ಫ್ಯಾಕ್ಟ್‌ಚೆಕ್ : ಹಸು ಮತ್ತು ಚಿರತೆಯ ಮುದ್ದಾಟದ ಪೋಟೋ ವೈರಲ್ ! ಈ ಘಟನೆ ನಡೆದಿದ್ದೆಲ್ಲಿ ?

ಹುಲಿ ಮತ್ತು ಪುಣ್ಯಕೋಟಿ ಕತೆಯನ್ನು ಕೇಳಿದ್ದೇವೆ. ಅದರಲ್ಲಿ ಬರುವ ವ್ಯಾಘ್ರ ಹುಲಿ ತನ್ನ ಹಸಿವನ್ನು ನೀಗಿಸಿಕೊಳ್ಳಲು ಹಸುವನ್ನು ತಿನ್ನಲು ಮುಂದಾಗುತ್ತದೆ, ನಂತರ ಹಸು ತನ್ನ ಕಂದನಿಗೆ ಹಾಲುಣಿಸಿ ಬರುತ್ತೇನೆ ಎಂದು ಹೋಗಿ ತನ್ನ ಕರುವಿನ ಹಸಿವನ್ನು ನೀಗಿಸಿ ಹಿಂತಿರುಗಿ ಬಂದು ಹುಲಿಯನ್ನು ಕುರಿತು..

ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿರಕ್ತವಿದೆಕೋ
ಚಂಡವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮಾತಕೇಳಿ
ಕಣ್ಣನೀರನು ಸುರಿಸಿ ನೊಂದೂ
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನೂ.. ಎಂದೇಳಿ ಬೆಟ್ಟದಿಂದ ಬಿದ್ದು ಸಾಯುತ್ತದೆ..,

ಈ ಪದ್ಯವನ್ನು ನಾವು ಚಿಕ್ಕಂದಿನಿಂದಲೂ ಕೇಳಿಕೊಂಡು ಬಂದಿದ್ದೇವೆ. ಚಿಕ್ಕ ವಯಸ್ಸಿನಲ್ಲಿ ಈ ಕತೆ ಕೇಳಿದಾಗಲೆಲ್ಲ ವಾವ್ ಎಷ್ಟು ಅದ್ಭುತವಾಗಿದೆ ಎನ್ನುತ್ತಿದ್ದೆವು. ಆದರೆ ಇಂತಹದ್ದೆ ಕತೆಗಳು ನಿಜ ಜೀವನದಲ್ಲೂ ನಡೆದರೆ ಹೆಂಗಿರತ್ತೆ ?  ಅಂತಹದೊಂದು ಘಟನೆ ವಾಸ್ತವದಲ್ಲಿ ನಡೆಯಲ್ಲು ಸಾದ್ಯವೆ ? ಎನ್ನುತ್ತಿರುವಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಚಿರತೆ ಹಸುವಿನ ಪೋಟೋವೊಂದು ವೈರಲ್ ಆಗಿದೆ. ಚಿರತೆ ಮತ್ತು ಹಸು ಪ್ರೀತಿ ಮತ್ತು ವಾತ್ಸಲ್ಯದಿಂದ ಇರುವುದನ್ನು ನೋಡಿದ್ದೇವೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪೋಟೋದೊಂದಿಗೆ ಘಟನೆಯ ಬಗ್ಗೆ ವಿವರಣೆ ನೀಡಲಾಗಿದ್ದು,

ಪ್ರತಿ ರಾತ್ರಿ ನಾಯಿಗಳು ಬೊಗಳುತ್ತಿದ್ದನ್ನು ಕೇಳಿಸಿಕೊಳ್ಳುತ್ತಿದ್ದ ಹಸುವಿನ ಮಾಲೀಕರು ಮನೆಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ನಂತರ  ಈ ಅದ್ಭುತ ದೃಶ್ಯವೊಂದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರತಿ ರಾತ್ರಿ ಚಿರತೆಯೊಂದು ಬಂದು ಹಸುವಿನೊಂದಿಗೆ ಮುದ್ದಾಡಿ, ತನ್ನ ಬಾಯಿಂದ ನೆಕ್ಕಿ ಹಸುವಿನ ಪಕ್ಕದಲ್ಲಿ ಪ್ರೀತಿಯಿಂದ ಮಲಗುವುದನ್ನು ಕಂಡಿದ್ದಾರೆ.

ಹಸುವಿನ ಹಿಂದಿನ ಮಾಲೀಕರನ್ನು ಸಂಪರ್ಕಿಸಿ ತಿಳಿದುಕೊಂಡಾಗ, ಚಿರತೆಯ ತಾಯಿ ಸತ್ತಾಗ ಈ ಚಿರತೆ ಕೇವಲ ಇಪ್ಪತ್ತು ದಿನದ ಮರಿ ಎಂದು ಹೇಳಿದರು. ಅಂದಿನಿಂದ ಹಸು ಚಿರತೆಗೆ ತನ್ನ ಹಾಲನ್ನು ಉಣಿಸುತ್ತಿದೆ ಮತ್ತು ಚಿರತೆ ಹಸುವನ್ನು ತನ್ನ ತಾಯಿ ಎಂದು ಭಾವಿಸುತ್ತದೆ, ಆದ್ದರಿಂದ ಚಿರತೆ ತನ್ನ ತಾಯಿಯ ಮೇಲೆ ಪ್ರೀತಿಯಿಂದ ಪ್ರತಿದಿನ ಹಸುವನ್ನು ಭೇಟಿ ಮಾಡಲು ಬರುತ್ತದೆ.” ಎಂದು ಹೇಳಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಹಾಗಿದ್ದರೆ ಈ ಸುದ್ದಿಯ ಹಿಂದಿರುವ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವೈರಲ್ ಪೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, ಇದು 2002ರಲ್ಲಿ ಸಂಭವಿಸಿದ ನಿಜ ಘಟನೆ. ಗುಜರಾತ್‌ನ ವಡೋದರಾದಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಆಂಟೋಲಿ ಎಂಬಲ್ಲಿನ ಜಂಬುಘೋಡಾ ವನ್ಯಜೀವಿ ಧಾಮದಲ್ಲಿ ಪರಿಸರಪ್ರೇಮಿ ಮತ್ತು ರೇಂಜರ್ ಆಗಿ ನಾಮನಿರ್ದೇಶನಗೊಂಡಿದ್ದ ಮನೋಜ್ ಠಾಕರ್ ಹಾಗೂ ಅರಣ್ಯಾಧಿಕಾರಿ (ರೇಂಜರ್) ರೋಹಿತ್ ವ್ಯಾಸ್ ಅವರು ಸೆರೆಹಿಡಿದ ಚಿತ್ರಗಳಾಗಿವೆ. website onforest.com  ನ ಲಿಂಕ್‌ ಅನ್ನು ಇಲ್ಲಿ ನೋಡಬಹುದು.

ಹಾಗಿದ್ದರೆ ವಾಸ್ತವವಾಗಿ ನಡೆದಿದ್ದೇನು ?

ಟೈಮ್ಸ್ ಬಳಗದ ಗುಜರಾತಿ ಪೋರ್ಟಲ್ ‘ಐ ಆ್ಯಮ್ ಗುಜರಾತ್’ನಲ್ಲಿ 2020ರಲ್ಲಿ ಈ ಕುರಿತ ವರದಿ ಪ್ರಕಟವಾಗಿದೆ ಇದಲ್ಲದೆ, ಮನೋಜ್ ಠಾಕರ್ ಅವರು ಗುಜರಾತ್‌ನ ಸಸ್ತನಿಗಳ ಕುರಿತಾಗಿ ಬರೆದಿರುವ ಪುಸ್ತಕ ‘Mammals of Gujarat’ನ 84ನೇ ಪುಟದಲ್ಲಿ ಈ ವಿಷಯ ದಾಖಲಾಗಿದೆ.

ಕೆಲವು ವರ್ಷಗಳ ಹಿಂದೆ ಈ ಚಿತ್ರವು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದಾಗ ಈ ಕುರಿತು ಝೀ ನ್ಯೂಸ್ ತಂಡವೂ ಕೂಡ ರಾತೋರಾತ್ರಿ ಕ್ಯಾಮೆರಾ ಕಾರ್ಯಾಚರಣೆ ನಡೆಸಿ, ಸತ್ಯಾಂಶವನ್ನು ಬಯಲಿಗೆಳೆದಿದೆ.

ಇದು 20 ವರ್ಷಗಳ ಹಿಂದೆ ನಡೆದ ಘಟನೆ

2002ರ ಜೂನ್ ಆಸುಪಾಸಿನಲ್ಲಿ ಹೆಣ್ಣು ಚಿರತೆಯೊಂದು ರಾತ್ರಿ ವೇಳೆ  ಕಬ್ಬಿನ ಗದ್ದೆಗೆ ಬಂದು ಅಲ್ಲಿದ್ದ ಹಂದಿ, ಇಲಿ, ಜಿಂಕೆ, ನಾಯಿ, ಹಕ್ಕಿಗಳು, ಮೇಕೆ ಮುಂತಾದವುಗಳನ್ನು ತಿನ್ನುತ್ತಿತ್ತು. ಗ್ರಾಮಸ್ಥರ ಆತಂಕ ಹೆಚ್ಚಾಯಿತು. ಈ ಕುರಿತು ಗಾಂಧಿನಗರದಲ್ಲಿದ್ದ ಅರಣ್ಯ ಸಚಿವರಿಗೂ ದೂರು ಹೋಯಿತು. ಅಂದಿನ ಅರಣ್ಯ ಸಚಿವ ದೌಲತ್ ಸಿಂಗ್ ದೇಸಾಯಿ ಅವರು ಮನೋಜ್ ಠಾಕರ್ ಅವರಿಗೆ ಈ ಕುರಿತು ಪರಿಶೀಲಿಸುವಂತೆ ಸೂಚಿಸಿದರು.

 

ನಂತರ ಚಿರತೆಯನ್ನು ಸೆರೆಹಿಡಿಯಲು ನಿರ್ಧರಿಸಿ ಕಾರ್ಯತಂತ್ರ ರೂಪಿಸಲಾಯಿತು. ಅದಕ್ಕೆ ಆಹಾರದೊಂದಿಗೆ ಬೋನು ಇರಿಸಲಾಯಿತು. ಇದರ ಫೋಟೋ ಹಾಗೂ ವಿಡಿಯೊ ದಾಖಲಾಗುವಂತೆ ವಡೋದರಾದ ಅರಣ್ಯಪ್ರೇಮಿ, ವನ್ಯಜೀವಿ ಇಲಾಖೆಯ ಗೌರವ ವಾರ್ಡನ್ ಆಗಿದ್ದ ಮನೋಜ್ ಠಾಕರ್ ಅವರು ನೋಡಿಕೊಂಡರು. ಸ್ಥಳೀಯ ರೇಂಜ್ ಫಾರೆಸ್ಟ್ ಅಧಿಕಾರಿ, ಅರಣ್ಯಾಧಿಕಾರಿ ರೋಹಿತ್ ವ್ಯಾಸ್, ಮನೋಜ್ ಠಾಕರ್ ಮತ್ತು ವಡೋದರದ ಇತರ ಪರಿಸರಪ್ರಿಯರು ಹಲವಾರು ರಾತ್ರಿಗಳನ್ನು ಅದೇ ಸ್ಥಳದಲ್ಲಿ ಕಳೆದು, ಚಿರತೆಯನ್ನು ಹಿಡಿದು (20 ಸೆಪ್ಟೆಂಬರ್ 2002ರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ) ಸಮೀಪದ ಅರಣ್ಯದಲ್ಲಿ ಬಿಟ್ಟರು.

ಗ್ರಾಮಸ್ಥರು ನಿಟ್ಟುಸಿರುಬಿಟ್ಟರಾದರೂ, ಹೊಸ ತಲೆನೋವು ಪ್ರಾರಂಭವಾಯಿತು. ಒಂದನೆಯದು ಈ ಚಿರತೆ ಇರುವಾಗ ಕರಡಿಗಳಾಗಲೀ, ಬೇರೆ ಪ್ರಾಣಿಗಳಾಗಲೀ ಕಬ್ಬಿನ ತೋಟಕ್ಕೆ ಬಂದು ಹಾನಿ ಮಾಡುತ್ತಿರಲಿಲ್ಲ. ಸುಮಾರು ಒಂದು ತಿಂಗಳ ಬಳಿಕ, ಗ್ರಾಮಸ್ಥರೊಬ್ಬರು ಪ್ರತಿ ರಾತ್ರಿ ಚಿರತೆಯೊಂದು ಬರುತ್ತಿರುವುದನ್ನು ಕಂಡರು. ಅದು ತಾವು ಬಯಲಿನಲ್ಲಿ ಕಟ್ಟಿದ್ದ ಹಸುವಿನ ಬಳಿ ಬರುತ್ತಿತ್ತು. ಹಸು-ಚಿರತೆಗಳು ಪರಸ್ಪರ ಮುದ್ದಾಡುತ್ತಾ, ಆಟವಾಡುತ್ತಾ ಕಳೆಯುತ್ತಿದ್ದವು. ಆದರೆ ಸಣ್ಣ ಸದ್ದಾದರೂ ಚಿರತೆ ಓಡಿ ಹೋಗಿ, ಸ್ವಲ್ಪ ಹೊತ್ತಿನ ಬಳಿಕ ಮರಳಿ ಹಸುವಿನ ಬಳಿಗೆ ಬರುತ್ತಿತ್ತು.

ಚಿರತೆ-ಹಸುವಿನ ಸ್ನೇಹ ವಾತ್ಸಲ್ಯದ ಕುರಿತಾದ ಈ ವಿಷಯವನ್ನು ಯಾರೂ ನಂಬಲಿಲ್ಲ. ಸಮೀಪ ಬೇರೆ ಹಸು, ಎತ್ತುಗಳಿದ್ದರೂ ಕೂಡ ಅವುಗಳಿಗೆ ಚಿರತೆ ಏನೂ ಮಾಡುತ್ತಿರಲಿಲ್ಲ. ಈ ವಿಷಯ ನಿಧಾನವಾಗಿ ಸುತ್ತಮುತ್ತ ಹರಡಿತು. ಪಕ್ಕದ ಅಟ್ಟಳಿಗೆ ಮನೆಯಲ್ಲಿ ಕುಳಿತು ಈ ವಿಶೇಷ ಸನ್ನಿವೇಶ ನೋಡಲೆಂದೇ ಜನರು ಬರತೊಡಗಿದರು. ಪತ್ರಿಕೆಗಳಲ್ಲಿಯೂ ಇದು ಸುದ್ದಿಯಾಯಿತು. ಝೀ ನ್ಯೂಸ್ ತನ್ನ ತಂಡವನ್ನು ಕಳುಹಿಸಿ ಸುದ್ದಿ ಮಾಡಿತು.

ಚಿರತೆಯು ರಾತ್ರಿ ಸುಮಾರು 9.30ರಿಂದ 11 ಗಂಟೆಯ ನಡುವೆ ಬರುತ್ತಿತ್ತು. ಅತ್ತಿತ್ತ ನೋಡಿಕೊಂಡು ಕಳ್ಳ ಹೆಜ್ಜೆಯಿಡುತ್ತಾ ಹಸುವಿನ ಬಳಿ ಬರುತ್ತಿದ್ದರೆ, ಹಸುವು ಇದರ ಆಗಮನದ ಸದ್ದನ್ನು ಕಿವಿಯಗಲಿಸಿಕೊಂಡು ಸುಳಿವು ಪಡೆಯುತ್ತಿತ್ತು. ಹಸುವು ತನ್ನದೇ ಮಗುವೆಂಬಂತೆ ಚಿರತೆಯನ್ನು ನೆಕ್ಕುತ್ತಾ, ಮುದ್ದಿಸುತ್ತಾ, ಅದಕ್ಕೆ ತನ್ನ ದೇಹವನ್ನು ಪ್ರೀತಿಯಿಂದ ಒರೆಸುತ್ತಾ, ಆಟವಾಡುತ್ತಿತ್ತು. ಕೆಲವು ಸಮಯದ ಬಳಿಕ ಚಿರತೆ ಬರುವುದು ನಿಂತುಹೋಯಿತು ಎಂದು ಠಾಕರ್ ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ 2002 ರಲ್ಲಿ ಅಂದರೆ ಸುಮಾರು 20 ವರ್ಷಗಳ ಹಿಂದೆ ಗುಜರಾತಿನಲ್ಲಿ ನಡೆದ ಘಟನೆಯನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಇದೊಂದು ಅಪರೂಪದ ಸಂಗತಿ ಮತ್ತು ನಿಜವಾಗಿಯೂ ನಡೆದ ಘಟನೆ ಎಂಬುದು ಸತ್ಯ.

ಕೃಪೆ : ಆಲ್ಟ್‌ ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಪತ್ನಿಗೆ ವಂಚಿಸಿ, ಗೆಳತಿಯೊಂದಿಗೆ ಸಿಕ್ಕಿ ಬಿದ್ದ ವ್ಯಕ್ತಿ ಆಗ್ರಾದ AAP ಜಿಲ್ಲಾಧ್ಯಕ್ಷನಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights