಜ್ಯದ ಕರಾವಳಿ ಪ್ರದೇಶದಲ್ಲಿ ಉಗ್ರರು ಸಕ್ರಿಯರಾಗಿದ್ದರೆಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡಲಾಗಿದೆ. ಬಾಂಗ್ಲಾ ಮೂಲದ ಉಗ್ರರು ಹೆಚ್ಚಾಗಿ ನಮ್ಮ ರಾಜ್ಯಕ್ಕೆ ನುಸುಳುವ ಕೆಲಸ ಮಾಡ್ತಿದ್ದಾರೆ.
ಅತ್ಯಂತ ಜನನಿಬಿಡ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಅಂತಹ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಆ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಕೆಲವೊಮ್ಮೆ ಹರಡುವ ವದಂತಿಗಳಿಗೆ ರಾಜ್ಯದ ಜನತೆ ಕಿವಿಗೊಡುವ ಅಗತ್ಯವಿಲ್ಲ. ಬೆಂಗಳೂರಿನ 20 ಕ್ಕೂ ಹೆಚ್ಚು ಸ್ಥಳಗಳಲ್ಲಿ ಉಗ್ರರ ಅಡಗುದಾಣಗಳು ಪತ್ತೆಯಾಗಿರುವ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ. ಜನರ ಸುರಕ್ಷತೆಯ ದೃಷ್ಟಿಯಿಂದ ಕೆಲವೊಂದು ಮಾಹಿತಿಗಳನ್ನು ತಿಳಿಸಲು ಸಾಧ್ಯವಿಲ್ಲ ಎಂದು ಗೃಹಸಚಿವ ಬಸವರಾಜ ಬೋಮ್ಮಾಯಿ ಹೇಳಿದ್ದಾರೆ.