ಯುದ್ದೋನ್ಮಾದ ಹರಡುವ, ಯುದ್ದ ಮಾಡುವ ಮಾಧ್ಯಮಗಳು ಕಾಣೆಯಾಗಿವೆ!

ಕಾಶ್ಮೀರದ ಪುಲ್ವಾಮದಲ್ಲಿ 2019ರ ಫೆಬ್ರವರಿ 14 ರಂದು ನಡೆದ ದಾಳಿಯಲ್ಲಿ 45 ಭಾರತೀಯ ಸೈನಿಕರು ಹತ್ಯೆಯಾಗಿದ್ದರು. ಈ ಘಟನೆಯ ನಂತರ ಭಾರತೀಯ ಮಾಧ್ಯಮಗಳ ವರಸೆಯೇ ಬದಲಾಗಿತ್ತು. ಅದರಲ್ಲೂ ಕನ್ನಡ ಮಾಧ್ಯಮಗಳಂತೂ ಮೋದಿ ಏನಾದರೂ ಓಕೆ ಎಂದಿದ್ದರೆ, ನಾವೇ ಶಸ್ತ್ರ ಸಜ್ಜಿತವಾಗಿ ಯುದ್ದ ಭೂಮಿಗಿಳಿದು ಪಾಕಿಸ್ತಾನವನ್ನು ಹೊಡೆದುರುಳಿಸಿಯೇ ಬಿಡುತ್ತೇವೆ ಬಂಬ ಮಟ್ಟಕ್ಕೆ ಕಿರುಚಾಡಿದ್ದವು.

ಪುಲ್ವಾಮ ದಾಳಿಯ ನಂತರ ಬಾಲಕೋಟ್‌ನಲ್ಲಿ ಭಾರತ ಪ್ರತಿದಾಳಿ ನಡೆಸಿದ ನಂತರ ‘ಯುದ್ದ ಪಿಕ್ಸ್’, ಪಾಕಿಸ್ತಾನಕ್ಕೆ ಮುಂದೈತೆ ಮಾರಿಹಬ್ಬ’, ‘ಪಾಕ್‌ ವಿರುದ್ಧ ರಣಕಲಿ ಮೋದಿ’ ಎಂದೆಲ್ಲಾ ವಾರಗಟ್ಟಲೆ ಸ್ಟೋರಿ ಮಾಡಿ ಜನರಲ್ಲಿ ಯುದ್ದೋನ್ಮಾದದ ಭೀತಿಯನ್ನು ಹಬ್ಬಿಸಿದ್ದವು.

ಆದರೆ, ಯುದ್ದ ನಡೆಯಲಿಲ್ಲ. ದಾಳಿ-ಪ್ರತಿದಾಳಿಯೊಂದಿಗೆ ಉದ್ವಿಗ್ನನೆ ಶಮನಗೊಂಡಿತ್ತು. ಇನ್ನೂ ದಾಳಿ ನಡೆಸಿದವರು ಯಾರು, ದಾಳಿಗೆ ಕಾರಣವಾದರೂ ಏನು ಎಂಬುದನ್ನು ಸರ್ಕಾರ ಪ್ರಕಟಿಸಿಲ್ಲ. ಅತ್ಯಂತ ಹೆಚ್ಚು ಭದ್ರತೆ ಇರುವ ಕಾಶ್ಮೀರದ ಹೈವೆಗೆ ಆರ್‌ಡಿಎಕ್ಸ್‌ ಹೇಗೆ ಬಂತು ಎಂಬ ಸಾಮಾನ್ಯ ಪ್ರಶ್ನೆಯನ್ನೂ ಮಾಧ್ಯಮಗಳು ಅರ್ಥಮಾಡಿಕೊಳ್ಳಲಿಲ್ಲ. ಪ್ರಶ್ನಿಸಲೂ ಇಲ್ಲ.

ಇದೀಗ, ಕಳೆದ ಎರಡು ತಿಂಗಳಿಂದ ಭಾರತ ಮತ್ತು ಚೀನಾ ನಡುವೆ ಘರ್ಷಣೆ ನಡೆಯುತ್ತಲೇ ಇದೆ. ಉಭಯ ರಾಷ್ಟ್ರಗಳ ತಿಕ್ಕಾಟ ತಾರಕಕ್ಕೇರಿದ್ದು, ಸೋಮವಾರ ರಾತ್ರಿ ನಡೆದ ಮುಖಾಮುಖಿಯಲ್ಲಿ ಭಾರತೀಯ 20 ಯೋಧರು ಹತ್ಯೆಯಾಗಿದ್ದಾರೆ. ಚೀನಾದ 43 ಯೋಧರ ಹತ್ಯೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೂ, ಮಾಧ್ಯಮಗಳು ತಮ್ಮ ಸ್ಟುಡಿಯೋದಲ್ಲಿ ಯಾವ ಯುದ್ದವನ್ನೂ ನಡೆಸದೇ ಸೈಲೆಂಟ್‌ ಆಗಿವೆ.

ಭಾರತೀಯ ಸೈನಿಕರ ಹತ್ಯೆ ನಡೆದು ಎರಡು ದಿನಗಳಾದರೂ ದೇಶದ ಪ್ರಧಾನಿ ಮೋದಿಯವರು ಆ ಬಗ್ಗೆ ಒಂದೂ ಮಾತನಾಡಿರಲಿಲ್ಲ. ಮೋದಿನ ಮೌನ ನೋಡಿ ಮಾಧ್ಯಮಗಳು ಭಯಬಿದ್ದಿರಬಹುದು.

ಅಲ್ಲದೆ, ಗಡಿಯಲ್ಲಿನ ಘರ್ಷಣೆಯ ಬಗ್ಗೆ ಸರಿಯಾದ ಮಾಹಿತಿಯೂ ಸಿಗುತ್ತಿಲ್ಲ. ಗಡಿ ಭಾಗದಲ್ಲಿ ಏನು ನಡೆಯುತ್ತಿದೆ ಎಂದು ದೇಶದ ಪ್ರಜೆಗಳು ಆತಂಕಗೊಂಡಿದ್ದಾರೆ. ಗಡಿ ಸಂಘರ್ಷದ ಬಗ್ಗೆ ಸರಿಯಾದ ಮಾಹಿತಿ ನೀಡಿ ಎಂದು ದೇಶದ ಪ್ರಜ್ಞಾವಂತರು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಸೈನಿಕ ಪ್ರಾಣಕ್ಕಿಂತ ಪ್ರಧಾನಿ ಮೋದಿಯವರನ್ನು ಸಮರ್ಥಿಸಿಕೊಳ್ಳುವುದೇ ಮುಖ್ಯವಾಗಿದೆ. ಗಡಿಯಾಗುತ್ತಿರುವ ವಿದ್ಯಾಮಾನದ ಬಗ್ಗೆ ಪ್ರಶ್ನೆ ಮಾಡಬೇಕಾದ ಮಾಧ್ಯಮಗಳು ಮೋದಿಯ ಬಾಲಂಗೋಚಿಯಾಗಿವೆ.

ಭಾರತದ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆಯ ಬಗ್ಗೆ ಚಿಂತಿಸಲು, ಯೋಚಿಸಲು ಮೋದಿಯವರಿಗೆ ಸಮಯಬೇಕಾಗುತ್ತದೆ. ಅದಕ್ಕಾಗಿ ಸಮಯ ಬೇಕು ಎಂದು ಬಂಡಲ್‌ ಬಿಡುತ್ತಿವೆ. ರೋಮ್ ಹೊತ್ತಿ ಉರಿಯುವಾಗ ಅಲ್ಲಿಯ ರಾಜ ಪಿಟೀಲು ಬಾರಿಸುತ್ತಾ ಕುಳಿತಿದ್ದನಂತೆ. ಅದೇ ರೀತಿಯಲ್ಲಿ ಪುಲ್ವಾಮ ದಾಳಿ ನಡೆದಾಗ ಮೋದಿಯವರು ಫೋಟೋ ಶೂಟ್‌ನಲ್ಲಿ ಬಿಸಿಯಾಗಿದ್ದರು. ಅದನ್ನೂ ಮಾಧ್ಯಮಗಳು ಪ್ರಶ್ನಿಸಲಿಲ್ಲ. ಈಗ, ದೇಶದ ಗಡಿಭಾಗದ ಉದ್ವಿಗ್ನತೆ ತೀವ್ರಗೊಂಡಿರುವ ಸಂದರ್ಭದಲ್ಲಿ ದೇಶದ ಪ್ರಧಾನಿ ಚಿಂತಾನಾಮಗ್ನರಾಗಿದ್ದಾರೆ. ಅವರಿಗೆ ಸಮಯ ಕೊಡಿ ಎಂದು ಮಾಧ್ಯಮಗಳು ಸಮರ್ಥನೆಗಿಳಿದಿವೆ.

ಹಾಗಾಗಿಯೇ, “ಚೀನಾದ ಆಕ್ರಮಣಗಳ ಸಮಸ್ಯೆಯು ಕೊರೊನಾ ಸೋಂಕು ಮತ್ತು ಅದಕ್ಕೂ ಮೊದಲಿಂದಲೂ ಇರುವ  ಆರ್ಥಿಕತೆಯ ಸ್ಥಿತಿಯಂತೆಯೇ ಇದೆ. ನಾವು ಎಲ್ಲವನ್ನೂ ನಿರಾಕರಣೆಯಿಂದ ನೋಡುತ್ತೇವೆ. ನಿಜವಾಗಿಯೂ ಏನಾಗುತ್ತಿದೆ ಎಂಬುದನ್ನು ನಾವು ಒಪ್ಪಿಕೊಳ್ಳುವ ಹೊತ್ತಿಗೆ, ಆ ವಿಷಯಗಳು ನಮ್ಮ ನಿಯಂತ್ರಣ ದಾಟಿರುತ್ತವೆ” ಎಂದು ಪ್ರಿತೀಶ್‌ ನಂಡಿ ಅವರು ಟ್ವೀಟ್‌ ಮಾಡಿದ್ದಾರೆ.

ಇದಲ್ಲದಕ್ಕೂ ಮಿಗಿಲಾಗಿ, ಆಜ್‌ತಕ್‌ ಎಂಬ ಹಿಂದಿ ಸುದ್ದಿವಾಹಿನಿಯು ‘ಗಡಿ ಸಮಸ್ಯೆಗೆ ಭಾರತೀಯ ಸೈನಿಕರದ್ದೇ ತಪ್ಪು, ಮೋದಿಯವರನ್ನು ಪ್ರಶ್ನೆ ಮಾಡಬೇಡಿ, ಸೈನಿಕರನ್ನು ಪ್ರಶ್ನೆ ಮಾಡಬೇಕು ಎಂದು ಮೋದಿಯನ್ನು ಸಮರ್ಥಿಸುವ ಭರದಲ್ಲಿ ಭಾರತೀಯ ಸೈನ್ಯವನ್ನೇ ದೂಷಿಸಲು ಮುಂದಾಗಿದೆ. ಆರೆಸ್ಸೆಸ್‌, ಬಿಜೆಪಿಗಳು ಭಾರತೀಯ ಸೈನ್ಯ, ಸಿಯಾಚಿನ್‌ ಶೀತವನ್ನೇ ಇಟ್ಟುಕೊಂಡು ರಾಜಕೀಯ ಮಾಡುತ್ತಿರುವ ಸಂದರ್ಭದಲ್ಲಿಯೂ ಸೈನ್ಯವನ್ನೇ ದೂಷಿಸಲು ಮಾಧ್ಯಮಗಳು ಮುಂದಾಗಿವೆ.

ಇದೆಲ್ಲರ ಮಧ್ಯೆ, ಕೆಲವು ಸುದ್ದಿವಾಹಿನಿಗಳು ಚೀನಾ ಯುದ್ಧ ಮಾಡಲಾದರು. ಏಕೆಂದರೆ, ಚೀನಾದಲ್ಲಿ ಒಂದು ಕುಟುಂಬಕ್ಕೆ ಒಬ್ಬನೇ ಮಗನಿರುತ್ತಾನೆ. ಹಾಗಾಗಿ ಆತನನ್ನು ಕಳೆದುಕೊಳ್ಳಲು ಚೀನಾ ಜನ ಬಯಸುವುದಿಲ್ಲ. ಹಾಗಾಗಿ ಚೀನಾ ಯುದ್ದ ಮಾಡುವುದಿಲ್ಲ ಎಂದು ಸುದ್ದಿ ಬಿತ್ತರಿಸಿದ್ದವು.

ಆದರೂ, ಚೀನಾ ವಿರುದ್ಧ ಯುದ್ದ ಫಿಕ್ಸ್‌, ಚೀನಾಕ್ಕೆ ಮುಂದೈತೆ ಮಾರಿ ಹಬ್ಬ, ಚೀನಾ ವಿರುದ್ಧ ರಣಕಲಿ ಮೋದಿ, ಎಂಬಂತಹ ಯಾವುದೇ ಸುದ್ದಿಗಳು, ಸ್ಪೆಷಲ್‌ ಫ್ಯಾನಲ್‌ಗಳು ನಡೆಯುತ್ತಿಲ್ಲ. ಚೀನಾ ವಿರುದ್ಧ ಯುದ್ದ ಮಾಡಲು ಭಾರತೀಯ ಮಾಧ್ಯಮಗಳು ಹಿಂದೇಟು ಹಾಕುತ್ತಿವೆ. ಚೀನಾದ ಸೇನಾ ಬಲ, ಭಾರತಕ್ಕಿಂತ ಕೊಂಚ ಹೆಚ್ಚೇ ಇರುವುದು ಮಾಧ್ಯಮಗಳ ಹಿಂದೇಟಿಗೆ ಕಾರಣವಾಗಿರಬಹುದು.

ಪುಲ್ವಾಮ ದಾಳಿ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಯಾವೊಂದೂ ಪ್ರಶ್ನೆ ಕೇಳದೆ, ಮೋದಿ ಭಜನಾಮಂಡಳಿಯ ರೀತೀಯಲ್ಲಿ ಭಜನೆ ಮಾಡಿದ್ದ ಮಾಧ್ಯಮಗಳು ಚೀನಾ ವಿಷಯದಲ್ಲಿ ಮೋದಿಯನ್ನು ಬಾಹುಬಲಿ, ರಣಕಲಿ ಎಂದು ಬಣ್ಣಿಸದೆ, ಮೋದಿಯವರಿಗೆ ಸಮಯಾವಕಾಶ ಕೇಳುತ್ತಾ, ಸೈನಿಕರನ್ನೇ ದೂಷಿಸುತ್ತಿರುವುದು ಭಾರತೀಯ ಪತ್ರಿಕೋದ್ಯಮಕ್ಕೆ ತಿಲಾಂಜಲಿ ಹಾಡಬೇಕಾಗಿರುವುದರ ಮುನ್ಸೂಚನೆಯಾಗಿದೆ.

Spread the love

Leave a Reply

Your email address will not be published. Required fields are marked *