ಫ್ಯಾಕ್ಟ್‌ಚೆಕ್: ಕಾಳಿಂಗ ಸರ್ಪವೊಂದು ನಾಗಮಣಿಗೆ ಕಾವಲು ಕಾಯುತ್ತಿದೆ ಎಂದೇಳುವ ವಿಡಿಯೋದ ಅಸಲೀಯತ್ತೇನು?

ಕಪ್ಪು ಕಾಳಿಂಗ ಸರ್ಪವೊಂದು ನಾಗಮಣಿ ಕಾವಲು ಕಾಯುತ್ತಿದೆ. ರಾತ್ರಿಯಲ್ಲೂ ಆ ಹಾವು ಕಾವಲು ಕಾಯುತ್ತಿರುತ್ತದೆ. ಹಾಗಾಗಿ ನಾಗಮಣಿಯನ್ನು ಮುಟ್ಟುವ ಧೈರ್ಯ ಯಾರಿಗೂ ಇಲ್ಲ. ಇದೀಗ ಈ ವಿಡಿಯೋ ನೋಡಿದವರೆಲ್ಲಾ ಶಾಕ್ ಆಗಿದ್ದಾರೆ ಎಂದು ಜೀ ಕನ್ನಡ ನ್ಯೂಸ್ 13 ಸೆಕೆಂಡ್‌ಗಳ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯನ್ನು ಬಿತ್ತರಿಸಿದೆ.

ಇದೇ ರೀತಿ ಕೆಲವು ತೆಲುಗು ವಾಹಿನಿಗಳು  ವಿಡಿಯೊ ವೈರಲ್ ಆಗಿದೆ ಎಂದು ವಿಡಿಯೋದೊಂದಿಗೆ ಲೇಖನವನ್ನು ಪ್ರಕಟಿಸಿರುವುದನ್ನು ಕಾಣಬಹುದು.

ತೆರೆ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲೂ ನಾಗಮಣಿಗೆ ನಾಗರಹಾವು ಕಾವಲು ಕಾಯುವ ದೃಶ್ಯವೊಂದು ಇದೀಗ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಎಂದು India Herald ಎಂಬ ತೆಲುಗು ವಾಹಿನಿಯೊಂದು ವರದಿ ಮಾಡಿದೆ.

ನಾಗರ ಹಾವೊಂದು ನಾಗಮಣಿಗೆ ರಾತ್ರಿಕಾವಲು ಕಾಯುತ್ತಿದೆ ಎಂದು ಸುದ್ದಿ ಪ್ರಸಾರದೊಂದಿಗೆ ವಿಡಿಯೋವನ್ನು ಹಂಚಿಕೊಂಡಿದೆ.

 

ನಾಗರ ಹಾವಿನ ತಲೆಯಿಂದ ನಾಗಮಣಿನ್ನು ತೆಗೆಯುವ ವಿಡಿಯೋದ ವಾಸ್ತವವೇನು ?

ಮುಖ್ಯವಾಗಿ ನಾಗರ ಮಣಿ ಅಥವಾ ನಾಗಮಣಿ ಬಗ್ಗೆ ಸಾಕಷ್ಟು ಕಪೋಲ ಕಲ್ಪಿತ ಕತೆಗಳು ಪುರಾಣಗಳಲ್ಲಿ ಕೇಳಿಬರುತ್ತವೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು,  ಮತ್ತು ಕೆಲ ಸುದ್ದಿ ವೆಬ್‌ಸೈಟ್‌ಗಳಲ್ಲಿ ಅದರ ಬಗ್ಗೆಯೇ  ಸುದ್ದಿಯನ್ನು ಪ್ರಸಾರ ಮಾಡಲಾಗಿತ್ತು.

ಜೀ ನ್ಯೂಸ್ ವರದಿಯ ಪ್ರಕಾರ ಹೊಲದ ನಾಗರಹಾವೊಂದು ಕಾಣಿಸಿಕೊಂಡಿದೆ, ಅಲ್ಲೇ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೂಬ್ಬ ಅದನ್ನ ಹಿಡಿಯಲು ಯತ್ನಿಸುತ್ತಾನೆ. ಆ ವ್ಯಕ್ತಿ ಅದನ್ನ ಮುಟ್ಟಿದ ತಕ್ಷಣ ಹಾವು ಸುರುಳಿ ಸುತ್ತಿಕೊಂಡು ಹಿಂದಕ್ಕೆ ಹೋಗುತ್ತದೆ. ಹಾವು ಗದ್ದೆಗೆ ರಸ್ತೆ ದಾಟಲು ಪ್ರಯತ್ನಿಸಿದಾಗ, ವ್ಯಕ್ತಿ ಅದರ ಬಾಲ ಹಿಡಿದು ರಸ್ತೆ ಬದಿಗೆ ತರುತ್ತಾನೆ. ಆಗ, ನಾಗರಹಾವು ಅವನ ಕೈ ಕಚ್ಚಲು ಪ್ರಯತ್ನಿಸುತ್ತದೆ.. ಅವನು ಜಾಣತನದಿಂದ ಪಾರಾಗುತ್ತಾನೆ.

ಕೊನೆಗೆ ನಾಗರ ಹಾವನ್ನು ಹಿಡಿದ ವ್ಯಕ್ತಿ ಅದರ ತಲೆಯನ್ನು ಚಾಕುವಿನಿಂದ ಕತ್ತರಿಸಿ. ಅದರೊಳಗಿಂದ ಒಂದು ಸಣ್ಣ ರತ್ನದಂತಹ ವಸ್ತು ಹೊರ ತೆಗೆಯುತ್ತಾನೆ. ತದನಂತರ ನಾಗರಹಾವನ್ನು ಬಿಡುತ್ತಾನೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಈ ವಿಡಿಯೋ ಹಳೆಯದಾದರೂ ಈಗ ಮತ್ತೆ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಇದು ನಿಜಕ್ಕೂ ನಾಗಮಣಿಯೇ ಎಂದು ಕಾಮೆಂಟ್ ಮಾಡಿದ್ದಾರೆ. ಸಧ್ಯ ಈ ವೀಡಿಯೊ 11,165,908 ವಿವ್ಸ್  ಪಡೆದುಕೊಂಡಿದೆ.

ಜೀ ನ್ಯೂಸ್ ಕನ್ನಡ, ತೆಲುಗು ಸ್ಪಾಟ್‌.ಕಾಂ ಮತ್ತು ಇಂಡಿಯನ್ ಹೆರಲ್ಡ್‌ ಕೆಲವು ವೆಬ್‌ಸೈಟ್‌ಗಳು ಸುದ್ದಿಯನ್ನು ಪ್ರಸಾರ ಮಾಡುವಾಗ ವಿಡಿಯೋ ಸೆರೆಯಾದ ಸ್ಥಳ ಅಥವಾ ಸಮಯದ ಯಾವ ಮಾಹಿತಿಯನ್ನು ಪ್ರಸಾರ ಮಾಡದೆ ವಿಡಿಯೋ ವೈರಲ್ ಎಂದಷ್ಟೆ ಲೇಖನವನ್ನು ಪ್ರಕಟಿಸಿವೆ. ಹಾಗಿದ್ದರೆ ಈ ಸುದ್ದ ನಿಜವೇ ಎಂದು ವೆಬ್‌ಸೈಟ್‌ಗಳು ಪ್ರಕಟಿಸಿರುವ ವಿಡಿಯೋವನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ನಾಗಮಣಿಯನ್ನು ಕಾಯುತ್ತಿರುವ ಕಾಳಿಂಗಸರ್ಪ ಎಂದು ಪ್ರತಿಪಾದಿಸಿ ವೈರಲ್ ಮಾಡಲಾಗಿರುವ ವಿಡಿಯೋವನ್ನು ಪರಿಶೀಲಿಸಲು  ಏನ್‌ ಸುದ್ದಿ.ಕಾಂ ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ MY odisha ಎಂಬ ಫೇಸ್‌ಬುಕ್‌ ಫೇಜ್‌ನಲ್ಲಿ ಜುಲೈ 2, 2021 ರಂದು  ‘ಹರ ಹರ ಮಹದೇವ್’ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡ ವಿಡಿಯೋ ಲಭ್ಯವಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಎರಡು ವಿಡಿಯೋ ವೈರಲ್ ಆಗಿದ್ದು ಒಂದು ವಿಡಿಯೋದಲ್ಲಿ ಕಾಳಿಂಗ ಸರ್ಪ ನಾಗರ ಮಣಿಯನ್ನು ಕಾವಲು ಕಾಯುತ್ತಿದೆ ಎಂದು ಮತ್ತೊಂದು ವಿಡಿಯೋದಲ್ಲಿ ನಾಗರ ಹಾವಿನ ತಲೆಯಿಂದ ನಾಗರ ಮಣಿಯನ್ನು ತೆಗೆಯುತ್ತಿರುವಂತೆಯು ತೋರಿಸಲಾಗಿದೆ.

ಈ ವಿಡಿಯೋದ ಸತ್ಯಾಸತ್ಯತೆಯನ್ನು ತಿಳಿಯಲು, ಬೆಂಗಳೂರಿನ ಕೆಂಗೇರಿ ಬಳಿ ಇರುವ ವನ್ಯಜೀವಿ ಸಂರಕ್ಷಣಾ ಕೇಂದ್ರವಾದ  ಪೀಪಲ್ಸ್‌ ಫಾರ್ ಅನಿಮಲ್ಸ್‌ ಇಂಡಿಯಾ ಸಂಸ್ಥೆಯಲ್ಲಿ ವನ್ಯಜೀವಿ ಸಂರಕ್ಷಣಾ ಸಂಯೋಜಕರಾಗಿ (ರಿಹ್ಯಾಬ್ಲಿಟೇಟರ್) ಕಾರ್ಯ ನಿರ್ವಹಿಸುತ್ತಿರುವ ರಾಹುಲ್ ಅವರನ್ನು ಸಂಪರ್ಕಿಸಿ ಮೇಲಿನ ವಿಡಿಯೋ ಕುರಿತು ಕೇಳಿದಾಗ ಇದು ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ.

ಬೆಂಗಳೂರಿನ ಯಾವುದೇ ಭಾಗಗಳಲ್ಲಿ ಹಾವು ಮತ್ತು ಇತರೆ ವನ್ಯಜೀವಿಗಳು ತೊಂದರೆಗೆ ಸಿಲುಕಿದ್ದರೆ ಅವುಗಳನ್ನು ಸಂರಕ್ಷಿಸಿ  ಪುನರ್ವಸತಿ ಕಲ್ಪಿಸಿ ಅಂತಿಮವಾಗಿ  ಅರಣ್ಯ ಪ್ರದೇಶಗಳಿಗೆ ಬಿಡುವ ಕಾಯಕವನ್ನು ಮಾಡುತ್ತಿದ್ದಾರೆ “ಭಾರತದಲ್ಲಿ ಅತೀ ದೊಡ್ಡ  ಹಾವುಗಳಾದ ” ರಸ್ಸೆಲ್ಸ್ ವೈಪರ್,  ಸಾ-ಸ್ಕೇಲ್ಡ್ ವೈಪರ್, ಸಾಮಾನ್ಯ ಕ್ರೈಟ್ ಮತ್ತು Spec. Cobra ಗಳೊಂದಿಗೆ ಕೆಲಸ ಮಾಡಿ ಅಪಾರ ಅನುಭವ ಹೊಂದಿರುವ ರಾಹುಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ರಾಹುಲ್ ಹೇಳಿಕೆಯ ಪ್ರಕಾರ ಭಾರತದಲ್ಲಿ ಮಾತ್ರವಲ್ಲದೆ, ಜಗತ್ತಿನ ಯಾವುದೇ ದೇಶದಲ್ಲಿ ಹುಡುಕಿದರೂ ನಾಗಮಣಿ ಹೊಂದಿರುವ ಹಾವುಗಳನ್ನು ಕಾಣಲು ಸಾಧ್ಯವೇ ಇಲ್ಲ ಮತ್ತು ಈ ನಾಗಮಣಿ ಎನ್ನುವುದು ಮೋಸದ ಜಾಲವಾಗಿದ್ದು, ಇಲ್ಲದಿರುವ ನಾಗಮಣಿ ಹೆಸರಿನಲ್ಲಿ ಜನರನ್ನು ವಂಚಿಸುವುದೇ ಇದರ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಪೀಪಲ್ಸ್‌ ಫಾರ್ ಅನಿಮಲ್ಸ್‌ ಇಂಡಿಯಾ ಸಂಸ್ಥೆಯಲ್ಲಿ ಸಂಯೋಜಕರಾಗಿ (ರಿಹ್ಯಾಭಿಟೇಟರ್) ಕಾರ್ಯ ನಿರ್ವಹಿಸುತ್ತಿರುವ ರಾಹುಲ್
ಚಿತ್ರ: ಪೀಪಲ್ಸ್‌ ಫಾರ್ ಅನಿಮಲ್ಸ್‌ ಇಂಡಿಯಾ ಸಂಸ್ಥೆಯಲ್ಲಿ ಸಂಯೋಜಕರಾಗಿ (ರಿಹ್ಯಾಬಿಟೇಟರ್) ಕಾರ್ಯ ನಿರ್ವಹಿಸುತ್ತಿರುವ ರಾಹುಲ್ ಹಾವುಗಳಿಗೆ ಚಿಕಿತ್ಸೆ ನೀಡುತ್ತಿರುವುದು

ಸಾವಿರಾರು ಜಾತಿ ಪ್ರಭೇದಗಳ ಹಾವುಗಳಿದ್ದು, ಯಾವುದೇ ಹಾವುಗಳಲ್ಲಿಯೂ ನಾಗರ ಮಣಿಯಾಗಲಿ, ವಜ್ರವಾಗಲಿ ಇಲ್ಲ. ಅನೇಕ ಬಾರಿ ಇಂತಹ ನಾಗರ ಹಾವುಗಳನ್ನು ಹಿಡಿದು ತಂದು ಅವುಗಳ ತಲೆಯಿಂದ ಕರಿ ಮಣಿಗಳನ್ನ ಚಾಕುವಿನಿಂದ ಹೊರತಂದು ಪ್ರದರ್ಶಿಸಿ ಈ ಕರಿ ಮಣಿಗೆ ವಿಶೇಷವಾದ ಶಕ್ತಿ ಇದೆ, ಇದನ್ನು ಖರೀದಿ ಮಾಡಿದರೆ ಶೀಮಂತರಾಗುತ್ತಾರೆ ಎಂದು ನಂಬಿಸು‍ತ್ತಾರೆ. (ವೈರಲ್ ವಿಡಿಯೋದಲ್ಲಿ ತೋರಿಸಿದಂತೆ)

ಹಾವುಗಳ ತಲೆಯಿಂದ ನಾಗಮಣಿ ಎಂದು ಹೇಳಿಕೊಂಡು ತೆಗೆಯಲಾಗುವ ಬೆಂಜೈನ್ ಕಾರ್ಬೋನೇಟ್ ಎಂಬ ಲೋಹದ ವಸ್ತು
ಹಾವುಗಳ ತಲೆಯಿಂದ ನಾಗಮಣಿ ಎಂದು ಹೇಳಿಕೊಂಡು ತೆಗೆಯಲಾಗುವ ಬೆಂಜೈನ್ ಕಾರ್ಬೋನೇಟ್ ಎಂಬ ಲೋಹದ ವಸ್ತು

ವಾಸ್ತವವಾಗಿ ನಾಗರ ಹಾವಿನ ತಲೆಯಿಂದ ತೆಗೆಯುವ ಈ ಮಣಿಯೂ ಬೆಂಜೈನ್ ಕಾರ್ಬೋನೇಟ್ ಎಂಬ ಲೋಹದ ವಸ್ತು ಅಷ್ಟೇ. ಈ ಮೋಸದ ಜಾಲದ ಗುಂಪಿನವರು ಮೊದಲೆ ಹಾವನ್ನು ಹಿಡಿದು, ಹಾವಿನ ತಲೆಯ ಮೇಲ್ಬಾಗದ ಚರ್ಮ ತೆಗೆದು ಆ ಮಣಿಯನ್ನು ಮೊದಲೇ ಇಟ್ಟಿರುತ್ತಾರೆ. ತಲೆಯ ಮೇಲಿನ ಗಾಯ ವಾಸಿಯಾಗುವವರೆಗೂ ಹಾವಿಗೆ ಆಹಾರ ನೀಡುತ್ತ ಆರೈಕೆ ಮಾಡುತ್ತಾರೆ.

ಕೆಲವು ದಿನಗಳ ಬಳಿಕ, ನಾಗರ ಮಣಿಯಿಂದ ಲಾಭವಾಗುತ್ತದೆ ಎಂದು ಜನರನ್ನು ನಂಬಿಸಿ ಅದನ್ನು ತೆಗೆಯುವ ಸಂದರ್ಭದಲ್ಲಿ ಇವರೇ ಸಾಕಿರುವ ಹಾವನ್ನು ತಂದು ಹಿಡಿದಂತೆ ಮಾಡಿ ಅವರ ಎದುರೇ ಆ ಮಣಿಯನ್ನು ತೆಗೆದು(ವೈರಲ್ ವಿಡಿಯೋದಲ್ಲಿ ತೋರಿಸಿದಂತೆ) ಇದೇ ನೋಡಿ ನಾಗಮಣಿ ಎಂದು ನಂಬಿಸುತ್ತಾರೆ.

ಇಂತಹ ಕರಿಮಣಿಗಳನ್ನ ಕೋಟಿಗಳ ಬೆಲೆಗೆ ಮಾರಾಟ ಮಾಡಿ ಮೋಸ ಮಾಡುವುದು ಇದೆ. ವೈಜ್ಞಾನಿಕವಾಗಿ ನೋಡುವುದಾದರೆ ಇಂತಹ ಮಣಿಗಳು ನಿಜವಾಗಿ ಇಲ್ಲ.  ಇದರ ಸತ್ಯ ತಿಳಿಯದ ಕೆಲವರು ಇದೇ ನಿಜವಾದ ನಾಗಮಣಿ ಎಂದು ನಂಬಿ ಕೋಟಿಗಟ್ಟಲೆ ಹಣ ಕೊಟ್ಟು ಖರೀದಿ ಮಾಡಿ ಮೋಸಹೋದ ಉದಹಾರಣೆಗಳು ಇವೆ.

ಮತ್ತೊಂದು ವೈರಲ್ ವಿಡಿಯೋದ ಬಗ್ಗೆ ಮಾತನಾಡಿದ ರಾಹುಲ್ ಈ ವಿಡಿಯೋದಲ್ಲಿರುವುದು ಕಾಳಿಂಗ ಸರ್ಪವಲ್ಲ, ಈ ಹಾವು ಉತ್ತರ ಭಾರತದ ಭಾಗದಲ್ಲಿ ಕಂಡುಬರುವ ಹಾವಾಗಿದ್ದು ಬ್ಲಾಕ್ ಪಿಗ್ಮೆಂಟ್ ರೀತಿ ಕಂಡುಬರುತ್ತದೆ.

ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದ್ದು ಕರಿ ಹಾವಿನ ಬಳಿ ಗಾಜಿನಂತಹ ವಸ್ತು ಬಿದ್ದಿದ್ದು ಅದು ಕ್ಯಾಮರಾದ ಫ್ಲಾಶ್ ಲೈಟಿನ ಬೆಳಕಿಗೆ ಹೊಳೆಯುತ್ತಿದ್ದು ಅದನ್ನೆ ನಾಗಮಣಿ ಎಂದು ವೈರಲ್ ಮಾಡುತ್ತಿದ್ದಾರೆ. ಆದರೆ ಇದೆಲ್ಲವೂ ಫೇಕ್ ನ್ಯೂಸ್‌ ಆಗಿದ್ದು ಬೇರೆ ಕಂಟೆಂಟ್‌ ಸಿಗದಿದ್ದಾಗ ಜನಸಾಮಾನ್ಯರ ಅಮಾಯಕತೆಯನ್ನು ಬಳಸಿಕೊಂಡು ಈ ರೀತಿ ಮಾಡುತ್ತಿರುವುದು ಸರಿಯಲ್ಲಾ ಎಂದು ಹೇಳಿದರು.

ಚಿತ್ರ : ಉತ್ತರ ಭಾರತದ ಭಾಗಗಳಲ್ಲಿ ಕಂಡುಬರುವ ಹಾವು
ಚಿತ್ರ : ಉತ್ತರ ಭಾರತದ ಭಾಗಗಳಲ್ಲಿ ಕಂಡುಬರುವ ಹಾವು

ಇದನ್ನ ತಡೆಗಟ್ಟಲು ಇರುವ ಒಂದೇ ಮಾರ್ಗವೆಂದರೆ ಜಾಗೃತಿ, ಜನರಿಗೆ ಇವುಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಕೊಡುವಂತ ಕಾರ್ಯಕ್ರಮಗಳನ್ನು ರೂಪಿಸಿದರೆ ಇಂತಹ ಫೇಕ್ ಸುದ್ದಿಗಳು ಕಡಿಮೆಯಾಗುತ್ತವೆ. ನಮ್ಮ ಸಂಸ್ಥೆ ಪೀಪಲ್ಸ್‌ ಫಾರ್ ಅನಿಮಲ್ಸ್‌ ಇಂಡಿಯಾ ಈಗಾಗಲೆ ಜನಜಾಗೃತಿ ಕರ್ಯಕ್ರಮಗಳನ್ನು ಮಾಡುತ್ತಿದ್ದು, ಅದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮತ್ತು ಯಾರೂ ಕೂಡ ಇಂತಹ ಸುಳ್ಳು ಸುದ್ದಿಗಳನ್ನು ನಂಬದಂತೆ ಮನವಿ ಮಾಡಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ‘ಪ್ರಾಜೆಕ್ಟ್‌ ಚೀತಾ’ ಕಾರ್ಯಕ್ರಮಕ್ಕಾಗಿ ಮರಗಳನ್ನು ನೆಲಸಮ ಮಾಡಿದ್ದು ನಿಜವೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights