ಮಹಾರಾಷ್ಟ್ರ ಕನ್ನಡಿಗರ ಪರ ಯತ್ನಾಳ ಬ್ಯಾಟಿಂಗ್- ಮಹಾರಾಷ್ಟ್ರದ ಜತ್ ಭಾಗಕ್ಕೆ ನೀರು ಬಿಟ್ಟರೆ ತಪ್ಪೇನಿಲ್ಲ- ಯತ್ನಾಳ
ಪಾಕಿಸ್ತಾನಕ್ಕೆ ಮಾನವೀಯ ದೃಷ್ಠಿಯಿಂದ ನೀರು ಬಿಟ್ಟವರು ನಾವು. ಕರ್ನಾಟಕ ಮಹಾರಾಷ್ಟ್ರಕ್ಕೆ ನೀರು ಬಿಡುವುದರಲ್ಲಿ ತಪ್ಪೇನಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಮಹಾರಾಷ್ಟ್ರ ಮತ್ತು ಸಿಎಂ ಬಿ. ಎಸ್. ಯಡಿಯೂುರಪ್ಪ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ.
ವಿಜಯಪುದಲ್ಲಿ ಮಾತನಾಡಿದ ಅವರು, ಈ ಹಿಂದೆ ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಮಹಾರಾಷ್ಟ್ರ ಕೃಷ್ಣಾ ಮತ್ತು ಭೀಮಾ ನದಿಗೆ ಹಣ ಪಡೆಯದೇ ಮಾನವೀಯತೆ ಆಧಾರದ ಮೇಲೆ ಸಾಕಷ್ಟು ಬಾರಿ ನೀರು ಬಿಡುಗಡೆ ಮಾಡಿದೆ. ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಜತ್ ತಾಲೂಕಿನಲ್ಲಿ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಕರ್ನಾಟಕದಿಂದ ನೀರು ಬಿಡುವುದರಲ್ಲಿ ತಪ್ಪೇನಿಲ್ಲ. ಈಗ ಕೊಡು ಕೊಳ್ಳುವ ನೀತಿಯಲ್ಲಿ ನೀರು ಬಿಡುವುದರಲ್ಲಿ ತಪ್ಪೇನಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಈ ಹಿಂದೆ ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ತಾವು ಹಾಗೂ ಅಂದಿನ ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವರು ಸೇರಿ ಈ ವಿಚಾರವಾಗಿ ಚರ್ಚಿಸಿದ್ದೇವೆ. ಈ ವಿಷಯ ಇನ್ನೂ ಚರ್ಚೆಯ ಹಂತದಲ್ಲಿದೆ. ಮಹಾರಾಷ್ಟ್ರ ಕರ್ನಾಟಕಕ್ಕೆ ನೀರು ಬಿಡುಗಡೆ ಮಾಡಲಿ. ಆ ನೀರನ್ನು ಕರ್ನಾಟಕದ ಮೂಲಕ ಮಹಾರಾಷ್ಟ್ರದ ಗಡಿ ಭಾಗಕ್ಕೆ ಬಿಡುವ ನಿಟ್ಟಿನಲ್ಲಿ ಸಿಎಂ ಈಗ ಪ್ರಸ್ತಾಪಿಸಿರುವ ವಿಚಾರ ಚುನಾವಣೆ ಬಳಿಕ ಕಾರ್ಯರೂಪಕ್ಕೆ ಬರುವಂತಾಗಲಿ ಎಂದು ಯತ್ನಾಳ ಆಗ್ರಹಿಸಿದರು.
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ನೀರಾವರಿ ಯೋಜನೆಗಳು ದೊಡ್ಡದಿವೆ. ಈ ಹಿನ್ನೆಲೆ ಕೊಡು-ಕೊಳ್ಳುವ ಸೂತ್ರದಿಂದ ಈ ಯೋಜನೆಗಳು ಸಮರ್ಪಕವಾಗಿ ಜಾರಿ ಸಾಧ್ಯ. ಈ ಹಿಂದೆ ಬಿ. ಡಿ. ಜತ್ತಿ ಸಿಎಂ ಆಗಿದ್ದಾಗ ಮಹಾರಾಷ್ಟ್ರ ಕರ್ನಾಟಕದ ಉತ್ತರ ಭಾಗಕ್ಕೆ ನೀರು ಕೊಡುವುದಾಗಿ ಹೇಳಿತ್ತು. ಆದರೆ, ಅಂದು ಬಿ. ಡಿ. ಜತ್ತಿ ಹಣ ನೀಡದ ಹಿನ್ನೆಲೆಯಲ್ಲಿ ಈ ಭಾಗಕ್ಕೆ ಶಾಶ್ವತವಾಗಿ ಸಿಗಬೇಕಿದ್ದ ನೀರಾವರಿಗೆ ತೊಂದರೆಯಾಯಿತು. ಈ ಮೂಲಕ ಅಂದು ಬಿ. ಡಿ. ಜತ್ತಿ ಒಪ್ಪದೆ ಪ್ರಮಾದ ಮಾಡಿದ್ದಾರೆ. ಅವರ ತಪ್ಪಿನಿಂದ ಉತ್ತರ ಕರ್ನಾಟಕದ ಜನ ತೊಂದರೆ ಎದುರಿಸುತ್ತಿದ್ದಾರೆ ಎಂದು ಯತ್ನಾಳ ಹೇಳಿದರು.
ಸಿಎಂ ನದಿ ವಿವಾದ ಸೇರಿದಂತೆ ಎಲ್ಲ ವಿವಾದಗಳ್ನು ಸೌಹಾರ್ಧಯುತವಾಗಿ ಬಗೆಹರಿಸಿಕೊಳ್ಳಲು ಮುಂದಾಗಬೇಕು. ಕರ್ನಾಟಕ, ಮಹಾರಾಷ್ಟ್ರ ಬೇರೆಯಲ್ಲ, ಒಂದೇ ತಾಯಿಯ ಮಕ್ಕಳು, ಭಾರತದ ಭಾಗಗಳು. ಕಾಶ್ಮೀರ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಕರ್ನಾಟಕ, ಮಹಾರಾಷ್ಟ್ರಗಳ ನಡುವಿನ ಸಮಸ್ಯೆಗಳೇನು ಬಗೆಹರಿಯುವುದಿಲ್ಲವೇ? ಎಂದು ಪ್ರಶ್ನಿಸಿದ ಯತ್ನಾಳ, ಕರ್ನಾಟಕ ಮತ್ತು ಮಹಾರಾಷ್ಟ್ರ ಸಿಎಂ ಗಳು ಈ ನಿಟ್ಟಿನಲ್ಲಿ ಹೊಸ ಅಧ್ಯಾಯ ಬರೆಯಬೇಕು ಎಂಬುದು ನಮ್ಮ ಭಾವನೆ ಎೞದು ತಿಳಿಸಿದರು.
ಮಹಾದಾಯಿ ವಿಚಾರದಲ್ಲಿ ಗೋವಾ ಮಾತ್ರ ಮೊಂಡುತನ ಪ್ರದರ್ಶಿಸುತ್ತಿದೆ. ಈ ಹಿಂದೆ ಎಂ. ಬಿ. ಪಾಟೀಲ ಜಲಸಂಪನ್ಮೂಲ ಸಚಿವರಾಗಿದ್ದಾಗ ಮಹಾರಾಷ್ಟ್ರಕ್ಕೆ ತೆರಳಿ ಅಲ್ಲಿನ ಜಲಸಂಪನ್ಮೂಲ ಸಚಿವರೊಂದಿಗೆ ಮಹಾದಾಯಿ ವಿಚಾರವಾಗಿ ಚರ್ಚಿಸಿದ್ದೇವೆ. ಕರ್ನಾಟಕದ ಗಡಿಯಲ್ಲಿರುವ ಮಹಾರಾಷ್ಟ್ರದ ಜತ್ ಭಾಗಕ್ಕೆ ನೀರು ಕೊಡುವ ಕುರಿತು ನಾನು, ಎಂ. ಬಿ. ಪಾಟೀಲ, ವಿನಯ ಕೋರೆ ಈ ಹಿಂದೆ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಗಿರೀಶ ಮಹಾಜನರೊಂದಿಗೆ ಒಂದೇ ವೇದಿಕೆಯಲ್ಲಿ ತಂದು ಚರ್ಚೆ ನಡೆಸಿದ್ದೇವೆ. ಗೋವಾದ ಮೊಂಡುತನದಿಂದ ಮಹಾದಾಯಿ ಸಮಸ್ಯೆ ಬಗೆ ಹರಿದಿಲ್ಲ. ಮಹಾದಾಯಿ ವಿಚಾರದಲ್ಲಿ ಮಹಾರಾಷ್ಟ್ರ ಕರ್ನಾಟಕಕ್ಕೆ ಸಹಕರಿಸಿದರೆ ನಮಗೆ ನೀರು ಸಿಗುತ್ತದೆ. ಆದರೆ, ಗೋವಾ ಈ ವಿಷಯದಲ್ಲಿ ಮೊಂಡುತನ ಪ್ರದರ್ಶಿಸುತ್ತಿದೆ. ಗೋವಾದ ವಾದ ಅರ್ಥಹೀನವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಗೋವಾವನ್ನೂ ಕರೆಯಿಸಿ ಸೌಹಾರ್ಧಯುತವಾಗಿ ಮಹಾದಾಯಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದು ಯತ್ನಾಳ ಆಗ್ರಹಿಸಿದರು.
ಮಹಾದಾಯಿ ವಿಚಾರದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಒಂದಾದರೆ ಗೋವಾದ ಪ್ರಶ್ನೆಯೇ ಬರುವುಪದಿಲ್ಲ. ಗೋವಾಕ್ಕೆ ಮಹಾರಾಷ್ಟ್ರದಿಂದಲೇ ನೀರು ಹೋಗುತ್ತದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈಗ ಒಂದು ಹೆಜ್ಜೆಯನ್ನು ಮುಂದಿಟ್ಟಿದ್ದಾರೆ. ಈ ವಿಚಾರ ಚುನಾವಣೆಯ ಬಳಿಕವೂ ಮುಂದುವರೆಯಬೇಕು ಎಂದು ಯತ್ನಾಳ ಹೇಳಿದರು.